ಬಾಲಕೃಷ್ಣಲೀಲೆ

ಬಾಲಕೃಷ್ಣಲೀಲೆ
Updated on: 

ಕನ್ನಡಪ್ರಭ ಪತ್ರಿಕೆಯ ಸಿನಿಮಾ ಪತ್ರಕರ್ತ ಆರ್. ಕೇಶವಮೂರ್ತಿ ಅವರು ಬರೆದ 'ಕಲಾಭಿಮಾನಿ ಬಾಲಣ್ಣ' ಪುಸ್ತಕ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಇತ್ತೀಚೆಗೆ ಬಿಡುಗಡೆಯಾಗಿದೆ. ನವಂಬರ್ ತಿಂಗಳ ಅವರ ಹುಟ್ಟುಹಬ್ಬದ ನೆಪದಲ್ಲಿ ಈ ಪುಸ್ತಕದ ಮೂಲಕ ಅಪ್ರತಿಮ ನಟ ಬಾಲಕೃಷ್ಣ ಅವರನ್ನು ನೆನಪಿಸಿಕೊಳ್ಳಲಾಗಿದೆ. 'ಕಲಾಭಿಮಾನಿ ಬಾಲಣ್ಣ' ಪುಸ್ತಕದ ಒಂದು ಕುತೂಹಲಕರ ಭಾಗ ಇಲ್ಲಿದೆ. ಉಳಿದಿದ್ದನ್ನು ಕೊಂಡು ಓದಿ...

ಇದು ಶುಭ ಸೂಚನೆಯೇ?
ಇಂಥ ಪ್ರಶ್ನೆ ಬಾಲಣ್ಣರಿಗೆ ಮೊದಲ ಬಾರಿಗೆ ಎದುರಾಗಿದ್ದು ಗುಬ್ಬಿ ವೀರಣ್ಣ ಅವರನ್ನು ಕಡೂರಿನಲ್ಲಿ ಭೇಟಿಯಾಗುವ ಸಿದ್ಧತೆಯಲ್ಲಿದ್ದಾಗ. ಆ ದಿನಗಳಲ್ಲಿ ರಂಗಭೂಮಿಯಲ್ಲಿ ಬಹುದೊಡ್ಡ ಹೆಸರು ಮಾಡಿದ್ದ ಗುಬ್ಬಿ ವೀರಣ್ಣರ ಕಂಪನಿ ಕಡೂರಿನಲ್ಲಿ ಟೆಂಟ್ ಹಾಕಿತ್ತು. ಹೇಗಾದರೂ ಮಾಡಿ ವೀರಣ್ಣರನ್ನು ಭೇಟಿಯಾಗಬೇಕು ಎಂದುಕೊಂಡ ಬಾಲಣ್ಣ ತಮ್ಮ ಸ್ನೇಹಿತ ಮರಾಠಿ ಜಯರಾವ್‌ರ ನೆರವಿನಿಂದ ಅಂಚೆ ಇಲಾಖೆಯಲ್ಲಿ ದುಡಿದ ಹಣವನ್ನು ಸೇರಿಸಿಕೊಂಡು ಒಂದು ಜೊತೆ ಚಪ್ಪಳಿ ಕೊಂಡರು. ಮಿಕ್ಕ ಹಣದಲ್ಲಿ ರೈಲ್ವೆ ಟಿಕೆಟ್ ತೆಗೆದುಕೊಂಡ ಬಾಲಣ್ಣ. ಕಡೂರು ರೈಲು ಹತ್ತಿದ್ದರು. ಆಗ ಕಡೂರಿನಲ್ಲಿ ಜಿಲ್ಲಾಧಿಕಾರಿಗಳಿಂದ ವೀರಣ್ಣರಿಗೆ ಸನ್ಮಾನ ಬೇರೆ ಇತ್ತು. ಕಾವಲುಗಾರನ ಸ್ನೇಹ ಸಂಪಾದಿಸಿಕೊಂಡು ವೀರಣ್ಣರ ಮುಂದೆ ನಿಂತ ಬಾಲಣ್ಣ, 'ದಯವಿಟ್ಟು ತಮ್ಮ ಕಂಪನಿಗೆ ನನಗೊಂದು ಅವಕಾಶ ನೀಡಿ' ಎಂದು ಕೇಳಿಕೊಂಡರು. ಮೊದಲೇ ನಾಟಕದ ಕಲೆಕ್ಷನ್ ಆಗದೆ ಸಿಟ್ಟಿನಲ್ಲಿದ್ದ ವೀರಣ್ಣ 'ಯಾವ ಕೆಲ್ಸಾನೂ ಇಲ್ಲ ಹೋಗಯ್ಯ' ಅತ ಗದರಿದರು. ಬಾಲಣ್ಣರಿಗೆ ಏನು ಮಾಡಬೇಕೆಂದು ತೋಚದೆ ಟಿಕೆಟ್ ತೆಗೆದುಕೊಂಡು ಅರ್ಧ ನಾಟಕ ನೋಡಿ ಊರಿಗೆ ವಾಪಸ್ಸು ಬರಲು ಕಡೂರಿನ ರೈಲ್ವೆ ನಿಲ್ದಾಣಕ್ಕೆ ಬಂದ ಬಾಲಣ್ಣರಿಗೆ ರೈಲು ಬರಲು ಬೆಳಗಿ ಜಾವ ಎಂದು ತಿಳಿಯಿತು. ಹೀಗಾಗಿ ಅಲ್ಲೇ ಮಲಗಿ ಬೆಳಗ್ಗೆ ಎದ್ದು ನೋಡಿದರೆ ಹೊಸದಾಗಿ ಕೊಂಡ ಚಪ್ಪಳಿಗಳು ನಾಪತ್ತೆ! ಹೊಸ ಚಪ್ಪಳಿಗಳು ಕಳೆದು ಹೋದರೆ ಅದು ಶುಭ ಸೂಚನೆ ಎಂದು ಯಾರೋ ಹೇಳಿದ್ದನ್ನು ನೆನಪಿಸಿಕೊಂಡ ಬಾಲಣ್ಣರ ಜೀವನದಲ್ಲಿ ಮುಂದೊಂದು ದಿನ ವೀರಣ್ಣರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಮಾತ್ರವಲ್ಲದೆ, ಗುಬ್ಬಿ ಕಂಪನಿಯ ಹಕ್ಕಿಯಾದರು.

ಮದ್ರಾಸಿನಲ್ಲಿ ಅರೆಬೆತ್ತಲೆ
ಆಗ 'ವಿಜಯನಗರದ ವೀರಪುತ್ರ' ಸಿನಿಮಾದ ರಾಜ ದರ್ಬಾರ್ ದೃಶ್ಯಗಳ ಚಿತ್ರೀಕರಣ. ಪ್ರತಿ ದಿನ ಪದೇ ಪದೆ ಕಲಾವಿದರು ಮೇಕಪ್ ಹಾಕಿಕೊಂಡು ನಿಲ್ಲಬೇಕಿತ್ತು. ಹಾಗೆ ನಿಂತ ನೂರಾರು ಕಲಾವಿದರಲ್ಲಿ ಬಾಲಣ್ಣ ಕೂಡ ಇದ್ದರು. ಸೈನಿಕನ ಪಾತ್ರಧಾರಿ ಬಾಲಣ್ಣ, ಮಿಣಮಿಣ ಮಿಂಚುವ ಕಾಸ್ಟ್ಯೂಮ್. ಮುಖದ ಮೇಕಪ್‌ಗೂ ಝರಿಝರಿ ಬಟ್ಟೆಗಳಿಂದ ಬಿಸಿಲಿಗೆ ಬೇಯುತ್ತಿದ್ದರು. ಒಂದು ದಿನ ಮೇಕಪ್ ಹಾಕಿಕೊಂಡು ಬೆಳಗ್ಗಿನಿಂದ ಸಂಜೆ ತನಕ ಕಾದರು. ಆದರೆ ಅವರ ಸರದಿ ಬರಲೇ ಇಲ್ಲ. ಸುಸ್ತಾಗಿ ಅದೇ ಕಾಸ್ಟ್ಯೂಮ್‌ನಲ್ಲಿ ಸ್ಟುಡಿಯೋದಲ್ಲೇ ನಿದ್ದೆ ಹೋಗಿದ್ದರು. ಚಿತ್ರತಂಡ ಪ್ಯಾಕಪ್ ಮಾಡಿಕೊಂಡು ಅಲ್ಲಿಂದ ಬರುವಾಗ ಬಾಲಣ್ಣರನ್ನು ಮರೆತು ಬಂದಿದ್ದರು. ಮರಳು ರಾಶಿ ಮೇಲೆ ಮಲಗಿದ್ದ ಬಾಲಣ್ಣರಿಗೆ ಸೂರ್ಯ ಚುರುಕು ಮುಟ್ಟಿಸಿದ್ದು ಬೆಳಗ್ಗೆ. ಎದ್ದು ನೋಡಿದರೆ ಎಲ್ಲರು ನಾಪತ್ತೆ. ಮೊದಲೇ ಮದ್ರಾಸಿನ ಸುಡುವ ಬಿಸಿಲು. ಲಂಗದಂತಿರುವ ರಾಜಭಟರ ಡ್ರೆಸ್ ಬಿಸಿಲಿಗೆ ತಡೆಯಲಾರದು. ಕಾಸ್ಟ್ಯೂಮ್ ಕಿತ್ತು ಮೈ ಮೇಲೆ ಹಾಕಿಕೊಂಡು ಕೈಯಲ್ಲಿ ಈಟಿ, ಬಣ್ಣ ಬಣ್ಣದ ಬಟ್ಟೆಯಗಳನ್ನು ಹಿಡಿದು ಗೋಲ್ಡನ್ ಸ್ಟುಡಿಯೋದಿಂದ ಕೋಡಂಬಾಕಂ ರಸ್ತೆಯಲ್ಲಿ ನಡೆದು ಬರುತ್ತಿದ್ದರೇ, ಬಾಲಣ್ಣರನ್ನು ಎಲ್ಲರು ವಿಚಿತ್ರವಾಗಿ ನೋಡುತ್ತಿದ್ದರಂತೆ. ಈ ಅರೆಬೆತ್ತಲೆ ಮೆರವಣಿಗೆ ಮರುದಿನ ನಾಗೇಂದ್ರರಾಯರಿಗೆ ತಿಳಿದು ಕ್ಷಮೆ ಕೇಳಿದರು. ಆದರೆ ಈ ಘಟನೆಯನ್ನು ವ್ಯಂಗ್ಯವಾಗಿಯೇ ತೆಗೆದುಕೊಂಡಿದ್ದ ಬಾಲಣ್ಣ, 'ಕಲಾವಿದ ಮಲಗಿದ್ರು ಕಾಲು ಅಲ್ಲಾಡಿಸ್ತಾ ಇರ್ಬೇಕಪ್ಪಾ, ಇಲ್ಲಾಂದ್ರೆ ಸತ್ತು ಹೋಗಿದ್ದಾರೆ ಅಂತ ಅಂದ್ಕೋತಾರೆ' ಎಂದು ತಮಾಷೆ ಮಾಡಿದ್ದರು.

