ದಿಲ್‌ವಾಲನ ವಾರ

ನಿರ್ಮಾಪಕ ಶೈಲೇಂದ್ರಬಾಬು ನಿರ್ದೇಶಕ ಅನಿಲ್‌ಕುಮಾರ್ ಮೇಲೆ ಭರವಸೆ ಇಟ್ಟು,...
ದಿಲ್‌ವಾಲನ ವಾರ
Updated on: 

ನಿರ್ಮಾಪಕ ಶೈಲೇಂದ್ರಬಾಬು ಶಕ್ತಿ ಚಿತ್ರದ ನಿರ್ದೇಶಕ ಅನಿಲ್‌ಕುಮಾರ್ ಮೇಲೆ ಭರವಸೆ ಇಟ್ಟು, ತಮ್ಮ ಮಗ ಸುಮಂತ್‌ನನ್ನು 'ದಿಲ್‌ವಾಲ'ನನ್ನಾಗಿ ಮಾಡಿದ್ದಾರೆ. ಚಿತ್ರರಂಗದಲ್ಲಿ ಪುತ್ರ ಸುಮಂತ್ ಈ ಬಾರಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅವರ ಚಿತ್ರಕ್ಕೆ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿಯಾಗಿರುವ ಆತ್ಮವಿಶ್ವಾಸ ಅವರದ್ದು. ಸದ್ಯಕ್ಕೆ ಚಿತ್ರದ ಬಿಡುಗಡೆ, ಪ್ರಚಾರ ಮತ್ತು ಲಾಭ ಗಳಿಸುವ ಬಗ್ಗೆ ಲೆಕ್ಕಾಚಾರ ಅವರದ್ದು. ಏಕೆಂದರೆ ಈ ವಾರ ದಿಲ್‌ವಾಲ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಮಯದಲ್ಲಿ ನಾಯಕ ಸುಮಂತ್, ನಾಯಕಿ ರಾಧಿಕಾ ಪಂಡಿತ್ ಅವರೊಂದಿಗೆ ನಿರ್ದೇಶಕ ಅನಿಲ್‌ಕುಮಾರ್ ಕೂಡ ಅವರವರ ಎರಡು ಮಾತುಗಳನ್ನಾಡಿದ್ದಾರೆ.

ಅನಿಲ್‌ಕುಮಾರ್
ಸುಮಂತ್‌ರನ್ನು ನಿಮ್ಮ ಸಿನಿಮಾಗೆ ಹೊಂದುವಂತೆ ತರಬೇತಿ ಮಾಡಿದ್ರಿ, ಈಗ ಅವರ ಅಭಿನಯದ ಬಗ್ಗೆ ತೃಪ್ತಿ ಇದೆಯಾ?
100 ಪರ್ಸೆಂಟ್ ಇದೆ. ನನಗಷ್ಟೇ ಅಲ್ಲ, ಪ್ರೇಕ್ಷಕರಿಗೂ ಖುಷಿ ಆಗುತ್ತೆ. ಈಗಾಗಲೇ ಸಿನಿಮಾ ನೋಡಿರುವವರು ಇದೇ ಈ ಹುಡುಗನ ಮೊದಲ ಸಿನಿಮಾ ಆಗಬೇಕಿತ್ತು ಅಂತ ಮಾತಾಡ್ತಾ ಇದಾರೆ.

ಸುಮಂತ್ ರಾಧಿಕಾ ಜೋಡಿಯ ಒಂದು ಸ್ಪೆಷಾಲಿಟಿ ಏನು?
ಅವರಿಬ್ಬರೂ ಚೆನ್ನಾಗಿ ಕಾಣ್ತಾರೆ ಅಂದ್ರೆ ಅದರ ಎಲ್ಲ ಕ್ರೆಡಿಟ್ ರಾಧಿಕಾ ಅವರಿಗೆ ಹೋಗುತ್ತೆ. ಅವರಿಗೆ ಯಾರನ್ನು  ಕೊಟ್ರೂ ಒಳ್ಳೆಯ ಜೋಡಿ ಮಾಡ್ಕೊತಾರೆ. ಅದು ಅವರ ಸ್ವಭಾವ ಮತ್ತು ಪ್ರತಿಭೆ. ನಾನು ಸುಮಂತ್‌ರನ್ನು ರೆಡಿ ಮಾಡಿದ್ದು  ಸಾರ್ಥಕ ಎನಿಸುವಷ್ಟರ ಮಟ್ಟಿಗೆ ಪ್ರತಿ ಫ್ರೇಮ್‌ನಲ್ಲೂ ಅಪ್ಪಟ ಪ್ರೇಮಿಗಳ ಥರಾನೇ ಕಾಣ್ತಾರೆ.

