ಕ್ಲಾಸಿಕ್ ದೇವಿ

ಡಾ. ರಾಜ್‌ಕುಮಾರ್, ಶಂಕರ್‌ನಾಗ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಮಂಜುಳಾ, ಸರಿತಾ, ಅಂಬಿಕಾ...
ಕ್ಲಾಸಿಕ್ ದೇವಿ
Updated on: 

ಡಾ. ರಾಜ್‌ಕುಮಾರ್, ಶಂಕರ್‌ನಾಗ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಮಂಜುಳಾ, ಸರಿತಾ, ಅಂಬಿಕಾ... ಹೀಗೆ ಬೆಳೆಯುತ್ತ ಹೋಗುವ ದೊಡ್ಡ ತಾರೆಗಳಿಗೆ ನಾಟ್ಯ ಕಲಿಸಿಕೊಟ್ಟಾಕೆ. ಈಕೆಯ ಕ್ಲಾಸಿಕ್ ಹೆಜ್ಜೆಗಳಿಗೆ ಫಿದಾ ಆಗದವರೇ ಇಲ್ಲ. ಕಪ್ಪು ಬಿಳುಪಿನ ಕಾಲದಲ್ಲೇ ತಮ್ಮ ನೃತ್ಯದ ಮೂಲಕ ಸದ್ದು ಮಾಡಿದ ನೃತ್ಯ ನಿರ್ದೇಶಕಿಯನ್ನು ಚಿತ್ರೋದ್ಯಮ ಮೂಲೆಗುಂಪು ಮಾಡಿದೆಯೇ?

'ನಾನು ಏನು, ನನ್ನ ವೃತ್ತಿ ಏನು, ಯಾವ ಕಾಲದಿಂದ ಚಿತ್ರರಂಗದಲ್ಲಿ ದುಡಿಯುತ್ತಿದ್ದೇನೆ ಎನ್ನುವುದು ಕನ್ನಡ ಚಿತ್ರೋದ್ಯಮಕ್ಕೆ ಗೊತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾನು ಗೊತ್ತು. ಆದರೂ ಬಯೊಡೇಟಾ, ಕಾರ್ಡ್ ತೋರಿಸಿ ಸನ್ಮಾನ ಮಾಡಿಸಿಕೊಳ್ಳಬೇಕೆ?'
ಹೀಗೆ ಸಿಟ್ಟು ಮತ್ತು ಬೇಸರದಿಂದಲೇ ಪ್ರಶ್ನಿಸಿದ್ದು ನೃತ್ಯ ನಿರ್ದೇಶಕಿ ದೇವಿ. ನೂರಾರು ಚಿತ್ರಗಳಿಗೆ ತಮ್ಮ ಹೆಜ್ಜೆಯ ಸದ್ದಿನಿಂದಲೇ ಹೊಸ ಮೆರಗು ಕೊಟ್ಟ ಈ ನಾಟ್ಯ ಮಯೂರಿಯ ವಾಸ ಚೆನ್ನೈನಲ್ಲಿ. ಈ ಕಾರಣಕ್ಕೋ ಏನೋ ಬ್ಲಾಕ್ ಆಂಡ್ ವೈಟ್ ಕಾಲದ ಈ ತೆರೆ ಹಿಂದಿನ ತಾರೆಯನ್ನು ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಮರೆತುಬಿಟ್ಟಿದೆ. ಉದ್ಯಮದ ಈ ಮರೆವಿನ ಸ್ಥಿತಿಯನ್ನು ಕಂಡು ಹಿರಿಯ ನೃತ್ಯ ನಿರ್ದೇಶಕಿ ದೇವಿ ಬೇಸರದಿಂದಲೇ ಮಾತಿಗೆ ನಿಂತರು.
 ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಕಣ್ಣು ಬಿಟ್ಟ ಊರಿನಲ್ಲೇ ಭಾರತೀಯ ಚಿತ್ರರಂಗದ ನೂರರ ಸಂಭ್ರಮ ನಡೆಯುತ್ತಿದೆ. ಕನ್ನಡ ಸಿನಿಮಾ ಉದ್ಯಮ ಮದ್ರಾಸಿನಲ್ಲಿ ನೆಲೆ ನಿಂತ ದಿನಗಳಲ್ಲೇ ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಆಗಿನಿಂದಲೂ ಇಲ್ಲೇ ಇರುವ ನನಗೆ ಬದುಕು ಕೊಟ್ಟಿದ್ದೇ ಕನ್ನಡ ಚಿತ್ರರಂಗ. ಉಡುಪಿ ಜಯರಾಂ ನನ್ನ ಮೊದಲ ಗುರುಗಳು. ಅವರೊಂದಿಗೆ ನೂರಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ. ಡಾ. ರಾಜ್‌ಕುಮಾರ್, ಶಂಕರ್‌ನಾಗ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಶ್ರೀನಾಥ್, ರಾಜೇಶ್, ಮಂಜುಳಾ, ಸರಿತಾ, ಅಂಬಿಕಾ... ಹೀಗೆ ಆ ಕಾಲದ ಅತಿರಥ ಮಹಾನಟರ ಅಭಿನಯದ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನೃತ್ಯ ಎಂದರೆ ಚಿತ್ರರಂಗದ ಬೇರು ಮಟ್ಟದ ತಲೆಮಾರಿನವರಿಗೆ ಈಗಲೂ ನನ್ನ ಕೆಲಸ ನೆನಪಾಗುತ್ತದೆ. ಮಾಸ್ ನೃತ್ಯಗಳೇ ಹೆಚ್ಚು ಚಾಲ್ತಿಯಲ್ಲಿ ಇದ್ದ ದಿನಗಳಲ್ಲಿ ಕ್ಲಾಸ್ ಟಚ್ ಕೊಟ್ಟ ಹೆಗ್ಗಳಿಕೆ ನನ್ನದು. ಆದರೂ ಚಿತ್ರರಂಗ ನಮ್ಮಂಥ ಕಲಾವಿದರನ್ನು ಯಾಕೆ ಮರೆಯುತ್ತಿದೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ ದೇವಿ.
ಚಿಕ್ಕಂದಿನಲ್ಲೇ ಕುಣಿಯಲಿಕ್ಕೆ ಶುರು ಮಾಡಿದವರು ದೇವಿ. 15 ವರ್ಷಕ್ಕೆ ವೇದಿಕೆ ಮೇಲೆ ಹೆಜ್ಜೆ ಹಾಕಲಾರಂಭಿಸಿದರು.  20 ವರ್ಷಕ್ಕೆ ಚಿತ್ರರಂಗ ಪ್ರವೇಶದ ಅವಕಾಶ ಸಿಕ್ಕಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.  'ಮೇಯರ್ ಮುತ್ತಣ್ಣ', 'ಭಲೇ ಹುಚ್ಚ', 'ಚಂದನದ ಗೊಂಬೆ', 'ಬಂಗಾರದ ಮನುಷ್ಯ', 'ಹುಲಿಯ ಹಾಲಿನ ಮೇವು', 'ಶರಪಂಜರ', 'ಗೆಜ್ಜೆಪೂಜೆ', 'ಸಾಕ್ಷತ್ಕಾರ', 'ಮಯೂರ', 'ಸನಾದಿ ಅಪ್ಪಣ್ಣ', 'ಗಂಗಧದ ಗುಡಿ', 'ಎರಡು ಕನಸು' ಮುಂತಾದ ಚಿತ್ರಗಳ ಹೆಸರುಗಳನ್ನು ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಡುವ ದೇವಿ, ನಟ ದ್ವಾರಕೀಶ್‌ರ 13 ಚಿತ್ರಗಳಿಗೆ, ಪದ್ಮಿಣಿ ಪಿಕ್ಚರ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಬಹುತೇಕ ಚಿತ್ರಗಳಿಗೆ ಇವರದ್ದೇ ಕುಣಿತ.