ಅವನು ಪ್ರಿನ್ಸು, ನಾನು ಭಿಕಾರಿ
ನಟ ದ್ವಾರಕೀಶ್, ನರಸಿಂಹರಾಜು ಹಾಗೂ ಬಾಲಣ್ಣ ಒಂದು ಕಡೆ ಇದ್ದರೆ ಮುಗಿಯಿತು, ಅಲ್ಲಿ ಕೀಟಲೆ, ಹಾಸ್ಯ ಹಾಗೂ ತುಂಟಾಟಗಳದ್ದೇ ಕಾರುಬಾರು. ದ್ವಾರಕೀಶ್ ಕಾಣಿಸಿಕೊಂಡರೇ ಸಾಕು ಬಾಲಣ್ಣ, 'ಹ್ಯಾಗಿದ್ದಾರಪ್ಪ ನಿಮ್ಮಪ್ಪಂದಿರು?' ಎಂದು ದ್ವಾರಕೀಶ್ ಅವರನ್ನು ಕಾಳೆಯುತ್ತಿದ್ದರು. ಹಾಗೆ ಬಾಲಣ್ಣ ಕೇಳುತ್ತಿದ್ದು ಅವರ ಐವರು ಮಕ್ಕಳ ಬಗ್ಗೆ. ಇಂಥ ತರಲೆ ಬಾಲಣ್ಣರನ್ನು ಆಗಾಗ ಪತ್ರಕರ್ತರೂ ಕಾಳೆಲೆಯುತ್ತಿದ್ದರು. 'ಏನ್ ಬಾಲಣ್ಣನವರೇ ಹಿಂದಿಯ ಖಳನಾಯಕ ಜೀವನ್ ನಿಮ್ಮ ಹಾಗೆನೇ ಇದ್ದಾನೆ. ನಿಮ್ಮಿಬ್ಬರ ನಟನೆಯಲ್ಲೂ ಹೊಲಿಕೆ ಬೇರೆ ಇದೆ. ಹಾಗಿದ್ರೆ ನೀವಿಬ್ರು ಟ್ವಿನ್ಸಾ?' ಎಂದಾಗ. 'ಅಯ್ಯೋ ಟ್ವಿನ್ಸ್ ಗಿನ್ಸು ಏನೂ ಇಲ್ಲಪ್ಪಾ. ಅವ್ನು ಪ್ರಿನ್ಸು. ನಾನು ಭಿಕಾರಿ ಕಣ್ರಪ್ಪಾ' ಎಂದು ತಮ್ಮ ಮೇಲೆ ಹಾಸ್ಯ ಮಾಡಿಕೊಳ್ಳುತ್ತಿದ್ದರು.

ಕಪಾಳ ಮೋಕ್ಷ
ಆಕಸ್ಮಿಕವಾಗಿ ತಮ್ಮಿಂದ ಏನಾದರೂ ತಪ್ಪು ನಡೆದರೆ ಅದನ್ನೇ ತುಂಬಾ ನೆನಪಿನಲ್ಲಿಟ್ಟುಕೊಂಡು ಬಾಲಣ್ಣ ಕೊರಗುತ್ತಿದ್ದರಂತೆ. ಇಲ್ಲವೇ ಕ್ಷಮೆ ಕೇಳುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಮಾನವೀಯತೆಯನ್ನು ಉಳಿಸಿಕೊಂಡಿದ್ದ ಬಾಲಣ್ಣ ಅವರಿಂದ ಒಮ್ಮೆ ಒಂದು ತಪ್ಪು ನಡೆಯಿತು. ಅದು ಏನೂ ಅರೆಯದ ಒಬ್ಬ ಸಾಮಾನ್ಯ ಸಹ ನಿರ್ದೇಶಕನ ಕಪಾಳಕ್ಕೆ ಬಾರಿಸಿದ್ದು. ಅದು 'ಬಿಸಿಲು ಬೆಳದಿಂಗಳು' ಚಿತ್ರೀಕರಣ. ಊಟದ ನಂತರ ಬಾಲಣ್ಣ ಸೆಟ್‌ನಲ್ಲೇ ನಿದ್ದೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ನಿದ್ದೆಗೆ ಜಾರಿದ ಮೇಲೆ ಅರ್ಧ ನಿದ್ರೆಯಲ್ಲಿ ಎಬ್ಬಿಸಿದ್ರೆ ಬಾಲಣ್ಣ ಕೆಂಡಾಮಂಡಲವಾಗುಪತ್ತಿದ್ದರು. ಬಾಲಣ್ಣ ಜಂಪೂ ನಿದ್ದೆಗೆ ಜಾರಿದ್ದರು. ನಿರ್ದೇಶಕ ಕೋಡ್ಲು ರಾಮಕೃಷ್ಣ 'ಬಾಲಣ್ಣರನ್ನು  ಕರೀರಿ' ಎಂದರು. ಸಹನಿರ್ದೇಶಕ ಹೋಗಿ ಎಬ್ಬಿಸುವಷ್ಟರಲ್ಲಿ ಅಲ್ಲೇ ಇದ್ದ ಹುಡುಗನೊಬ್ಬ ಹೋಗಿ, 'ಎದ್ದೇಳಿ ಎದ್ದೇಳಿ ಬಾಲಣ್ಣ ಸರ್‌' ಎಂದು ಹೋದ. ಯಾರೂ, ಏನೂ ಅಂತ ನೋಡದೆ ಬಾಲಣ್ಣ ಅರೆ ನಿದ್ರೆಯಲ್ಲಿ ಎದ್ದ ಪರಿಣಾಮ ಎದುರು ನಿಂತಿದ್ದ ಸಹನಿರ್ದೇಶಕನ ಕಪಾಳಕ್ಕೆ ಪಟಾರ್ ಅಂತ ಹೊಡೆದೇ ಬಿಟ್ಟರು. 'ಜೋರು ಮಾಡಿ ನಿದ್ದೆ ಎಬ್ಬಿಸಿದ್ದು ತಾನಲ್ಲ' ಎಂದು ಆತ ಹೇಳಿದರೂ ಬಾಲಣ್ಣರಿಗೆ ಅರ್ಥವಾಗಲಿಲ್ಲ. ಕೊನೆಗೆ ಆತ ಬಾಲಣ್ಣರೊಂದಿಗೆ ಮಾತೇ ಬಿಟ್ಟ. ಬಾಲಣ್ಣ ಆತನ ಬಳಿ ಹೋದರೆ ಸಾಕು ಮುನಿಸಿಕೊಂಡು ದೂರ ಹೋಗುತ್ತಿದ್ದ. ಈ ಘಟನೆ ನಡೆದ ಮರು ದಿನವಾದರೂ ಬಾಲಣ್ಣ ಪಶ್ಚಾತಾಪ ಪಡುತ್ತಿದ್ದರು. 'ನಿಲ್ಲಪ್ಪ ನಿನ್ ಜೊತೆ ನಿನ್ನೆಯಿಂದ ಮಾತನಾಡಬೇಕು ಅಂದ್ಕೋಳ್ತೀನಿ. ನೀನ್ ನೋಡಿದ್ರೆ ಓಡೋಡಿ ಹೋಗ್ತಿಯಾ' ಎಂದು ಆತನ ರಟ್ಟೆ ಹಿಡಿದು ನಿಲ್ಲಿಸಿಕೊಂಡು, 'ನಿನ್ನೆ ನನ್ನಿಂದಾ ತಪ್ಪಾಗಿದೆ ಕಂದಾ. ನನ್ನ ಕ್ಷಮಿಸುಬಿಡಪ್ಪ' ಎಂದಾಗ ಸಹ ನಿರ್ದೇಶಕ ಕಣ್ಣಲ್ಲಿ ನೀರು ಹಾಕಿಕೊಂಡ. ಪರಸ್ಪರ ಇಬ್ಬರು ತಬ್ಬಿಕೊಂಡಾಗ ಅಲ್ಲೊಂದು ರಿಯಲ್ ಸೆಂಟಿಮೆಂಟ್ ದೃಶ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com