

'ಇನ್ಮೇಲೆ ನಾನು ಬಹುತೇಕ ಊರು ಬಿಟ್ಟಂತೆಯೇ'. ಯೋಗರಾಜ ಭಟ್ಟರು ಬಾಲಿವುಡ್ಗೆ ಹೋಗುತ್ತಾರಂತೆ ಎಂಬ ಸುದ್ದಿಯನ್ನು ಧೃಡೀಕರಿಸಿ ಸ್ವತಃ ಭಟ್ಟರೇ ಈ ಮಾತನ್ನು ಹೇಳಿದ್ದರು. ಆದರೆ ಸದ್ಯಕ್ಕೆ ಭಟ್ಟರು ಕನ್ನಡ ಚಿತ್ರ ಮಾಡುವ ಮನಸ್ಸು ಮಾಡಿದ್ದಾರೆ. ಅವರ ಹಿಂದಿ ಚಿತ್ರದ ನಿರ್ಮಾಣದಿಂದ ನಿರ್ಮಾಪಕ ಬಿ.ಸುರೇಶ್ ಹಿಂದೆ ಸರಿದಿದ್ದಾರೆ. ಅವರ ಜಾಗದಲ್ಲಿ ಬೇರೆಯವರು ಬಂದು ಭಟ್ಟರ ಹಿಂದಿ ಸಿನಿಮಾ ಶುರುವಾಗುವುದು ಗ್ಯಾರಂಟಿಯಾದರೂ ಅದು ಸದ್ಯಕ್ಕಿಲ್ಲ. ಸದ್ಯಕ್ಕೆ ಭಟ್ಟರ ಕೆಲಸ ಏನಿದ್ದರೂ ವಾಸ್ತು ಪ್ರಕಾರ. 'ಉಳಿದವರು ಕಂಡಂತೆ' ಫ್ಲಾಪ್ ಆದರೂ ಅದರ ನಿರ್ದೇಶಕ ರಕ್ಷಿತ್ ಶೆಟ್ಟಿಯ ನೆಮ್ಮದಿಗೆ ಭಂಗ ಬಂದಿಲ್ಲ. ಬದಲಾಗಿ ಶೆಟ್ಟರಿಗೆ ಭಟ್ಟರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ಅವರೀಗ ಭಟ್ಟರ ಸಂಗದಲ್ಲಿದ್ದಾರೆ. ಭಟ್ಟರು ಕೂಡ ಸದ್ಯಕ್ಕೆ ಹಿಂದಿ ಸಿನಿಮಾ ಪಕ್ಕಕ್ಕಿಟ್ಟು ತಮ್ಮ ಮೂಲದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇಷ್ಟು ದಿನ ಆಗಾಗ ಸಮಾರಂಭಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾತ್ರ ಮಾಡುತ್ತಾ ಮುಂಬೈನಲ್ಲೇ ಇರುತ್ತಿದ್ದ ಭಟ್ಟರು ತಾತ್ಕಾಲಿಕವಾಗಿಯಾದರೂ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಹಾಗಾಗಿ ತಮ್ಮ ಕಮ್ಬ್ಯಾಕನ್ನು ಹೇಳಿಕೊಳ್ಳಲು, ಇತ್ತೀಚೆಗೆ ಕೆಲವು ಆಯ್ದ 'ವಾಸ್ತು ನಿಷ್ಠ' ಪತ್ರಕರ್ತರಿಗೆ ತಮ್ಮ ತೋಟದಲ್ಲಿ ಪಾರ್ಟಿ ಕೊಟ್ಟಿದ್ದಾರಂತೆ. ಹಾಗಾಗಿ ಈ ತಾರಾತೋಟದಲ್ಲಿ ಇನ್ನು ಮುಂದೆ ಭಟ್ಟರ ವಾಸ್ತು ಪ್ರಕಾರದ್ದೇ ಕಲರವ ಕೇಳಿಸಲಿದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. 'ಹೊಸತು ಇದೀಗ ಬಂದಿದೆ' ಎನ್ನುತ್ತಾ ಭಟ್ಟರ ವಾಸ್ತುಪ್ರಕಾರ ಸಿನಿಮಾಕ್ಕೆ ಇನ್ನು ಮುಂದೆ ಪ್ರಚಾರದ ವಿಷಯದಲ್ಲಿ ಶುಕ್ರದೆಸೆ ಶುರುವಾಗಲಿದೆ. ಅದು ಸಿನಿಮಾ ಬಿಡುಗಡೆಯಾಗುವ ಶುಕ್ರವಾರದವರೆಗೂ ಮತ್ತು ನಂತರ ಕೂಡ.
ಅಂತೂ ಡ್ರಾಮಾ ನಂತರ ಭಟ್ಟರು ಮತ್ತೆ ಕನ್ನಡ ಸಿನಿಮಾ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ ಎಂಬುದು ಸಂತಸದ ವಿಷಯ. ಅದರ ಜೊತೆಗೆ ಉಳಿದವರು ಕಂಡಂತೆ ಚಿತ್ರದ ಸೋಲು ನೀಡಿರುವ ಹೊಡೆತವನ್ನು ಒಪ್ಪಿಕೊಳ್ಳಲು ತಯಾರಿಲ್ಲದ ರಕ್ಷಿತ್ ಶೆಟ್ಟಿಗೂ ಅದೊಂಥರಾ ವರದಾನವೇ. ಏಟು ಬಿದ್ದ ಕ್ಷಣದಲ್ಲೇ ಚೇತರಿಸಿಕೊಳ್ಳುವ ದಾರಿಯೂ ರಕ್ಷಿತ್ಗೆ ಸಿಕ್ಕಿದೆ. ತಮಗೊಂದು ಕೆರಿಯರ್ ಕಟ್ಟಿಕೊಳ್ಳಲು ಖಂಡಿತಾ ಅವರ ಪಾಲಿಗೆ ಅದೃಷ್ಟದ ವಿಷಯ. ಹಾಗಾಗಿ ಅತ್ತ ಉಳಿದವರು ಕಂಡಂತೆ ಚಿತ್ರದ ನಿರ್ಮಾಪಕರು ತಲೆ ಮೇಲೆ ಕೈ ಹೊತ್ತು ಕೂತಿರುವಾಗ ಇತ್ತ ರಕ್ಷಿತ್ ತಮ್ಮ ಟಿಪಿಕಲ್ ಡೋಂಟ್ ಕೇರ್ ಶೈಲಿಯಲ್ಲಿ ಅವರಿಗೆ ಕೈ ಎತ್ತಿ ತಮ್ಮ ವಾಸ್ತು ಪರೀಕ್ಷಿಸಿಕೊಳ್ಳಲು ಹೊರಟಿದ್ದಾರೆ.
= ಹರಿ