ಇದಕ್ಕೂ ಅವರೇ ಬೇಕೆ?

ಇದಕ್ಕೂ ಅವರೇ ಬೇಕೆ?
Updated on: 

ಕನ್ನಡ ಚಿತ್ರಗಳಲ್ಲಿ ಪರಭಾಷೆಯ ನಟ ನಟಿಯರು ತಂತ್ರಜ್ಞರು ಆವರಿಸಿಕೊಂಡಿರುವುದು ಹೊಸ ವಿಷಯ ಏನಲ್ಲ. ಅಲ್ಲದೆ ಕಲೆಯ ವಿಷಯದಲ್ಲಿ ಭಾಷಾ ಭೇದ ಬೇಡ ಎಂಬುದು ಕನ್ನಡಿಗರ ಬಿಟ್ಟು ಮನಸ್ಸಿನ ಮಾತು. ಅದೆಲ್ಲಾ ನಿಜ. ಆದರೆ ನಮ್ಮ ಚಿತ್ರರಂಗದಲ್ಲಿ ಹಲವಾರು ಪ್ರತಿಭೆಗಳಿರುವಾಗಲೂ ಅನವಶ್ಯಕವಾಗಿ ಪರಭಾಷಿಕರನ್ನು ತರುವ ಕೆಲಸ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕೋಮಲ್ ಅಭಿನಯದ 'ಪ್ಯಾರ್‌ಗೆ ಆಗ್‌ಬಿಟ್ಟೈತೆ' ಚಿತ್ರ ಒಂದು ಮರಾಠಿ ನಾಟಕ ಆಧರಿಸಿದ್ದು. ಹಾಗಾಗಿ ಚಿತ್ರಕಥೆಯಲ್ಲಿ ಹೊಸತೇನೂ ಇರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಅಲ್ಲದೆ ಅದನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡಿಗರೇ ಚಿತ್ರಕಥೆ, ಸಂಭಾಷಣೆ ಬರೆದ ಮೇಲೆ ಅದನ್ನು ನಿರ್ದೇಶಿಸಲು ಮಾತ್ರ ಕವಿನ್ ಬಾಲಾ ಎಂಬ ತಮಿಳು ನಿರ್ದೇಶಕರ ಅವಶ್ಯಕತೆ ಏನಿತ್ತು ಎಂಬುದು ಎಲ್ಲರ ಕುತೂಹಲ. ಅದರ ಬದಲು ಕನ್ನಡ ಚಿತ್ರರಂಗದಲ್ಲಿ ಬೆಳೆಯಲು ಯತ್ನಿಸುತ್ತಿರುವ ಯಾವುದಾದರೂ ಅಪ್ಪಟ ಕನ್ನಡದ ಹುಡುಗನಿಗೆ ನಿರ್ದೇಶನದ ಅವಕಾಶವನ್ನು ಕೊಟ್ಟಿದ್ದರೆ ಅವನಿಗೆ ಒಂದಿಷ್ಟು ಎಕ್ಸ್‌ಪೋಷರ್ ಆದರೂ ಸಿಗುತ್ತಿತ್ತು. ಕೋಮಲ್‌ರಂಥ ಅನುಭವಿ ನಟ, ಮತ್ತು ಎಲ್ಲವೂ  ರೆಡಿಯಾಗಿ ಕೂತಿರುವ ಚಿತ್ರಕಥೆ ಸಂಭಾಷಣೆ ಇದ್ದಾಗ ಅದನ್ನು ನಿರ್ದೇಶಿಸಲು ಯಾವ ಮಾಸ್ಟರ್ ಮೈಂಡ್‌ನ ಅಗತ್ಯವೂ ಇರಲಿಲ್ಲ, ಇಂಥ ರೆಡಿಮೇಡ್ ಫುಡ್ ಇದ್ದಾಗಲೂ ನಿರ್ಮಾಪಕರಿಗೆ ಪರಭಾಷೆಯ ನಿರ್ದೇಶಕರ ಮೇಲೆ ಪ್ಯಾರ್‌ಗೆ ಆಗ್‌ಬಿಡ್‌ತೈತೋ ಗೊತ್ತಿಲ್ಲ ಎಂಬುದು ಸಿನಿಮಾ ನೋಡಿದವರ ಅಬಿಪ್ರಾಯ. ಅಂದಹಾಗೆ ಇದು ಕೇವಲ ಪ್ಯಾರ್‌ಗೆ ಆಗ್‌ಬಿಟ್ಟೈತೆ ಎಂಬ ಚಿತ್ರವೊಂದಕ್ಕೆ ಸಂಬಂಧಪಟ್ಟ ಕಥೆ ಖಂಡಿತ ಅಲ್ಲ. ಹುಡುಕಿದರೆ ನಮ್ಮ ಚಿತ್ರರಂಗದಲ್ಲಿ ಇಂಥ ವಿಸ್ಮಯಗಳು ಅನೇಕ. ತೀರಾ ಅದ್ಭುತ ಪ್ರತಿಭೆ ಇದ್ದಾಗ ಆಮದಾಗುವ ನಟ, ತಂತ್ರಜ್ಞರ ಬಗ್ಗೆ ಯಾರ ತಕರಾರೂ ಇಲ್ಲ. ಆದರೆ ಅನವಶ್ಯಕವಾಗಿ ಇಂಥ ವಲಸೆ ಪ್ರೋಗ್ರಾಮ್‌ಗಳು ಬೇಕೆ ಎಂಬುದು ಮಾತ್ರ ಕನ್ನಡ ಚಿತ್ರಪ್ರೇಮಿಗಳ ಪ್ರಶ್ನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com