ಪ್ರೇಕ್ಷಕರ ಒತ್ತಾಯದ ಮೇರೆಗೆ

ಪವನ್ ನಿರ್ದೇಶನದ ಲೂಸಿಯಾ ಒಂದು 'ಪ್ರಬುದ್ಧ' ಚಿತ್ರ ಎಂದಷ್ಟೇ ಹೇಳಿ ಕೈತೊಳೆದುಕೊಂಡರೆ ಅದು 'ಬಾಲಿಶತನ'ವಾಗುತ್ತದೆ...
ಪ್ರೇಕ್ಷಕರ ಒತ್ತಾಯದ ಮೇರೆಗೆ
Updated on: 

ಪವನ್ ನಿರ್ದೇಶನದ ಲೂಸಿಯಾ ಒಂದು 'ಪ್ರಬುದ್ಧ' ಚಿತ್ರ ಎಂದಷ್ಟೇ ಹೇಳಿ ಕೈತೊಳೆದುಕೊಂಡರೆ ಅದು 'ಬಾಲಿಶತನ'ವಾಗುತ್ತದೆ. ಹಾಗಂತ ಅದು ಖಂಡಿತಾ ಕೆಟ್ಟ ಸಿನಿಮಾ ಕೂಡ ಅಲ್ಲ. ಲೂಸಿಯಾ ಚಿತ್ರದ ಬಗ್ಗೆ ನಾಲ್ಕು ಜನ ಮಾತನಾಡುತ್ತಿದ್ದಾರೆ ಎಂಬುದು ಖುಷಿಯ ಸಂಗತಿ. ಆದರೆ, ಕನ್ನಡದಲ್ಲಿ ಹೊಸ ಅಲೆಯ ಚಿತ್ರ ನೋಡಿದ ಅತಿಸ್ಫೂರ್ತಿಯಿಂದಲೋ ಏನೋ ಕೆಲವು ಲೂಸಿಯಾ ಪ್ರೇಮಿಗಳು, ಚಿತ್ರ ನೋಡಿದ ಪ್ರೇಕ್ಷಕರನ್ನು(ಇದರಲ್ಲಿ ಮಾಧ್ಯಮದ ವಿಮರ್ಶಕರೂ ಸೇರಿದ್ದಾರೆ) ಕರೆದು ಬ್ಯಾಟರಿ ಹಾಕಿ ತೋರಿಸಿ, ನೀವು ಇದೇ ಜಾಗದಲ್ಲೇ ಕೂರಬೇಕು ಎಂದು ಒತ್ತಾಯ ಮಾಡುತ್ತಿರುವುದು ಸಿನಿಮಾದಷ್ಟೇ ಗೊಂದಲ ಸೃಷ್ಠಿಸುತ್ತಿದೆ. ಇದೊಂಥರಾ ಲೂಸಿಯಾ ಮಾಫಿಯಾ. ಈ ಪ್ರಕ್ರಿಯೆ ಫೇಸ್‌ಬುಕ್‌ನಂತ ಸಾಮಾಜಿಕ ತಾಣಗಳಲ್ಲಿ ಮಾತ್ರ ನಡೆಯುತ್ತಿದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.
ಹಾಗೆ ನೋಡಿದರೆ, ಲೂಸಿಯಾ ಚಿತ್ರದಲ್ಲಿ ಅದನ್ನು ಅರ್ಥ ಮಾಡಿಕೊಳ್ಳಲು ಕಿಡ್ನಿ ಬೇಕು ಎನ್ನುವಂಥದ್ದು ಏನೂ ಇಲ್ಲ. ಲೂಸಿಯಾವನ್ನು ಹೊಗಳಿದವರೆಲ್ಲಾ ಜಾಣರಲ್ಲ, ಬಯ್ದವರೆಲ್ಲಾ ಕೋಣರಲ್ಲ. ಆದರೂ ಕೆಲವು ಲೂಸಿಯಾ ಮ್ಯಾನಿಯಾಕ್ಕೆ ಒಳಗಾದವರು, ಸಿನಿಮಾ ಚೆನ್ನಾಗಿಲ್ಲ ಎಂದವರನ್ನು ಹೇಳು ಶಿವ ಯಾಕಿಂಗಾದೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಮಾತ್ರ ಅನಾರೋಗ್ಯಕರ ಬೆಳವಣಿಗೆ. ಇದು ಲೂಸಿಯಾ ಟ್ಯಾಬ್ಲೆಟ್‌ನಿಂದ ಗುಣವಾಗುವ ಖಾಯಿಲೆಯಂತೂ ಅಲ್ಲ.
ಲೂಸಿಯಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಾವು ಸಿನಿಮಾ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯುಳ್ಳ ಕನಸುಗಾರರನ್ನು ನೋಡಿದ್ದೇವೆ, ಸಿನಿಮಾಗಳಲ್ಲೂ ಡ್ರೀಮ್‌ಸಾಂಗ್ ನೋಡಿದ್ದೇವೆ ಆದರೆ, ಅಸ್ಪಷ್ಟ ಕನಸಿನ ಲೋಕ ತೋರಿಸುವ ಈ ಡ್ರೀಮ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೂ ಅದರಲ್ಲಿ ಗೊಂದಲಗಳಿವೆ ಎಂಬುದು ಮಾತ್ರ ಸ್ಪಷ್ಟ. ಈ ಕಾರಣಕ್ಕೆ, 'ಇಂಗ್ಲಿಷ್ ಸಿನಿಮಾ ಅರ್ಥ ಆಗದೆ ಇದ್ರೆ, ಹೋಗ್ಲಿ ಬಿಡಪ್ಪ ನಮ್‌ಗೆ ಭಾಷೆ ಬರಲ್ಲ ಅಂತ ಸುಮ್ಮನಾಗಬಹುದು. ಕನ್ನಡ ಸಿನಿಮಾ ನೋಡಿನೂ ಸರಿಯಾಗಿ ಅರ್ಥ ಆಗಲಿಲ್ಲ ಅಂದ್ರೆ? ಹಾಗಾಗಿ, ಇಂಗ್ಲಿಷ್ ಬದಲು ಕನ್ನಡದಲ್ಲೇ ಸಬ್‌ಟೈಟಲ್ ಹಾಕಬೇಕಿತ್ತು' ಎನ್ನುವವರದ್ದು ಬರೀ ಕುಹಕ ಎಂದು ಕಡೆಗಣಿಸುವಂತಿಲ್ಲ. ಆದರೆ, ಇಲ್ಲಿ ಇಂಟರೆಸ್ಟಿಂಗ್ ವಿಷಯ ಎಂದರೆ, ಸಿನಿಮಾ ನೋಡಿದ ಮೇಲೆ ಮಾತಾಡೋರಿಗಿಂತ ನೋಡೋಕೆ ಮುಂಚೆನೇ ಇದು ಸೂಪರ್ ಹಿಟ್ ಚಿತ್ರ ಎಂದು ಡಿಸೈಡ್ ಮಾಡಿದವರು ಮತ್ತು ಇದು ಡಬ್ಬಾ ಸಿನಿಮಾ ಎಂದು ಡಿಸೈಡ್ ಮಾಡಿದವರೇ ಹೆಚ್ಚು.
