

ಈ ತಾರುಣ್ಯವೇ ಹೀಗೇರೀ, ಮನಸ್ಸಿನೊಳಗೆ ನೂರೆಂಟು ಬಣ್ಣ ಬಣ್ಣದ ಕನಸುಗಳ್ರೀ, ಹೃದಯದೊಳಗೆ ಹತ್ತು ಹಲವು ಬಯಕೆಗಳೂ ರೀ, ಅದನ್ನು ದಕ್ಕಿಸಿಕೊಳ್ಳಲು ಜಂಜಾಟ ಪಡಬೇಕ್ರಿ, ಇದು ಪ್ರೀತಿ ಪ್ರೇಮಗಳ ಸುಳಿಯಲ್ಲಿ ಸಿಕ್ಕವರ ಪರದಾಟ ಕಣ್ರಿ...ಎನ್ನುವ ಪ್ರೇಮಕಥೆ ಹಾಗೂ ಹಾಸ್ಯಮಿಶ್ರಿತ ಸಿನಿಮಾ ದಿಲ್ ರಂಗೀಲಾ.
ಇಷ್ಟೆಲ್ಲ ರೀ, ಕಣ್ರೀ ಗಳನ್ನು ಹೇಲಿದ ಮೇಲೆ ಈ ಚಿತ್ರದ ನಾಯಕ ಗೋಲ್ಡನ್ಸ್ಟಾರ್ ಗಣೇಶ್ ಎಂಬುದನ್ನು ಸೆಪರೇಟ್ ಆಗಿ ಹೇಳಬೇಕಿಲ್ಲ. ಆದರೆ ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯರು ಇಬ್ಬರು. ರಚಿತಾ ರಾಮ್ ಹಾಗೂ ಪ್ರಿಯಾಂಕ ರಾವ್. ಹಾಗಾಗಿ, ಸಾಮಾನ್ಯವಾಗಿ ತಾನು ಇಷ್ಟ ಪಡುವ ನಾಯಕಿ ಸಿಗದೆ ಪರದಾಡುವ ಹಾಗೂ ತ್ಯಾಗ ಮಾಡುವ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಗಣೇಶ್ಗೆ ಈ ಚಿತ್ರದಲ್ಲಿ ಅಟ್ಲೀಸ್ಟ್ ಒಬ್ಳಾದ್ರೂ ಸಿಕ್ಕೇ ಸಿಕ್ತಾಳೆ ಎಂಬುದು ಅಭಿಮಾನಿಗಳಿಗೆ ಸಂತಸದ ಸಂಗತಿಯಾದರೂ, ಅದು ಯಾರು ಎಂಬ ಕುತೂಹಲವಂತೂ ಇದೆ.
ಮೈಸೂರಿನಲ್ಲಿ ಹೊಸದಾಗಿ ಆರಂಭವಾಗಿರುವ ಕಂಟ್ರಿ ಇನ್ ಹೊಟೇಲ್ನ ಉದ್ಘಾಟನೆ ಕೂಡ ಅಂದಿನ ಆಕರ್ಷಣೆಯಾಗಿತ್ತು. ಸಹಕಾರ ಸಚಿವ ಮಹದೇವ್ ಪ್ರಸಾದ್ ಅವರೊಂದಿಗೆ ಗಣೇಶ್ ಕೂಡ ಉದ್ಘಾಟನೆಯ ಕೆಲಸಕ್ಕೆ ಸಹಕಾರ ನೀಡಿದರು.
ದಿಲ್ ರಂಗೀಲಾ ಚಿತ್ರದ ನಿರ್ಮಾಪಕ ಕೆ.ಮಂಜು. ಕಾರ್ಯಕ್ರಮದ ನಿರೂಪಕರಾಗಿದ್ದ ರವೀಂದ್ರ ಜೋಷಿ ಕನ್ನಡ ಚಿತ್ರರಂಗಕ್ಕೆ ಕಮಲ್ಹಾಸನ್, ರೆಹಮಾನ್, ಮಮ್ಮೂಟಿ ಅವರಂಥ ದಿಗ್ಗಜರನ್ನು ಕರೆದು ತಂದ ನಿರ್ಮಾಪಕ ಕೆ. ಮಂಜು ನಿಜಕ್ಕೂ ಗಂಡುಗಲಿಯೇ. ಈಗ ಅವರು ಪ್ರೀತಮ್ ಗುಬ್ಬಿ ಮತ್ತು ಗಣೇಶ್ರನ್ನು ಒಂದಾಗಿಸಿದ್ದಾರೆ. ಇದೊಂದು ಅಪರೂಪದ ಸಂಗಮ, ಸಂಭ್ರಮ ಎಂದರು.
