

ತೆಲುಗಿನಲ್ಲಿ 'ಆ ನಲುಗರು' ಎನ್ನುವ ಚಿತ್ರವೊಂದು ಬಂದಿತ್ತು. ತುಂಬಾ ವರ್ಷಗಳ ಹಿಂದೆ ಬಂದ 'ಆ ನಾಲ್ಕು ಮಂದಿ' ಎಂಬ ಅರ್ಥದ 'ದಾಸ್ವಾಳ' ಚಿತ್ರದ ನಾಯಕ ರಾಜೇಂದ್ರ ಪ್ರಸಾದ್. ಜೀವನದಲ್ಲಿ ಹೇಗಾದರೂ ಬದುಕಬೇಕು ಎನ್ನುವವರ ನಡುವೆ ತಾನು ಹೀಗೇ ಬದುಕಬೇಕು, ಹೋಗುವಾಗ ಇಲ್ಲಿಂದ ಏನೂ ತೆಗೆದುಕೊಂಡು ಹೋಗಲ್ಲ; ನಾಲ್ಕು ಜನರ ಪ್ರೀತಿ/ ಹೊರತಾಗಿ ಎಂಬಿತ್ಯಾದಿ ಥಿಯೇರಿ ಇಟ್ಟುಕೊಂಡಿರುವ ಚಿತ್ರದ ನಾಯಕ ಜೀವನದಲ್ಲಿ ತನ್ನ ಒಳ್ಳೆಯತನದಿಂದ ಬದುಕಿನ ಸಾರ್ಥಕ್ಯವನ್ನು ಕಂಡುಕೊಳ್ಳುತ್ತಾನೆ. ತೆಲುಗಿನಲ್ಲಿ ಅತ್ಯಂತ ಎಮೋಷನಲ್ ಆಗಿ ಪ್ರೇಕ್ಷಕನನ್ನು ಹಿಡಿದಿಟ್ಟ, ಈಗಲೂ ರಾಜೇಂದ್ರ ಪ್ರಸಾದ್‌ರ ದಿ ಬೆಸ್ಟ್ ಸಿನಿಮಾಗಳಲ್ಲಿ ಒಂದಾಗಿರುವ ಚಿತ್ರವಿದು.
ಫಾರ್ ಎ ಚೇಂಜ್ 'ಆ ನಾಲ್ಕು ಜನ ಯಾರು?' ಎಂದು ಹುಡುಕುತ್ತ ಹೋಗುವ ಇಬ್ಬರ ಅಬೆಪ್ಪಾರಿಗಳ ಕಥೆಯನ್ನು ನಿರ್ದೇಶಕ ಎಂ.ಎಸ್. ರಮೇಶ್ ಕನ್ನಡ ಪ್ರೇಕ್ಷಕರಿಗೆ ಹೇಳಿದ್ದಾರೆ. ಅತ್ಯುತ್ತಮ ಸಾಮಾಜಿಕ ಸಂದೇಶವನ್ನು ಒಳಗೊಂಡಿರುವ ಚಿತ್ರ ಇದಾಗಿದ್ದರೂ, ಎಲ್ಲ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುವಂತೆ ರೂಪಿಸಿದ್ದಾರೆ. ಅದಕ್ಕಾಗಿ ಅವರು ನೆಚ್ಚಿಕೊಂಡಿದ್ದು ಹಾಸ್ಯದ ನೆರಳನ್ನ. ಹೌದು, ಇಡೀ ಕಥೆಯನ್ನು ಹಾಸ್ಯದ ಹಾದಿಯಲ್ಲಿ ಕಟ್ಟುತ್ತಲೇ ಸಾಗುವ 'ದಾಸ್ವಾಳ' ಚಿತ್ರದಲ್ಲಿ ಸಂದೇಶದ ಜೊತೆಗೆ ಮನರಂಜನೆಯೂ ಉಂಟು. 'ಜೋಗಿ' ಪ್ರೇಮ್ ಮತ್ತೆ ನಾಯಕ ನಟರಾಗಿ ಅಭಿನಯಿಸಿರುವ 'ದಾಸ್ವಾಳ' ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಹಾಸ್ಯದ ಮೂಲಕವೇ ನಮ್ಮ ಪ್ರಜ್ಞೆಯನ್ನು ಕದಡುವ ರಮೇಶ್‌ರ ಈ ಚಿತ್ರಕ್ಕೆ ಅಣಜಿ ನಾಗರಾಜ್ ನಿರ್ಮಾಪಕ. 'ಇದು ಕಾಮನ್ ಮ್ಯಾನ್ ಚಿತ್ರ' ಎನ್ನುತ್ತಾರೆ ನಿರ್ದೇಶಕರು. ಆ ಸಾಮಾನ್ಯ ಪ್ರೇಕ್ಷಕರನ್ನು ತಲುಪಲು 'ದಾಸ್ವಾಳ'ಕ್ಕೆ ನೂರು ಚಿತ್ರಮಂದಿಗಳಲ್ಲಿ ಪ್ರದರ್ಶನ ಕಾಣುವ ಭಾಗ್ಯ ಸಿಕ್ಕಿದೆ.
