

'ಇಷ್ಟು ದಿನ ತಮ್ಮ ಮಾತಿಗೆ ಫೇಮಸ್ಸು' ಅಂತ ಫೇಮಸ್ ಆಗಿದ್ದ ಸತೀಶ್ ನೀನಾಸಂ ಈಗ ತಮ್ಮ ಹಾಡಿಗೂ ಫೇಮಸ್ ಎನಿಸಿಕೊಳ್ಳಲು ಹೊರಟಿದ್ದಾರೆ. ತಮ್ಮ ನಾಯಕತ್ವದ 'ಅಂಜದ ಗಂಡು' ಚಿತ್ರದಲ್ಲಿ ಒಂದು ಹಾಡನ್ನು ಸ್ವತಃ ತಾವೇ ಬರೆದು ಹಾಡುವ ಮೂಲಕ ಸತೀಶ್ ಹೊಸ ಹೆಜ್ಜೆ ಇಟ್ಟಿದ್ದಾರೆ.
'ಕಿರಾತಕ', 'ಮಿ.ರೋಮಿಯೋ' ಚಿತ್ರಗಳ ಪ್ರದೀಪ್ರಾಜ್ ನಿರ್ದೇಶನದ 'ಅಂಜದ ಗಂಡು' ಮೊನ್ನೆ ತನ್ನ ಆಡಿಯೋ ಬಿಡುಗಡೆ ಮಾಡಿಕೊಂಡ. 'ಅಂಜದ ಗಂಡು ನಾನು' ಎಂಬ ಹಾಡನ್ನು ಬರೆದಿರುವ ಸತೀಶ್ ಆ ಸಮಾರಂಭದಲ್ಲಿ, 'ನಾನು ಹಾಡಿರುವ ಹಾಡು ಕೇಳಿ, ಹೆಂಗೆ ಹಾಡಿದೀನಿ, ಹೆಂಗೆ ಬರೆದಿದ್ದೀನಿ ಅನ್ನೋ ಬಗ್ಗೆ, ಕಂಟಿನ್ಯೂ ಮಾಡ್ಲಾ ಬೇಡ್ವಾ ಅಂತ ಸಲಹೆ ಕೊಡಿ' ಎಂದರು. ಆದರೆ ಅಲ್ಲಿ ಹಾಡು ಕೇಳಿದವರು 'ಕಮಾನು, ರಿಪೀಟ್' ಎನ್ನುತ್ತಿದ್ದರು.
ಅಂದಿನ ಸಮಾರಂಭದಲ್ಲಿ ನಿರ್ದೇಶಕ ಪ್ರದೀಪ್ರಾಜ್ ಅವರ ವತಿಯಿಂದ ಹಿರಿಯ ನಿರ್ದೇಶಕ ನಾಗಾಭರಣ ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದರು. ಸಿನಿಮಾದಲ್ಲಿ ಅಭಿನಯಿಸಿರುವ ನಾಗಾಭರಣ ನನಗೊಂದು ಹಾಡು ಕೊಟ್ಟಿಲ್ಲ ಎಂದು ತಮಾಷೆಯಾಗಿ ಬೇಜಾರು ಮಾಡಿಕೊಂಡೇ ತಮ್ಮ ಶಿಷ್ಯನಿಗೆ ಶುಭಕೋರಿದರು.
ಚಿತ್ರದ ನಾಯಕಿ ಸುಭಿಕ್ಷಾ, ಆನಂದ್ ಆಡಿಯೋ ವತಿಯಿಂದ ಶ್ಯಾಮ್, ಕೆ.ವಿ.ನಾಗೇಶ್ ಕುಮಾರ್, ಕೆ.ಮಂಜು, ಮುಂತಾದವರು ಅಂಜದ ಗಂಡಿನ ಹಾಡು ಬಿಡುಗಡೆ ಮಾಡಲು ಬಂದಿದ್ದರು.
ನನ್ನ ಕಿರಾತಕ ಚಿತ್ರದಂತೆ ಇದೂ ಕೂಡ ಮಂಡ್ಯ ಫ್ಲೇವರ್ ಇರುವ ಚಿತ್ರ, ಸತೀಶ್ ನೀನಾಸಂ ಅವರ ಪ್ರತಿಭೆ ಚಿತ್ರೀಕತರಣ ಶುರು ಮಾಡಿದ ಎರಡೇ ದಿನಕ್ಕೆ ನನಗೆ ಗೊತ್ತಾಗಿ ಹೋಯಿತು. ನನ್ನ ಈ ಚಿತ್ರಕ್ಕೆ ಇವರೇ ಸೂಕ್ತ ನಟ ಎಂಬ ನನ್ನ ನಂಬಿಕೆ ನಿಜವಾಯಿತು ಎಂದರು ನಿರ್ದೇಶಕ ಪ್ರದೀಪ್ ರಾಜ್. ಉಳಿದಂತೆ ಆಗಮಿಸಿದ್ದ ಅತಿಥಿಗಳೆಲ್ಲಾ ಒಂದೊಂದು ಅಥವಾ ಎರಡೆರಡು ಮಾತನಾಡಿ ಹಾಡುಗಳಿಗೆ ಮತ್ತು ಚಿತ್ರಕ್ಕೆ ಶುಭಹಾರೈಸಿದರು.
-ಹ್ಯಾರಿ