ಎರಡು ಹಿಂದಿ ಚಿತ್ರಗಳ ಹೆಸರು ಸೇರಿಸಿ ಒಂದು ಕನ್ನಡ ಚಿತ್ರ ಮಾಡಲು ಹೊರಟಿದ್ದಾರೆ ನಿರ್ದೇಶಕ ಪ್ರೀತಮ್ ಗುಬ್ಬಿ. ಆದರೆ ಚಿತ್ರದ ಕಥೆ ಯಾವ ಚಿತ್ರದ್ದಿರಬಹುದು ಎಂದು ಊಹಿಸಿದವರಿಗೆ ಯಾವ ಬಹುಮಾನವೂ ಇಲ್ಲ. ಏಕೆಂದರೆ ಇದು ಪ್ರೀತಮ್ ಅವರ ಸ್ವಂತ ಕಥೆ. ಪ್ರೀತಮ್ ನನ್ನ ಗೆಳೆಯ ಹಾಗಾಗಿ ಅವನೊಂದಿಗೆ ಕೆಲಸ ಸಲೀಸು ಎಂದ ಗಣೇಶ್ ಈಗಾಗಲೇ ಎರಡು ಚಿತ್ರಗಳಲ್ಲಿ ಪ್ರೀತಮ್ ಜೊತೆಯಾಗಿ ಕೆಲಸ ಮಾಡಿದ್ದೇನೆ, ಇನ್ನು ಅರಮನೆ ಹಾಗೂ ಶೈಲೂ ನಂತರ ಕೆ. ಮಂಜು ನಿರ್ಮಾಣದಲ್ಲಿ ಇದು ನನ್ನ ಮೂರನೇ ಚಿತ್ರ. ಹಾಗಾಗಿ ಎಲ್ಲವೂ ಹೂವೆತ್ತಿದಂತೆ ಆಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.
ಬುಲ್ಬುಲ್ ಹುಡುಗಿ ರಚಿತಾ ರಾಮ್ ಜೊತೆ ಮೈಸೂರು ಹುಡುಗಿ ಪ್ರಿಯಾಂಕ ರಾವ್ ಎಂಬ ಹೊಸಮುಖ ಗಣೇಶ್ರೆ ದಿಲ್ ಅನ್ನು ರಂಗೀಲಾ ಮಾಡಲಿದ್ದಾರೆ. ಪ್ರಿಯಾಂಕಾಗೆ ಕನ್ನಡದಲ್ಲಿ ಇದು ಮೊದಲ ಅವಕಾಶವಾಗಿದ್ದರೂ, ತೆಲುಗಿನ ವಿನಿಂಥಕಥಾ ಚಿತ್ರದಲ್ಲಿ ಅಭಿನಯಿಸಿದ ಅನುಭವವಿದೆ. ಮೈಸೂರಿನ ಎಸ್ಡಿಎಂ ಕಾಲೇಜಿನಲ್ಲಿ ಬಿಬಿಎಂ ಪದವಿ ಪದೆದಿರುವ ಈ ಚೆಲುವೆ, ಸಂಗೀತಗಾರರ ಮನೆತನದವರು. ಅಭಿನಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಚಿತ್ರರಂಗದಲ್ಲಿಯೇ ಸಾಧನೆ ಮಾಡುವ ಬಯಕೆ.
ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಮಾತನಾಡಿ, ಮುಂಗಾರು ಮಳೆ ಸಿನಿಮಾವನ್ನು ನಾನು ನನ್ನ ಪತ್ನಿ ಗೀತಾ ಬೆಂಗಳೂರಿನ ವೈಭವ್ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದುಂಟು. ನಂತರ ಚಿತ್ರ ಮಂದಿರದತ್ತ ಹೆಚ್ಚು ಹೋಗಲು ಸಾಧ್ಯವಾಗಿಲ್ಲ. ಆದರೆ ಮನೆಯಲ್ಲಿ ಟಿವಿ ಮೂಲಕ ಸಿನಿಮಾ ನೋಡುತ್ತೇನೆ. ಗಣೇಶ್ ಕನ್ನಡ
ಚಿತ್ರರಂಗದ ಉತ್ತಮ ಕಲಾವಿದರಲ್ಲೊಬ್ಬರು ಎಂದರು.
