ನೀರ್ದೋಸೆ ಏನಾಯ್ತು?

ಜಗ್ಗೇಶ್, ರಮ್ಯಾ ಅಭಿನಯದ, ವಿಜಯ್ಪ್ರಸಾದ್ ನಿರ್ದೇಶನದ ನೀರ್ದೋಸೆ ಚಿತ್ರದ ಕಥೆ ಏನಾಯ್ತು ಎಂದರೆ ಅದಕ್ಕೆ ಗಾಂಧಿನಗರದಲ್ಲಿ ನಿರಾಸೆ...
ನೀರ್ದೋಸೆ ಏನಾಯ್ತು?
Updated on: 

ಜಗ್ಗೇಶ್, ರಮ್ಯಾ ಅಭಿನಯದ, ವಿಜಯ್ಪ್ರಸಾದ್ ನಿರ್ದೇಶನದ ನೀರ್ದೋಸೆ ಚಿತ್ರದ ಕಥೆ ಏನಾಯ್ತು ಎಂದರೆ ಅದಕ್ಕೆ ಗಾಂಧಿನಗರದಲ್ಲಿ ನಿರಾಸೆ ಹುಟ್ಟಿಸುವ ಗಾಳಿಸುದ್ದಿಯ ರೂಪದ ಉತ್ತರವೊಂದು ದೊರಕುತ್ತದೆ. ಆದರೆ ಅದು ಬಹುತೇಕ ನಿಜವಾಗಲಿದೆ ಎಂಬುದು ಇನ್ನೂ ನಿರಾಸೆಯ ವಿಷಯ. ಎಂ.ಪಿ ಆದಮೇಲೆ ಚಿತ್ರರಂಗದ ಬಗ್ಗೆ ಒಲವು ಕಳೆದುಕೊಂಡಿರುವ ರಮ್ಯಾ ಅವರಿಂದಾಗಿ ಈ ಪರಿಸ್ಥಿತಿ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಆದರೆ ರಮ್ಯಾ ಅವರ ವೈಯಕ್ತಿಕ ಒಲವುಗಳಿಂದಾಗಿ ನೀರ್ದೋಸೆಯಂಥ ಸಿನಿಮಾಗೆ ಪೆಟ್ಟು ಬಿದ್ದು ಎಲ್ಲರ ಮನೆಯ ನೀರ್ದೋಸೆಯೂ ತೂತು ಎಂಬಂತಾಗಿರುವುದು ದುರದೃಷ್ಟಕರ. ನೀರ್ದೋಸೆಯಲ್ಲಿ ವೇಶ್ಯೆಯ ಪಾತ್ರ ಮಾಡಿದ್ದು ಈಗ ಎಂ.ಪಿ ಆಗಿರುವುದರಿಂದ ತಮ್ಮ ಇಮೇಜ್ಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ನೀರ್ದೋಸೆಗೆ ತಣ್ಣೀರು ಸುರಿದಿದ್ದಾರೆ ರಮ್ಯಾ. ಒಂದು ಮೂಲದ ಪ್ರಕಾರ ನಿರ್ಮಾಪಕರಿಗೆ ಅದೆಷ್ಟು ಖರ್ಚಾಗಿದೆಯೋ ಅದನ್ನು ಕೊಟ್ಟು ನೀರಲ್ಲಿ ಕೈತೊಳೆದುಕೊಳ್ಳುವ ಇಂಗಿತ ರಮ್ಯಾ ಅವರದ್ದಂತೆ. ಆದರೆ ರಮ್ಯಾ ಅವರೊಬ್ಬರ ವೈಯಕ್ತಿಕ ಹಿತಾಸಕ್ತಿಯ ಕಾರಣದಿಂದಾಗಿ ಈ ಸಿನಿಮಾ ನಿಂತುಹೋದರೆ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಜಗ್ಗೇಶ್ರಂಥ ಹಿರಿಯ ನಟರಿಗೆ ಅದು ಅವಮಾನ ಮಾಡಿದಂತಲ್ಲವೇ? ಚಿತ್ರದ ಕಲಾವಿದ, ತಂತ್ರಜ್ಞರ ಕೆಲಸ ಮತ್ತು ಕಮಿಟ್ಮೆಂಟ್ಗೆ ಬೆಲೆ ಕಟ್ಟುವಷ್ಟು ದುಡ್ಡು