ಕನ್ನಡ ಈಗ ಕೇವಲ ಮಾತೃಭಾಷೆ

ಕನ್ನಡ ಈಗ ಕೇವಲ ಮಾತೃಭಾಷೆ
Updated on: 

ಮೊನ್ನೆ ತಮ್ಮ 'ಒಗ್ಗರಣೆ' ಚಿತ್ರದ ಪತ್ರಿಕಾಗೋಷ್ಠಿಗಾಗಿ ಬಹುಭಾಷಾ ನಟ ಪ್ರಕಾಶ್ ರೈ ಬೆಂಗಳೂರಿಗೆ ಬಂದಿದ್ದರು. ಪತ್ರಕರ್ತರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಪ್ರಕಾಶ್ ಅವರಿಗೆ ಒಂದು ಕರೆ ಬಂತು. ಅದು ಅವರ ತಾಯಿಯದ್ದು. 'ಅಮ್ಮಾ, ಹೊಸ ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದೆ. ಇನ್ಮೇಲೆ ಸ್ವಲ್ಪ ದಿನ ಮೈಸೂರಲ್ಲೇ ಕುಟುಂಬ ಸಮೇತ ಝಂಡಾ ಊರೋಣ' ಎಂದಾಗ ಅವರ ತಾಯಿಗೆ ಇನ್ನಿಲ್ಲದ ಸಂತೋಷ. ಆದರೆ, ಕನ್ನಡದಲ್ಲಿ ಸರಿಯಾದ ವೇದಿಕೆ ಸಿಗದೆ ತಮಿಳು ಚಿತ್ರರಂಗದಲ್ಲಿ ಸಿಕ್ಕ ಬೆಂಬಲದಿಂದ ತಮ್ಮ ಬದುಕು ಕಟ್ಟಿಕೊಂಡಿರುವ ಪ್ರಕಾಶ್ ರೈ  ಅವರಿಗೆ ಸಹಜವಾಗಿ ತಮಿಳಿನ ಮೇಲೆ ವ್ಯಾಮೋಹ ಹೆಚ್ಚು. 'ನಾನು ನನ್ನ ಕನಸು' ಚಿತ್ರದ ಸಂದಂರ್ಭದಲ್ಲಿ ಬೆಂಗಳೂರಿಗೆ ಬಂದಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅವರು ನೀಡುವ ಬೆಂಬಲ ನೋಡಿದಾಗಲೇ ಅದು ಗೊತ್ತಾಗಿತ್ತು. ಅಮ್ಮನನ್ನು ಕುರಿತು ಪ್ರಕಾಶ್ 'ಬೆಂಗಳೂರಿಗೆ ಬರೋದು ಅಂದ್ರೆ ನಿಂಗೆ ಎಷ್ಟೊಂದ್ ಖುಷಿ ನೋಡು' ಎಂದಾಗ 'ಎಷ್ಟೇ ಆದ್ರೂ ಅದು ನಮ್ಮೂರಲ್ವೇನಪ್ಪ' ಎಂಬುದು ಅಮ್ಮನಿಂದ ಬಂದ ಉತ್ತರ. 'ಅದೇನೋ ಸರಿ, ಆದ್ರೆ ನಿನ್ನ ಆಸ್ಪತ್ರೆ ಬಿಲ್ ಕೊಡೋದು ಯಾರು? ಕರ್ನಾಟಕನಾ? ತಮಿಳ್‌ನಾಡಾ?' ಎನ್ನುತ್ತಾ ಪ್ರಕಾಶ್ ಮೆಲ್ಲನೆ ಅಮ್ಮನನ್ನು ರೇಗಿಸಲು ಯತ್ನಿಸುತ್ತಿದ್ದರೂ ಅಮ್ಮ ಮಾತ್ರ ತಮ್ಮ ಕನ್ನಡ ಮಾತಿಗೇ ಅಂಟಿಕೊಂಡಿದ್ದರು. ತಾಯಿಯ ಬಗ್ಗೆ ಮಾತನಾಡುತ್ತ್ತಾ ಪ್ರಕಾಶ್ 'ನಮ್ಮ ಮನೆಯಲ್ಲಿ ಈಗ ಕನ್ನಡವರಾಗಿ ಉಳಿದಿರುವುದು ಎಂದರೆ ಅಮ್ಮ ಮಾತ್ರ. ಮಕ್ಕಳು ಮೊಮ್ಮಕ್ಕಳೆಲ್ಲ ತೆಲುಗು, ತಮಿಳು, ಮಲಯಾಳ ಂ ಭಾಷೆಗಳಲ್ಲಿ ಹಂಚಿಹೋಗಿದ್ದರೂ ಅಮ್ಮನಿಗೆ ಮಾತ್ರ ಇನ್ನೂ ಕರ್ನಾಟಕ ಎಂದರೆ ಅದೇನೋ ಖುಷಿ' ಎಂದರು. ಎಷ್ಟೇ ಆದರೂ ಅದು ಮಾತೃ ಹೃದಯ. ಹಾಗಾಗಿ ಪ್ರಕಾಶ್ ರೈ ಪರಿವಾರದಲ್ಲಿ ಈಗ ಕನ್ನಡ ಕೇವಲ 'ಮಾತೃ'ಭಾಷೆಯಾಗಿ ಉಳಿದುಕೊಂಡಿದೆ ಎನ್ನಬಹುದು.  

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com