ಸೈಲೆಂಟಾಗ್ ಸೇಡಲ್ಲಿದ್ ಬಿಡಿ

ಗಿರಿರಾಜ್-ಕಿಶೋರ್ ಕಾಂಬಿನೇಷನ್‌ನ ಜಟ್ಟ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ...
ಸೈಲೆಂಟಾಗ್ ಸೇಡಲ್ಲಿದ್ ಬಿಡಿ
Updated on: 

ಗಿರಿರಾಜ್-ಕಿಶೋರ್ ಕಾಂಬಿನೇಷನ್‌ನ ಜಟ್ಟ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ನೇಶನ್‌ವೈಡ್  ಅಲ್ಲದಿದ್ದರೂ ಕನ್ನಡ ಚಿತ್ರರಂಗದಲ್ಲಿ ಜಟ್ಟ ಸದ್ದು ಮಾಡುತ್ತಿದ್ದಾನೆ. ಅದಕ್ಕೆ ಕಾರಣಗಳು ಹಲವು. ಗಿರಿರಾಜ್ ಎಂಬ ಹೊಸ ನಿರ್ದೇಶಕರ ಚಿತ್ರ, ಕಿಶೋರ್ ಅಭಿನಯದ ಹೊಸ ಚಿತ್ರ ಎಂಬ ಕಾರಣಗಳ ಜೊತೆಗೆ ಸುಕೃತ ಅವರ ಬೋಲ್ಡ್‌ನೆಸ್ ಕೂಡಾ ಸುದ್ದಿ ಮಾಡುತ್ತಿದೆ. ಆದರೆ ಸುಕೃತಾರ ಈ ಅವತಾರದ ಕಾರಣಕ್ಕಾಗಿ ನೋಡಬೇಕಾದ ಚಿತ್ರ ಎಂಬ ಹಣೆಪಟ್ಟಿಯ ಅಗತ್ಯ ಜಟ್ಟನಿಗಿಲ್ಲ. ಇದು ಮಹಿಳಾ ದೌರ್ಜನ್ಯದ ವಿರುದ್ಧ ಮಾತನಾಡುವ ಕಥೆ ಎನಿಸುವ ಹೊತ್ತಲ್ಲೇ ಇದೊಂದು ಸೇಡಿನ ಕಥೆ ಎನ್ನುತ್ತದೆ ಚಿತ್ರದ ಟ್ಯಾಗ್ ಲೈನ್. ಸೇಡು ತೀರಿಸಿಕೊಳ್ಳುವವರ ಬಗ್ಗೆ ಪ್ರೇಕ್ಷಕನಿಗೆ ಅನುಕಂಪ ಇದ್ದೇ ಇರುತ್ತದೆ. ಏಕೆಂದರೆ ಸೇಡಿನ ಬೆನ್ನತ್ತಿ ಹೋಗುವವನು ಅನ್ಯಾಯಕ್ಕೊಳಗಾದವನು ಎಂಬ ನಂಬಿಕೆ ಎಲ್ಲರದ್ದು. ಆದರೆ ಇಲ್ಲಿ ಸೇಡು ತೀರಿಸಿಕೊಳ್ಳುವುದು ನಾಯಕನಾ ಅಥವಾ ನಾಯಕಿಯಾ ಎಂಬ ಕುತೂಹಲವಿದೆ. ಹಾಗಾಗಿ, ಇದೆಲ್ಲವೂ ಸೇರಿ ಒಟ್ಟಾರೆ, ಜಟ್ಟ ನಿಜಕ್ಕೂ ಒಂದು ಹೊಸ ರೀತಿಯ ಚಿತ್ರ ಎಂದು ಚಿತ್ರದ ಬಿಡುಗಡೆಗೆ ಮುನ್ನವೇ ಎಲ್ಲರಿಗೂ ಅನಿಸುತ್ತಿದೆ. ಆ ನಂಬಿಕೆಯನ್ನು ನಿರ್ದೇಶಕ ಗಿರಿರಾಜ್ ಉಳಿಸಿಕೊಂಡಿದ್ದಾರಾ ಎಂಬುದಷ್ಟೇ ಈಗ ಉಳಿದಿರುವ ಕುತೂಹಲ.

