

ಅತ್ತ ಕ್ವಾಟ್ಲೆ ಸತೀಶನ ಲೂಸಿಯಾ ಚಿತ್ರ ಸದ್ದು ಮಾಡುತ್ತಿದ್ದರೆ ಇತ್ತ ಹೆಣ್ಣುಮಕ್ಕಳಿಗೆ ಕ್ವಾಟ್ಲೆ ಕೊಡುತ್ತ ನಟೋರಿಯಸ್ ಎನಿಸಿಕೊಂಡಿದ್ದ 'ಉಮೇಶ' ತೆರೆಕಾಣಲು ರೆಡಿಯಾಗಿದ್ದಾನೆ. ಕೋರ್ಟ್ನಿಂದ 'ರೆಡ್ಡಿ ಎನ್ನುವಂತಿಲ್ಲ' ಎಂಬ ಆದೇಶ ಹೊರಡಿಸಿಕೊಂಡಿರುವ ಚಿತ್ರತಂಡ ಕಳೆದ ವಾರವೇ ಚಿತ್ರದ ಬಿಡುಗಡೆಗೆ ಸಿದ್ಧವಾಗಿದ್ದರೂ ಕೋರ್ಟ್ನಲ್ಲಿದ್ದ ಕೇಸು ಮತ್ತು ಚಿತ್ರಮಂದಿರಗಳ ಕೊರತೆಯಿಂದ ಈ ವಾರಕ್ಕೆ ಅದನ್ನು ಮುಂದೂಡಿತಂತೆ. ಈ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡಿಲ್ಲದ ಚಿತ್ರತಂಡ, ಚಿತ್ರಮಂದಿರದ ಕೊರತೆ ಎದುರಾಗಿರಬಹುದು, ಆದರೆ ನಮಗೆ ಪ್ರೇಕ್ಷಕರ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆಯಲ್ಲಿದೆ. ತಮ್ಮ ಚಿತ್ರದ ಪೋಸ್ಟರ್ಗಳಲ್ಲಿ ಹಾಕಿಕೊಂಡಿರುವ 'ಅಂದು ದಂಡುಪಾಳ್ಯ, ಇಂದು ಉಮೇಶ್' ಎಂಬ ಕ್ಯಾಪ್ಶನ್ನೇ ತಮ್ಮ ಚಿತ್ರವನ್ನು ಕಾಪಾಡುತ್ತದೆ ಎಂಬ ಆತ್ಮವಿಶ್ವಾಸ ಇದ್ದರೂ ಇರಬಹುದು.
ಉಮೇಶ್ ರೆಡ್ಡಿಯ ತಾಯಿ ಮತ್ತು ಸೋದರ ಹಾಕಿದ್ದ ಕೇಸು ನಮ್ಮ ಪರವಾಗಿ ಆಗಿದೆ. ಒಂದೆರಡು ಸೂಚನೆಗಳ ನಂತರ ಕೋರ್ಟ್ನಿಂದ ನಮಗೆ ಅನುಮತಿ ಸಿಕ್ಕಿರುವುದು ಖುಷಿಯಾಗಿದೆ. ಇನ್ನೇನಿದ್ದರೂ ಜನರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಶೋಕ್ ಕುಮಾರ್. ಉಮೇಶ್ ರೆಡ್ಡಿ ಎಂಬ ಪಾತಕಿಯ ವಿಕೃತ ಕಥೆ ಹೇಳಿದ್ದರೂ ಅದನ್ನು ಜನ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ ಎಂಬ ಅತಿ ಆತ್ಮವಿಶ್ವಾಸ ಅವರದ್ದು. ಚಿತ್ರದ ಪೋಸ್ಟರ್ಗಳಲ್ಲಿ ಜನರನ್ನು ಸೆಳೆಯಲು ಒಂದಿಷ್ಟು ಮಸಾಲಾಭರಿತ ಚಿತ್ರಗಳನ್ನು ಹಾಕಿದ್ದರೂ ಚಿತ್ರ ತುಂಬ ಸಹನೀಯವಾಗಿದೆ. ಎಲ್ಲೂ ಅಶ್ಲೀಲ ಎನಿಸುವುದಿಲ್ಲ ಎಂಬ ಭರವಸೆ ನೀಡುತ್ತಾರೆ ಅಶೋಕ್.
ಇನ್ನು ಈ ಚಿತ್ರತಂಡ ಬಿಡುಗಡೆಯ ಸಂಕಷ್ಟದಲ್ಲಿದ್ದಾಗ ಅವರ ಕೈ ಹಿಡಿದು ಆಸರೆಯಾಗಿರುವವರು ವಿತರಕ ಆರ್ಯ ಮೌರ್ಯ ಗೌಡ. ಚಿತ್ರಕ್ಕೆ ಎಲ್ಲ ಚಿತ್ರಮಂದಿರಗಳ ವ್ಯವಸ್ಥೆ ಮಾಡಿಸಿ ಈಗ ಮುಂದೆ ನಿಂತು ಬಿಡುಗಡೆ ಮಾಡಿಸುತ್ತಿರುವ ಆರ್ಯ ಮೌರ್ಯ ಗೌಡ ಇದು ಕಿಲ್ಲರ್ ಒಬ್ಬನ ಥ್ರಿಲ್ಲರ್ ಚಿತ್ರ. ಪ್ರೇಕ್ಷಕರು ಯಾವುದೇ ಇರುಸು ಮುರುಸಿಲ್ಲದೆ ಸಿನಿಮಾ ನೋಡಬಹುದು ಎಂದು ಸರ್ಟಿಫಿಕೇಟ್ ನೀಡುತ್ತಾರೆ. ಅಂದಹಾಗೆ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಸಿಕ್ಕಿರುವುದು 'ಎ' ಸರ್ಟಿಫಿಕೇಟ್.
- ಹ್ಯಾರಿ