ಕಿಶೋರ ವಾಣಿ

ಚಿತ್ರ ಯಾವುದೇ ಇರಲಿ, ನಿರ್ದೇಶಕ ಯಾರೇ ಆಗಿರಲಿ, ಕಥೆ ಯಾವುದೇ ಆಗಿರಲಿ, ಅಲ್ಲಿ ಕಿಶೋರ್ ತಾನೇನು ಎಂಬುದನ್ನು...
ಕಿಶೋರ ವಾಣಿ
Updated on: 

ಎಲ್ಲ ಪಾತ್ರಗಳಲ್ಲೂ ತಾವು ಉತ್ತಮ ವಿದ್ಯಾರ್ಥಿಗಳು ಎನಿಸುವ ಅಶಿಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ನಾನಾ ಪಾಟೇಕರ್, ಪ್ರಕಾಶ್ ರೈರಂಥ ಕಲಾವಿದರ ಸಾಲಿನಲ್ಲಿ ಕನ್ನಡ ಕಿಶೋರ್‌ರನ್ನು ನಿಲ್ಲಿಸಬಹುದೇ?

ಕಲಾವಿದರ ಬಗ್ಗೆ ಬರೆಯುವ ಸಾಕಷ್ಟು ಸಂದರ್ಭಗಳಲ್ಲಿ 'ಬಹುಮುಖ ಪ್ರತಿಭೆ' ಎಂದು ಬಿರುದು ಕೊಡುವುದು ಸಾಮಾನ್ಯ. ಆದರೆ, ಈ 'ಬಹುಮುಖಿ' ಎನ್ನುವುದು ಒಮ್ಮೊಮ್ಮೆ ಕ್ಲೀಷೆ ಎನಿಸುವುದುಂಟು. ನಿಜವಾಗಲೂ ಅಂಥ ಪ್ರತಿಭಾವಂತರನ್ನು ಕಂಡಾಗ ಅದ್ಭುತ ನಟ ಎಂದು ಬರೆಯದಿರಲು ಸಾಧ್ಯವೇ? ಹೊಗಳುವುದು ಬೇಡ ಅಂದರೂ ನಟ ಕಿಶೋರ್ ವಿಚಾರದಲ್ಲಿ ಮಾತ್ರ ಮೆಚ್ಚಿಕೊಳ್ಳದೆ ಇರಲು ಸಾಧ್ಯವಿಲ್ಲ. ಚಿತ್ರ ಯಾವುದೇ ಇರಲಿ, ಪಾತ್ರ ಯಾವುದಾಗಲಿ, ನಿರ್ದೇಶಕ ಯಾರೇ ಆಗಿರಲಿ, ಕಥೆ ಯಾವುದೇ ಆಗಿರಲಿ, ಅಲ್ಲಿ ಕಿಶೋರ್ ತಾನೇನು ಎಂಬುದನ್ನು ತೋರಿಸುವ ನಟ.
ಸ್ಟಾರ್ ಆಗುವುದು ಸುಲಭ, ಹೀರೋ ಆಗುವುದು ಇನ್ನೂ ಸರಳ. ಆದರೆ, ಜನಮಾನಸದಲ್ಲಿ ಕಲಾವಿದ ಎನಿಸಿಕೊಳ್ಳುವುದು ಅಷ್ಟು ಸುಲಭಕ್ಕೆ ದಕ್ಕುವ ಸನ್ಮಾನವಲ್ಲ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಲ್ಲಿ ನಟಿಸಿರುವ ಕಿಶೋರ್‌ರನ್ನು ಕಲಾವಿದ ಅಂತ ನಾವೆಲ್ಲ ಒಪ್ಪಿಕೊಂಡಿದ್ದೇವೆ. ಕಂಚಿನ ಕಂಠ, ಕಟ್ಟುಮಸ್ತಿನ ದೇಹ, ಸ್ಪಷ್ಟ ಉಚ್ಚಾರ, ಭಾಷೆ ಯಾವುದೇ ಇರಲಿ ಅಲ್ಲಿಗೆ ಒಗ್ಗಿ ಬಿಡುವ ಕಿಶೋರ್, ಕನ್ನಡದ ಮಟ್ಟಿಗೆ ಅಪರೂಪದ ಕಲಾವಿದ. ಸುಮ್ಮನೆ ಕಿಶೋರ್‌ರನ್ನು ನೋಡಿ, ಈಗಷ್ಟೆ ಫೀಲ್ಡ್‌ಗೆ ಬಂದ ಪೊಲೀಸ್ ಆಫೀಸರ್‌ನಂತೆ, ಕಿರಾತಕರನ್ನು ಮಟ್ಟ ಹಾಕಲು ಕಾದು ಕುಳಿದ ನಾಯಕನಂತೆ ಕಾಣಿಸುತ್ತಾರೆ. ರಫ್ ಆಂಡ್ ಟಫ್ ಕಾಪ್ ಎನಿಸುವ ಕಿಶೋರ್ ತೆರೆ ಮೇಲೆ 'ನವರಸ'ಗಳನ್ನೂ ಪ್ರದರ್ಶಿಸಬಲ್ಲ ಕಲಾವಿದ. ಪೊಲೀಸ್ ಅಧಿಕಾರಿ, ಹಳ್ಳಿಯ ಪಟೇಲ, ಖಳನಾಯಕ, ನಾಯಕ ಹೀಗೆ ಎಲ್ಲದರಲ್ಲೂ ತಾನಾಗುವ ತಾಕತ್ತು ಕಿಶೋರ್‌ಗೆ ಇದೆ. ಹೀಗಾಗಿ ಕಮರ್ಷಿಯಲ್, ಮಾಸ್, ಕ್ಲಾಸ್, ಆರ್ಟ್, ಬ್ರಿಡ್ಜ್ ಹೀಗೆ ಏನೇ ವಿಭಾಗ ಮಾಡಿ ಅಲ್ಲಿ ಕಿಶೋರ್ ಸಲ್ಲುವವರು.   ಎರಡು ವಾರಗಳ ಹಿಂದೆಯಷ್ಟೆ ಅವರ ಅಭಿನಯಿದ 'ಜಟ್ಟ' ಚಿತ್ರ ತೆರೆಕಂಡಿದೆ. ಅದೇ 'ಐಟಂ' ಸೂತ್ರಗಳನ್ನು ನಂಬಿಕೊಂಡಿರುವ ಗಾಂಧಿನಗರದ ಸಿನಿಮಾಗಳ ನಡುವೆ 'ಜಟ್ಟ' ಅಬ್ಬರಿಸದೆ ಇರಬಹುದು. ಆದರೆ, ಚಿತ್ರ ನೋಡಿದವರು ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಸಿನೆಮಾಗೆ ಇದಕ್ಕಿಂತ ಮತ್ತೊಂದು ಗೆಲುವು ಬೇಕೆ? 'ಜಟ್ಟ' ಚಿತ್ರ ನೋಡಿದ ನಂತರ ಕಿಶೋರ್ ಸುಮ್ಮನೆ ಮಾತಿಗೆ ಸಿಕ್ಕಾಗ...

ಸಾಹಿತ್ಯ ಮಾಸ್ತರು ಕಿಶೋರ್ ಸಿನಿಮಾ ನಂಟಿಗೆ ಬಂದಿದ್ದು ಹೇಗೆ?
ಆಕಸ್ಮಿಕ. ಓದು ಮುಗಿಸಿ ಬದುಕಲಿಕ್ಕೆ ಕೆಲಸದ ಹುಡುಕಾಟದಲ್ಲಿದ್ದಾಗ ಸ್ನೇಹಿತರ ಸಲಹೆ ಮೇರೆಗೆ 'ಕಂಠಿ' ಚಿತ್ರದ ನಿರ್ದೇಶಕರನ್ನು ಭೇಟಿ ಮಾಡಿದೆ. ನಾನು ಹೋಗಿದ್ದ ದಿನ ಯಾರೋ ಮಾಡಬೇಕಿದ್ದ ಪಾತ್ರ ಅವರು ಬಾರದೆ ಖಾಲಿ ಇತ್ತು. ಫೋಟೋಜೆನಿಕ್ ಫೇಸ್ ಅಂದುಕೊಂಡು ಪಾತ್ರ ಕೊಟ್ಟರು.

