

ಲೂಸಿಯಾ ಚಿತ್ರಕ್ಕೆ 100 ಪರ್ಸೆಂಟ್ ಸಕ್ಸಸ್ ಸಿಕ್ಕಿದೆಯೋ ಇಲ್ಲವೋ ಸಿನಿಮಾ ಅಂತೂ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಹಾಗಂತ ಇದನ್ನು 50 ಪರ್ಸೆಂಟ್ ಸಕ್ಸಸ್ ಎನ್ನುವಂತಿಲ್ಲ. ಸಿನಿಮಾದ ಬಜೆಟ್ ಮತ್ತು ನಿರ್ದೇಶಕ ಪವನ್ರ ಪ್ರಕಾರ ಬಂದಿರುವ ಲಾಭ ನೋಡಿದರೆ ಲೂಸಿಯಾ ಕಮರ್ಷಿಯಲ್ ಆಗಿ ಸಕ್ಸಸ್ಫುಲ್ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಲಾಭ ನಷ್ಟಗಳ ಲೆಕ್ಕ ಏನೇ ಇರಲಿ, ಮಾತನಾಡಿದ್ದು ಸರಿಯೋ ತಪ್ಪೋ. ಆದರೆ ಲೂಸಿಯಾ ಬಗ್ಗೆ ಸಾಕಷ್ಟು ಜನ ಮಾತನಾಡುತ್ತಿರುವುದು ಮಾತ್ರ ಸುಳ್ಳಲ್ಲ. ವಿಭಿನ್ನ ಚಿತ್ರಗಳನ್ನು ಅಪೇಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಲೂಸಿಯಾ ಮತ್ತು ಇತ್ತೀಚೆಗೆ ಬಂದ ಜಟ್ಟ ಸಾಂತ್ವನ ನೀಡಿರುವುದಂತೂ ಖರೆ. ಲೂಸಿಯಾ ಚಿತ್ರದ ನಾಯಕ ಸತೀಶ್ ನೀನಾಸಂ ಇತ್ತೀಚಿನ ಲವ್ ಇನ್ ಮಂಡ್ಯ ಚಿತ್ರದ ಪತ್ರಿಕಾಗೋಷ್ಠಿಯಲ್ಲೂ 'ಏನಪ್ಪಾ ಇವನು ಈ ಪಿಕ್ಚರ್ ಪ್ರೆಸ್ಮೀಟ್ನಲ್ಲೂ ಲೂಸಿಯಾ ಬಗ್ಗೆ ಮಾತಾಡ್ತಾನೆ ಅಂದ್ಕೊಬೇಡಿ' ಎನ್ನುತ್ತಲೇ ಲೂಸಿಯಾದ 50 ದಿನಗಳ ಸಂಭ್ರಮ ಹೇಳಿಕೊಂಡು ಖುಷಿಪಟ್ಟರು. ಇಂಥದೊಂದು ಹೊಸರೀತಿಯ ಪ್ರಯತ್ನ ಮಾಡಿದ ನಿರ್ದೇಶಕ ಪವನ್ಕುಮಾರ್ ಕೂಡ ಲೂಸಿಯಾದ 50 ದಿನಗಳ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಹಾಗಾಗಿ ಮಲ್ಟಿಪ್ಲೆಕ್ಸ್ಗಳಿಗೆ ಮಾತ್ರ ಸೀಮಿತ ಎಂಬ ಮಾತುಗಳನ್ನು ಸುಳ್ಳು ಮಾಡಿ ಗಾಂಧಿನಗರದ ಮೂವೀಲ್ಯಾಂಡ್ ಚಿತ್ರಮಂದಿರದ ಮುಂದೆ 50 ದಿನಗಳ ನಂತರವೂ ಲೂಸಿಯಾ ಚಿತ್ರದ ಫ್ಲೆಕ್ಸ್ ಇನ್ನೂ ಉಳಿದುಕೊಂಡಿದೆ ಎಂದರೆ, ಮೂವೀಲ್ಯಾಂಡ್ ಚಿತ್ರಮಂದಿರದಲ್ಲಿ ಒಂದು ಕನ್ನಡ ಮೂವೀ ಸ್ಟ್ಯಾಂಡ್ ಆಗಿದೆ ಎಂದರೆ, ಅದು ಲೂಸಿಯಾ ಚಿತ್ರದ ನಿಜವಾದ ಗೆಲುವು. ಯಾವ ತೆಲುಗು ಚಿತ್ರವೂ ಮೂವೀಲ್ಯಾಂಡ್ನಂಥ ಚಿತ್ರಮಂದಿರದಲ್ಲ್ಲಿ ಲೂಸಿಯಾವನ್ನು ಡಿಸ್ಟರ್ಬ್ ಮಾಡಲು ಸಾಧ್ಯವಾಗದೇ ಇದ್ದುದು ಖಂಡಿತಾ ಹೆಮ್ಮೆ ಪಡುವ ವಿಷಯವೇ.
- ಹರಿ