ಬಿ ಪಾಸಿಟಿವ್

ಬಿ ಪಾಸಿಟಿವ್
Updated on: 

ಈ ವಾರ ಪ್ರೇಕ್ಷಕರ ಕಣ್ಣಿಗೆ 'ಸಕ್ಕರೆ' ಬೀಳಲಿದೆ. ಗಣೇಶ್ ನಟಿಸಿ, ಅಭಯಸಿಂಹ ನಿರ್ದೇಶಿಸಿ, ಶೈಲಜಾ ನಾಗ್ ಮತ್ತು ಬಿ. ಸುರೇಶ್ ನಿರ್ಮಿಸಿರುವ ಸಿಹಿ ಇದು. ಬಿ. ಸುರೇಶ್ ಸದಭಿರುಚಿಯ, ಕಲಾತ್ಮಕ ಚಿತ್ರಗಳನ್ನು ಕನ್ನಡಿಗರ ಕೈಗಿಟ್ಟವರು. ಕಥೆ- ಚಿತ್ರಕಥೆಯನ್ನು ವಿಭಿನ್ನವಾಗಿ ರಚಿಸಿ ಹುಬ್ಬೇರಿಸಲು ಕಾರಣರಾದವರು. ನಾಟಕ, ಧಾರಾವಾಹಿಗಳಲ್ಲೂ ಅವರ ನಿರ್ದೇಶನ ಪ್ರೇಕ್ಷಕನ ಮೆಚ್ಚುಗೆಗೆ ಪಾತ್ರವಾಗಿದೆ. ಯೋಗರಾಜ್ ಭಟ್ ಅವರ ಹಿಂದಿ ಸಿನಿಮಾಗೂ ಕೂಡ ಇವರೇ ನಿರ್ಮಾಪಕರು. ಈಗ 'ಸಕ್ಕರೆ'ಯನ್ನು ತೆರೆದಿಡುತ್ತಿರುವ ಸಂಭ್ರಮದಲ್ಲಿ 'ಚಿತ್ರಪ್ರಭ'ಕ್ಕೆ ಮಾತಿಗೆ ಸಿಕ್ಕರು.

ನಾಟಕ, ಧಾರಾವಾಹಿ, ಪುಸ್ತಕೋದ್ಯಮ, ಸಿನಿಮಾ- ಹೀಗೆ ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ನೀವು ನಿರ್ಮಾಪಕರಾಗಲು ಕಾರಣ?
'ಸಾಧನೆ' ಎಂಬ ಧಾರಾವಾಹಿಗೆ ಕನ್ನಡದ ಜನ ಕೊಟ್ಟ ಹಣವೇ ನಾನು ನಿರ್ಮಾಪಕನಾಗಲು ಕಾರಣವಾಯಿತು. ಈ ಹಣವನ್ನೇ ಹಾಕಿ ನನ್ನದೇ ನಿರ್ದೇಶನದ 'ಅರ್ಥ' ಚಿತ್ರ ಮಾಡಿದೆ. 'ನಾಕುತಂತಿ' ಧಾರಾವಾಹಿಗೂ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿತು. ನನ್ನ ಚಿತ್ರಕ್ಕೆ ಹಣ ಹೂಡುವವರನ್ನು ಕೇಳುವ ಬದಲು ಈ ವ್ಯವಸ್ಥೆಯಲ್ಲಿ ತೊಡಗಿಕೊಂಡೆ. ಕನ್ನಡದ ಪ್ರೇಕ್ಷಕರು ಕೊಟ್ಟಿದ್ದನ್ನೇ ಮತ್ತೆ ಮತ್ತೆ ವಿನಿಯೋಗಿಸುತ್ತಿದ್ದೇನಷ್ಟೇ.