ರಮ್ಯಾ ಅವರ ಬಳಿ ಇರಬಹುದು. ಆದರೆ ಇಷ್ಟು ದಿನ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದವರ ಆಸೆ, ಆಕಾಂಕ್ಷೆ ಮತ್ತು ಶ್ರಮ ರಮ್ಯಾ ಅವರ ಪ್ರತಿಷ್ಠೆಗೆ ಬಲಿಯಾಗುವುದು ಎಷ್ಟು ಸರಿ?. ಚಿತ್ರದ ನಾಯಕಿಯರನ್ನು ಮೇಡಂ ಎಂದು ಕರೆದುಕೊಂಡು ಅವರ ಮುಂದೆ ಅತಿ ವಿನಯ ತೋರಿಸುವ ನಿರ್ದೇಶಕರಿರುವವರೆಗೆ ಇಂಥದ್ದೆಲ್ಲಾ ಸಾಮಾನ್ಯ ಬಿಡಿ. ಇತ್ತೀಚೆಗೆ ರಮ್ಯಾ ಛಾಯಾಗ್ರಾಹಕರ ಜೊತೆ ಕಿರಿಕ್ ಮಾಡಿಕೊಂಡಿದ್ದ ಸಮಯದಲ್ಲೂ ಮಾತನಾಡದೆ  ಸುಮ್ಮನಿದ್ದ ವಿಜಯ್ಪ್ರಸಾದ್ ಈಗ ಮಾತನಾಡುತ್ತಾರೆ ಎಂದು ನಿರೀಕ್ಷಿಸುವುದು ತಪ್ಪೇ. ಆದರೆ ಇಲ್ಲಿ ಇಂಟರೆಸ್ಟಿಂಗ್ ವಿಷಯ ಎಂದರೆ ನೀರ್ದೋಸೆ ಚಿತ್ರದ ಪಾತ್ರದಿಂದ ತಮ್ಮ ಎಂ.ಪಿ. ಇಮೇಜ್ಗೆ ಧಕ್ಕೆ ಬರುತ್ತದೆ ಎಂಬ ರಮ್ಯಾ ಅವರ ಅನಿಸಿಕೆ. ಸಾಮಾನ್ಯವಾಗಿ ನಾಯಕಿಯರು ಅತಿ ಎಕ್ಸ್ಪೋಸ್ ಮಾಡಿದಾಗ, ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಂಡಾಗ 'ಅದು ಕೇವಲ ಪಾತ್ರಕ್ಕಾಗಿ ಮಾಡಿದ್ದು ಅಷ್ಟೆ. ಸಿನಿಮಾ ಅನ್ನೋದು ಒಂದು ಕಲೆ ಅದನ್ನು ಕಲೆಯ ದೃಷ್ಠಿಯಿಂದಲೇ ನೋಡಬೇಕು. ಅಶ್ಲೀಲ ಎಂದುಕೊಳ್ಳಬಾರದು' ಎಂಬ ಡೈಲಾಗ್ ಒಗಾಯಿಸುತ್ತಾರೆ. ನೀರ್ದೋಸೆಯಲ್ಲಿ ವೇಶ್ಯೆಯ ಪಾತ್ರಕ್ಕೂ ರಮ್ಯಾ ಇಂಥ ಸಮರ್ಥನೆ ಕೊಟ್ಟಿರುತ್ತಾರೆ. ಆದರೆ ಈಗ ರಮ್ಯಾರಂಥ ನಟಿಗೆ ಅಂಥ ಪಾತ್ರವನ್ನು ಕಲೆಯ ದೃಷ್ಠಿಯಿಂದ ನೋಡಲು ಯಾಕೆ ಸಾಧ್ಯವಾಗುತ್ತಿಲ್ಲ. ಅದ್ಯಾಕೆ ವೇಶ್ಯೆಯ ಪಾತ್ರದಿಂದ ಎಂ.ಪಿ. ಇಮೇಜ್ಗೆ ಧಕ್ಕೆ ಬರುತ್ತದೆ ಎನಿಸಿತು ಎಂಬ ಪ್ರಶ್ನೆ ಕೇಳಿದರೆ ಇದ್ದಿದ್ದಿದ್ದಂಗ್ ಹೇಳಿದ್ರೆ ಎದ್ ಬಂದ್ ಎದೆ ಮೇಲೆ ಒದ್ರಂತೆ ಎನ್ನುವ ರಿಯಾಕ್ಷನ್ ಬರಬಹುದೇನೋ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com