ಕಾಮಿಡಿ ಕಿಲಾಡಿಗಳು

ಕಾಮಿಡಿ ಕಿಲಾಡಿಗಳು
Updated on: 

ಹಾಸ್ಯಕ್ಕೆ ಮನಸೋಲದ ಪ್ರೇಕ್ಷಕನಿಲ್ಲ. ಎಂಥ ದೊಡ್ಡ ನಟ, ದೊಡ್ಡ ಬ್ಯಾನರ್‌ನ ಚಿತ್ರಗಳು ಬಿಡುಗಡೆಯಾದರೂ ಅದರ ಮುಂದೆ ಕಾಮಿಡಿ ಚಿತ್ರಗಳು ಮಿನಿಮಮ್ ಗ್ಯಾರಂಟಿ ಕೊಡುವ ತಾಕತ್ತು ಉಳಿಸಿಕೊಂಡಿರುತ್ತವೆ. ಚಿತ್ರಗಳು ಸೋತಿರಬಹುದು. ಆದರೆ, ಅದರಲ್ಲಿನ ಹಾಸ್ಯದ ಝಲಕ್ ಪ್ರೇಕ್ಷಕನಿಗೆ ಮೋಸ ಮಾಡಿರಲ್ಲ. ಅಷ್ಟರ ಮಟ್ಟಿಗೆ ಹಾಸ್ಯದ ಟ್ರೆಂಡ್ ನಿರ್ಮಾಪಕನ ಕೈ ಹಿಡಿದಿದೆ. ಈ ವಾರ ಪ್ರೇಕ್ಷಕರ ಮುಂದೆ 'ಚಡ್ಡಿ ದೋಸ್ತ್‌' ಚಿತ್ರ ಬರುತ್ತಿದೆ. ಹೆಸರೇ ಸೂಚಿಸುವಂತೆ ಪಕ್ಕಾ ಹಾಸ್ಯಮಯ ಚಿತ್ರ. ಪ್ರೇಕ್ಷಕನಿಗೆ ನಿಜವಾಗಲೂ ರಿಲೀಫ್ ಕೊಡುವ ಚಿತ್ರವೊಂದನ್ನು ನಿರ್ದೇಶಕ ಪಿ.ಸಿ.ಶೇಖರ್ ಸಿದ್ಧಪಡಿಸಿದ್ದಾರೆ. ಅರ್ಜುನ್ ಜನ್ಯರ ಸಂಗೀತದ ಮೋಡಿ ಇಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಮಿಡಿ ಕಿಲಾಡಿಗಳಾದ ರಂಗಾಯಣ ರಘು ಹಾಗೂ ಸಾಧು ಕೋಕಿಲರ ಜೋಡಿ ಮುಖ್ಯಭೂಮಿಕೆಯಲ್ಲಿದೆ. ಇವರ ಜೊತೆಗೆ ಅವಿನಾಶ್, ಮಿಮಿಕ್ರಿ ದಯಾನಂದ್, ಮಿತ್ರ, ಅಮಿತ್ ಅರಸು, ಅಶೋಕ್, ಅಶ್ವಿನಿ ಗೌಡ, ರೂಪಾಶ್ರೀ ಮುಂತಾದವರು ಅಭಿನಯಿಸಿದ್ದಾರೆ. 'ನಾಯಕ' ಹಾಗೂ 'ರೋಮಿಯೋ' ಚಿತ್ರಗಳ ನಂತರ ಪಿ.ಸಿ.ಶೇಖರ್ 'ಚಡ್ಡಿ ದೋಸ್ತ್‌' ಮೂಲಕ ಬಂದಿದ್ದಾರೆ.

ನಾನೊಬ್ಬ ಪ್ರೇಕ್ಷಕ-ಪಿ.ಸಿ. ಶೇಖರ್
ಸಾಧು ಕೋಕಿಲ ಮತ್ತು ರಂಗಾಯಣ ರಘು ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಅನಿಸಿದ್ದು ಯಾಕೆ?