'ಕಂಠಿ'ಯಿಂದ 'ಜಟ್ಟ' ಸಿನೆಮಾದವರೆಗಿನ ಪಯಣದಲ್ಲಿ ನಿಮ್ಮಲ್ಲಿ ಆದ ಬದಲಾವಣೆಗಳೇನು?
ವಿಶೇಷ ಬದಲಾವಣೆಗಳು ಅಂತ ಏನೂ ಇಲ್ಲ. ಆಗ ಕೈಯಲ್ಲಿ ದುಡ್ಡು ಇಲ್ಲದೆ ಖಾಲಿ ಜೇಬಿನಲ್ಲಿ ಓಡಾಡುತ್ತಿದ್ದೆ. ಈಗಲೂ ಅವಕಾಶಗಳಿಲ್ಲದಿದ್ದಾಗ ಖಾಲಿ ಜೇಬು. ಆಗಲೂ, ಈಗಲೂ ಅದೇ ಕಿಶೋರ್. ಸಿನಿಮಾ ಪ್ರೀತಿ ಮಾತ್ರ ಹೆಚ್ಚಾಗುತ್ತಿದೆ ಅಷ್ಟೆ.

 'ಜಟ್ಟ'ದಂಥ ಉತ್ತಮ ಚಿತ್ರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕನಿಗೆ ತಲುಪಲಿಲ್ಲ ಯಾಕೆ?
ನಾವು ಸಿಕ್ಕಾಪಟ್ಟೆ ವ್ಯವಹಾರಸ್ಥರಾಗಿದ್ದೇವೆ. ಆಸಕ್ತಿ, ಅಭಿರುಚಿಗಳು ಮಾರಾಟದ ವಸ್ತುಗಳಾಗಿವೆ. ಚಿತ್ರಗಳ ತಯಾರಿಕೆ ಹೆಚ್ಚಾಗುತ್ತಿದೆ. ಚಿತ್ರಮಂದಿರಗಳು ಮಾತ್ರ ಕಣ್ಮರೆಯಾಗುತ್ತಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ನಮ್ಮನ್ನು ಬಿಟ್ಟುಕೊಳ್ಳಲ್ಲ. ಶುಕ್ರವಾರ ಸಿನಿಮಾ ಬಿಡುಗಡೆಯಾದರೆ ಸೋಮವಾರ ತನಕ ಅದಕ್ಕೆ ಡೆಡ್‌ಲೈನ್. ಮೂರು ದಿನದಲ್ಲಿ ಚಿತ್ರ ಗಳಿಕೆ ತೋರಿಸಬೇಕು. ಇಲ್ಲದಿದ್ದರೆ ಮಂಗಳವಾರ ಮತ್ತೊಂದು ಚಿತ್ರ ಅಲ್ಲಿಗೆ ಬರುತ್ತದೆ. ಒಂದು ಒಳ್ಳೆಯ ಚಿತ್ರ ಮೂರು ದಿನದಲ್ಲಿ ಪ್ರೇಕ್ಷಕನಿಗೆ ತಲುಪಿ ಹಣ ಮಾಡಲು ಸಾಧ್ಯವೆ? ನಿರ್ಮಾಪಕರು ಮತ್ತು ವಿತರಕರು ಇಲ್ಲಿ ಮುಖ್ಯವಾಗುತ್ತಾರೆ. ಅವರಿಗೆ ತಮ್ಮ ಚಿತ್ರಗಳ ಬಗ್ಗೆ ಆಸಕ್ತಿ, ಅಭಿರುಚಿ ಇರಬೇಕು. ಥಿಯೇಟರ್‌ನಲ್ಲಿ ಸಿನಿಮಾ ಉಳಿಸಿಕೊಳ್ಳಬೇಕು. ಪ್ರೇಕ್ಷಕರ ಅಭಿರುಚಿ ಕೆಡಿಸಿದ್ದು ನಾವೇ. ಈಗ ಅವರಲ್ಲಿ ಅಭಿರುಚಿ ಮೂಡಿಸಬೇಕು. ಅಂದರೆ 'ಜಟ್ಟ'ದಂಥ ಚಿತ್ರಗಳಿಗೆ ಮೂರು ದಿನ ಡೆಡ್‌ಲೈನ್ ಸಾಕಾಗಲ್ಲ.

