ಪವನ್ ಪವರ್

ಸಾರ್ ನಿಜ ಹೇಳ್ತೀನಿ, ಇದು ನನ್ ಸಿನಿಮಾ ಅಲ್ಲ... ಈಗಷ್ಟೇ ಶೂಟಿಂಗ್ ಗದ್ದಲದಿಂದ ಆಚೆ ಬಂದ ನಿರ್ದೇಶಕ ಪವನ್ ಒಡೆಯರ್ ಮಾತು...
ರಣವಿಕ್ರಮ ಶೂಟಿಂಗ್ ಸ್ಪಾಟ್
ರಣವಿಕ್ರಮ ಶೂಟಿಂಗ್ ಸ್ಪಾಟ್

ನಂಬಿ, ನಿರ್ದೇಶಕ ಪವನ್ ಒಡೆಯರ್‌ಗೆ 'ರಣವಿಕ್ರಮ' ಮೊದಲ ಸಿನಿಮಾ! ಹಾಗಾದ್ರೆ 'ಗೋವಿಂದಾಯನಮಃ' 'ಗೂಗ್ಲಿ' ಒಡೆಯರ್‌ಗೆ ಸೇರಿದ ಆಸ್ತಿ ಅಲ್ವೆ? ಈ ನಡುವೆ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆದರೆ 'ರಣವಿಕ್ರಮ' ಚಿತ್ರ ಪವನ್ ಒಡೆಯರ್‌ಗೆ ಅದೇಗೆ ಮೊದಲ ಚಿತ್ರವಾದಿತು? ಎನ್ನುವ ಕುತೂಹಲಕ್ಕೆ ಈ ಲೇಖನ...

ಸಾರ್ ನಿಜ ಹೇಳ್ತೀನಿ, ಇದು ನನ್ ಸಿನಿಮಾ ಅಲ್ಲ... ಈಗಷ್ಟೇ ಶೂಟಿಂಗ್ ಗದ್ದಲದಿಂದ ಆಚೆ ಬಂದ ನಿರ್ದೇಶಕ ಪವನ್ ಒಡೆಯರ್ ಒಂದೇ ಉಸಿರಿನಲ್ಲಿ 'ರಣವಿಕ್ರಮ' ಚಿತ್ರದ ಬಗ್ಗೆ ಹೇಳಿದ ಮಾತಿದು.

'ನಿರ್ದೇಶಕರೇ, ಇದು ನನ್ನ ಸಿನಿಮಾ ಅಲ್ಲ ಅಂದರೆ ಹೇಗೆ? ಎನ್ನುವ ಕುತೂಹಲ ಮೂಡುವುದು ಸಹಜ. ಒಡೆಯರ್‌ಗೆ ನಿರ್ದೇಶನ ಮತ್ತು ನಟನೆ ಸೇರಿದಂತೆ 'ರಣವಿಕ್ರಮ' ನಾಲ್ಕನೇ ಇನಿಂಗ್ಸ್. ಅವರ ಈ ಹಿಂದಿನ ಮೂರು ಚಿತ್ರಗಳು ಲವ್ ಕಂ ಕಾಮಿಡಿ ಟ್ರ್ಯಾಕ್ ಚಿತ್ರಗಳು. ಆದರೆ, 'ರಣವಿಕ್ರಮ' ಪವನ್ ಜೋನರ್ ಸಿನಿಮಾ ಅಲ್ಲ. ಇದ್ದಕ್ಕಿದ್ದಂತೆ ಜಂಪ್ ಆಗಿ ಈ ಚಿತ್ರವನ್ನು ಮಾಡಿದಂಥ ಅನುಭವ ಅವರದ್ದು.

ಕಥೆ, ಲೊಕೇಶನ್ನು, ಮೇಕಿಂಗ್ ಪರಿ ಎಲ್ಲವೂ ಪವನ್‌ರ ಹಿಂದಿನ ಚಿತ್ರಗಳಂತಲ್ಲ ಇದು. ಹೀಗಾಗಿ ಮೂರು ಸಿನಿಮಾ ಆಗಿದ್ದರೂ 'ರಣವಿಕ್ರಮ' ತಮಗೆ ಮೊದಲ ಸಿನಿಮಾ ಎನ್ನುವ ಮಾತು ಪವನ್‌ರದ್ದು, ಅಂದಹಾಗೆ 75 ದಿನಗಳ ಚಿತ್ರೀಕರಣದಲ್ಲಿ ಶೇ. 80 ಭಾಗ ಚಿತ್ರೀಕರಣ ಮುಗಿಸಿರುವ ಪವನ್, ರಣವಿಕ್ರಮವನ್ನು ವಿದೇಶಕ್ಕೆ ಕರೆದುಕೊಂಡು ಹೋಗುವ ತಯಾರಿಯಲ್ಲಿದ್ದಾರೆ. ಅಂದರೆ ಫಾರಿನ್ ತಾಣಗಳಲ್ಲಿ ಚಿತ್ರದ ಕೆಲ ಟಾಕಿ ಭಾಗಗಳನ್ನು ಚಿತ್ರೀಕರಣ ಮಾಡುವ ಯೋಜನೆ ನಿರ್ದೇಶಕರದ್ದು. ಇದರ ನಂತರ ಒಂದು ಹಾಡು ಮತ್ತು ಒಂದು ಫೈಟ್ ಮುಗಿಸಿದರೆ ಅಲ್ಲಿಗೆ ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದಂತೆ.

ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ, ಟಾಲಿವುಡ್ ಬೆಡಗಿ ಅಂಜಲಿ ಹಾಗೂ ಅದಾ ಶರ್ಮಾ ನಾಯಕಿಯರಾಗಿ ನಟಿಸುತ್ತಿರುವ 'ರಣವಿಕ್ರಮ' ನಿರ್ದೇಶಕ ಆದಿಯಾಗಿ, ಇಡೀ ಚಿತ್ರ ತಂಡಕ್ಕೆ ಹೊಸ ಮೈಲೇಜ್ ಚಿತ್ರವಾಗಿದ್ದರೂ ಪವನ್ ಮಾತ್ರ ಸಿನಿಮಾ ಶುರುವಿನಿಂದಲೇ ನಿರೀಕ್ಷೆಗಳ ಬೆಟ್ಟ ಕಟ್ಟಲು ಹೋಗಿಲ್ಲ. ಹೀಗಾಗಿ ಯಾವುದೇ ಸದ್ದು ಗದ್ದಲವಿಲ್ಲದೆ ಬೆಂಗಳೂರಿನಲ್ಲಿ ಚಿತ್ರೀಕರಣ ಶುರುಮಾಡಿ ಹಂಪಿ, ಸಂಡೂರು, ಬೆಳಗಾವಿ, ರಾಮತೀರ್ಥ ಮುಂತಾದ ಬಯಲುಸೀಮೆಯ ಖಡಕ್ ನೆಲದಲ್ಲಿ ಆ್ಯಕ್ಷನ್ ಕಟ್ ಹೇಳಿ ಮುಗಿಸಿ ಈಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಚಿತ್ರಕ್ಕೆ ಮುಹೂರ್ತ ಮಾಡಿಕೊಂಡಾಗಿನಿಂದಲೂ ಬಿಡುಗಡೆಯ ತನಕ ಆ ಚಿತ್ರದ ಬಗ್ಗೆ ನಿರೀಕ್ಷೆಗಳನ್ನು ಬೆಟ್ಟದಷ್ಟು ಮಾಡುವ ಹೇಳಿಕೆಗಳನ್ನು ಕೊಡುವುದಕ್ಕೆ ನನಗೆ ಇಷ್ಟವಿಲ್ಲ. ಯಾಕೆಂದರೆ ಪ್ರೇಕ್ಷಕರ ನಿರೀಕ್ಷೆಗಳನ್ನು ತಡೆದುಕೊಳ್ಳುವುದು ಕಷ್ಟ. ಅವರ ಕಲ್ಪನೆಗಳು ತುಂಬಾ ದೊಡ್ಡದಾಗಿರುತ್ತವೆ. ಹೀಗಾಗಿ ಅಂಥ ನಿರೀಕ್ಷೆಗಳನ್ನು ಹೆಚ್ಚಿಸುವಂಥ ಪ್ರಚಾರದ ತಂತ್ರಗಳಿಗೆ ಮೊರೆ ಹೋಗದೆ ನನ್ನ ಪಾಡಿಗೆ ನಾನು ಸಿನಿಮಾ ಮಾಡಿದ್ದೇನೆ.

ಸಿನಿಮಾ ಚೆನ್ನಾಗಿದ್ದರೆ ಅವರೇ ಮಾತನಾಡಿಕೊಳ್ಳುತ್ತಾರೆ ಎನ್ನುವ ಪವನ್ 'ರಣವಿಕ್ರಮ' ಚಿತ್ರವನ್ನು ತಾನು ಅಂದುಕೊಂಡಂತೆ ಮಾಡಿದ್ದೇನೆಂಬ ವಿಶ್ವಾಸ ಅವರದ್ದು. ಪವನ್‌ರ ಈ ಕನಸಿನ ಜತೆ ಪವನ್ ಪವರ್ ಸಿನಿಮಾ ಎಂದುಕೊಳ್ಳಬಹುದು. ಇಲ್ಲಿ ನಟ ಪುನೀತ್‌ರಾಜ್ ಕುಮಾರ್ ವಿದ್ಯಾರ್ಥಿ. ಅಪ್ಪ, ಅಮ್ಮನ ಮುದ್ದಿನ ಮಗ. ಆದರೆ, ಕಾಲೇಜಿನಲ್ಲಿ ಎದುರಾಗುವ ಸವಾಲಿನ ಬೆನ್ನು ಹತ್ತಿದಾಗ ಅವರಿಗೆ ಗೊತ್ತಿಲ್ಲದಂತೆ ಸಾಹಸ, ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳುತ್ತಾರೆ.

ಇವುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ ಎನ್ನುತ್ತ ಸ್ಟೋರಿ ಲೈನ್ ಅನ್ನು ಬಿಟ್ಟು, ಬಿಟ್ಟುಕೊಡದಂತೆ ಜಾಣ್ಮೆ ತೋರಿದರು ಪವನ್. ಇಡೀ ಚಿತ್ರದ ಕಥೆ ಒಂದು ಕಡೆ ನಡೆಯಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ಬಯಲುಸೀಮೆ, ವಿದೇಶಕ್ಕೆ 'ರಣವಿಕ್ರಮ' ಚಿತ್ರೀಕರಣದ ಸಂಚಾರ ನಡೆದಿದೆ. ಇದು ನನ್ನ ಸ್ಟೈಲಿನ ಸಿನಿಮಾ ಅಲ್ಲದಿರುವುದರಿಂದ ಯಾವುದೇ ರಿಸ್ಕ್ ಆಗಲಿಲ್ಲ. ಆದರೆ, ತುಂಬಾ ಭಯ ಮತ್ತು ಜವಾಬ್ದಾರಿಯಿಂದ ಈ ಚಿತ್ರ ಮಾಡಿದ್ದೇನೆ. ಯಾಕೆಂದರೆ ಪವನ್ ಈ ಸಿನಿಮಾ ಹೇಗೆ ಮಾಡಿರುತ್ತಾನೆಂಬ ಕುತೂಹಲ ಇದ್ದೇ ಇರುತ್ತದೆ. ಅದನ್ನು ಹುಸಿ ಮಾಡಬಾರದು ನೋಡಿ. ಈ ಕಾರಣಕ್ಕೆ ಪದೇಪದೆ ಚಿತ್ರದ ಬಗ್ಗೆ ಹೇಳಿಕೊಂಡು ಹೈಪ್ ಕ್ರಿಯೇಟ್ ಮಾಡಿಕೊಂಡಿಲ್ಲ. ಒಂದು ವಿಭಿನ್ನ ಕಥೆಯನ್ನು ಎಲ್ಲರೂ ಕೂತು ನೋಡುವಂತೆ ತೆರೆ ಮೇಲೆ ಕಟ್ಟಿಕೊಡಬೇಕು ಎಂಬುದೇ ನನ್ನ ಕನಸಾಗಿತ್ತು. ಅದು ಈಡೇರಿದೆ ಅಂದುಕೊಂಡಿದ್ದೇನೆ ಎನ್ನುತ್ತಾರೆ ಪವನ್ ಒಡೆಯರ್. ನಿರ್ದೇಶಕ ಚಿತ್ರದ ಕಥೆಯನ್ನು ಯಾರನ್ನೂ ಮನಸ್ಸಿನಲ್ಲಿಟ್ಟುಕೊಂಡು ಮಾಡಲ್ಲ. ಆದರೆ, ಕೆಲವು ಕಥೆಗಳಿಗೆ ಇಂಥವರೇ ಹೀರೋಗಳಾದರೆ ಮಾತ್ರ ಅದಕ್ಕೆ ನ್ಯಾಯ ಸಿಗುತ್ತದೆ. ಹಾಗೆ 'ರಣವಿಕ್ರಮ' ಕತೆಗೆ ನಟ ಪುನೀತ್ ಮಾತ್ರ ಹೀರೋ ಆಗಲಿಕ್ಕೆ ಸಾಧ್ಯವಿತ್ತ ಎಂಬುದು ಪವನ್ ಹೇಳುವ ಮಾತು. ತಾನು ಒಬ್ಬ ಸ್ಟಾರ್ ನಟ ಅಂತ ತೋರಿಸಿಕೊಳ್ಳಲಿಲ್ಲ. ತುಂಬಾ ಸಿಂಪಲ್ ಆಗಿದ್ರು. ಒಂದೇ ಹಂತದಲ್ಲೇ ಕಥೆ ಓಕೆ ಮಾಡುವುದು ಕಷ್ಟ. ಅಂತಾದ್ರಲ್ಲಿ ನಾನು ಕಥೆ ಹೇಳಿದಾಕ್ಷಣ ಸೂಪರ್ ಚೆನ್ನಾಗಿದೆ. ಸಿನಿಮಾ ಮಾಡೋಣ ಅಂದ್ರು ಎಂದು ಪವನ್, ಪವರ್ ಸ್ಟಾರ್‌ರನ್ನು ಮೆಚ್ಚಿಕೊಳ್ಳುತ್ತಾರೆ.

ಇನ್ನು 'ರಣವಿಕ್ರಮ' ಚಿತ್ರದಲ್ಲಿ ಅವಿನಾಶ್, ರಂಗಾಯಣ ರಘು, ದಿನೇಶ್ ಮಂಗ್ಳೂರು ಸೇರಿದಂತೆ ದೊಡ್ಡ ಕಲಾವಿದರ ದಂಡೇ ಕಾಣಿಸಿಕೊಂಡಿದೆ. ಸುರೇಶ್ ಸಂಕಲನ ಹರಿಕೃಷ್ಣ ಸಂಗೀತ, ವೈದಿ ಛಾಯಾಗ್ರಹಣವಿದೆ . ಜನವರಿ ಅಥವಾ ಫೆಬ್ರವರಿ ಕೊನೆಯಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.



- ಆರ್. ಕೇಶವಮೂರ್ತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com