ನಿಮ್ಮದೇ ಚಿತ್ರಕಥೆ ಸಂಭಾಷಣೆಯನ್ನು ನೀವೇ ನಿರ್ದೇಶನ ಮಾಡುವುದರ ಅನುಕೂಲಗಳೇನು?
ಬರಹಗಾರರು ಬರೆಯುವಾಗಲೇ ಅದರಲ್ಲಿ ತಲ್ಲೀನರಾಗಿರುತ್ತಾರೆ. ಬೇರೆಯವರು ಬರೆದು ಅದನ್ನು ನಾನು ನಿದೇಂಶನ ಮಾಡಿದರೆ ಇಬ್ಬರ ಕಲ್ಪನೆಗಳು ಬೇರೆ ಬೇರೆ ಆಗಿರುವ ಸಾಧ್ಯತೆ ಇದೆ. ಆದರೆ ನಾನೇ ಬರೆದಿದ್ದಾದ್ದರಿಂದ ಅದರ ಬಗ್ಗೆ ಸ್ಪಷ್ಟತೆ ಇರುತ್ತೆ. ಮತ್ತದು ಪ್ರೇಕ್ಷಕನಿಗೂ ಅಷ್ಟೇ ಸ್ಪಷ್ಟವಾಗಿ ತಲುಪುತ್ತೆ.

ಒಂದು ಸಿನಿಮಾ ಮಾಡಿರುವ ನಿರ್ದೇಶಕರಾಗಿ, ದಿಲ್‌ವಾಲನ ಬಗೆಗಿನ ನಿರೀಕ್ಷೆ ಬಗ್ಗೆ ನಿಮ್ಮ ಅನಿಸಿಕೆ?
ಈ ಸಿನಿಮಾದಲ್ಲಿ ನನ್ನ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ತು. ಅಲ್ಲದೆ ಟ್ರೈಲರ್, ಹಾಡುಗಳಿಗೆ ಈಗಾಗಲೇ ಜನ ಉತ್ಸಾಹ ತೋರಿಸಿದ್ದಾರೆ. ಹುಬ್ಳಿ, ಗದಗ್, ಧಾರವಾಡಗಳಲ್ಲಿ ನನ್ನ 'ಶಕ್ತಿ' ಚಿತ್ರ 100 ದಿನ ಓಡಿತ್ತು. ಹಾಗಾಗಿ ಅಲ್ಲಿನ ಜನ ನನ್ನನ್ನು ದಿಲ್‌ವಾಲ ಚಿತ್ರದ ಬಗ್ಗೆ ವಿಚಾರಿಸುತ್ತಿರುವುದನ್ನು ನೋಡಿ ಖುಷಿ ಆಗ್ತಿದೆ.

ನಿಮ್ಮ ಪ್ರಕಾರ ದಿಲ್‌ವಾಲ ಚಿತ್ರದ ಹೈಲೈಟ್ ಏನು?
ಇಡೀ ಸಿನಿಮಾದ ಜೀವಾಳ ಪ್ರೀತಿ ಮತ್ತು ಅದನ್ನು ಹೇಳಿರುವ ರೀತಿ. ಜನ ಚಿತ್ರಮಂದಿರಕ್ಕೆ ಬಂದ ಮೇಲೆ ಅವರನ್ನು ಸಂಪೂರ್ಣ ತೃಪ್ತಿಪಡಿಸುತ್ತೇನೆ ಎನ್ನುವ ನಂಬಿಕೆ ನನಗಿದೆ.

