

ಈಕೆಯ 'ಬಿಚ್ಚು' ಮಾತು ಕೇಳಿ ನಮ್ಮ ಕ್ರಿಕೆಟ್ ಕಲಿಗಳು ಅಪ್ರಾಪ್ತ ಬಾಲಕರಂತೆ ಬೆದರಿ ಓಡಲಿಲ್ಲ ಅಷ್ಟೆ! ಈ ಬೆತ್ತಲೆ ಸುಂದರಿಯ ಸೇವೆ ಗಾಂಧಿನಗರಕ್ಕೂ ತಲುಪಿದೆ. ಸೇವೆ ಮಾಡಿಸಿಕೊಳ್ಳುವವರು ಮುಂದೆ ಬರಬೇಕಿದೆ. ಯಾಕೆಂದರೆ ಈಕೆ ತುಂಬಾ 'ಓಪನ್'.
'ಲವ್ ಈಸ್ ಪಾಯ್ಸನ್' ಚಿತ್ರಕ್ಕಾಗಿ ಬಾಂಬೆ ಪೋರಿ ಪೂನಂ ಪಾಂಡೆ ಐಟಂ ಹಾಡಿನ ಚಿತ್ರೀಕರಣದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ಆಕೆಯ ಫೋಟೊ ಟ್ವಿಟ್ಟರ್ನಲ್ಲೋ, ಫೇಸ್ಬುಕ್ನಲ್ಲೋ ಬಿದ್ದರೆ ಸಾಕು ಮೌಸ್ಗಳು ಮೈ ಚಳಿ ಬಿಟ್ಟು ಹರಿದಾಡುತ್ತವೆ. ಸಾವಿರಾರು ಲೈಕ್ಗಳು, ಕಾಮೆಂಟ್ಗಳ ಸುರಿ ಮಳೆ. ಸಾಮಾಜಿಕ ಜಾಲತಾಣಗಳೇ ಬೆವತು ಹೋಗುವಷ್ಟರ ಮಟ್ಟಗೆ ಈಕೆಯ ಫೋಟೊಗಳು ಮಿಂಚುವುದುಂಟು. ಇವಳ ಭಾವಚಿತ್ರಗಳನ್ನು ಹೊತ್ತ ಕಂಪ್ಯೂಟರ್ಗಳನ್ನು ವೈರಸ್ಗಳು ಕೂಡ ಭಯ ಬಿಳಬಹುದೇನೋ? ಇಂಥ ಹುಡುಗಿ ಈಗ ನೇರ ಗಾಂಧಿನಗರಕ್ಕೆ ಬಂದಿದ್ದಾಳೆ. ಬಂದಿದ್ದು ಮಾತ್ರವಲ್ಲ, ಕುಣಿದು ಕುಪ್ಪಳಿಸಿ ಬೇವರಿಳಿಸಿ ಹೋಗಿದ್ದಾಳೆ.
ಕ್ಷಮಿಸಿ, ಹೀಗೆ ಕುಣಿದದ್ದು ಬಾಂಬೆ ಪೋರಿ ಪೂನಂ ಪಾಂಡೆ, ಬೆವರಿಳಿಸಿಕೊಂಡಿದ್ದು 'ಲವ್ ಈಸ್ ಪಾಯ್ಸನ್' ಚಿತ್ರತಂಡ. ಮಾತೆತ್ತಿದರೆ 'ಬಟ್ಟೆ ಬಿಚ್ಚುತ್ತೇನೆ' ಎಂದು ಹೇಳಿ ನಮ್ಮ ಕ್ರಿಕೆಟಿಗರನ್ನು ನಡುಗಿಸಿದ್ದ ಈ ಹುಡುಗಿಯಿಂದ ಹಿಂದಿ ಚಿತ್ರರಂಗದಲ್ಲಿ ನಿರೀಕ್ಷೆಯಷ್ಟು 'ನಶೆ' ಏರದಿದ್ದರೂ ನಮ್ಮ ಗಾಂಧಿನಗರದಲ್ಲಿ ಮಾತ್ರ ಇಂಥ ಬೆತ್ತಲೆ ಬಾಲೆಯರನ್ನು ಹೆಗಲ ಮೇಲಿಟ್ಟುಕೊಳ್ಳುವುದಕ್ಕೆ ಒಂದಿಷ್ಟು ಮಂದಿ ತುದಿಗಾಲ ಮೇಲೆ ನಿಂತಿರುತ್ತಾರೆ. ಹೀಗಾಗಿ ನಿರುದ್ಯೋಗಿಯಾಗಿದ್ದ ಪಾಕಿಸ್ತಾನದ ವೀಣಾ ಮಲ್ಲಿಕ್ಗೆ ಕೆಲಸ ಕೊಟ್ಟ ಹೆಗ್ಗಳಿಕೆಯ ಬೆನ್ನಲ್ಲೇ ಪೂನಂ ಪಾಂಡೆಯನ್ನೂ ಕರೆದು ಒಂದಷ್ಟು ಬಿಚ್ಚಿಸಿದ್ದಾರೆ ಅಲ್ಲಲ್ಲ, ಕುಣಿಸಿದ್ದಾರೆ.
ಹೀಗಾಗಿ ನಿರುದ್ಯೋಗಿಯಾಗಿದ್ದ ಪಾಕಿಸ್ತಾನದ ಪಾಪ ವೀಣಾ ಮಲ್ಲಿಕ್ಗೆ ಕೆಲಸ ಕೊಟ್ಟ ಹೆಗ್ಗಳಿಕೆಯ ಬೆನ್ನಲ್ಲೇ ಪೂನಂ ಪಾಂಡೆಗೂ ಕರೆದು ಬಟ್ಟೆ ಬಿಚ್ಚಿಸಿದ್ದಾರೆ ಅಲ್ಲಲ್ಲ, ಕುಣಿಸಿದ್ದಾರೆ.
ಈ ಹಿಂದೆ 'ಪ್ರೀತಿಯ ಲೋಕ' ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದ ಬಿಎಂಟಿಸಿ ಬಸ್ ಕಡೆಕ್ಟರ್ ನಂದನ್ ಪ್ರಭು ಗೊತ್ತಲ್ಲವೆ? ಅವರ ಎರಡನೇ ಚಿತ್ರ 'ಲವ್ ಈಸ್ ಪಾಯ್ಸನ್'. ಅಂದಹಾಗೆ ಈಗಾಗಲೇ 'ಸಿಲ್ಕ್' ಚಿತ್ರಕ್ಕೆ ಬಿಚ್ಚುಗಾತಿ ವೀಣಾ ಮಲ್ಲಿಕ್ ಬಂದ ಪರಿಣಾಮವೋ ಏನೋ? ಪೂನಂ ಪಾಂಡೆ ಕೈಯಲ್ಲಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಿಸಲಾಗಿದೆ. ಕಥೆ ನಂಬಿಕೊಂಡು ಸಿನಿಮಾ ಮಾಡುವವರ ನಡುವೆ, ದೇಹದ ಮೇಲೆ ಬಾರ ಹಾಕಿ ಸಿನಿಮಾ ಮಾಡುವವರ ಟ್ರೆಂಡ್ ಹೆಚ್ಚಾಗುತ್ತಿರುವುದರ ಕುರುಹು ಇದಾಗಿರಬಹುದೇ? ಇರಲಿ, ಅಭಿಮಾನ್ ಸ್ಟುಡಿಯೋದಲ್ಲಿ 'ಲವ್ ಈಸ್ ಪಾಯ್ಸನ್' ಚಿತ್ರಕ್ಕಾಗಿ ಅದ್ದೂರಿಯಾಗಿ ಹಾಕಿದ್ದ ಸೆಟ್ನಲ್ಲಿ ಪೂನಂ 'ತೆರೆದು'ಕೊಂಡಿದ್ದಳು. ಜಗಮಗಿಸುವ ವಿದ್ಯುತ್ ದೀಪಗಳಿಗೂ ಮಿಂಚಿನ ಸಂಚಾರವಾದಂತೆ ಆಗಿ ಅವು ಇನ್ನಷ್ಟು ರಂಗೇರಿದ್ದವು. ಕಾಟಾಚಾರಕ್ಕೆ ಮೈ ಮೇಲೆ ಹೊದ್ದುಕೊಂಡಿದ್ದ ವಸ್ತ್ರ ಜಾರುತ್ತಿದ್ದಂತೆ ಅಕ್ಕಪಕ್ಕ ನಿಂತಿದ್ದ ಗನ್ ಮ್ಯಾನ್ಗಳು ಕೊಂಚ ಸರಿದರು. ಪೂನಂ ಸ್ಟೆಪ್ ಹಾಕಲು ಶುರು ಮಾಡಿದಳು. ನೃತ್ಯ ನಿರ್ದೇಶಕ ತ್ರಿಭುವನ್ ಆಗಲೇ ನಾಲ್ಕೈದು ಸ್ಟೆಪ್ಗಳನ್ನು ಸಿಕ್ಕಾಪಟ್ಟೆ ರಿಹರ್ಸಲ್ ಮಾಡಿಸಿದ್ದರು ಎಂಬುದಕ್ಕೆ ಬೆವರಿದ್ದಂತೆ ಕಂಡ ಅವರ ಮುಖವೇ ಸಾಕ್ಷಿಯಾಗಿತ್ತು.
ಪೂನಂಳ ಈ ಸ್ಟೆಪ್ಗಳಿಗೆ ಹಾಡು ಬರೆದಿರುವುದು ಡಾ. ವಿ.ನಾಗೇಂದ್ರ ಪ್ರಸಾದ್. ಪೂನಂ ನೋಡಿಯೋ ಏನೋ ಡಾಕ್ಟರ್ 'ಪೆನ್ನು'ಡಿ ತನ್ನ ಪ್ರತಿಭೆ ತೋರಿಸಿತ್ತು. ಹೀಗಾಗಿಯೇ 'ಶಾನೆ ಇಷ್ಟ ಕ್ರಿಕೆಟು... ನೀವು ಗೆದ್ರೆ ತೋರ್ಲಾ ನನ್ ಸೀಕ್ರೆಟು...' ಎನ್ನುವ ಖತರ್ನಾಕ್ ಹಾಡು ಮೂಡಿ ಬಂದಿತ್ತು. ಹಾಡಿಗೆ ತಕ್ಕಂತೆ ಪೂನಂ ಸೊಂಟ ಬಳುಕಿಸುತ್ತಿದ್ದರೆ, ಮೈ ಮರೆತು ಕುಣಿಯಬೇಕಿದ್ದ 'ಜಂಗಲ್ ಜಾಕಿ' ರಾಜೇಶ, ಮೈ ಬೆವತವನಂತೆ ಹೆಜ್ಜೆ ಹಾಕುತ್ತಿದ್ದ. ಪೂನಂಳಂಥ ಹಾಟ್ ಕೇಕ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದ ಸಂತೃಪ್ತಿ ನಂದನ್ ಪ್ರಭು ಅವರದ್ದು. ಮತ್ತೊಂದು ಕಡೆ, 'ನಾನು ವೀಣಾ ಮಲ್ಲಿಕ್ಳನ್ನು ಮೀರಿಸುವ ಹುಡುಗಿಯನ್ನು ಕರೆಸಿದ್ದೀನಿ ನೋಡಿ' ಎನ್ನುವ ವಿಕಟ ನಗು ನಿರ್ಮಾಪಕರದ್ದು. ಪುಣ್ಯ, ತಮ್ಮ ಅಭಿಮಾನ್ ಸ್ಟುಡಿಯೋದಲ್ಲಿ ಪೂನಂಳ ಕುಣಿತ ನೋಡಿ ದಿ.