ಕೆ. ಮಂಜು ನಿರ್ಮಾಣದ 37 ನೇ ಚಿತ್ರ 'ದಿಲ್ ರಂಗೀಲಾ' ಚಿತ್ರೀಕರಣ ಮೈಸೂರಿನ ಸುತ್ತಮುತ್ತ ನಡೆದಿದ್ದು, ಇಲ್ಲಿನ ಬೃಂದಾವನ ಸೇರಿದಂತೆ ವಿವಿಧ ಸುಂದರ ತಾಣದಲ್ಲೂ ಚಿತ್ರೀಕರಣ ನಡೆಯಲಿದೆ. ಎಚ್.ಸಿ. ವೇಣು ಛಾಯಾಗ್ರಹಣ. ಅರ್ಜುನ್ ಜನ್ಯ ಸಂಗೀತವಿದ್ದು ರಂಗಾಯಣ ರಘು, ಅಚ್ಯುತ್ ಕುಮಾರ್, ಶ್ರೀನಿಧಿ, ಯಮುನ, ಗಿರಿ ಪ್ರಮುಖ ಪಾತ್ರದಲ್ಲಿದ್ದಾರೆ.
ಮೈಸೂರಲ್ಲಿ ಸ್ಟುಡಿಯೋ ನಿರ್ಮಿಸುವಾಸೆ
ಮೈಸೂರಿನಲ್ಲಿ ಸ್ಟುಡಿಯೋ ನಿರ್ಮಿಸುವಾಸೆ ಇದೆ ಎನ್ನುತ್ತಾ ನಿರ್ಮಾಪಕ ಕೆ. ಮಂಜು ತಮ್ಮ ಮನದಾಳದ
ಮಾತು ವ್ಯಕ್ತ ಪಡಿಸಿದರು. ಬೆಂಗಳೂರಿನಲ್ಲಿ ತುಂಬ ಟ್ರಾಫಿಕ್ ಸಮಸ್ಯೆ, ಇದರಿಂದಾಗಿ ಸಮಯಕ್ಕೆ ಸರಿಯಾಗಿ ಚಿತ್ರೀಕರಣ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಯಾವುದೇ ಟ್ರಾಫಿಕ್ ತೊಂದರೆಯಿಲ್ಲದ, ಪ್ರಶಾಂತ ವಾತಾವರಣ ಇರುವ ಮೈಸೂರಿನಲ್ಲಿ ಸ್ಟುಡಿಯೋ ನಿರ್ಮಿಸಿದರೆ ಉದ್ಯಮಕ್ಕೆ ತುಂಬ ಅನುಕೂಲ. ಇದಕ್ಕೆ ಅಗತ್ಯ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದರೆ ಸ್ಟುಡಿಯೋ ನಿರ್ಮಿಸಲು ಸಿದ್ಧ ಎನ್ನುತ್ತಾರೆ ಮಂಜು.
ಪಾರಂಪರಿಕ ಕಟ್ಟಡಗಳಲ್ಲಿ ಚಿತ್ರೀಕರಣ ನಡೆಸದಂತೆ ಸರ್ಕಾರ ನಿಷೇಧಿಸಿರುವುದು ಸರಿಯಲ್ಲ. ಇಂತಹ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಅಂತಹ ಸುಂದರ ಕಟ್ಟಡಗಳು ಹಾಗೂ ತಾಣಗಳಿಗೆ ಯಾವುದೇ ದಕ್ಕೆ ಆಗದಂತೆ ಬಳಸಿಕೊಳ್ಳಲಾಗುವುದು. ಅದರಿಂದ ಸರ್ಕಾರಕ್ಕೂ ಆದಾಯ ಎಂದ ಅವರು, ಚಿತ್ರರಂಗದಲ್ಲಿ ಸೋಲು ಗೆಲುವು ಸಹಜ. ಸಿನಿಮಾ ನಿರ್ಮಾಣಕ್ಕೆ ಮೊದಲ ಆದ್ಯತೆ. ಜತೆಗೆ ರಾಜಕೀಯದಲ್ಲೂ ಆಸಕ್ತಿ ಇರುವುದರಿಂದ ಮುಂದಿನ ದಿನಗಳಲ್ಲಿ ಆ ಕ್ಷೇತ್ರದಲ್ಲಿಯೂ ಯಶಸ್ಸು ಗಳಿಸುವ ವಿಶ್ವಾಸವಿದೆ ಎನ್ನುವುದನ್ನು ಮರೆಯಲಿಲ್ಲ.
- ಮಾ. ವೆಂಕಟೇಶ್