ನಿರ್ಮಾಪಕರಾಗಲು ಪ್ರೇರಣೆ ನಿಮ್ಮ ಪತ್ನಿಯೇ?
ಲೆಕ್ಕಾಚಾರದಲ್ಲಿ ನಾನು ತುಂಬಾ ದಡ್ಡ. ಅಂಕಿ ಅಂಶಗಳ ನಿರ್ವಹಣೆ ಅವರದೇ. ಯಾರಿಗೆ ಎಷ್ಟು ಸಂಭಾವನೆ ಕೊಡಬೇಕು ಎಂದು ನನಗೆ ತಿಳಿಯದು. ಆದರೆ ಕಥೆ, ಚಿತ್ರಕಥೆಯ ನಿರ್ಧಾರವೆಲ್ಲ ನನ್ನದು. ಸಾಫ್ಟ್‌ವೇರ್ ನನ್ನದು, ಮಾರ್ಕೇಟಿಂಗ್ ಆಕೆಯದು.

'ಸಕ್ಕರೆ' ಬಗ್ಗೆ ನಿಮ್ಮ ನಿರೀಕ್ಷೆ ಹೇಗಿದೆ?
ಇಲ್ಲಿಯವರೆಗೆ ನನ್ನ ನಿರ್ಮಾಣದ ಚಿತ್ರಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ಕೊಟ್ಟಿದ್ದಾರೆ. ನಿಜ ಹೇಳಬೇಕೆಂದರೆ, ನನ್ನ ನಿರೀಕ್ಷೆಗಿಂತ 10 ಪೈಸೆ ಹೆಚ್ಚಿಗೆ ಕೊಟ್ಟು ಬೆನ್ನು ತಟ್ಟಿದ್ದಾರೆ. ಅವರಿಗಾಗಿಯೇ ಈ ಚಿತ್ರ. ಫೈಟ್ ಇಲ್ಲ, ಅಶ್ಲೀಲತೆ ಇಲ್ಲ. ಜನ ನೋಡುವಂಥ ಚಿತ್ರ 'ಸಕ್ಕರೆ'. 'ಸುಪ್ರಭಾತ'ದಂಥ ಚಿತ್ರ ಮತ್ತು ಅನಂತನಾಗ್ ಚಿತ್ರಗಳನ್ನು ಮೆಚ್ಚುವ ಪ್ರೇಕ್ಷಕರಿಗೆ ಇದು ಇನ್ನೂ ಹೆಚ್ಚು ಹಿಡಿಸಲಿದೆ. ಕಹಿ ಉಂಡವರು ಈ 'ಸಕ್ಕರೆ' ಸವಿಯಲಿ ಎಂಬ ಉದ್ದೇಶ ನನ್ನದು.

ನಿಮ್ಮ ನಿರ್ಮಾಣದಲ್ಲಿ ಅಭಯಸಿಂಹರಿಗೆ ಇದು ಎರಡನೇ ಚಿತ್ರ. ಇದು ಕಮರ್ಷಿಯಲ್. ಇಲ್ಲಿನ ಅನುಭವ ಹೇಳಿ...
ಯೋಗರಾಜ್ ಭಟ್ ನನಗೆ ಈ ಚಿತ್ರ ಮಾಡಲು ಸ್ಫೂರ್ತಿ. ಕಮರ್ಷಿಯಲ್ ಮಾಡು ಎಂದು ಪ್ರೋತ್ಸಾಹಿಸಿ, ಚಿತ್ರಕ್ಕಾಗಿ ಕಥೆ ಮಾಡಲು ನಮ್ಮ ಗುಂಪಿನವರಿಗೆ ಹೇಳಿದರು. ಆಗ ನಾನು ಮೂರು ಕಥೆಗಳನ್ನು, ಅಭಯಸಿಂಹ ಎರಡು ಕಥೆಗಳನ್ನು, ಹೀಗೆ ಎಲ್ಲಾ ಸೇರಿ 10 ಕಥೆ ಸೃಷ್ಟಿಯಾಯ್ತು. ಅದರಲ್ಲಿ ಅಭಯಸಿಂಹರ ಕಥೆಯೇ ಆಯ್ಕೆಯಾಯ್ತು. ಅದೇ ಈ 'ಸಕ್ಕರೆ'.