ಅಷ್ಟಕ್ಕೂ ಲೂಸಿಯಾ ಬಗ್ಗೆ ಮಾತಾಡ್ತಿರೋರು ಯಾರು. ಅಪ್ಪಟ ಪ್ರೇಕ್ಷಕರಾ? ಅಲ್ಲ ಕೇವಲ ಸಿನಿಮಾಸಕ್ತರು ಮಾತ್ರ. ಲೂಸಿಯಾ ಚಿತ್ರವನ್ನು ಹೊಗಳುವ ಪ್ರತಿಯೊಬ್ಬರ ಹಿನ್ನೆಲೆ ವಿಚಾರಿಸಿದರೆ, ಅಲ್ಲಿ ಕಾಣುವುದು, ಈಗಾಗಲೇ ಚಿತ್ರರಂಗದಲ್ಲಿರುವವರು ಅಥವಾ ಮುಂದೆ ಬರಬೇಕು ಎನ್ನುವವರು ಮತ್ತು ಈಗಾಗಲೇ ಚಿತ್ರರಂಗದಲ್ಲಿರುವವರ ಆತ್ಮೀಯರು, ಸ್ನೇಹಿತರು ಸಂಬಂಧಿಗಳು. ಕಾಲೇಜಿನಲ್ಲಿ ಓದುತ್ತಿದ್ದರೂ ಸಿನಿಮಾ ಸೇರಲು ಕಾಯುತ್ತ ಸಿನಿಮಾದವರ ಹಿಂದೆ ಮುಂದೆ ಸುತ್ತುವ ಹುಡುಗರು, ತಮ್ಮ ಶಾರ್ಟ್ ಸಿನಿಮಾಗಳನ್ನು ಸಿನಿಮಾದವರಿಗೆ ತೋರಿಸಿ ಅವರಿಂದ ಶಬ್ಬಾಸ್‌ಗಿರಿ ಪಡೆಯುವ ಆತುರದಲ್ಲಿರುವ 'ಶಾರ್ಟ್‌' ಸೈಟ್ ಸಮಸ್ಯೆ ಇರುವ ಹುಡುಗರು. ಇಂಥವರು ಸಿನಿಮಾ ಪಿ ಆರ್‌ಒಗಳಂತೆ ಮತ್ತು ಹೆಚ್ಚೆಂದರೆ ಹುಚ್ಚು ಅಭಿಮಾನಿಗಳಂತೆ ಕಾಣುತ್ತಾರೆಯೇ ಹೊರತು, ಈ ಗುಂಪಿನಲ್ಲಿ ನೀನ್ಯಾರಾದ್ರೆ ನಂಗೇನು, ನಂಗೆ ಒಳ್ಳೆ ಸಿನಿಮಾ ಬೇಕು ಎನ್ನುವ ಯಾವ ಪ್ರೇಕ್ಷಕನೂ ಬ್ಯಾಟರಿ ಹಾಕ್ಕೊಂಡ್ ಹುಡುಕಿದರೂ ಸಿಗುವುದಿಲ್ಲ.
ಸಿನಿಮಾ ತಂಡ ಕೂಡ ಕೆಲವರು ಮಾಧ್ಯಮಗಳ ವಿಮರ್ಶೆಗಳನ್ನು ನಂಬಬೇಡಿ ಎನ್ನುತ್ತದೆ. ಇದು ಕಾಮನ್ ಬಿಡಿ. ವಿಮರ್ಶೆಗಳು ಚೆನ್ನಾಗಿದ್ದಾಗ ಅವುಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಚೆನ್ನಾಗಿಲ್ಲದಿದ್ದಾಗ ಅವುಗಳನ್ನು ನಂಬಬೇಡಿ ಎನ್ನುತ್ತಾರೆ.


ಅದರರ್ಥ ಮಾಧ್ಯಮಗಳು ತಮ್ಮ ಪಿಆರ್‌ಒಗಳಂತೆ ಕೆಲಸ ಮಾಡಬೇಕು ಎನ್ನುವುದು ಇವರ ನಿರೀಕ್ಷೆ. ಆದರೆ ಪಾಸಿಟಿವ್ ಆಗಿರುವ ಮಾಧ್ಯಮ ವಿಮರ್ಶೆಗಳನ್ನು ಅವರೇ ತಮ್ಮ ಜಾಹೀರಾತುಗಳಲ್ಲಿ ಬಳಸಿಕೊಳ್ಳುವುದನ್ನು ನೋಡಿದವರಿಗೆ ಅವುಗಳನ್ನು ನಂಬಬೇಕೇ ಬೇಡವೇ ಎಂದು ಥೇಟ್ ಥೇಟ್ರಲ್ಲಿ ಲೂಸಿಯಾ ನೋಡಿದ ಪ್ರೇಕ್ಷಕನಿಗೆ ಆಗುವಷ್ಟೇ ಕನ್‌ಫ್ಯೂಸ್ ಆಗುತ್ತದೆ.
