

'ಮದರಂಗಿ' ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ 'ಚಾರ್ಲಿ' ಚಿತ್ರತಂಡ ಮಹಾಲಕ್ಷ್ಮಿ ಲೇಔಟ್ನ ಮನೆಯೊಂದರಲ್ಲಿ ಬೀಡು ಬಿಟ್ಟಿತ್ತು. ಶಿವ ನಿರ್ದೇಶನದ ಈ ಚಿತ್ರಕ್ಕೆ ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಶೂಟಿಂಗ್ ಸೆಟ್ನಲ್ಲಿ ಮಾಧ್ಯಮಗಳ ಮುಂದೆ ಬಂದ 'ಚಾರ್ಲಿ' ತಂಡದಲ್ಲಿ ನಾಯಕ ಕೃಷ್ಣ, ನಾಯಕಿಯರಾದ ಮಿಲನ, ವೈಶಾಲಿ ದೀಪಕ್, ನಟ ಗುರುನಂದನ್, ಛಾಯಾಗ್ರಾಹಕ ಗಿರಿ, ನಿರ್ಮಾಪಕ ಮಂಜುನಾಥ್ ಹಾಜರಿದ್ದರು. 'ಹಂಪಿಯಲ್ಲಿ ನಡೆದ ಚಿತ್ರೀಕರಣ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಲ್ಲಿವರೆಗೂ ನಾನು ಅಂದುಕೊಂಡಂತೆ ಚಾರ್ಲಿ ಚಿತ್ರೀಕರಣ ನಡೆದಿದೆ. ನಿರ್ಮಾಪಕರು ಚಿತ್ರಕ್ಕೆ ಬೇಕಾದ ಸೌಲಭ್ಯಗಳನ್ನು ಕೊಡುತ್ತಿದ್ದಾರೆ' ಎಂದರು ಶಿವ. ಕವಿರಾಜ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಅರ್ಧ ಭಾಗ ಚಿತ್ರೀಕರಣ ಮುಗಿದಿದೆ.
'ನಿರ್ದೇಶಕರು ತುಂಬಾ ಚೆನ್ನಾಗಿ ನಿರೂಪಣೆ ಮಾಡುತ್ತಿದ್ದಾರೆ. ಎಷ್ಟೇ ಟೇಕ್ ಆದರೂ ಪ್ರತಿ ದೃಶ್ಯವನ್ನು ಮಾನಿಟರ್ ನೋಡಿಯೇ ಮಾಡುತ್ತಿದ್ದಾರೆ. ಎಲ್ಲ ಕಲಾವಿದರ ಅಭಿನಯ ಚೆನ್ನಾಗಿದೆ' ಎಂದರು ಕೃಷ್ಣ.