ನಾನು ಒಬ್ಬ ಪ್ರೇಕ್ಷಕನಾಗಿ ಸಾಧು ಮತ್ತು ರಘು ಅವರ ಸಿನಿಮಾಗಳನ್ನು ನೋಡಿದ್ದೇನೆ. ಇವರು ತೆರೆ ಮೇಲೆ ಹತ್ತು ನಿಮಿಷ ಬಂದ್ರೆ ಸಾಕು, ಪ್ರೇಕ್ಷಕರು ಬಿದ್ದುಬಿದ್ದು ನಗುತ್ತಾರೆ. ಹಾಗೆ ಬಂದು ಹೋಗುವ ಇವರು ಇಷ್ಟರ ಮಟ್ಟಿಗೆ ನಗಿಸುತ್ತಾರೆ ಅಂದಾಗ, ಇಬ್ಬರನ್ನೂ ಒಟ್ಟಾಗಿಸಿ ತೆರೆ ಮೇಲೆ 2 ಗಂಟೆ 10 ನಿಮಿಷ ತೋರಿಸಿದ್ರೆ ಹೇಗೆ ಎನ್ನುವ ಕುತೂಹಲ ಹುಟ್ಟಿಕೊಂಡ ಪರಿಣಾಮವೇ ಈ 'ಚಡ್ಡಿ ದೋಸ್ತ್‌'.

ಹಾಸ್ಯ ಚಿತ್ರಗಳು ಎಂದಾಕ್ಷಣ ಒಂದಿಷ್ಟು ಸಿದ್ಧ ಸೂತ್ರಗಳು ಇರುತ್ತವೆ. ನಿಮ್ಮ 'ಚಡ್ಡಿ ದೋಸ್ತ್‌' ಈ ಸೂತ್ರಗಳಿಗಿಂತ ಹೇಗೆ ಭಿನ್ನ?
ನಿಜ. ಕಾಮಿಡಿ ಚಿತ್ರಗಳು ಅಂದಾಕ್ಷಣ ಕಡಿಮೆ ಬಜೆಟ್, ತಾಂತ್ರಿಕತೆಯಲ್ಲಿ ಲೋ ಕ್ವಾಲಿಟಿ, ಬೇಕೋ ಬೇಡವೋ ಪದೇ ಪದೆ ಬರುವ ದ್ವಂದಾರ್ಥದ ಸಂಭಾಷಣೆಗಳು, ಸುಖಾ ಸುಮ್ಮನೆ ಪ್ರೇಕ್ಷಕರನ್ನು ನಗಿಸಲು ಪ್ರಯತ್ನ ಪಡುವ ಪಾತ್ರಧಾರಿಗಳನ್ನು ನೋಡುತ್ತೇವೆ. ಆದರೆ, ನಮ್ಮ ಚಿತ್ರ ಇದರಿಂದ ಹೊರತಾಗಿದೆ. ಎಲ್ಲವೂ ರಿಯಲಿಸ್ಟಿಕ್ ಆಗಿದೆ. ಹಾಸ್ಯಕ್ಕಾಗಿಯೇ ಪಾತ್ರಗಳನ್ನಾಗಲಿ, ಸಂಭಾಷಣೆಗಳನ್ನಾಗಲಿ ಸೃಷ್ಟಿ ಮಾಡಿಲ್ಲ. ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯಲ್ಲಿ ತುಂಬಾ ಭಿನ್ನತೆ. ಪ್ರತಿ ಡೈಲಾಗ್‌ನಲ್ಲೂ ಪಂಚಿಗ್ ಜೊತೆಗೆ ಒಂಚೂರು ಎಮೋಷನಲ್ ಇರುತ್ತದೆ. ಇನ್ನು ತಾಂತ್ರಿಕವಾಗಿ ನಾವು ರಾಜಿಯಾಗಿಲ್ಲ.

