ರಾವ್ ಕಾಲ

ರಾವ್ ಕಾಲ
Updated on: 

ಕನ್ನಡ ಚಿತ್ರರಂಗದ ಆರಂಭದ ದಿನಗಳ ಕಪ್ಪು ಬಿಳುಪಿನ ತಾರೆ ಇವರು. ಅಭಿನಯಿಸಲು ಬಂದವರು, ಕಥೆ ಬರೆದರು, ಚಿತ್ರಗಳಿಗೆ ಕಥೆ ಬರೆಯುತ್ತಲೇ ಸಂಭಾಷಣೆ ಜೋಡಿಸಿದರು, ಈ ನಡುವೆ ಚಿತ್ರಕಥೆಯನ್ನೂ ಕಟ್ಟಿಕೊಟ್ಟರು. ಎಲ್ಲ ಮುಗಿದ ಮೇಲೆ ನಿರ್ಮಾಣಕ್ಕಿಳಿದರು. ಆ ಕಾಲದಲ್ಲೇ ಕನ್ನಡ ಸೇರಿದಂತೆ ತೆಲುಗು,  ಹಿಂದಿಯಲ್ಲೂ ತನ್ನ ಪ್ರತಿಭೆ ತೋರಿಸಿ, ಆಫ್‌ಸ್ಕ್ರೀನ್, ಆನ್‌ಸ್ಕ್ರೀನ್ ಎರಡಲ್ಲೂ ಕಲಾ ಜೀವನ ಕಟ್ಟಿಕೊಂಡ ನಮ್ಮ ನಡುವಿನ ಆ ನಕ್ಷತ್ರಕ್ಕೆ 70ರ ಹರೆಯ. ಅವರು ಈಗ ನಮ್ಮ ನಡುವೆ ಇಲ್ಲ. ಎಚ್‌ವಿಎಸ್ ಎಂದೇ ಕರೆಯಲ್ಪಡುತ್ತಿದ್ದ ಎಚ್.ವಿ. ಸುಬ್ಬರಾವ್ ಅವರು ಈಗಿನ ಉದ್ಯಮಕ್ಕೆ ನೆನಪಾಗಿದ್ದಾರೋ, ಇಲ್ಲವೋ ಗೊತ್ತಿಲ್ಲ. ಭಾರತೀಯ ಚಿತ್ರರಂಗದ ಜೊತೆಗೆ ನೂರರ ಸಂಭ್ರಮದಲ್ಲಿರುವ ಕನ್ನಡ ಚಿತ್ರರಂಗದ ತೇರಿನ ತೆರೆ ಸರಿಸಿದರೆ ಮರೆಯಾದ ಇಂಥ ತಾರೆಗಳು ನಮ್ಮೆದುರು ನಿಲ್ಲುತ್ತವೆ. ಸಿನಿಮಾ ತೇರನ್ನು ಕಟ್ಟಿದ ಅಸಂಖ್ಯಾತ ಚುಕ್ಕೆಗಳಲ್ಲಿ ಒಂದೊಂದರದ್ದು ಒಂದೊಂದು ಬೆವರಿನ ಶ್ರಮ. ಇಂಥ ಹತ್ತಾರು ತಾರೆಗಳ ಸಾಂಸ್ಕೃತಿಕ ಪರಿಶ್ರಮದ  ಪರಂಪರೆಯಲ್ಲಿ ಕಂಡು ಬರುವವರು ಎಚ್.ವಿ. ಸುಬ್ಬರಾವ್. ಅಂದಹಾಗೆ ನಿಮಗೆ ಎಚ್.ವಿ. ಸುಬ್ಬರಾವ್ ನೆನಪಿದ್ದಾರೆಯೇ? ಎಂದರೆ, ಬಹುತೇಕರಿಂದ 'ಯಾರಪ್ಪ ಅವರು?' ಎನ್ನುವ ಮರು ಪ್ರಶ್ನೆ ಕೇಳಿ ಬರುತ್ತದೆ. ಯಾಕೆಂದರೆ ಸುಬ್ಬರಾವ್ ತೆರೆ ಮೇಲಿಗಿಂತ ತೆರೆ ಹಿಂದೆ ಪಯಣಿಸಿದ್ದೇ ಹೆಚ್ಚು.
