

ಕೃಷ್ಣ ಲೇಖನ್ ನಿರ್ದೇಶನದ 'ಚತುರ್ಭುಜ' ಚಿತ್ರದ ಹಾಡುಗಳನ್ನು ಈಗ ಕೇಳಿ ಆನಂದಿಸಬಹುದು. 'ಲೂಸಿಯಾ' ನಂತರ ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಆರುವ ಹಾಗೂ ಶ್ರೇಯಾ ಚಿತ್ರದ ನಾಯಕ, ನಾಯಕಿಯರು. ಆಡಿಯೋ ಬಿಡುಗಡೆಗೆ ನಟ ಶ್ರೀಮುರಳಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಚಂದ್ರಿಕಾ ಚಿತ್ರದಲ್ಲಿ ಐಟಂ ಹಾಡಿಗೆ ನೃತ್ಯ ಮಾಡಿದ್ದಾರೆ. ಕಿರಣ್ ಹಂಪಾಪುರ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರೀಕರಣ ಮುಗಿದಿದ್ದು ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ. 'ಯಾವುದೇ ಪ್ರಯೋಗವಿಲ್ಲದೆ ಪಕ್ಕಾ ಕಮರ್ಷಿಲ್ ಆಗಿ ಮಾಡಿರುವ ಹಾಡುಗಳು ಇಲ್ಲಿವೆ. ನಾಗೇಂದ್ರ ಪ್ರಸಾದ್, ಶೇಖರ್ ಹಾಗೂ ನಿರ್ದೇಶಕ ಕೃಷ್ಣ ಲೇಖನ್ ಹಾಡುಗಳನ್ನು ಬರೆದಿದ್ದಾರೆ. ಉಪ್ಸಾರು ಥರಾ ರುಚಿಕಟ್ಟಾದ ನಾಲ್ಕು ಒಳ್ಳೆಯ ಹಾಡುಗಳನ್ನು ಮಾಡಿದ್ದೇನೆ' ಎಂದರು ತೇಜಸ್ವಿ. 'ಕಥೆ ತುಂಬಾ ಚೆನ್ನಾಗಿದೆ. ನನ್ನ ಕನಸಿಗೆ ಎಲ್ಲ ಪಾತ್ರಧಾರಿಗಳು ಜೀವ ತುಂಬಿದ್ದಾರೆ' ಎಂದರು ಕೃಷ್ಣ ಲೇಖನ್. 'ನನಗೆ ಇದು ಮೊದಲ ಚಿತ್ರ. ತುಂಬಾ ಚೆನ್ನಾಗಿದೆ. ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುತ್ತದೆ ಎಂದುಕೊಂಡಿದ್ದೇನೆ' ಎಂದರು ಆರುವ.