ವಿಮರ್ಶಕರಲ್ಲಿ ಕೆಲವರು ಪೂರ್ವಾಗ್ರಹ ಪೀಡಿತರಿರಬಹುದು. ಆದರೆ ಎಲ್ಲರನ್ನೂ ಅನ್ಯಗ್ರಹದಿಂದ ಬಂದವರು ಎಂಬಂತೆಯೇ ನೋಡುವುದು ಎಷ್ಟು ಸರಿ. ಪತ್ರಕರ್ತರು ಸಿನಿಮಾ ಸೃಷ್ಟಿಕರ್ತರನ್ನು ತೆಗಳಿದಾಗ ಇಂಥ ಪ್ರತಿಕ್ರಿಯೆ ಸಾಮಾನ್ಯ. ಅಷ್ಟಕ್ಕೂ ಪತ್ರಕರ್ತರು ಪವನ್ ದ್ವೇಷಿಗಳಾಗಲು ಕಾರಣವಾದರೂ ಏನಿದೆ? ಥಿಯೇಟರ್‌ನಲ್ಲಿ ಬ್ಯಾಟರಿ ಬಿಡುವವನು ಸಿನಿಮಾ ನಾಯಕ ಆದಂತೆ ಕನಸು ಕಾಣುತಾ ್ತನೆ ಎಂದು ತಪ್ಪು ಕಲ್ಪನೆಯಿಂದ ವಿಮರ್ಶೆ ಬರೆದ ಪ್ರಮುಖ ಪತ್ರಿಕೆಯ ವಿಮರ್ಶಕರೊಬ್ಬರನ್ನು ಅವರಿಗೆ ಸಿನಿಮಾನೇ ಅರ್ಥ ಆಗಿಲ್ಲ  ಎಂದು ಆಡಿಕೊಳ್ಳುತ್ತಾರೆ ಇವರು. ಇಲ್ಲಿ ಆಸಕ್ತಿಕರ ವಿಷಯ ಎಂದರೆ ಕೆಲವು ವಿಮರ್ಶಕರು ಸಿನಿಮಾ ಓಕೆ ಆದರೆ ಕನ್‌ಫ್ಯೂಸಿಂಗ್ ಆಗಿದೆ, ಎಂದರೆ ಈ ವಿಮರ್ಶೆ ತಾನು ಕನ್‌ಫ್ಯೂಸ್ ಆಗಿರುವುದನ್ನು ಸಾಕ್ಷಿ ಸಮೇತ ತೋರಿಸುತ್ತದೆ. ಆ ಲೆಕ್ಕದಲ್ಲಿ ಹೇಳುವುದಾದರೆ ಆ ಪತ್ರಕರ್ತ ಬರೆದದ್ದೇ ಲೂಸಿಯಾ ಚಿತ್ರದ ಅತ್ಯುತ್ತಮ ಮತ್ತು ಪ್ರಾಮಾಣಿಕ ವಿಮರ್ಶೆ!
ಇನ್ನು ಲೂಸಿಯಾ ಚಿತ್ರವನ್ನು ಹೊಗಳುವ ಭರದಲ್ಲಿ ಇದುವರೆಗೆ ಬಂದ ಕನ್ನಡ ಚಿತ್ರಗಳನ್ನೆಲ್ಲಾ ತೆಗಳುವುದು ಈ ವರ್ಗದಲ್ಲಾಗುತ್ತಿರುವ ದೊಡ್ಡ ಅನರ್ಥ. ಲಾಂಗು ಮಚ್ಚುಗಳು ತಾಯಿ ಸೆಂಟಿಮೆಂಟ್ ಸಿನಿಮಾ ಮಾಡುವವರನ್ನು ಆಡಿಕೊಳ್ಳುವವರಿಗೆ ಒಂದು ವಿಷಯ ಗೊತ್ತಿರಲಿ. ಇಷ್ಟು ವರ್ಷಗಳವರೆಗೆ ಚಿತ್ರರಂಗವನ್ನು ಉಳಿಸಿರುವುದು, ಸೆಂಟಿಮೆಂಟ್, ಲಾಂಗು ಮಚ್ಚುಗಳನ್ನು ಬಳಸಿದ ಜನಪ್ರಿಯ ಕಮರ್ಷಿಯಲ್ ಸಿನಿಮಾಗಳೇ ಹೊರತು ಪ್ರಯೋಗಾತ್ಮಕ ಚಿತ್ರಗಳಲ್ಲ. ಅಂಥ ಚಿತ್ರಗಳು ಬಂದು ಉದ್ಯಮದಲ್ಲಿ ಒಂದಷ್ಟು ಹಣ ಹರಿದಾಡಿದರೆ, ಜನ  ಕನ್ನಡ ಚಿತ್ರಗಳ ಬಗ್ಗೆ ಮಾತನಾಡಿಕೊಂಡರೆ ಮಾತ್ರ ಇತರರು ಇಲ್ಲಿ ತಮ್ಮ ಪ್ರಯೋಗಗಳನ್ನು ಮಾಡಿಕೊಳ್ಳಲು ಸಾಧ್ಯ. ಆರ್ಥಿಕವಾಗಿ ಲೂಸಿಯಾ ಗೆದ್ದರೂ ಸೋತರೂ ಅದು ದೊಡ್ಡ ಹಣಕಾಸಿನ ಕ್ರಾಂತಿಯನ್ನೇನೂ ಮಾಡಲಾರದು. ಏಕೆಂದರೆ ಲೂಸಿಯಾ ಚಿತ್ರಕ್ಕೆ ಹಣ ಹಾಕಿದವರು ಹಲವರು. ಚಿತ್ರ ಸೋತರೂ ಆಗುವ ಲಾಸಿನ ಪ್ರಮಾಣವೂ ಹಂಚಿಹೋಗುತ್ತದೆ. ಗೆದ್ದರೆ ಲಾಭವೂ ಕೂಡ ಅಷ್ಟೇ. ಸೋತರೆ  ಯಾರೂ ಬೀದಿಗೆ ಬರುವುದಿಲ್ಲ. ಗೆದ್ದರೆ ಯಾರೂ ಕೋಟ್ಯಾಧಿಪತಿಗಳಾಗುವುದಿಲ್ಲ.
ಎಸ್. ನಾರಾಯಣ್, ಮಹೇಂದರ್, ಸಾಯಿಪ್ರಕಾಶ್‌ರಂಥ ನಿರ್ದೇಶಕರು ಹಲವು ವರ್ಷಗಳವರೆಗೆ ಚಿತ್ರರಂಗವನ್ನು ಹಿಡಿದು ನಿಲ್ಲಿಸಿದ್ದಾರೆ. ನೆನಪಿರಲಿ ಲೂಸಿಯಾ ಇನ್ನೂ ಪವನ್‌ರ ಎರಡನೇ ಚಿತ್ರವಷ್ಟೇ. ಲೂಸಿಯಾ ಚಿತ್ರ ಇಷ್ಟವಾಯ್ತು ಎಂಬ ಖುಷಿಯಲ್ಲಿ ಜನಪ್ರಿಯ ಚಿತ್ರಗಳನ್ನು, ಹಳೆಯ ಹಿರಿಯ ನಿರ್ದೇಶಕರನ್ನು, ಅವರ ಚಿತ್ರಗಳನ್ನು ತೆಗಳುವುದು ತೀರಾ ಹಾಸ್ಯಾಸ್ಪದ.
ಇನ್ನು ಯಾರಾದರೂ, 2013ರಲ್ಲಿ ನಾನು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಏಕೈಕ ಚಿತ್ರ ಲೂಸಿಯಾ, ಅದನ್ನು ಬಿಟ್ಟರೆ ದ್ಯಾವ್ರೇ ಎಂದರೆ ಅದರಲ್ಲೇ ಅವರ ವೈಯಕ್ತಿಕ ಹಿತಾಸಕ್ತಿ ಎದ್ದು ಕಾಣುತ್ತದೆ. ಜನವರಿಯಿಂದ ಇಲ್ಲಿಯವರೆಗೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಚಾರ್‌ಮಿನಾರ್, ಒಂದು ಮಟ್ಟಕ್ಕೆ ಮೈನಾ, ಬುಲ್‌ಬುಲ್, ಜಯಮ್ಮನ ಮಗ, ವಿಕ್ಟರಿ ಚಿತ್ರಗಳ ಯಶಸ್ಸು ಖುಷಿ ಕೊಟ್ಟಿಲ್ಲ ಎಂದರೆ ಅವರನ್ನು ಚಿತ್ರಪ್ರೇಮಿ ಎಂದು ಒಪ್ಪಿಕೊಳ್ಳುವುದು ಹೇಗೆ, ಇದು ಕೇವಲ ಪಿಆರ್‌ಒ ಕೆಲಸ ಎಂಬುದಕ್ಕೆ ಇದು ಸಾಕ್ಷಿಯಾಗಬಹುದು.