 ಮೈಸೂರಿ ಜಿಲ್ಲೆಯ, ಟಿ. ನರಸೀಪುರ ತಾಲೂಕಿನ, ಹುಣಸಗಹಳ್ಳಿಯ ಎಚ್.ಡಿ. ಮುತ್ತಣ್ಣ ಹಾಗೂ ಪಾರ್ವತಮ್ಮ ದಂಪತಿಯ ಏಳು ಮಂದಿ ಮಕ್ಕಳ ಪೈಕಿ ಹಿರಿಯ ಕುಡಿ ಎಚ್.ವಿ. ಸುಬ್ಬರಾವ್ ಗೊತ್ತೇ?
ಎಂದರೆ 'ಗೊತ್ತು' ಎನ್ನಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಪರ ರಾಜ್ಯದಲ್ಲಿ ಕಣ್ಣು ಬಿಡುವ ಕಾಲದಲ್ಲೇ ಬಣ್ಣದ ಮೋಹದಿಂದ ಬಾಲ ನಟನಾಗಿ ಸುಬ್ಬಯ್ಯ ನಾಯ್ಡು ಅವರ ಕಂಪನಿಗೆ ಬಂದು ಡಾ. ರಾಜ್‌ಕುಮಾರ್, ನರಸಿಂಹರಾಜು,
ಬಾಲಣ್ಣ ಮುಂತಾದ ದಿಗ್ಗಜರೊಟ್ಟಿಗೆ ರಂಗವೇದಿಕೆಯಲ್ಲಿ ಕಾಣಿಸಿಕೊಂಡು, ಮುಂದೆ ಕಥೆಗಾರನಾಗಿ, ಚಿತ್ರಕಥೆಗಾರನಾಗಿ, ಸಂಭಾಷಣೆಗಾರನಾಗಿ, ನಟನಾಗಿ ಕಲಾ ದೇವಿಯನ್ನು ನಂಬಿದ ಹತ್ತಾರು ಮಂದಿಯ ಜೊತೆ ತಾನೂ ಒಬ್ಬನಾಗಿ ಸಿನಿಮಾ ತೇರಿಗೆ ಹೆಗಲು ಕೊಟ್ಟ ಎಚ್.ವಿ. ಸುಬ್ಬರಾವ್ ಅವರನ್ನು ಮರೆಯಲುಂಟೆ? ತಮ್ಮ ತಂದೆಯ  ಆಧ್ಯಾತ್ಮಿಕ ಚಿಂತನೆ, ಸಂಗೀತದ ಪ್ರಭಾವಕ್ಕೆ ಒಳಗಾಗಿ ನಾಟಕಗಳತ್ತ ಮುಖ ಮಾಡಿದ ಎಚ್‌ವಿಎಸ್, 'ದಶಾವತಾರ', 'ಸಂಸಾರ ನೌಕೆ', 'ಕೃಷ್ಣ ಲೀಲೆ' ಮುಂತಾದವು ಅವರ ಅಭಿನಯದ ಆರಂಭದ ನಾಟಕಗಳು ಎಂದು ಎಚ್‌ವಿಎಸ್‌ರ ಸೋದರ ಕೌಶಿಕ್ ತಮ್ಮ ಅಣ್ಣನ ಬದುಕಿನ ಪುಟಗಳನ್ನು ತೆರೆದಿಡುತ್ತಾರೆ. ನಾಟಕಗಳಲ್ಲಿ ಅಭಿನಯಿಸುತ್ತಲೇ, ಮುಂದೆ ತಾವೇ 'ಶಶಿಕಲಾ ಕರ್ನಾಟಕ ನಾಟಕ ಸಂಘ' ಸ್ಥಾಪಿಸಿದರು. 1959ರಲ್ಲಿ ಆರಂಭವಾದ ಈ ಸಂಘದಲ್ಲಿ ಮೊದಲ ಬಾರಿಗೆ ಎಸ್.ಕೆ. ಕರೀಮ್ ಖಾನ್‌ರ 'ನಿರ್ದೋಷಿ' ನಾಟಕವನ್ನು ಪ್ರದರ್ಶನ ಮಾಡಲಾಯಿತು. ನಿರೀಕ್ಷೆ ಮಟ್ಟಕ್ಕೆ ಗೆಲುವು ಸಿಗಲಿಲ್ಲ.