ನಿಮ್ಮ ಚಿತ್ರವನ್ನು ಪ್ರೇಕ್ಷಕರು ಯಾಕೆ ನೋಡಬೇಕು?
ಇಲ್ಲಿ ನಾವು ಯಾರಿಗೂ ಬೋಧನೆ ಮಾಡಿಲ್ಲ. ಆದರೆ, ಮನುಷ್ಯನ ಜೀವನದಲ್ಲಿ ಎದುರಾಗುವ ಸ್ನೇಹ, ಕಷ್ಟದ ದಿನಗಳಲ್ಲಿ ನಮ್ಮ ನೆರವಿಗೆ ಬರುವ ಗೆಳೆಯರ ಬಗ್ಗೆ ತುಂಬಾ ನವಿರಾಗಿ ಹೇಳಿದ್ದೇನೆ. ಪ್ರತಿ ದೃಶ್ಯದಲ್ಲೂ ಹಾಸ್ಯ ಹಾಸುಹೊಕ್ಕಾಗಿದೆ. ಪ್ರೇಕ್ಷಕ ಎರಡು ಗಂಟೆ ಹತ್ತು ನಿಮಿಷ ರಿಲೀಫ್ ಆಗಲಿಕ್ಕೆ ನಮ್ಮ ಚಿತ್ರಕ್ಕೆ ಬಂದು ಹೋಗಲಿ.

ಈ ಸಿನಿಮಾ, ಪ್ರೇಕ್ಷಕನಿಗೆ ಏನನ್ನು ಹೇಳುತ್ತದೆ?
ಹಾಸ್ಯ ಸಿನಿಮಾ ಎಂದರೆ ಆ ಕ್ಷಣಕ್ಕೆ ನಕ್ಕು ಮರೆಯುವಂಥದಲ್ಲ. ಸದಾ ನಮ್ಮ ನೆನಪುಗಳ ಜೊತೆಗೆ ಇರುವ ಸನ್ನಿವೇಶಗಳನ್ನು ಒಳಗೊಂಡಿರಬೇಕು. ಚಿತ್ರಮಂದಿರದಿಂದ ಮಾಯವಾದ ಮೇಲೂ ಆ ಚಿತ್ರ ಬದುಕಿರಬೇಕು. ಆಗ ನಿಜವಾಗಲೂ ಅದು ಪ್ರೇಕ್ಷಕನ ಸಿನಿಮಾ ಆಗುತ್ತದೆ. ಜೊತೆಗೆ ಸ್ನೇಹದ ಬಗ್ಗೆ ಈ ಚಿತ್ರದಲ್ಲಿ ರಘು ಮತ್ತು ಸಾಧು ಸಾರ್ ಪಾತ್ರಗಳ ಮೂಲಕ ತುಂಬಾ ವಿಚಾರಗಳನ್ನು ಹೇಳಿದ್ದೇನೆ.

ಚಿತ್ರದ ಬಗ್ಗೆ ಬೇರೇನು ಹೇಳಲು ಇಷ್ಟಪಡುತ್ತೀರಿ?
ತುಂಬಾ ವಿಶೇಷಗಳಿವೆ. ಪಟ್ಟಿ ಮಾಡಿದರೆ ದೊಡ್ಡದಾಗುತ್ತದೆ. ಇಲ್ಲಿ ಫಿಲಾಸಪಿ ಇದೆ, ಫೀಲಿಂಗ್ ಇದೆ, ಸೆಂಟಿಮೆಂಟ್, ಲಾಜಿಕ್ ಒಳಗೊಂಡು ಸಂಭಾಷಣೆಗಳಿವೆ. ಮುಖ್ಯವಾಗಿ ಇಲ್ಲಿನ ಕಥೆ ಮತ್ತು ಅದರ ಪಾತ್ರಧಾರಿಗಳನ್ನು ಪ್ರೇಕ್ಷಕ ತನ್ನ ಜೀವನಕ್ಕೆ ಕನೆಕ್ಟ್ ಮಾಡಿಕೊಳ್ಳುತ್ತಾನೆ. ಇದೇ ಚಿತ್ರದ ವಿಶೇಷತೆ.