ಹೌದು, ನಾಲ್ಕು ಜನ ಯಾರು?ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೋಗುವ ನಾಯಕ ಮತ್ತವನ ಮಾವನ ಸುತ್ತ ಕಥೆ ಸಾಗುತ್ತದೆ. ಪಯಣದಲ್ಲಿ ಅವರಿಗೆ ಗೊತ್ತಿಲ್ಲದೆ ಅಪ್ಪ, ಅಮ್ಮ, ಅಣ್ಣ, ತಮ್ಮ, ತಂಗಿ, ಸ್ನೇಹಿತರು ಹೀಗೆ ಒಂದು ಕುಟುಂಬವನ್ನೇ ಸಂಪಾದಿಸಿಕೊಂಡರೂ ಅದನ್ನ ಕುಟುಂಬ ಎಂದು ಒಪ್ಪಿಕೊಳ್ಳದ ಇಬ್ಬರ ದಡ್ಡತನವನ್ನೂ ಇಲ್ಲಿ ಕಾಣಬಹುದು. ಪ್ರತಿ ಸನ್ನಿವೇಶವೂ ಹಾಸ್ಯದ ನೆರಳಿನಲ್ಲೇ ಬಿಚ್ಚಿಕೊಳ್ಳುತ್ತದೆ. 'ಮೊದಲ ಬಾರಿಗೆ ಒಬ್ಬ ಸ್ಟಾರ್ ಡೈರೆಕ್ಟರ್‌ನನ್ನು ಡೈರೆಕ್ಟ್ ಮಾಡಿದ್ದೀನಿ. ಹಾಗೆ ಮೊದಲ ಬಾರಿಗೆ ಹಾಸ್ಯ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಪಂಚ್ ಡೈಲಾಗ್, ಮಾಸ್ ಸಾಹಸ ಇಲ್ಲ. ಜನ ಸಾಮಾನ್ಯನ ಮಾತುಗಳನ್ನು ಅಷ್ಟೇ ಸರಳವಾಗಿ ಹೇಳಿದ್ದೇನೆ. ನನ್ನ ಚಿತ್ರಗಳ ಪ್ಲೇವರ್ ಇಲ್ಲಿ ಇರಲ್ಲ. ಮಧ್ಯಮ ವರ್ಗದವರ ಬದುಕಿನ ಚಿತ್ರ...' ಹೀಗೆ ಚಿತ್ರದ ವಿಶೇಷಗಳನ್ನು ಪಟ್ಟಿ ಮಾಡುತ್ತ ಸಾಗುತ್ತಾರೆ ರಮೇಶ್. ವಿಶೇಷ ಅಂದರೆ, ಈ ಚಿತ್ರದಲ್ಲಿ ದುಡಿಯುತ್ತಿರುವ ತಾಂತ್ರಿಕ ವರ್ಗದ ಜೊತೆಗೆ ರಮೇಶ್‌ಗೆ ಇದು 13ನೇ ಚಿತ್ರವಂತೆ.
'ಇಂಥ ಚಿತ್ರ ಮಾಡುವಾಗ ಕೆಲವೊಮ್ಮೆ ಸವಾಲಾಗಿ ಕಂಡಿದ್ದು ನಿಜ. ಆದರೆ ನಾನು ನನ್ನ ಗುರುಗಳಾದ ಕೆ. ವಿ.ರಾಜು ಜತೆಗಿದ್ದಾಗ ಅವರು 'ಹುಲಿಯಾ' ಚಿತ್ರವನ್ನು ಚಿತ್ರೀಕರಿಸಿದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಬ್ಯಾಕ್ ಡ್ರಾಪ್‌ನನ್ನೇ ನನ್ನ ನಿರ್ದೇಶನದ ಚಿತ್ರದ ಚಿತ್ರೀಕರಣವನ್ನೂ ಮಾಡಿದ್ದು ವಿಶೇಷ. ಇಲ್ಲಿ ಬೋಧನೆ, ಕಣ್ಣೀರಿನ ನೆರಳು ಇಲ್ಲ. ಕೊನೆಗೂ ನಾಯಕನಿಗೆ ಆ ನಾಲ್ಕು ಜನ ಸಿಗ್ತಾರಾ? ಎನ್ನುವುದು ಚಿತ್ರದ ಕಥೆ' ಎಂದರು ರಮೇಶ್. ತಾಂತ್ರಿಕವಾಗಿ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಐಶ್ವರ್ಯ ಚಿತ್ರದ ನಾಯಕಿ. ಅನಿತಾ ಭಟ್, ಅವಿನಾಶ್, ಶೋಭರಾಜ್, ಹೇಮಾ ಚೌಧರಿ, ರಂಗಾಯಣ ರಘು, 'ಸಂಚಾರಿ' ವಿಜಯ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ.
- ಕೇಶವ