

ಬಾಬು ಪುತ್ರ ಮತ್ತೆ ಬಂದಿದ್ದಾರೆ. ಯಾವ ಬಾಬು? ಡಿ. ರಾಜೇಂದ್ರ ಬಾಬು? ರಾಜೇಂದ್ರಸಿಂಗ್ ಬಾಬು? ದಿನೇಶ್ ಬಾಬು? ಅಂತ ಕೇಳುವವರಿಗೆ ಎ.ಆರ್. ಬಾಬು ಅಂತ ಕೂಡ ಒಬ್ಬರಿದ್ದಾರೆ. ಅವರ ಮಗನೇ ಮತ್ತೆ ಬಂದಿದ್ದಾರೆ ಅಂತ ಹೇಳಬೇಕು. ಬಾಬು ಪುತ್ರ ಶಾನ್ ಒಂದು ಚಿತ್ರ ನಿರ್ದೇಶನ ಮಾಡಿಕೊಂಡು ಬಂದಿದ್ದಾರೆ. ಚಿತ್ರ ನೋಡಿದ ಮೇಲೆ 'ಬಾಸು ಅದೇ ಹಳೇ ಕಥೆ' ಅಂತ ಮೂಗು ಮುರಿಯಬೇಡಿ. ಯಾಕೆಂದರೆ ಚಿತ್ರದ ಶೀರ್ಷಿಕೆಯೇ 'ಬಾಸು ಅದೇ ಹಳೇ ಕಥೆ' ಅಂತ. ಚಿತ್ರದ ನಾಯಕ ಶಾನ್, ನಾಯಕಿ ಶೋಭಿನಾ.
ಚಿತ್ರದ ಪೋಸ್ಟರ್ನಲ್ಲಿ ಒಂದು ಗಿಮಿಕ್ ಮಾಡಿದ್ದಾರೆ ಶಾನ್. ಕಥೆ- ನಮ್ದೆ, ಚಿತ್ರಕಥೆ- ದೇವ್ರುದು, ನಿರ್ದೇಶನ- ನಿಮ್ ಹುಡ್ಗಾನೆ ಅಂತ ಹೇಳಿಕೊಂಡಿರುವ ಶಾನ್, ಒಂಚೂರು ಹೆಚ್ಚೇ ಸೃಜನಶೀಲತೆ ಮೆರೆದಿದ್ದಾರೆ ಅನ್ನಬಹುದು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಬಾಬಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರ ನಿರ್ಮಾಪಕರು ಯಾರು? ಎಂಬುದು ಬಿಡುಗಡೆಯ ತನಕ ನಿಗೂಢ ಎನ್ನುತ್ತಾರೆ ನಾಯಕ, ನಿರ್ದೇಶಕ ಶಾನ್.
'ಈ ಚಿತ್ರದಲ್ಲಿರುವ ಕಥೆ ಹಾಗೂ ಪಾತ್ರಗಳು ಕಲ್ಪನೆ ಅಲ್ಲ. ನಿಮ್ಮ ಏರಿಯಾದಲ್ಲಿ ಮಾತ್ರವಲ್ಲ, ನಿಮ್ಮ ಜೀವನದಲ್ಲೂ ಇಂಥ ಕಥೆ ನಡೆದಿರಬಹುದು. ಕಥೆ ಹಳೆಯದು ಎನಿಸಿದರೂ ನಿರೂಪಣೆ ಚೆನ್ನಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತ ಚಿತ್ರ ಮಾಡಿದ್ದೇನೆಂಬ ನಂಬಿಕೆ ನನ್ನದು' ಎಂದರು ಶಾನ್. ಇನ್ನು ಚಿತ್ರದಲ್ಲಿ ಒಂದು ಹಾಡನ್ನು ಯೇಸುದಾಸ್ ಹಾಡಿರುವುದು ವಿಶೇಷ. ಸಂಗೀತ ನಿರ್ದೇಶಕಿ ಬಾಬಿ ಅವರಿಗೆ ಯೇಸುದಾಸ್ ಅವರು ತುಂಬಾ ಹಿಂದೆ ಕೊಟ್ಟ ಆಟೋಗ್ರಾಫ್ನಿಂದಲೇ ಸಂಗೀತ ಕ್ಷೇತ್ರಕ್ಕೆ ಬಂದವರಂತೆ.
ಸಿನಿಮಾ ಮಾಡುವುದಕ್ಕಿಂತ ಮೊದಲೇ ಬಾಬು ಚಿತ್ರದ ಹೆಸರು ಕೇಳಿಯೇ 'ಧೈರ್ಯವಾಗಿ ಸಿನಿಮಾ ಮಾಡು' ಅಂತ ಮಗನಿಗೆ ಆಶೀರ್ವಾದ ಮಾಡಿದರಂತೆ. 'ಒಳ್ಳೆಯ ಕಥೆ ಮಾಡಿಕೊಂಡಿದ್ದಾನೆ. ನನ್ನ ಪ್ರಕಾರ ಇದು ಈಗಿನ ಸಿನಿಮಾಗಳಲ್ಲಿ ಹೊಸ ಅಲೆ ಎಂದುಕೊಳ್ಳಬಹುದು' ಎಂದರು ಎ.ಆರ್. ಬಾಬು. ನಾಯಕಿ ಶೋಭಿನಾ ತಮ್ಮದಲ್ಲದ ಪಾತ್ರವನ್ನು ಮಾಡಿದ್ದಾರಂತೆ. ಆದರೂ ಆ ಪಾತ್ರ ತುಂಬಾ ವಿಭಿನ್ನ ಅಂತ ಹೇಳುತ್ತಾರೆ ಶಾನ್.