ಸುಮ್ ಸುಮ್ನೆ ನಗಿಸಕ್ಕಾಗಲ್ಲ - ರಂಗಾಯಣ ರಘು
ಈ ಚಿತ್ರದಲ್ಲಿ ನಿಮಗೆ ಇಷ್ಟವಾದದ್ದು ಏನು?
ನಮ್ಮ ಚಿತ್ರದಲ್ಲಿ ವಿಶೇಷತೆಗಳ ಬಗ್ಗೆ ಚಿತ್ರ ನೋಡುವ ಪ್ರೇಕ್ಷಕರು ಹೇಳಬೇಕು. ಆದರೆ ಯಾಕೆ ವಿಶೇಷ ಅಂತ ಮಾತ್ರ ಹೇಳಬಲ್ಲೆ. ನಾನು ಮತ್ತು ಸಾಧು ಇಬ್ಬರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದವರು. ಕಾಮಿಡಿ ಕ್ಯಾರೆಕ್ಟರ್‌ಗಳಾದರೂ ಹಾಗೆ ಬಂದು ಹೀಗೆ ಹೋಗುವಂಥ ಪಾತ್ರಗಳೇ ಹೆಚ್ಚು. ಆದರೆ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ಬಂದಿದ್ದೇವೆ. ನಮ್ಮಿಬ್ಬರ ಜರ್ನಿ ಕೂಡ ಒಂದೇ ರೀತಿಯದ್ದು. ಹೀಗಾಗಿ ನಮ್ಮ ಜೋಡಿ ಇಲ್ಲಿ ವರ್ಕ್ ಔಟ್ ಆಗಿದೆ. ಇನ್ನು ಇಷ್ಟವಾದದ್ದು ಅಂದರೆ, ಇಡೀ ಚಿತ್ರದ ಬಗ್ಗೆ ಮಾತನಾಡಬೇಕು. ನಾನು ಮತ್ತು ಸಾಧು ಕೋಕಿಲರ ಜೊತೆಗೆ ಬರುವ ಬೇರೆ ಪಾತ್ರಧಾರಿಗಳೂ ಕೂಡ ಸುಮ್ಮನೆ ಬಂದು ಹೋಗಲ್ಲ. ಪ್ರತಿ ಪಾತ್ರಕ್ಕೂ ಇಲ್ಲಿ ಮಹತ್ವ ಇದೆ. ಹಾಗೆ ಪ್ರತಿ ದೃಶ್ಯದಲ್ಲೂ ಹಾಸ್ಯ ಜೊತೆಗೆ ಮಾನವೀಯತೆ, ಎಮೋಷನಲ್, ಬದುಕಿನ ರೀತಿಗಳನ್ನು ತೋರಿಸಲಾಗಿದೆ. ನಿರ್ದೇಶಕರ ಈ ಕಥೆ ನನಗೆ ಇಷ್ಟವಾಯಿತು.

ಈ ಚಿತ್ರದಲ್ಲಿ ಅಭಿನಯಿಸಿದ ಮೇಲೆ ನಿಮ್ಮ ಚಡ್ಡಿ ದೋಸ್ತ್‌ಗಳು ನೆನಪಾಗಿದುಂಟೆ?
ಅಯ್ಯೋ ಬರೀ ನೆನಪಲ್ಲ, ನನ್ನ ಹಳೇ ದೋಸ್ತ್‌ಗಳನ್ನು ಸಿನಿಮಾ ಮುಗಿದ ಮೇಲೆ ಭೇಟಿ ಮಾಡಿ ಬಂದೆ. ವಿಶೇಷ ಅಂದ್ರೆ 8ನೇ ತರಗತಿಯಲ್ಲಿ ಗೆಳೆಯರಾಗಿದ್ದವರೂ ಸಿಕ್ಕರು. ವೆಂಕಟೇಶ್, ಮಹೇಶ್ ಗೌಡ, ಚಂದ್ರಶೇಖರ್ ಇವರು ನನ್ನ ಚಡ್ಡಿ ದೋಸ್ತ್‌ಗಳು. ಅವರಿಗೆ 'ಚಡ್ಡಿ ದೋಸ್ತ್‌' ಸಿನಿಮಾ ಬಗ್ಗೆ ಹೇಳಿ ಹಳೇ ಘಟನೆಗಳನ್ನು ನೆನಪಿಸಿಕೊಂಡು ತುಂಬಾ ನಕ್ಕಿದ್ವಿ. ನನ್ನ ಚಡ್ಡಿ ದೋಸ್ತ್‌ಗಳು ಸಿನಿಮಾ ನೋಡಲು ಬರುತ್ತಾರೆ. ಇದೊಂದು ಅಪರೂಪದ ಭೇಟಿ.

