

ರೇಬಾನ್ ಕನಸಿನ ಕಂಗಳ ಸೋಹನ್
ಉಳಿದವರು ಕಂಡಂತೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ, ವಿರೋಧಾಭಾಸಗಳ ವಿಮರ್ಶೆಗಳು ಬಂದಿದ್ದರೂ, ಒಂದು ಅಪರೂಪದ ಪ್ರಯತ್ನವಾಗಿ, ಹಲವು ವಿಶೇಷಗಳ ಸಂಕಲನವಾಗಿ ಈ ಚಿತ್ರ ಭಾರತೀಯ ಸಿನಿಮಾಗಳ ಇತಿಹಾಸಪುಟದಲ್ಲಿ ಸ್ಥಾನ ಗಳಿಸಿಕೊಳ್ಳುವುದು ಖಂಡಿತ. ಮುಂದೊಂದು ದಿನ ಈ ಚಿತ್ರ ಕ್ಲಾಸಿಕ್ ಎಂಬಂತೆ ನೋಡಿಸಿಕೊಳ್ಳಬಹುದು. ಅದಿರಲಿ, ಚಿತ್ರದ ಬಗ್ಗೆ ಏನೇ ಮಾತನಾಡಿದವರೂ ಕೂಡ, ಚಿತ್ರದ ಡೆಮೋಕ್ರಸಿ ಪಾತ್ರದ ಬಗ್ಗೆ ಮಾತ್ರ ಹೊಗಳಿದ್ದೇ ಹೊಗಳಿದ್ದು. ರಕ್ಷಿತ್ಶೆಟ್ಟಿ ಸೃಷ್ಟಿಸಿದ ಆ ಪಾತ್ರವೇ ಹಾಗಿದೆ. ಅಂಥಾ ವಿಶೇಷ ಪಾತ್ರವನ್ನು ಅಷ್ಟೇ ಸೊಗಸಾಗಿ ನಟಿಸಿ ಎಲ್ಲರ ಮನೆಮಾತಾಗಿರುವ ಪುಟಾಣಿಯ ಹೆಸರು ಸೋಹನ್. ಕಣ್ಣಲ್ಲೇ ಮಾತಾಡುವ ರೇಬಾನ್ ಕನ್ನಡಕಕ್ಕಾಗಿ ಆಸೆ ಪಡುವ, ಕಿಶೋರ್ನ ಮೌನಸಾಗರದಲ್ಲಿ ತನ್ನ ಪಟ್ಪಟ್ಪಟಾಕಿ ಮಾತಿನ ಮೂಲಕ ಅಲೆಯೆಬ್ಬಿಸುವ, ಐಸ್ಕ್ಯಾಂಡಿ ಕೊಡುವಾಗ ಯಾಮಾರಿಸುವ, ಮೆಡಿಸಿನ್ ಪೇಪರ್ ಹಾಡಿನಲ್ಲಿ ಕುಣಿದು ಕುಪ್ಪಳಿಸುವ ಈ ಬ್ರಹ್ಮಾವರದ ಚಿಣ್ಣ ಇದೀಗ ರಕ್ಷಿತ್ ಶೆಟ್ಟಿಯ ನಂತರ ಅತಿ ಹೆಚ್ಚು ಮೆಚ್ಚುಗೆ ಪಡೆದ ಪಾತ್ರಧಾರಿ. ವಯಸ್ಸಿಗೆ ಮೀರಿದ ಮಾತುಗಳ ಪಾತ್ರಗಳೇ ಬಾಲನಟರಿಗೆ ಅನಿವಾರ್ಯ ಆಗಿರುವಾಗ ಹೀಗೊಂದು ಪಾತ್ರ ಸೃಷ್ಟಿಸಿ ಅದಕ್ಕೆ ಹಲವು ಆಯಾಮ ನೀಡಿದ್ದು ರಕ್ಷಿತ್ ಶೆಟ್ಟಿ. ಈ ಪಾತ್ರ ಮನಸಲ್ಲಿಟ್ಟುಕೊಂಡು ಉಡುಪಿ ಮಂಗಳೂರು ಬ್ರಹ್ಮಾವರದಲ್ಲಿ ಆಡಿಷನ್ ಮಾಡಿದ್ದ ರಕ್ಷಿತ್ ಕೊನೆಗೆ ಆಯ್ಕೆ ಮಾಡಿದ್ದು ಸೋಹನ್ನನ್ನು. ಸುಲಲಿತವಾಗಿ ದಕ್ಷಿಣ ಕನ್ನಡದ ಭಾಷೆಯನ್ನು ಮಾತನಾಡುವ ಈ ಹುಡುಗ ಈಗಷ್ಟೇ ಐದನೇ ಕ್ಲಾಸ್ ಪರೀಕ್ಷೆ ಬರೆದಿದ್ದಾನೆ. ತಾನು ನಟಿಸಿದ ಚೊಚ್ಚಲ ಚಿತ್ರ ನೋಡಲು ಬೆಂಗಳೂರಿಗೆ ಬಂದಿದ್ದ ಸೋಹನ್ ಎರಡು ಬಾರಿ ಸಿನಿಮಾ ನೋಡಿ ಖಾಸಗಿ ವಾಹಿನಿಯೊಂದಕ್ಕೆ ಇಂಟರ್ವ್ಯೂ ಕೂಡ ಕೊಟ್ಟು ಥ್ರಿಲ್ಲಾಗಿದ್ದಾನೆ. ಅವನು ಸಿನಿಮಾ ನೋಡಲು ಹೋಗ್ತಿದಾನೆ ಎಂಬ ಕಾರಣಕ್ಕೆ ಒಂದು ಪರೀಕ್ಷೆಯನ್ನೇ ಮುಂದೂಡಿದರಂತೆ ಅವನ ಶಾಲೆಯ ಆಡಳಿತ ಮಂಡಳಿ. ಇದಲ್ಲದೆ ಶೂಟಿಂಗ್ ಸಲುವಾಗಿ ಇಪ್ಪತ್ತು ದಿನ ರಜೆ ನೀಡಿದ ಶಿಕ್ಷಕರ ಸಹಕಾರಕ್ಕೆ ಸೋಹನ್ ತುಂಬಾ ಥ್ಯಾಂಕ್ಸ್ ಹೇಳುತ್ತಾನೆ. ಯಾವತ್ತೂ ಕ್ಯಾಮರಾಗೆ ಪೋಸ್ ಕೂಡ ನೀಡಿರದ ಸೋಹನ್ಗೆ ಪ್ರತಿಯೊಂದನ್ನೂ ರಕ್ಷಿತ್ ಶೆಟ್ಟಿ ಹೇಳಿಕೊಟ್ಟು ತೋರಿಸಿ ಅಭಿನಯ ಕಲಿಸಿದರಂತೆ. ತುಂಬಾ ಸಹಜ ಅಭಿನಯಕ್ಕೆ ಅವಕಾಶ ಇದ್ದಿದ್ದರಿಂದ ಅಭಿನಯಿಸಿದ್ದೇನೆ ಅನಿಸಲೇ ಇಲ್ಲ ಅನ್ನುವ ಈ ಮರಿತಾರೆಗೆ ತನ್ನ ಊರಿನ ಭಾಷೆಯ ಸಿನಿಮಾವೊಂದು ಇಷ್ಟೊಂದು ಹೆಸರು ಮಾಡುತ್ತಿರುವುದು ತಾನು ಅದರ ಭಾಗವಾಗಿರುವುದು, ಪತ್ರಿಕೆಯಲ್ಲಿ, ಟಿವಿಯಲ್ಲಿ, ಥೇಟರ್ಗಳಲ್ಲಿ ಎಲ್ಲೆಡೆ ಡೆಮೊಕ್ರಸಿ ಡೆಮೊಕ್ರಸಿ ಅಂತ ಮಾತನಾಡುತ್ತಿರುವುದನ್ನು ಕೇಳಿ ಖುಷಿಯೋ ಖುಷಿ. ಜಿಲ್ಲಾ ಪಂಚಾಯ್ತಿಯಲ್ಲಿ ಉದ್ಯೋಗಿಯಾಗಿರುವ ತಾಯಿ ಸುಕನ್ಮತಿಯವರಿಗೆ ಮಗನ ಪಾತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆ ನೋಡಿ ಸಂತಸ ಮತ್ತು ಗೊಂದಲ. ಇದು ಆಕಸ್ಮಿಕವಾಗಿ ಒದಗಿ ಬಂದ ಅವಕಾಶವೆಂದು ಒಪ್ಪಿದ್ದರೂ, ಭವಿಷ್ಯದಲ್ಲಿ ಓದಿನ ಕಡೆಗೆ ಹೆಚ್ಚು ಗಮನ ಹರಿಸಲಿ ಎಂಬ ಆಶಯ ಅವರದ್ದು.
ನಿಮಗೂ ಈ ಪೋರನ ಅಭಿನಯ ಇಷ್ಟವಾಗಿದ್ದಲ್ಲಿ ಒಮ್ಮೆ ಡೆಮೊಕ್ರಸಿಗೆ ಜೈ ಅನ್ನಿ.
-ನವೀನ್ ಸಾಗರ್