ರಾಧಿಕಾ ಪಂಡಿತ್
ದಿಲ್‌ವಾಲ ಚಿತ್ರದ ಬಗ್ಗೆ ನಿಮಗೆಷ್ಟು ನಿರೀಕ್ಷೆ ಇದೆ?
ನೆನ್ನೆ ಊರಿಗೆ ಹೋಗಿದ್ದೆ. ಈ ಸಿನಿಮಾದ ಯಶಸ್ಸಿಗಾಗಿ ಪೂಜೆ ಮಾಡಿಸ್ಕೊಂಡು ಬಂದೆ. ದಿಲ್‌ವಾಲಾ ಬಿಡುಗಡೆಗಾಗಿ ಕಾತುರದಿಂದ ಕಾಯ್ತಾ ಇದೀನಿ. ಹೊಸ ಹೀರೋ ಜೊತೆ ಮಾಡಿದ ಅದ್ದೂರಿಯಂಥ ಚಿತ್ರಗಳು ಗೆದ್ದಿವೆ. ಇದೂ ಗೆಲ್ಲುತ್ತೆ ಅನ್ನೋ ವಿಶ್ವಾಸ ಇದೆ.

ಈ ಚಿತ್ರದಲ್ಲಿ ನಿಮಗಿಷ್ಟವಾದ ಒಂದು ಸೀನ್ ಯಾವುದು?
ಚಿತ್ರದ ಹೀರೋ ಸುಮಂತ್ ನಂಗೆ ಪ್ರಪೋಸ್ ಮಾಡೋ ಸೀನ್.

ಸ್ಟಾರ್ ನಟರ ಜೊತೆ ಅಭಿನಯಿಸೋಕೂ ಹೊಸ ಹುಡುಗರ ಜೊತೆ ಅಭಿನಯಿಸೋಕೂ ಏನು ವ್ಯತ್ಯಾಸ?
ಹೊಸಬರ ಜೊತೆ ನಟಿಸುವಾಗ ನನ್ನ ಜವಾಬ್ದಾರಿ ಜಾಸ್ತಿ ಇರುತ್ತೆ. ಅದೂ ಒಂಥರಾ ಖುಷಿನೇ.
 
ಹೊಸ ಹೀರೋಗಳ ಜೊತೆ ಅಭಿನಯಿಸೋದರಿಂದ ನಿಮಗೆ ಏನು ಪ್ರಯೋಜನ ಆಗಿದೆ?
ಸಿನಿಮಾ ಹೊಸಬರದಿರಲಿ, ಹಳಬರದಿರಲಿ ಪ್ರತಿಯೊಂದು ಸಿನಿಮಾನೂ ನನಗೆ ಏನೋ ಕಲಿಸುತ್ತೆ. ನಟಿಯಾಗಿ ನಾನು ಬೆಳೆಯೋ ಹಾಗೆ ಮಾಡುತ್ತೆ.

ನಿಮ್ಮ ಪ್ರಕಾರ ದಿಲ್‌ವಾಲ ಚಿತ್ರದ ಹೈಲೈಟ್ ಏನು?
ಇಡೀ ಸಿನಿಮಾನೇ ಒಂಥರಾ ಹೈಲೈಟ್ಸ್ ಇದ್ದ ಹಾಗಿದೆ. ಈ ಸಿನಿಮಾದಲ್ಲಿ ನನಗಂತೂ ಎಲ್ಲವೂ ಇಷ್ಟ.

ಸುಮಂತ್
ಆಟ ಚಿತ್ರಕ್ಕೂ ದಿಲ್‌ವಾಲ ಚಿತ್ರಕ್ಕೂ ನಿಮ್ಮ ನಟನೆಯಲ್ಲಿ ನಿಮಗೆ ಏನು ವ್ಯತ್ಯಾಸ ಕಾಣಿಸ್ತು?
ಆಟದಲ್ಲಿ ಸ್ವಲ್ಪ ಮಟ್ಟಿಗೆ ಕಚ್ಚಾ ಹೀರೋ ಆಗಿದ್ದೆ. ಈಗ ಪಳಗಿದ್ದೇನೆ ಅನ್ನಿಸ್ತಿದೆ. ಆದರೆ ಅಭಿನಯ ಅನ್ನೋದು ಕಲಿಯೋದಲ್ಲ, ಅದು ನನ್ನೊಳಗೆ ಹುಟ್ಟೋದು ಅನ್ನೋ ಅನುಭವ ಆಗಿದೆ.   