ಯೋಗರಾಜ್ ಭಟ್ಟರ ಹಿಂದಿ ಚಿತ್ರದ ನಿರ್ಮಾಣ ಕೂಡ ನಿಮ್ಮದೆ. ಆ ಚಿತ್ರ ಎಲ್ಲಿಯ ತನಕ ಬಂದಿದೆ?
ಆ ಚಿತ್ರ ಈಗ ಚಿತ್ರಕಥೆಯ ಹಂತದಲ್ಲಿದೆ. ಹಾರುವ ಹಕ್ಕಿ ಎಲ್ಲೆಡೆ ಹಾರುವಂತೆ ಈ ಚಿತ್ರ ಪ್ರಾರಂಭಿಸಿದ್ದೇವೆ.

ನಿಮ್ಮದೇ ಕಥೆ- ಚಿತ್ರಕಥೆ- ನಿರ್ದೇಶನ- ನಿರ್ಮಾಣದ ಕನ್ನಡ ಚಿತ್ರ ಮಾಡುವ ಉದ್ದೇಶವೇನಾದರೂ ಇದೆಯೇ?

ಹಿಂದಿ ಚಿತ್ರದ ನಿರ್ಮಾಣದ ನಂತರ ನನ್ನದೇ ಚಿತ್ರ ನಿರ್ದೇಶನದಲ್ಲಿ ತೊಡಗುವ ಉದ್ದೇಶವಿದೆ. 3 ಇಶ್ಶ್ಯೂ ಬೇಸ್ಡ್ ಕಥೆ ಸಿದ್ಧವಾಗಿದೆ.

ತಾಯಿ ವಿಜಯಮ್ಮನವರ ಪ್ರಭಾವ ನಿಮ್ಮ ಮೇಲೆ ಯಾವ ರಂಗದಲ್ಲಿ ಆಗಿದೆ?

ಅಮ್ಮನಿಂದ ಕಲಿತಿದ್ದು ಹ್ಯೂಮನ್ ರಿಲೇಶನ್‌ಶಿಪ್. ಮನುಷ್ಯರನ್ನು ಮನುಷ್ಯರಂತೆ ನೋಡುವ ಕಲೆ. ಪ್ರೀತಿಯಿಂದ ಪ್ರೀತಿ ಪಡೆಯುವ ಕ್ರಮ. ಅಲ್ಲದೆ, ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಎಲ್ಲರ ಮುಂದೆ ನೋವು ನುಂಗಿ ನಗುವ ಗುಣ.

ನಿಮ್ಮ ಮಿತ್ರ ಪ್ರಕಾಶ್ ರೈ 'ಒಗ್ಗರಣೆ'ಯಲ್ಲಿನ ನಿಮ್ಮ ಪಾತ್ರ ಏನು?
ಅವರು ಒಬ್ಬ ಮಿತ್ರ ಅಷ್ಟೇ. ಅವರ ಕೆಲಸಗಳಿಗೆ ಪ್ರೋತ್ಸಾಹಕನಾಗಿ ಮಾತ್ರ ನಿಲ್ಲುತ್ತೇನೆ. ಇಂಥ ಪ್ರಾಪರ್ಟಿ ಸಿಕ್ತಿಲ್ಲ ಅಂದರೆ ಅದನ್ನು ಹೊಂದಿಸಿಕೊಡೋವರೆಗೆ...!

ನಿಮ್ಮ ಹಿಂದಿ ಚಿತ್ರದಲ್ಲಿ ಗೆಳೆಯ ಪ್ರಕಾಶ್ ರೈಗೆ ಅವಕಾಶ ಕೊಟ್ಟಿದ್ದೀರಿ. ಇವರಲ್ಲದೆ ಕನ್ನಡದ ಇತರ ರಂಗಭೂಮಿಯ ಪ್ರತಿಭೆಗಳನ್ನು ಪರಿಚಯಿಸುವ ಯೋಜನೆ ಇದೆಯೇ?
ಹಿಂದಿಯಲ್ಲಿ ಲೈವ್ ಸೌಂಡ್ ಇರುವುದರಿಂದ ಅಲ್ಲಿನ ಹಿಂದಿ ಬರುವವರಿಗೆ ಖಂಡಿತಾ ಅವಕಾಶವಿದೆ. ಪ್ರತಿಭೆಗಳನ್ನು ಯಾರೂ ಗುರುತಿಸಬೇಕಿಲ್ಲ. ಹೂ ಅರಳಿದರೆ ಅದು ಎಲ್ಲರಿಗೂ ಕಂಡೇ ಕಾಣುತ್ತದೆ. ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿರುವವರು ಹಿಂದಿಯ ಬರಹಗಾರರು ಮತ್ತು ರಂಗಭೂಮಿ ಹಿನ್ನೆಲೆಯುಳ್ಳವರು. ಕಲೆ ಇದ್ದರೆ ಅದು ಎಲ್ಲರಿಗೂ ಗೋಚರಿಸುತ್ತದೆ.