ನಿಮ್ಮ ಪ್ರಕಾರ ಮನರಂಜನೆ ಎಂದರೇನು? ಹಾಡು, ಫೈಟ್, ರೊಮ್ಯಾನ್ಸ್, ಕಾಮಿಡಿ, ಕಥೆ?
ಜನರಿಗೆ ಅದೆಲ್ಲವೂ ಮನರಂಜನೆಯೇ. ಆದರೆ ಸಿನಿಮಾ ಮಾಡುವವರಿಗೆ ನಾವು ಯಾಕೆ ಸಿನಿಮಾ ಮಾಡ್ತಿದ್ದೀವಿ  ಅನ್ನೋದು ಮುಖ್ಯವಾಗುತ್ತದೆ. ನಮ್ಮ ಸಿನಿಮಾಗಳಲ್ಲಿ ಪುರುಷರ ಅಹಂ ಅನ್ನು ತಣಿಸುವ ಅಂಶಗಳೇ ಹೆಚ್ಚು. ಅದು ನಮ್ಮಲ್ಲಿನ ಋಣಾತ್ಮಕ ಅಂಶಗಳನ್ನು ಮರೆಮಾಚುತ್ತದೆ. ಆದರೆ ಅದರ ಹೊರತಾಗಿ ಏನನ್ನಾದರೂ ಪ್ರಯತ್ನಿಸುವುದು ಕಷ್ಟದ ಕೆಲಸ. ಅದು ನಮ್ಮ ಅಹಂಗೆ ಸವಾಲು ಹಾಕುತ್ತವೆ. ಕೆಲವರಿಗೆ ಅದು ಎಂಟರ್‌ಟೈನಿಂಗ್ ಅನಿಸದೆ ಇರ್ರಿಟೇಟಿಂಗ್ ಅನಿಸಬಹುದು. ಜಟ್ಟದಲ್ಲಿ ಅಂಥದೊಂದು ಪ್ರಯತ್ನ ಮಾಡಿದ್ದೇನೆ.

ನಿಮ್ಮ ಚಿತ್ರದಲ್ಲಿರುವ ಮನರಂಜನೆ ಎಂಥದು?

ಅದನ್ನು ಎಂಟರ್‌ಟೈನ್‌ಮೆಂಟ್ ಎನ್ನುವುದಕ್ಕಿಂತ ಅನ್‌ರಿಚ್‌ಮೆಂಟ್ ಎನ್ನುವುದು ಸೂಕ್ತ. ನಮ್ಮ ಚಿತ್ರಗಳಲ್ಲಿ ಈ  ಹುಡ್ಗೀರೆಲ್ಲ ಹಿಂಗೆ ಎನ್ನುವಂಥ ಉಡಾಫೆಯ ಮಾತುಗಳನ್ನು ಕೇಳಿದ್ದೇವೆ. ಅದು ಹೆಂಗಸರ ಮೇಲಿನ ದೌರ್ಜನ್ಯಕ್ಕೆ ಇಂಬು ಕೊಡುತ್ತದೆ. ಹಾಗೆ ನೋಡಿದರೆ ಮಹಿಳಾ ದೌರ್ಜನ್ಯದ ವಿಷಯದಲ್ಲಿ ದೆಹಲಿಯ ನಂತರದ ಬೆಂಗಳೂರು ಎರಡನೇ ಸಾ ್ಥನದಲ್ಲಿದೆ. ನನ್ನ ಚಿತ್ರ ನಾವು ಬೆಂಬಲಿಸುತ್ತಿರುವ ಕೆಟ್ಟ ವ್ಯವಸ್ಥೆಗೊಂದು ಕನ್ನಡಿ ಎನ್ನಬಹುದು. ಒಬ್ಬ ಕಲಾವಿದ ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು. ಅಂಥ ಪ್ರಯತ್ನ ಮಾಡಿದ್ದೇನೆ. ಅದು ಕೆಲವರಿಗೆ ಇಷ್ಟವಾಗದೇ ಇರಬಹುದು. ನನ್ನ ಅನೇಕ ಬೀದಿನಾಟಕಗಳಲ್ಲೂ ಇದೇ ಪ್ರಯತ್ನ ಮಾಡಿದ್ದೆ. ಒಟ್ಟಾರೆ ಇದನ್ನು ನನ್ನ ಸಣ್ಣತನಗಳ ವಿರುದ್ಧ ಮಾಡಿದ ಹೋರಾಟಗಳ ಚಿತ್ರ ಎನ್ನಬಹುದು.

ನವಿಲಾದವರು ಸಿನಿಮಾ ಮಾಡಿದ್ರಿ, ಅದ್ವೈತ ಮಾಡಿದ್ರೂ ಬಿಡುಗಡೆ ಆಗಿಲ್ಲ. ಮೋಹನ್‌ಲಾಲ್, ಪುನೀತ್‌ರ  ಮೈತ್ರಿ ಚಿತ್ರ ಕೂಡ ಇದೆ. ಹಾಗಾಗಿ ಚಿತ್ರರಂಗದಲ್ಲಿ ಹಳಬರು ಅನ್ನಿಸಿಕೊಳ್ಳುವಂಥಾಗಿರುವ ಸಮಯದಲ್ಲಿ ನಿಮಗೆ ಮೊದಲ ಚಿತ್ರದ ಬಿಡುಗಡೆಯ ಸಂಭ್ರಮ ಎಷ್ಟಿದೆ?
ನನ್ನ ಅದ್ವೈತ ಚಿತ್ರ ಬಿಡುಗಡೆಯ ಸಮಸ್ಯೆ ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಜಟ್ಟ ಚಿತ್ರಕ್ಕೂ ಬಿಡುಗಡೆಯ ದಿನ ಅನೌನ್ಸ್ ಆದಾಗಲೂ ನಂಬಿಕೆ ಇರಲಿಲ್ಲ. ಚಿತ್ರಮಂದಿರಗಳು ಅನೌನ್ಸ್ ಆದಾಗ ಬಿಡುಗಡೆ ಆಗುತ್ತೆ ಅಂತ ನಂಬಿಕೆ ಬಂತು. ಈಗ ಸ್ವಲ್ಪ ಮಟ್ಟಿಗೆ ಆತಂಕ ಶುರುವಾಗಿದೆ. ನನ್ನ ಹೆಸರೂ ಚಿತ್ರರಂಗದ ನಿರ್ದೇಸಕರ ಪಟ್ಟಿಗೆ ಸೇರುತ್ತಿದೆ ಎಂಬ ಖುಷಿಯೂ ಇದೆ. ಆದರೆ ನನ್ನ ಚಿತ್ರ ಆರ್ಥಿಕವಾಗಿ ಮತ್ತು ವಿಮರ್ಶಕರ ವಲಯದಲ್ಲೂ ಸಮಾನವಾಗಿ ಯಶಸ್ಸು ಕಾಣಬೇಕಾದ ಅನಿವಾರ್ಯ ನನಗಿದೆ. ಅದು ಒಂಚೂರು ಭಯ ಹುಟ್ಟಿಸಿದೆ.

