ಭರ್ಜರಿ ಭಜರಂಗಿ

ಭರ್ಜರಿ ಭಜರಂಗಿ
Updated on: 

ಸಿನಿಮಾಗಳು ಬಿಡುಗಡೆಯಾಗುವುದೇ ಕಷ್ಟ ಎಂಬಂತಿರುವ ಸಮಯದಲ್ಲಿ ಶಿವರಾಜ್‌ಕುಮಾರ್ ಅಬಿನಯದ 'ಭಜರಂಗಿ' ಚಿತ್ರತಂಡ ಇತ್ತೀಚೆಗೆ ತ್ರಿವೇಣಿ ಚಿತ್ರಮಂದಿರದಲ್ಲಿ ತನ್ನ ಟ್ರೈಲರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿತು. ಎ. ಹರ್ಷ ನಿರ್ದೇಶನದ ಭಜರಂಗಿ ಚಿತ್ರದ ಟ್ರೈಲರ್ ನೋಡಿದ ಉದ್ಯಮದ ಕೆಲವರು ಇಂಥ ಟ್ರೈಲರ್ ನಿಜಕ್ಕೂ ಹೊಸದು. ಇದನ್ನು ಥಿಯೇಟರ್‌ನಲ್ಲೇ ಯಾಕೆ ಬಿಡುಗಡೆ ಮಾಡಬಾರದು ಎಂಬ ಪ್ರಶ್ನೆ ಕಮ್ ಸಲಹೆ ಮುಂದಿಟ್ಟರಂತೆ. ಹಾಗಾಗಿ ಉದ್ಯಮದ ಒಂದಷ್ಟು ಜನಗಳ ಅಭಿಪ್ರಾಯ ತೆಗೆದುಕೊಂಡು ಕೊನೆಗೆ ಭಜರಂಗಿ ಚಿತ್ರದ ಟ್ರೈಲರ್‌ನ ಭರ್ಜರಿ ಸ್ಪೆಷಲ್ ಶೋ ಅನ್ನೇ ಏರ್ಪಡಿಸಿತ್ತು ಚಿತ್ರತಂಡ. ಸಾರ್ವಜನಿಕರಿಗೂ ಮುಕ್ತವಾಗಿದ್ದ ಈ ಸ್ಪೆಷಲ್ ಶೋ ನೋಡಿದವರು ನಿಜಕ್ಕೂ ಇದು ಸ್ಪೆಷಲ್ ಟ್ರೈಲರ್ ಎಂದಿದ್ದು ವಿಶೇಷ. ಈಗ ಇದೇ ಟ್ರೈಲರ್ ಅನ್ನು ಯೂ ಟ್ಯೂಬ್‌ನಲ್ಲೂ ಬಿಡುಗಡೆ ಮಾಡಿದ್ದು ಅಲ್ಲಿ ಈಗಾಗಲೇ ಭಜರಂಗಿ ಫೀವರ್ ಶುರುವಾಗಿದೆ. ಇನ್ನು ಕೆಲವು ದಿನಗಳಲ್ಲಿ ಟ್ರೈಲರ್ ಎಷ್ಟು ಹಿಟ್ಸ್‌ಗಳನ್ನು ಕಂಡಿದೆ ಎಂಬುದು ದೊಡ್ಡ ಸುದ್ದಿಯಾಗುವ ಲಕ್ಷಣಗಳೂ ಇವೆ. ಅಂದಹಾಗೆ ಕಳೆದ ಗುರುವಾರ ಬಿಡುಗಡೆಯಾದ ಭಜರಂಗಿ ಟ್ರೈಲರ್ ಅನ್ನು ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಯೋಜನೆ ಹೊಂದಿತ್ತು ಚಿತ್ರತಂಡ. ಅದು ಯಶಸ್ವಿಯೂ ಆಗಿದೆ. ಅದರಂತೆ, ದರ್ಶನ್ ಅಭಿನಯದ 'ಬೃಂದಾವನ' ಚಿತ್ರ ತೆರೆಕಂಡ ನರ್ತಕಿ ಚಿತ್ರಮಂದಿರದ ಮಾರ್ನಿಂಗ್ ಶೋನಲ್ಲೂ ಭಜರಂಗಿ ಕಾಣಿಸಿಕೊಂಡಿದ್ದ. ಆದರೆ ಮ್ಯಾಟ್ನಿ ಹೊತ್ತಿಗೆ ಅದೇನಾಯಿತೋ ಏನೋ ಭಜರಂಗಿ ನಾಪತ್ತೆ. ಹಾಗಾಗಿ ಬೃಂದಾವನ ತೆಗೆದುಕೊಂಡರೆ ಭಜರಂಗಿ ಫ್ರೀ ಎಂದುಕೊಂಡು ನರ್ತಕಿ ಚಿತ್ರಮಂದಿರಕ್ಕೆ ಹೋದವರಿಗೆ ನಿರಾಶೆಯಾಗಿದ್ದು ನಿಜ. ಆದರೆ ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಗಾಂಧಿನಗರದ ಕೆಲವು ಮೂಲಗಳು 'ಯಾರಿಗೂ ಗೊತ್ತಿಲ್ಲ' ಎಂದರೆ ಇನ್ನು ಕೆಲವು ಮೂಲಗಳು 'ಎಲ್ಲರಿಗೂ ಗೊತ್ತು' ಎನ್ನುತ್ತವೆ. ಆದರೆ ಇತರ ಚಿತ್ರಮಂದಿರಗಳಲ್ಲಂತೂ ಸದ್ಯಕ್ಕೆ ಭಜರಂಗಿ ಟ್ರೈಲರ್ ಕಾಣಸಿಗುತ್ತಿದೆ.

- ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com