ಬಾಲಾಣ್ಣ ಎದ್ದು ಬರಲಿಲ್ಲ! ಸೆಟ್ನಲ್ಲಿ ಪೂನಂ ಜೊತೆ ಚಿತ್ರತಂಡ ಮಾಧ್ಯಮಗಳ ಮುಂದೆ ಮಾತಿಗಿಳಿಯಿತು. 'ಐ ಲವ್ ಸ್ಯಾಂಡಲ್ವುಡ್' ಎಂದು ಮೊದಲು ತುಟಿ ಆಡಿಸಿದ್ದು ಪೂನಂ. 'ನಾನೂ ಕೂಡ 'ಕತ್ರೋಂ ಕಾ ಕಿಲಾಡಿ' ಎನ್ನುವ ರಿಯಾಲಿಟಿ ಶೋನಲ್ಲಿ ಕಾಡಿನ ಟಾಸ್ಕ್ ನಿಭಾಯಿಸಿದ್ದೆ. ಈ ಚಿತ್ರದ ನಾಯಕ ರಾಜೇಶ್ ಸಹ ಕಾಡಿನ ಹುಡುಗ. ಹೀಗಾಗಿ ಅವರ ಜೊತೆ ಕುಣಿಯಲು ಒಪ್ಪಿಕೊಂಡೆ. ಮುಂದೆ ಸ್ಯಾಂಡಲ್ವುಡ್ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡರೂ ಅಚ್ಚರಿ ಇಲ್ಲ' ಎಂದು ಬೆರಗಿನ ನೋಟ ಬೀರಿದ್ದೇ ತಡ, ಕ್ಯಾಮೆರಾಗಳು ಮತ್ತಷ್ಟು ಪುಳಕಗೊಂಡವು.
'ನಾವು ಅಂದುಕೊಂಡಂತೆ ಚಿತ್ರ ಬಂದಿದೆ. ಈ ಐಟಂ ಹಾಡಿಗೆ ಪೂನಂ ಬೇಕಿತ್ತು. ಹೀಗಾಗಿ ಆಕೆಯನ್ನು ಕರೆಸಿದ್ದೇವೆ. ಚಿತ್ರದ ಹೈಲೈಟ್ ಸಾಂಗ್ ಇದು' ಎಂದರು ನಿರ್ದೇಶಕ ನಂದನ್ ಪ್ರಭು. ಸೋಮಶೇಖರ್ ನಿರ್ಮಾಪಕರು. 'ಈ ಚಿತ್ರ ತನಗೆ ಬ್ರೇಕ್ ಕೊಡುತ್ತದೆ. ನಂದನ್ ಸಾರ್ ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ' ಎನ್ನುವುದು ರಾಜೇಶ್ನ ಮಾತು. ಅಲ್ಲಿಗೆ 'ಲವ್ ಈಸ್ ಪಾಯ್ಸನ್' ಹರಟೆ ಮುಗಿಯಿತು. ಪಾಯ್ಸನ್ ಕುಡಿದವಳಂತೆ ಮತ್ತೆ ಪಾಂಡೆ ಕುಣಿಯಲಾರಂಭಿಸಿದಳು. ಬಟ್ಟೆ ಎಂದರೆ ಅಲರ್ಜಿ ಎನ್ನುವ ಇಂಥ ಬಿಸಿ ಬೇಬಿಗಳಿಗೆ ಗಾಂಧಿನಗರ ಕೊಡುತ್ತಿರುವ ಮರ್ಯಾದೆ ನೋಡಿ ಬಾಂಬೆ ಗಲ್ಲಿಯಲ್ಲಿ ಮತ್ತಷ್ಟು ಮಂದಿ ತಮ್ಮ ವಸ್ತ್ರಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರಂತೆ.
- ಆರ್. ಕೇಶವಮೂರ್ತಿ