ಈ ಬದಲಾವಣೆಗೆ ಏನು ಕಾರಣ?
ನನ್ನ ಕಮಿಟ್‌ಮೆಂಟ್. ಆಟ ಆದ ಮೇಲೆ ಕೆಲವು ಅವಕಾಶಗಳು ಬಂದರೂ ಪೂರ್ತಿ ತಯಾರಾಗಿ ಮುಂದಿನ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಈಗ ಅದು ಫಲ ಕೊಟ್ಟಿದೆ. ಆಟದ ಸುಮಂತ್‌ಗೂ ದಿಲ್‌ವಾಲ ಸುಮಂತ್‌ಗೂ ತುಂಬಾ ವ್ಯತ್ಯಾಸ ಕಾಣಿಸ್ತಿದೆ.

ಈ ಬಾರಿ ಸೀನಿಯರ್ ಹೀರೋಯಿನ್ ಇದ್ದಿದ್ದು ನಿಮಗೆ ಎಷ್ಟು ಹೆಲ್ಪ್ ಆಯ್ತು?
ರಾಧಿಕಾ ಪಂಡಿತ್ ಅನುಭವಿ ನಟಿ. ಎಷ್ಟೋ ಸಲ ಅವರ ರಿಯಾಕ್ಷನ್‌ಗಳೇ ನನಗೆ ಅಭಿನಯಿಸಲು ಸಹಾಯ  ಮಾಡಿದವು. ಅವರ ಜೊತೆಗೆ ಬೇಕಾದಷ್ಟು ಜನ ಒಳ್ಳೊಳ್ಳೆ ಕಲಾವಿದರು ಈ ಸಿನಿಮಾದಲ್ಲಿ ಇದಾರೆ. ಅವರೆಲ್ಲರ ಮುಂದೆ ನಾನು ಡಲ್ ಆಗಬಾರದು ಅನ್ನೋ ಎಚ್ಚರಿಕೆ ತಗೊಂಡು ಅಭಿನಯಿಸಿದ್ದೇನೆ.

ಬೇರೆ ಬ್ಯಾನರ್ ಸಿನಿಮಾಗಳಲ್ಲಿ ಅಭಿನಯಿಸಲು ತಯಾರಾಗಿದೀರ ಅನ್ಸುತ್ತಾ?
ಖಂಡಿತ. ಈಗಾಗಲೇ ಮಾತುಕತೆ ನಡೆದಿದೆ. ದಿಲ್‌ವಾಲಾ ಮುಗಿದ ನಂತರ ಬೇರೆ ಬ್ಯಾನರ್ ಸಿನಿಮಾ ಶುರುವಾಗಲಿದೆ. ಕಥೆ, ನಿರ್ದೇಶಕರು ಎಲ್ಲ ಪಕ್ಕಾ ಆಗಿದೆ.

ನಿಮ್ಮ ಪ್ರಕಾರ ದಿಲ್‌ವಾಲ ಚಿತ್ರದ ಹೈಲೈಟ್ ಏನು?
ನಾನು ನಾಯಕಿಗೆ ಪ್ರಪೋಸ್ ಮಾಡುವ ಸೀನ್. ಇದೊಂದು ವಿಶೇಷ ರೀತಿಯ ದೃಶ್ಯ. ಎಲ್ಲ ಹುಡುಗರಿಗೂ ಈ ರೀತಿ ಪ್ರಪೋಸ್ ಮಾಡಬೇಕು ಅಂತ ಅನಿಸಬಹುದು. ಆದರೆ ನಿಜಜೀವನದಲ್ಲಿ ಈ ರೀತಿ ಪ್ರಪೋಸ್ ಮಾಡೋದು ಕಷ್ಟ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com