ಕಂಪನಿಯ ಮೊದಲ ನಾಟಕವೇ ನಷ್ಟ ಉಂಟು ಮಾಡಿದ್ದರಿಂದ ಬಣ್ಣದ ಸಹವಾಸ ಬಿಟ್ಟು ಸೀದಾ ಮೈಸೂರಿಗೆ ಹೋದವರನ್ನು ಮತ್ತೆ ಎಚ್ಚರಿಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್‌ರ ಪೋನ್ ಕರೆ. ಮದ್ರಾಸಿಗೆ ಹೋದ ಎಚ್‌ವಿಎಸ್‌ರಿಗೆ ಪುಟ್ಟಣ್ಣ ಕಣಗಾಲ್‌ರ ನಂಟು ಹಾಗೂ ಚಿತ್ರರಂಗದ ಆಪ್ತತೆ ದೊರೆಯಿತು. 'ಸರ್ಪಕಾವಲು' ಎನ್ನುವ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದರು. ಮೊದಲ ಚಿತ್ರದಲ್ಲೇ ಮೂರು ವಿಭಾಗಗಳಲ್ಲಿ ತೊಡಗಿಸಿಕೊಂಡ ಸುಬ್ಬರಾವ್‌ರಿಗೆ ತೆಲುಗಿನಿಂದಲೂ ಅವಕಾಶಗಳು ಬಂದವು. ಆಗ ನಂದಮೂರಿ ತಾರಕರತ್ನ ರಾಮರಾವ್ ಅವರೇ ಆಳುತ್ತಿದ್ದ ದಿನಗಳು. ಮುಖ್ಯವಾಗಿ ಜನಪದ ಪ್ರೇಮ ಕಥೆಗಳ ಕಾಲ. ಆಗ ತೆಲುಗು ಚಿತ್ರಗಳಿಗೆ ಬರೆಯತೊಡಗಿದ ಎಸ್‌ವಿಎಸ್, ಆಗಿನ ಕಾಲಕ್ಕೆ ಬಾಕ್ಸ್ ಆಫೀಸ್ ಬ್ರಹ್ಮ ಎನಿಸಿಕೊಂಡಿದ್ದ ನಿರ್ದೇಶಕ ವಿಠಲಾಚಾರ್ಯರ 'ಲಕ್ಷ್ಮಿಕಟಾಕ್ಷ' ಚಿತ್ರಕ್ಕೆ ಕಥೆ ಒದಗಿಸಿಕೊಟ್ಟರು. ನಂತರ 'ಗಂಡಿಕೋಟ ರಹಸ್ಯಂ', 'ರಾಜದುರ್ಗ ರಹಸ್ಯಂ' ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಂತರ ಪುಟ್ಟಣ್ಣರ ಗರಡಿಗೆ ಬಂದವರಿಗೆ 'ಕಪ್ಪು ಬಿಳುಪು' ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. 'ಬಿಳಿಹೆಂಡ್ತಿ' ಚಿತ್ರದಲ್ಲಿ ಅಭಿನಯದ ಜೊತೆಗೆ ಸಂಭಾಷಣೆ ಕೂಡ ಬರೆದರು. ಮುಂದೆ 'ನಾಗರಹೊಳೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ನೀಡಿದರು. ಆದರೆ ಚಿತ್ರಕಥೆ ಕ್ರೆಡಿಟ್ಟು ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಪಾಲಿಗೆ ಹೋಯಿತು. 'ಸಿಂಹದಮರಿ ಸೈನ್ಯ'ಕ್ಕೆ ಕಥೆ, ಸಂಭಾಷಣೆ, 'ಪುಟಾಣಿ ಏಜೆಂಟ್ 123'ಗೆ ಕಥೆ, ಚಿತ್ರಕಥೆ, ಸಂಭಾಷಣೆ, 'ಭರ್ಜರಿ ಬೇಟೆ' ಚಿತ್ರಕ್ಕೆ ಕಥೆ, ಸಂಭಾಷಣೆ ನೀಡಿರುವ ಎಚ್‌ವಿಎಸ್, ತಾನು ಕೆಲಸ ಮಾಡುವ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ಮಾಡಿದ್ದಾರೆಂದು ಚಿತ್ರಕಲಾವಿದರಾಗಿರುವ ಕೌಶಿಕ್ ನೆನಪಿಸಿಕೊಳ್ಳುತ್ತಾರೆ.