ಅಂದಹಾಗೆ ನೀವು ಮತ್ತು ಸಾಧು ಕೋಕಿಲ ಈ ಇಬ್ಬರ ಕಾಮಿಡಿ ಕಿಲಾಡಿಗಳ ಪೈಕಿ ಯಾರ ಚಡ್ಡಿ ದೊಡ್ಡದು?
ಹ್ಹ ಹ್ಹ ಹ್ಹ... ನನ್ ಚಡ್ಡಿನೇ ದೊಡ್ದು ಸ್ವಾಮಿ. ಅಗಲ, ಎತ್ತರ ಎರಡರಲ್ಲೂ ನನ್ ಚಡ್ಡಿನೇ ಫಸ್ಟ್. ಪಾಪ ಸಾಧು ಕುಳ್ಳ. ಅವನ ಚಡ್ಡಿ ಶಾರ್ಟ್. ಆದ್ರೆ, ತೆರೆ ಮೇಲೆ ಬಂದಾಗ ಎರಡೂ ಚಡ್ಡಿಗಳು ಸಿಕ್ಕಾಪಟ್ಟೆ ಕಮಾಲ್ ಮಾಡಿವೆ. ನೀವೇ ನೋಡ್ತಿರಲ್ಲ.

ಕೇವಲ ನಗಿಸುತ್ತೀರಾ? ಅಥವಾ ಏನಾದ್ರು ವಿಷಯ ಹೇಳ್ತಿರಾ?
ಸುಮ್ ಸುಮ್ನೆ ಯಾರನ್ನಾದರೂ ನಗಿಸಕ್ಕಾಗುತ್ಯೆ? ಹಾಗೇನಾದ್ರೂ ವಿಷಯ ಇಲ್ದೇನೇ ನಗಿಸಕ್ಕೆ ಹೋದ್ರೆ ತಿಕ್ಲಾ ಅಂತಾರೆ. ನೋಡಿ, ವಿಷಯ ಇಲ್ದೆ ನಗಿಸೋದು ತುಂಬಾ ಕಷ್ಟ. ನಮ್ಮ ಪ್ರತಿ ಹಾಸ್ಯದ ಮಾತಿನಲ್ಲಿ ಪ್ರತಿಯೊಬ್ಬರ ಬದುಕಿನ ಚಿತ್ರಣ ಸಿಗುತ್ತದೆ. ಚಿತ್ರ ನೋಡುವ ಪ್ರೇಕ್ಷಕ ತನ್ನ ಜೀವನದ ಜೊತೆಗೆ ಕನೆಕ್ಟ್ ಮಾಡಿಕೊಳ್ಳುತ್ತಾನೆ. ಸ್ನೇಹ, ಜೀವನ, ಕಷ್ಟ, ದುಃಖ, ಎಮೋಷನಲ್ ಎಲ್ಲವೂ ಇಲ್ಲಿದೆ.

ಇನ್ಮುಂದೆ ನಿಮ್ಮನ್ನು ಯಾರಾದ್ರು 'ಕಾಮಿಡಿ ಹೀರೋಗಳು' ಅಂದ್ರೆ ಏನನಿಸುತ್ತದೆ?
ಹೀರೋ ಆಗ್ಬೇಕು ಅಂತ ಯಾವತ್ತು ಅನಿಸಿಲ್ಲ. ಇನ್ನು ಕಾಮಿಡಿ ಹೀರೋಗಳು ಅಂದಾಗ ನಮಗೇನೂ ಬೇಸರ ಇಲ್ಲ. ಒಂದು ಸಿನಿಮಾದ ಪಾತ್ರದಿಂದ ಪ್ರೇಕ್ಷಕರು ಗುರುತಿಸುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದು ಇದೆಯಾ? ಪ್ರೇಕ್ಷಕರು ಯಾವುದೇ ಹೆಸರಿನಿಂದ ಕರೆಯಲಿ ನಮಗೆ ಬೇಸರ ಇಲ್ಲ. ಸಿನಿಮಾ ಮಾಡೋದು ಪ್ರೇಕ್ಷಕರಿಗೆ ತಾನೇ?

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com