

ಈ ಹಿಂದೆ 'ದೂರದ ಬೆಟ್ಟ' ಬಂದಿತ್ತು. ನಂತರ 'ಬೆಟ್ಟದ ಜೀವ' ಬಂದು ಹೋಯಿತು. ಇದೀಗ ಇನ್ನೊಂದು ಬೆಟ್ಟ ಗಾಂಧಿನಗರದಲ್ಲಿ ದಿಢೀರನೆ ಕಾಣಿಸಿಕೊಂಡಿದೆ. ಅದು 'ದುರಂತ ಬೆಟ್ಟ'.
ಚಿತ್ರದ ಶೀರ್ಷಿಕೆ ನೋಡಿದರೇನೇ ಇದೇನೋ ದುಃಖಭರಿತ ಚಿತ್ರವೇನೋ ಅಂತನ್ನಿಸಿಬಿಡುತ್ತದೆ. ರಾಜು ಹಲಗೂರು ಇದರ ನಿರ್ದೇಶಕರು. ಇದು ಇವರ ಚೊಚ್ಚಲ ನಿರ್ದೇಶನ ಪ್ರಯತ್ನವೂ ಹೌದು. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಆಯಿತು.
ನಿರ್ದೇಶಕರು ತಮ್ಮ ಚಿತ್ರದ ಬಗ್ಗೆ ಬಹಳ ಹೇಳಿಕೊಂಡರು. 'ದುರಂತ ಬೆಟ್ಟ ಒಂದು ವಿಶಿಷ್ಟ ಕಥೆಯ ಚಿತ್ರ. ಲವ್, ಸೆಂಟಿಮೆಂಟ್, ಹೋರಾಟ, ಆ್ಯಕ್ಷನ್ಗಳನ್ನು ಹೊಂದಿರುವ ವಾಸ್ತವಕ್ಕೆ ತೀರಾ ಹತ್ತಿರ ಎನಿಸಿಕೊಳ್ಳಲಿರುವ ಚಿತ್ರ. ಒಂದು ಬೆಟ್ಟದಲ್ಲಿ ವೀರ ಮಹಾರಾಜ್ ಎಂಬುವನಿದ್ದ. ಆ ಬೆಟ್ಟಕ್ಕೆ ಬಾಯ್ಫ್ರೆಂಡ್ಗಳ ಜೊತೆ ಬರುವ ಹುಡುಗಿಯರನ್ನೆಲ್ಲ ಆತ ಬಲತ್ಕಾರ ಮಾಡುತ್ತಿದ್ದ ಮತ್ತು ಆ ಜೋಡಿಗಳನ್ನು ಕೊಲ್ಲುತ್ತಿದ್ದ. ಈ ತಿರುಳನ್ನೇ ಬಳಸಿ ಚಿತ್ರ ನಿರ್ಮಿಸಲಾಗಿದೆ. ಚಿತ್ರದ ನಿರೂಪಣೆ ವಿಶಿಷ್ಟವಾಗಿದೆ' ಎಂದರು.
ರಾಕೇಶ್ ಅಡಿಗ ನಾಯಕರಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ 'ಮಂದಹಾಸ' ಅಷ್ಟೇನೂ ಯಶಸ್ಸು ಕಾಣದೆ ಹೋಯಿತು. ಆದರೆ, ಅಡಿಗರು ಆ ನಿರಾಶೆಯಲ್ಲಿರಲಿಲ್ಲ. ರಾಕೇಶ್ ಇದರಲ್ಲಿ ಕಲಾ ವಿದ್ಯಾರ್ಥಿ. ನಾಯಕಿಯಾಗಿ 'ಜಿಂಕೆಮರಿ' ಸೋನಿಯಾ ಗೌಡ ನಟಿಸಿದ್ದಾರೆ.
ಆಡಿಯೋ ಸಿಡಿಯನ್ನು ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಬಿಡುಗಡೆ ಮಾಡಿದರು. ಬಿ.ಕೆ. ಅವರ ಪತ್ನಿ ಲಕ್ಷ್ಮಿ ಚಂದ್ರಶೇಖರ್ ಈ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದಾರಂತೆ. ಗಿರಿಜಾ ಲೋಕೇಶ್ ಇಲ್ಲಿ ಪೋಷಕ ನಟಿ. ರಾಜೇಶ್ ರಾಮನಾಥ್ ಸಂಗೀತ ನಿರ್ದೇಶಕರು. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. 'ಎಲ್ಲ ಹಾಡುಗಳು ಕೇಳಲು ಮಧುರವಾಗಿವೆ' ಎಂದರು ರಾಜೇಶ್.