 ಡಾ.ರಾಜ್‌ಕುಮಾರ್ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡನ್ನು ಕೇವಲ ಮೂರು ದಿನದಲ್ಲೇ ಮುಗಿಸಿಕೊಟ್ಟವರು. ಹಾಗೆ 'ಎಂದೆಂದೂ ನಿನ್ನನು ಮರೆತು ನಾ ಬದುಕಿರಲಾರೆ', 'ಆಗುಂಬೆಯಾ ಪ್ರೇಮ ಸಂಜೆಯಾ...', 'ನಗು ನಗುತಾ ನೀ ಬರುವೆ', 'ಥೈ ಥೈ ಬಂಗಾರಿ', ಅಂಬರೀಷ್-ಅಂಬಿಕಾ ಜೋಡಿಯ ಮೋಸ್ಟ್ ರೊಮ್ಯಾಂಟಿಕ್ ಎನಿಸಿಕೊಂಡಿರುವ 'ಚಳಿ ಚಳಿ ತಾಳೆನು ಈ ಚಳಿಯಾ', ಎವರ್ ಗ್ರೀನ್ ಹಾಡು 'ರವಿವರ್ಮನ ಕುಂಚದ ಕಲೆ...'  ಹೀಗೆ ಆಗಿನ ಕಾಲದ ಬಹುತೇಕ ಕ್ಲಾಸಿಕ್ ಮತ್ತು ರೊಮ್ಯಾಂಟಿಕ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ ಕೀರ್ತಿ ದೇವಿ ಅವರದ್ದು. ಆ ದಿನಗಳ ಮತ್ತೊಬ್ಬ ಖ್ಯಾತ ನಿರ್ದೇಶಕ ಉಡುಪಿ ಜಯರಾಂ ಅವರು ಯಾವುದಾದರೂ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆಂದರೆ ಅಲ್ಲಿ ದೇವಿ ಅವರ ನೃತ್ಯ ಕಮಾಲ್ ಇದ್ದೇ ಇರುತ್ತದೆ. 'ಜಯರಾಂ ಮಾಸ್ಟರ್, ನೀವು ಇಲ್ಲದಿದ್ದರೆ ದಯವಿಷ್ಟು ನಿಮ್ಮ ಶಿಷ್ಯೆ ದೇವಿಯವರನ್ನು ಕಳುಹಿಸಿಕೊಡಿ. ಬೇರೆಯವರು ಬೇಡ. ನಮ್ಮ ಚಿತ್ರಕ್ಕೆ ಒಗ್ಗಲ್ಲ' ಎಂದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರೇ ತನ್ನ ಹೆಸರು ಶಿಪಾರಸ್ಸು ಮಾಡುತ್ತಿದ್ದನ್ನು ದೇವಿ ಅವರು ನೆನಪಿಸಿಕೊಳ್ಳುತ್ತಾರೆ. ತುಂಬು ಕುಟುಂಬದೊಂದಿಗೆ ಚೆನ್ನೈನಲ್ಲಿ ನೆಲೆಸಿರುವ ದೇವಿ, ಈಗಲೂ ಡ್ಯಾನ್ಸ್ ಮಾಡಲು ರೆಡಿ ಎನ್ನುತ್ತಾರೆ. 'ನಾನು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಕಾರಣವಾಗಿದ್ದು ಕನ್ನಡ ಸಿನಿಮಾಗಳು. ಈಗಲೂ ಯಾರಾದರೂ ಕರೆದರೆ ಯಾವ ರೀತಿಯ ನೃತ್ಯ ಪ್ರಕಾರ ಬೇಕಾದರೂ ಸಂಯೋಜನೆ ಮಾಡುತ್ತೇನೆ' ಎನ್ನುವ ದೇವಿ ಅವರಿಗೆ ಈಗ 65 ವರ್ಷ.
ಈಗ ಕನ್ನಡದ 'ಅಧಿಕಾರ' ಎನ್ನುವ ಚಿತ್ರಕ್ಕೆ ಕೊರಿಯೊಗ್ರಫಿ ಮಾಡುತ್ತಿರುವ ದೇವಿ ಅವರನ್ನು ಭಾರತೀಯ ಚಿತ್ರರಂಗದ ನೂರರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ ಮರೆತಿದೆ. ತಾನು ನೃತ್ಯ ನಿರ್ದೇಶಕಿಯಾಗಿದ್ದಾಗ ಗ್ರೂಪ್ ಡ್ಯಾನ್ಸ್ ಮಾಡುತ್ತಿರುವವರನ್ನು ಗೌರವಿಸಲು ಹೊರಟಿದ್ದಾರೆ. ಹಾಗಾದರೆ ಕನ್ನಡ ಚಿತ್ರರಂಗಕ್ಕೆ  ನಮ್ಮ ಕೊಡುಗೆ ಇಲ್ಲವೆ? ನೃತ್ಯ ನಿರ್ದೇಶಕರ ಸಂಘದ ಕಾರ್ಡ್ ತೋರಿಸಿ ಸನ್ಮಾನ ಮಾಡಿಸಿಕೊಳ್ಳಬೇಕೆ? ಉದ್ಯಮದಲ್ಲಿ ಹಿರಿಯ ಕಲಾವಿದರ ಬಗ್ಗೆ ಯಾಕೆ ಈ ತಾತ್ಸರ? ಅಂತ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರುತ್ತಾರೆ. ದೇವಿಯವರ ಸಿಟ್ಟು ಕನ್ನಡ ಚಿತ್ರರಂಗಕ್ಕೆ ಕೇಳಿಸುತ್ತದೆಯೇ?

- ಆರ್.ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com