ಒಂದು ಸಾಲಿನಲ್ಲಿ ಹೇಳುವುದಾದರೆ ಜಟ್ಟ ಚಿತ್ರದ ಕಥೆ ಏನು?

ಇದೊಂದು ಸಂಘರ್ಷದ ಕಥೆ. ರಾಜಕಾರಣ ಮತ್ತು ಬದುಕಿನ ನಡುವೆ, ಹೆಣ್ಣು ಮತ್ತು ಗಂಡಿನ ನಡುವೆ, ಸಂಸ್ಕೃತಿ ಮತ್ತು ಹೊಸತನದ ನಡುವೆ, ಲೈಂಗಿಕ ಮನಸ್ಥಿತಿ ಮತ್ತು ಸಭ್ಯತೆಗಳ ನಡುವೆ ನಡೆಯುವ ಸಂಘರ್ಷದ ಕಥೆ.

ಟ್ಯಾಗ್ ಲೈನ್ ನೋಡಿದ್ರೆ ಸೇಡಿನ ಕಥೆ ಅನಿಸುತ್ತೆ?
ಒಬ್ಬ ಮನುಷ್ಯನ ಬಗ್ಗೆ ನಮಗೆ ಸಿಟ್ಟಿದ್ದರೆ ಅವನನ್ನು ಯಾರಾದರೂ ಬಯ್ದರೆ ಅದು ನಮಗೆ ಇಷ್ಟವಾಗುತ್ತದೆ. ಅದಕ್ಕೆ ವಿರುದ್ಧವಾದ ದಯವೇ ಧರ್ಮದ ಮೂಲವಯ್ಯಾ ಎಂಬ ಮಾತೂ ಇದೆ. ಅದನ್ನೂ ಟ್ಯಾಗ್ ಲೈನ್ ಆಗಿ ಬಳಸಿದ್ದೆ.  ಆದರೆ ಅದಕ್ಕಿಂತ ಇದು ಕ್ಲಿಕ್ ಆಗಿದೆ. ಒಟ್ಟಾರೆ ಯಶವಂತ ಚಿತ್ತಾಲರು ಹೇಳಿದಂತೆ ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ ಎಂಬ ಮಾತುಗಳ ಆಶಯ ಇಲ್ಲಿದೆ.

ಚಿತ್ರದ ಎಲ್ಲ ಹಾಡುಗಳನ್ನೂ ನೀವೇ ಬರೆದಿದ್ದೀರಾ, ಸಿನಿಮಾದಲ್ಲಿ ಹಾಡುಗಳ ಪ್ರಾಮುಖ್ಯ ಎಷ್ಟು?
ನಾನು ಹಾಡುಗಳನ್ನು ಗ್ಯಾಪ್ ಫಿಲ್ಲರ್‌ನಂತೆ ಬಳಸಿಕೊಂಡಿಲ್ಲ. ಇಲ್ಲಿನ ಪ್ರತಿಯೊಂದು ಹಾಡೂ ಚಿತ್ರದ ಸನ್ನಿವೇಶಗಳ ಬಗ್ಗೆ ಕಾವ್ಯಾತ್ಮಕವಾಗಿ ಮಾತನಾಡುತ್ತದೆ.

ಅದ್ವೈತ, ಮೈತ್ರಿ ಸಿನಿಮಾಗಳ ಬಗ್ಗೆ?

ಮೈತ್ರಿ ಹಾಡುಗಳ ಚಿತ್ರೀಕರಣ ಬಾಕಿ ಇದೆ. ಅದರ ಜೊತೆಗೆ ಸಾಕಷ್ಟು ಕೆಲಸ ಬಾಕಿ ಇದೆ. ಬಹುಷಃ ಅದು ಮುಂದಿನ ವರ್ಷ ಬಿಡುಗಡೆಯಾಗುತ್ತದೆ. ಅದ್ವೈತ ಬಿಡುಗಡೆಗೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ನೋಡೋಣ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com