ಒಟ್ಟಿನಲ್ಲಿ ಆನ್‌ಲೈನ್ ಡಿಸ್ಟ್ರಿಬ್ಯೂಟರ್‌ಗಳಂತೆ ಆನ್‌ಲೈನ್ ಪ್ರಚಾರಕರ್ತರ ಸಂಖ್ಯೆಯೂ ದೊಡ್ಡದಿದೆ. ಅವರ ಆರ್ಭಟ ನೋಡಿದರೆ ಲೂಸಿಯಾ ಬಗ್ಗೆ ಮಾತನಾಡದಿರುವುದೇ ಲೇಸು ಎಂಬಂಥ ಪರಿಸ್ಥಿತಿ. ಹಾಗೆ ನೋಡುವುದಾದರೆ, ಬಿಡುಗಡೆಗೆ ಮುನ್ನವೇ ಅವಾರ್ಡ್‌ಗಳನ್ನು ಪಡೆದುಕೊಂಡು ಬಂದು, ನಮಗೆ ಗ್ಲೋಬಲ್ ಮಟ್ಟದಲ್ಲಿ ಅವಾರ್ಡ್ ಬಂದಿದೆ. ಸೋ ಲೋಕಲ್ ಜನ ಏನೂ ಮಾತಾಡಂಗಿಲ್ಲ. ಸುಮ್ನೆ ಇದು ಒಳ್ಳೆ ಸಿನಿಮಾ ಎಂದು ಒಪ್ಕೊಬೇಕು ಎನ್ನುವ ಆರ್ಟ್ ಸಿನಿಮಾಗಳಿಗೂ ಲೂಸಿಯಾಗೂ ಅಂಥ ವ್ಯತ್ಯಾಸ ಏನಿಲ್ಲ. ಆದರೆ, ಲೂಸಿಯಾ ಸಿನಿಮಾವನ್ನು ಸಾರಾಸಗಟಾಗಿ ತಿರಸ್ಕರಿಸುವುದು ಸಾಧ್ಯವಿಲ್ಲ ಎಂಬುದು ಎಷ್ಟು ನಿಜವೋ, ಕೆಲವು ಪ್ರೇಕ್ಷಕರ ಒತ್ತಾಯದ ಮೇರೆಗೆ ಸಿನಿಮಾ ಚೆನ್ನಾಗಿದೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ನಿಜ. ಅಲ್ಲದೆ, ಒಂದು ಸಿನಿಮಾ ಚೆನ್ನಾಗಿದೆ ಎನಿಸಿದವನಿಗೆ ಅದನ್ನು ಹೇಳಿಕೊಳ್ಳುವ ಸ್ವಾತಂತ್ರ್ಯವಿದ್ದರೆ, ಚೆನ್ನಾಗಿಲ್ಲ ಎನಿಸಿದವನಿಗೂ ಆ ಸ್ವಾತಂತ್ರ್ಯ ಇರುವುದಿಲ್ಲವೇ. ಚೆನ್ನಾಗಿಲ್ಲ ಎಂದವರನ್ನು ವಿರೋಧಿಸಿದರೆ ಚೆನ್ನಾಗಿಲ್ಲ ಎನಿಸಿದವನಿಗೆ ಚೆನ್ನಾಗಿದೆ ಎನ್ನುವವರನ್ನೂ ವಿರೋಧಿಸಬೇಕು ಎನಿಸಬಹುದು. ಹಾಗಾಗಿ ನಮ್ಮ ನಮ್ಮ ಅಭಿಪ್ರಾಯಗಳು ಅನಿಸಿಕೆಗಳ ಮಟ್ಟದಲ್ಲೇ ಇದ್ದರೆ ಚೆನ್ನ. ಅದನ್ನು ಬಲವಂತವಾಗಿ ಹೇರುವ ಯತ್ನದಿಂದ ಮೂರು ಕಾಸಿನ ಉಪಯೋಗವೂ ಇಲ್ಲ. ಬದಲಾಗಿ ಚಿತ್ರದ ಪರವಾಗಿ ಅಲ್ಪ ಸ್ವಲ್ಪ ಸಾಫ್ಟ್ ಕಾರ್ನರ್ ಇದ್ದವರೂ ಭಂಡವಾದಕ್ಕಿಳಿಯಬಹುದಷ್ಟೆ ಹೊರತು ಬೇರೆ ಲಾಭವಿಲ್ಲ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com