ರವಿಚಂದ್ರನ್‌ರ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿರುವ ನೀವು ಅವರ ಚಿತ್ರವನ್ನು ನಿರ್ದೇಶಿಸುವ ಕನಸನ್ನು ಇಟ್ಟುಕೊಂಡಿದ್ದೀರಾ?

ರವಿಚಂದ್ರನ್ ಮತ್ತು ನನ್ನ ಸಂಬಂಧ ಗುರು- ಶಿಷ್ಯರ ಸಂಬಂಧವಿದ್ದಂತೆ. ಹಾಗಾಗಿ ನಿರ್ದೇಶಿಸುವ ಕನಸು ನನಗಿಲ್ಲ. ಕೆಎಸ್‌ಎಲ್ ಸ್ವಾಮಿ, ಗಿರೀಶ್ ಕಾಸರವಳ್ಳಿ ಮತ್ತು ರವಿಚಂದ್ರನ್ ನನ್ನ ಗುರುಗಳು ಅವರ ಬಗ್ಗೆ ಗೌರವವಷ್ಟೆ. ಅವರ ಚಿತ್ರಗಳನ್ನು ವಿಮರ್ಶಿಸಲಾಗದು.

ಇತ್ತೀಚಿನ 'ನಾ ತುಕಾರಾಂ ಅಲ್ಲ' ನಾಟಕದಲ್ಲಿ ಉತ್ತಮ ಅಭಿಯನ ನೀಡಿದ್ದೀರೆಂಬ ಮಾತಿದೆ. ಆದರೆ, ಚಿತ್ರಗಳಲ್ಲಿ ನಟಿಸಿರುವುದು ಬೆರಳಣಿಕೆಯಷ್ಟು. ಏಕೆ?
ಹ್ಹಹ್ಹಹ್ಹ... ಮತ್ತೆ ಇದೇ ನಾಟಕ ಜನವರಿಯಲ್ಲೂ ಪ್ರದರ್ಶನವಿದೆ. ಅದಲ್ಲದೇ 'ನಟನಾ' ತಂಡಕ್ಕೆ ನಾಟಕ ನಿರ್ದೇಶನ ಮಾಡುವವನಿದ್ದೇನೆ.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಬ್ರಿಡ್ಜ್ ಸಿನಿಮಾಗಳು ಬರುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ನನ್ನ ಮಟ್ಟಿಗೆ ಬ್ರಿಡ್ಜ್ ಸಿನಿಮಾಗಳು ಅನ್ನುವ ವಿಭಾಗವಿಲ್ಲ. ಪ್ರೇಕ್ಷಕ ಆಯ್ಕೆ ಮಾಡಿ ನೋಡುವ ಸಿನಿಮಾ, ಪ್ರೇಕ್ಷನನ್ನೂ ನೋಡುವಂತೆ ಪ್ರೇರೇಪಿಸುವ ಸಿನಿಮಾ ಎಂದು ವಿಂಗಡಿಸಬಹುದು. ಉದಾ: 'ಲೂಸಿಯಾ' ನಿಜಕ್ಕೂ ಬ್ರಿಡ್ಜ್ ಸಿನಿಮಾವಲ್ಲ. ಅದು ಪಕ್ಕಾ ಕರ್ಮಷಿಯಲ್ ಸಿನಿಮಾ. ಕನಸು ಅನ್ನುವುದೇ ಕಮರ್ಷಿಯಲ್ ಸಬ್ಜೆಕ್ಟ್.

- ಸಂಕೇತ್ ಗುರುದತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com