

ಲೂಸ್ ಮಾದ ಯೋಗೀಶ್, ಯುವನಟ ಶ್ರೀಕಿ ಅವರ ಚಿತ್ರಗಳು ಡಬ್ಬಾದಲ್ಲೇ ಇದ್ದರೆ ಹೋಗಲಿ ಬಿಡಪ್ಪಾ ಎನ್ನಬಹುದು. ಆದರೆ ನವರಸನಾಯಕ ಜಗ್ಗೇಶ್ರ ಮೂರು ಚಿತ್ರಗಳು ಕೂಡ ತೊಂದರೆ ಅನುಭವಿಸುತ್ತಿರುವುದು ವಿಚಿತ್ರ. ಆದರೆ ಈ ಬಗ್ಗೆ ಕೇಳಿದರೆ, ಅದಕ್ಕೆ ಸಚಿತ್ರ ವಿವರ ಕೊಡುತ್ತಾರೆ ಜಗ್ಗೇಶ್. ನಿಮ್ಮ 'ಕೂಲ್ ಗಣೇಶ', 'ಅಗ್ರಜ', 'ನೀರ್ದೋಸೆ' ಚಿತ್ರಗಳು ಯಾವಾಗ ಬರೋದು? ಎಂದು ಕೇಳಿದರೆ ಜಗ್ಗೇಶ್ ಹೇಳುವುದಿಷ್ಟು, 'ಅಗ್ರಜ ಸಿನಿಮಾಕ್ಕೆ ನನ್ನ ಎಲ್ಲ ಕೆಲಸ ಮಾಡಿದ್ದೇನೆ. ದರ್ಶನ್ ಅವರ ಡಬ್ಬಿಂಗ್ ಆಗಿಲ್ಲ ಎಂಬ ಕಾರಣಕ್ಕೆ ತಡ ಆಗುತ್ತಿದೆ. ಅವರು ಬೃಂದಾವನ ಕೆಲಸ ಮುಗೀಲಿ, ಆಮೇಲೆ ಡಬ್ಬಿಂಗ್ ಮಾಡಿಕೊಡ್ತೀನಿ ಅಂದ್ರು. ಈಗ ಅದರ ಬಿಡುಗಡೆಯ ಬಿಸಿಯಲ್ಲಿದ್ದಾರೆ. ಅದಾದ ನಂತರ ಬೃಂದಾವನ ಶತದಿನೋತ್ಸವ ಆದಮೇಲೋ ಅಥವಾ ವಿರಾಟ್ ಚಿತ್ರ ಮುಗಿದ ಮೇಲೋ ಡಬ್ಬಿಂಗ್ ಮಾಡಿಕೊಟ್ಟರೆ 'ಅಗ್ರಜ' ಬಿಡುಗಡೆಯಾಗುತ್ತಾನೆ. ಇನ್ನು 'ನೀರ್ದೋಸೆ' ನಮ್ಮ ಎಂ.ಪಿ. ರಮ್ಯಾ ಅವರಿಗಾಗಿ ಕಾಯುತ್ತಿದೆ. ಅವರು 'ಬರ್ತೀನಿ, ಬರ್ತೀನಿ' ಅಂತಿದಾರೆ. ಅವರು ಬಂದಮೇಲೆ ನೀರುದೋಸೆ ಕಾಯುತ್ತೆ. 'ಕೂಲ್ ಗಣೇಶ' ಚಿತ್ರದ ನಿರ್ಮಾಪಕರು ದಾರೀಲಿ ಹೋಗೋರು ಯಾರಾದ್ರೂ ಒಂದ್ ಹತ್ತು ಕೋಟಿ ದುಡ್ ಕೊಟ್ರೆ ನಾನು ಇಮ್ಮೀಡಿಯೆಟ್ಟಾಗಿ ರಿಲೀಸ್ ಮಾಡ್ತೀನಿ ಅಂತಿದಾರೆ. ಅವರಿಗೆ ಅಂಥವರು ಯಾರಾದ್ರೂ ಸಿಕ್ರೆ ಖಂಡಿತ ಆದಷ್ಟು ಬೇಗ ಅದೂ ಬಿಡುಗಡೆಯಾಗುತ್ತೆ. ಹಂಗಾಗಿ, ನಾನೂ ಕಾಯೋವರೆಗೂ ಕಾದು, ನನ್ ಕೆಲಸ ಮುಗಿದಿದೆ. ಬರ್ತೀನಿ ಅಂತ ಹೇಳಿ ಈಗ ಮೂರು ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದೇನೆ. ಅದರಲ್ಲಿ ಒಂದು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಒಂದು ಹಾಲಿವುಡ್ ಚಿತ್ರದ ಸ್ಫೂರ್ತಿಯಿಂದ ತಯಾರಾಗುತ್ತಿರುವ ಚಿತ್ರ ಅದು. ಹೊಸ ನಿರ್ದೇಶಕರು. ಇದೊಂದು ಹಿಲೇರಿಯಸ್ ಕಾಮಿಡಿ ಚಿತ್ರ. ಸದ್ಯಕ್ಕೆ ಶೀರ್ಷಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀರ್ಷಿಕೆ ಬಂದು ಒಂಥರಾ ಕಿರಿಕ್ ಇರೋವಂಥದ್ದು. ಯಾರಿಗಾದ್ರೂ ಗೊತ್ತಾದ್ರೆ ಎತ್ತಾಕ್ಕೊಂಡ್ಬಿಡ್ಬಹುದು. ಹಂಗಾಗಿ ರಿಜಿಸ್ಟರ್ ಆದಮೇಲೆ ಹೇಳ್ತೀನಿ. ಅದರ ಜೊತೆ ಇನ್ನೆರಡು ಚಿತ್ರಗಳ ಕಥೆ ಡಿಸ್ಕಸ್ ಮಾಡ್ತಾ ಇದೀನಿ. ಆದಷ್ಟು ಬೇಗ ಆ ಚಿತ್ರಗಳೂ ಶುರುವಾಗುತ್ವೆ'. ಹಾಗಾಗಿ ಸದ್ಯಕ್ಕೆ ಹಳೆಯ ಮೂರು ಚಿತ್ರಗಳ ನಂತರ ಮತ್ತೆ ಮೂರು ಹೊಸ ಚಿತ್ರಗಳ ಸರದಾರ ಆಗಲು ಹೊರಟಿರುವ ಜಗ್ಗೇಶ್ ಹ್ಯಾಟ್ರಿಕ್ ಹೀರೋ ಆಗಲು ತಯಾರಾಗುತ್ತಿದ್ದಾರೆ ಎನ್ನಬಹುದು.
- ಹ್ಯಾರಿ