ಹಿಂದಿಯಲ್ಲಿ 'ಶಾನ್‌', 'ಅಜ್ ರಾತ್ ಕೋ' ಚಿತ್ರಗಳಿಗೆ ಕಥೆ ನೀಡಿದ್ದು, ಕನ್ನಡ, ತೆಲುಗು, ಹಿಂದಿಯಲ್ಲಿ ಒಟ್ಟು 50 ಚಿತ್ರಗಳಿಗೆ ಸುಬ್ಬರಾವ್‌ರ ಸಾಹಿತ್ಯ ಕೃಷಿ ಇದೆ. ಮುಂದೆ ಬರವಣಿಗೆ ಜೊತೆ ನಿರ್ಮಾಣಕ್ಕೂ ಇಳಿದ ಎಚ್‌ವಿಎಸ್, 'ಮಳೆ ಬಂತು ಮಳೆ', 'ಪುಟ್ಟ ಹೆಂಡ್ತಿ', 'ದೇವರ ಮನೆ', 'ಒಂಟಿ ಸಲಗ' ಮುಂತಾದ ಚಿತ್ರಗಳನ್ನು ನಿರ್ಮಿಸಿದರು. 'ಗಂಡಭೇರುಂಡ' ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ಇವರ ಕೊನೆ ಚಿತ್ರ 'ಹಾಡಿ ಬಾ ಅರಗಿಣಿ' ಚಿತ್ರ ಬಿಡುಗಡೆ ಕಾಣಲಿಲ್ಲ. ಇನ್ನು ಡಾ. ರಾಜ್‌ಕುಮಾರ್ ಅಭಿನಯದ 'ಬಹದ್ದೂರ್ ಗಂಡು' ಚಿತ್ರದ ಕಥೆ ಇವರದ್ದೆ. ತುಂಬಾ ನಿರೀಕ್ಷೆ ಇಟ್ಟುಕೊಂಡು 'ಭಕ್ತ ಅಂಬರೀಷ' ಚಿತ್ರಕ್ಕೆ ಸುಬ್ಬರಾವ್ ಕಥೆ ಬರೆದರು. ಆದರೆ ರಾಜ್ ಅಪಹರಣದಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ... ಹೀಗೆ ತಮ್ಮ ಅಣ್ಣನ ಸಿನಿ ಬದುಕಿನ ಚರಿತ್ರೆಯನ್ನು ತೆರೆದಿಡುವ 70 ವರ್ಷದ ಕೌಶಿಕ್ ವೃತ್ತಿಯಲ್ಲಿ ಚಿತ್ರಕಲಾವಿದರು. ಇಬ್ಬರು ಮಕ್ಕಳು, ಮೊಮ್ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 4 ಜನ ಗಂಡು, 3 ಮಂದಿ ಹೆಣ್ಣುಮಕ್ಕಳ ಪೈಕಿ ತಮ್ಮ ಹಿರಿಯಣ್ಣ ಎಸ್.ವಿ. ಸುಬ್ಬರಾವ್ ಹಾಗೂ ಹಿರಿಯ ಅಕ್ಕ ನಾಗಲಕ್ಷ್ಮಿ ತಮ್ಮೊಂದಿಗಿಲ್ಲ ಎನ್ನುವ ಕೊರಗು ಅವರಿಗಿದೆ. ಚಿತ್ರರಂಗದಲ್ಲಿ ತಮ್ಮ ಅಣ್ಣನ ಅಳಿಲು ಸೇವೆಯನ್ನು ನೆನೆಯುವ ಸಲುವಾಗಿ ತಾವೇ ಮನೆಯಲ್ಲಿ ಪ್ರತಿ ವರ್ಷ ಹುಟ್ಟಿದ ಹಬ್ಬವನ್ನು ಸರಳವಾಗಿ ಆಚರಿಸುತ್ತಾರೆ. ಸಿನಿ ಪರಿಶ್ರಮದಲ್ಲೇ ತೊಡಗಿಸಿಕೊಂಡು ಮದುವೆಯಾಗದೆ ಒಬ್ಬಂಟಿಯಾಗಿಯೇ ಉಳಿದು, ರಾಘವೇಂದ್ರ ಸ್ವಾಮಿಗಳ ಅರಾಧನೆ ದಿವಸ 'ಸನ್ಯಾಸಿ' ಎನ್ನುವ ಪುಸ್ತಕ ಓದುತ್ತಲೇ ಅದನ್ನು ಎದೆ ಮೇಲಿಟ್ಟುಕೊಂಡು ಕಣ್ಮುಚ್ಚಿದ ಎಚ್.ವಿ.ಸುಬ್ಬರಾವ್ ಈ ಕಾಲದ ಚಿತ್ರರಂಗ ಕಂಡ ದೊಡ್ಡ ತಾರೆ ಅಲ್ಲದಿದ್ದರೂ  ಆ ದಿನಗಳ ಪುಟ್ಟ ತಾರೆಯಂತೂ ಹೌದು. ಚಿತ್ರ ಪ್ರೇಮಿಗಳ ನೂರರ ಸಿನಿಮಾ ಉತ್ಸವದಲ್ಲಿ ಈ ಕಲಾವಿದ ಮತ್ತೆ ನೆನಪಾದರು.

- ಕೇಶವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com