ಆದರೂ 'ಜಟ್ಟ' ಚಿತ್ರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ನೋಡುಗರಿಂದ ಈ ಮಟ್ಟದ ಬೆಂಬಲ ಸಿಗುತ್ತದೆಂಬ ನಿರೀಕ್ಷೆ ಇತ್ತೇ?
ನಿಜವಾಗಲೂ ಇರಲಿಲ್ಲ. ಶುರುವಿನಿಂದಲೂ ಭಯ ಇತ್ತು. ತುಂಬಾ ಆಳವಾದ ವಿಷಯಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ. ಇದು ಸಾಧ್ಯನಾ? ಎನ್ನುವ ಅನುಮಾನವಿತ್ತು. ಆದರೆ, ಚಿತ್ರ ನೋಡಿದ ಪ್ರತಿಯೊಬ್ಬರೂ 'ಇದು ನನ್ನ ಸಿನಿಮಾ' ಎನ್ನುವಷ್ಟರ ಮಟ್ಟಿಗೆ ಮೆಚ್ಚಿಕೊಂಡಿದ್ದಾರೆ. 'ಗ್ರ್ಯಾಂಡ್ ಸಕ್ಸಸ್‌' ಅಂತ ಬ್ಲಾಗ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಬರೆಯುತ್ತಿದ್ದಾರೆ. ಒಬ್ಬ ಗ್ಯಾರೇಜ್ ಹುಡುಗನಿಗೆ ನಮ್ಮ ಚಿತ್ರ ಇಷ್ಟವಾಗಿದ್ದನ್ನು ನಾನೇ ಕೇಳಿದ್ದೇನೆ. ಮಾಧ್ಯಮಗಳ ಸಹಕಾರ ಕೂಡ ಇತ್ತು. ಇದೊಂದು ಅನಿರೀಕ್ಷಿತ ಬೆಂಬಲ.

'ಜಟ್ಟ' ನಿಮ್ಮ ಹಿಂದಿನ ಚಿತ್ರಗಳಿಂಗಿತ ಹೇಗೆ ಭಿನ್ನ? ನಿಮಗೆ ಈ ಚಿತ್ರದಲ್ಲಿ ಕಾಡಿದ ಅಂಶ ಯಾವುದು?
ಹೊಸ ನೆಲೆಯಲ್ಲಿ ನಿಂತು ಗಂಭೀರ ವಿಷಯಗಳನ್ನು ಹೇಳಿರುವುದು. ತೀರಾ ಆಳವಾದ ಸನ್ನಿವೇಶಗಳನ್ನು ಅಷ್ಟೇ ಸರಳವಾಗಿ ತೆರೆ ಮೇಲೆ ಕಟ್ಟಿಕೊಟ್ಟಿರುವುದು. ನಿಜಕ್ಕೂ ಭಿನ್ನ ಚಿತ್ರವಿದು. ಯಾರೂ ಮುಟ್ಟದ ವಿಷಯಗಳನ್ನು ಈ ಚಿತ್ರ ಮುಟ್ಟಿದೆ. ಸಂಬಂಧಗಳ ತಿಕ್ಕಾಟ, ಶೋಷಣೆಯ ಮೂಲ, ದ್ವೇಷದ ಮೂಲಗಳನ್ನು ಹುಡುಕುವ ಪ್ರಯತ್ನ, ಮನುಷ್ಯನ ಮೂಲದಲ್ಲಿ ಆಗುವ ಬದಲಾವಣೆಗಳನ್ನು ಹುಡುಕುವ ಯತ್ನ. ಇದರ ಜೊತೆಗೆ ಚಿತ್ರದ ಕ್ಲೈಮ್ಯಾಕ್ಸ್ ನನಗೆ ತುಂಬಾ ಕಾಡಿದ ಅಂಶಗಳು.

ಈಗಲೂ ನೀವು ಪಾತ್ರಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡು ಹೋಗುತ್ತೀರಾ? ಅಥವಾ ಅನ್‌ಸ್ಪಾಟ್ ನಟನೆನಾ?
ಎರಡೂ ಅಲ್ಲ. ನನಗೆ ಗೊತ್ತಿಲ್ಲದೆ ಆಗುವ ತಯಾರಿ ಅದು. ನನ್ನ ಅನುಭವಗಳನ್ನು ಸೇರಿಸಿಕೊಂಡು ನಿರ್ದೇಶಕನ ಕಲ್ಪನೆಗೆ ಒಗ್ಗಿಕೊಳ್ಳುತ್ತೇನೆ ಅಷ್ಟೆ. ನನ್ನ ಅನುಭವದಲ್ಲಿಲ್ಲದ ಪಾತ್ರಕ್ಕೆ ಒಂಚೂರು ಪೂರ್ವ ಸಿದ್ಧತೆ ಇದ್ದೇ ಇರುತ್ತದೆ.

ಎಂದಾದರೂ 'ನಾನು ಸ್ಟಾರ್ ನಟ ಆಗಿದ್ದೇನೆ' ಎಂದು ಅನಿಸಿದುಂಟೆ?

ನಾನು ಎಂದೂ ಸ್ಟಾರ್ ನಟ ಆಗಿಲ್ಲ. ಆಗಬೇಕೆಂಬ ಆಸೆ ಅಂತೂ ಇದೆ. ನನ್ನ ಕೆರಿಯರ್, ಮಾರುಕಟ್ಟೆ, ನಿರ್ಮಾಪಕರ ದೃಷ್ಟಿಯಿಂದ ಈಗಿನ ಸಿಸ್ಟಮ್‌ನಲ್ಲಿ ಸ್ಟಾರ್ ಆಗುವುದು ಒಳ್ಳೆಯದಲ್ಲವೆ?

ಪಾತ್ರಗಳ ಆಯ್ಕೆ, ನಟನೆ, ಮ್ಯಾನರಿಸಂ ಮತ್ತು ಬೆಳವಣಿಗೆ ವಿಚಾರದಲ್ಲಿ ನೀವೂ ಮತ್ತು ಪ್ರಕಾಶ್ ರೈ ಸಮಾನಾಂತರವಾಗಿ ಸಾಗುತ್ತಿದ್ದೀರಿ ಎಂದು ಅನಿಸುತ್ತಿಲ್ಲವೆ?
ಅಯ್ಯೋ ಪ್ರಕಾಶ್ ರೈ ತುಂಬಾ ದೊಡ್ಡ ಕಲಾವಿದರು. ನಾನು ಅವರಿಗೆ ಪರ್ಯಾಯ ನಟ ಆಗಲಿಕ್ಕೆ ಸಾಧ್ಯವಿಲ್ಲ. ಪ್ರಕಾಶ್ ರೈ ನಟನೆಯ ಪಟ್ಟುಗಳು ಗೊತ್ತಿದ್ದು ಯಾವ ಪಾತ್ರಕ್ಕೆ ಹೇಗೆ ಬೇಕಾದರೂ ಬಗ್ಗುವ ನಟ. ನಾನು ಅಭಿನಯ ಗೊತ್ತಿಲ್ಲದವನು. ಹೀಗಾಗಿ 'ಇವರಿಗೆ ಯಾವ ಪಾತ್ರ ಕೊಟ್ಟರೂ ಸರಿ' ಅಂದುಕೊಂಡಿರಬಹುದು. ಇದಕ್ಕೆ ನನ್ನ ದೇಹ, ಮುಖ ಚಹರೆ, ಧ್ವನಿ ಸಾಕಷ್ಟು ಸಹಾಯವಾಗುತ್ತಿದೆ. ಪ್ರಕಾಶ್ ರೈ  ಅವರನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ದುಡಿಸಿಕೊಳ್ಳುವುದಕ್ಕೆ ಸಾಧ್ಯವಾಯಿತೋ, ಹಾಗೆ ನನಗೂ ಇತ್ತೀಚೆಗೆ ಅಂಥ ಪಾತ್ರಗಳು ಬರುತ್ತಿವೆ. ತಮಿಳಿನಲ್ಲಿ ಹೆಚ್ಚಿಗೆ ಹೊಸತನದಿಂದ ದುಡಿಸಿಕೊಳ್ಳುತ್ತಿದ್ದಾರೆ.

ಕಿಶೋರ್‌ರ ಡೈರಿಯಲ್ಲಿರುವ ಮುಂದಿನ ಚಿತ್ರಗಳು?
ತುಂಬಾ ದೊಡ್ಡ ಪಟ್ಟಿ ಅಂತೂ ಇಲ್ಲ. ಕನ್ನಡದಲ್ಲಿ ಎರಡು ಚಿತ್ರಗಳಿವೆ. ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ'. ಇದು ಸಹ ಭಿನ್ನವಾದ ಚಿತ್ರ. 80ರ ದಶಕದ ಲವ್ ಸ್ಟೋರಿ. ಮತ್ತೊಂದು 'ಶಸ್ತ್ರ'. ವಸು ಮಳಲಿ ನಿರ್ದೇಶನದ ಚಿತ್ರ. ತಮಿಳಿನಲ್ಲಿ ಎರಡು ಚಿತ್ರಗಳಿವೆ. ಅಜಿತ್ ಜೊತೆಗೆ 'ಆನಂದಂ' ಹಾಗೂ ತಮಿಳುನಾಡಿನ ಹಿಂಸೆಯನ್ನು ಹೇಳುವ 'ತಿಲಕರ್‌' ಚಿತ್ರ.

ಫೈನಲ್ ಕಟ್

  •     ನಂಬಿ, ಕಿಶೋರ್ ಪಿಯುಸಿಯಲ್ಲಿ ಎರಡೆರಡು ಬಾರಿ ಫೇಲ್ ಆಗಿದ್ದಾರೆ. ಕೊನೆಗೂ ಪಿಯುಸಿ ಪಾಸಾಗಿ ಅಲ್ಲೇ ಡಿಗ್ರಿ ಕೂಡ ಮುಗಿಸಿ ಬೆಂಗಳೂರು ವಿವಿಗೆ ಎಂ.ಎ ವಿದ್ಯಾರ್ಥಿಯಾಗಿ ಬಂದರು.
  •     ಅಂದ ಹಾಗೆ ವಿಮರ್ಶಕ ಡಿ.ಆರ್. ನಾಗರಾಜ್ ಕಿಶೋರ್‌ರಿಗೆ ಖಾಸಾ ಚಿಕ್ಕಪ್ಪ. ಆದರೆ ತನ್ನ ಚಿಕ್ಕಪ್ಪ ಇಷ್ಟು ದೊಡ್ಡ ವ್ಯಕ್ತಿ ಅಂತ ಕಿಶೋರ್‌ಗೆ ಗೊತ್ತಾಗಿದ್ದು ಅವರು ನಿಧನರಾದ ಮೇಲೆ.
  •     ಅಚ್ಚರಿ ಅಂದರೆ ಕಾಲೇಜು ದಿನಗಳಲ್ಲಿ ಒಂದು ಆ್ಯಕ್ಸಿಡೆಂಟ್‌ಲ್ಲಿ ಕೈ ಮುರಿದುಕೊಂಡ ಹುಡುಗಿಯೊಬ್ಬಳಿಗೆ ಸಹಾಯ ಮಾಡಲು ಹೋದ ಕಿಶೋರ್, ಮುಂದೆ ಆಕೆಯನ್ನೇ ಸಂಗಾತಿಯನ್ನಾಗಿಸಿಕೊಂಡರು. ಪ್ರೀತಿ, ಪ್ರೇಮ ಆ್ಯಕ್ಸಿಡೆಂಟ್ ಅನ್ನುವುದು ಇದಕ್ಕೆ ಅಲ್ಲವೇ!
  •     ಕಿಶೋರ್ ದಂಪತಿಗೆ ಪ್ರಾಣಿ ಪ್ರೀತಿ ಎಷ್ಟಿದೆ ಅಂದರೆ ಕೆಲ ವರ್ಷಗಳ ಹಿಂದೆಯಷ್ಟೆ ತೀರಿಕೊಂಡ ಇವರ ಮುದ್ದಿನ ಕೋತಿ ವಾಲಿಯ ಹೆಸರನ್ನೇ ತಮ್ಮ ಮಗನಿಗಿಟ್ಟಿದ್ದಾರೆ.
  •     ಕಿಶೋರ್ ತಂದೆ ನಿವೃತ್ತ ಪ್ರಾಂಶುಪಾಲ. ಶಿಸ್ತಿನ ವ್ಯಕ್ತಿ. ಅಪ್ಪನ ಜೊತೆಗೆ ಸಿಟ್ಟು ಮಾಡಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮನೆ ಬಿಟ್ಟು ಬಂದ ಕಿಶೋರ್, ಒಮ್ಮೊಮ್ಮೆ ತನ್ನ ಮನೆಗೆ ತಾನೇ ಕದ್ದು ಮುಚ್ಚಿ ಹೋಗಿ ಊಟ ಮಾಡಿ ಬರುತ್ತಿದ್ದರಂತೆ.
  •     ಕಂಠಿ ಚಿತ್ರಕ್ಕೆ ಸ್ನೇಹಿತ ನರೇಂದ್ರ ಬಾಬು ಜೊತೆ ಕಾಸ್ಟ್ಯೂಮ್ ಡಿಸೈನ್ ಮಾಡಲು ಹೋದ ಕಿಶೋರ್‌ಗೆ ಅದೇ ಚಿತ್ರದಲ್ಲಿ ಖಳನಾಯಕನ ಪಾತ್ರ ಸಿಕ್ಕಿತು.
  •     ರಾಕ್ಷಸ ಚಿತ್ರದಲ್ಲಿ ಅಭಿನಯಿಸುವಾಗ ಸ್ಟಂಟ್ಸ್ ಕಲಿಯುವ ಅಗತ್ಯ ಬಿತ್ತು. ದುನಿಯಾ ವಿಜಯ್‌ರನ್ನು ಭೇಟಿ ಮಾಡಿ ಅವರ ಬಳಿ ಫೈಟ್ ಕಲಿತರು. ಒಂದು ರೂಪಾಯಿ ತೆಗೆದುಕೊಳ್ಳದೆ ಸಾಹಸ ಹೇಳಿಕೊಟ್ಟ ಅದೇ ವಿಜಯ್ ಚಿತ್ರದಲ್ಲಿ (ದುನಿಯಾ) ಕಿಶೋರ್ ಪೊಲೀಸ್ ಆದರು.
  •     ತಮಿಳಿನ ಧನುಷ್ ಹಾಗೂ ಕನ್ನಡದ ರಮ್ಯಾ ಜೋಡಿ ಅಭಿನಯದ 'ಪೊಲ್ಲಾದವನ್‌' ಚಿತ್ರಕ್ಕಾಗಿ ಅತ್ಯುತ್ತಮ ಖಳನಟ ಪ್ರಶಸ್ತಿಯನ್ನು ಕಿಶೋರ್ ಪಡೆದಿದ್ದಾರೆ.
- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com