

ಅತಿ ಶೀಘ್ರದಲ್ಲೇ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ, ಸಿನಿಮಾ ಹೆಸರೇನು?, ಡೈರೆಕ್ಟರ್ ಯಾರು? ಎಂದೆಲ್ಲಾ ಕೇಳುವಂತಿಲ್ಲ. ಏಕೆಂದರೆ ಅದು 'ಮುಹೂರ್ತ'ದವರೆಗೂ ಗುಟ್ಟಾಗಿಟ್ಟಿರುವ ವಿಚಾರ. ಆದರೆ, ಮತ್ತೆ ನೀವು ಯಾವ ಮುಹೂರ್ತ? ಎಂದು ಕೇಳಿದರೆ ಅನಿವಾರ್ಯವಾಗಿ ಮದುವೆ ಮುಹೂರ್ತ ಎಂದು ಹೇಳಲೇಬೇಕಾಗುತ್ತದೆ. ಹೌದು, ಇದು ಆನ್ಸ್ಕ್ರೀನ್ ಸಿನಿಮಾ ಕಥೆ ಅಲ್ಲ. ನಿಜಜೀವನದ ಸಂಭ್ರಮ. ಹಿರಿಯ ಪೋಷಕ ನಟ ಸುಂದರ್ರಾಜ್ ಮತ್ತು ನಟಿ ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್, ಇನ್ನೊಂದು ಸಿನಿಮಾ ಫ್ಯಾಮಿಲಿ ಆಗಿರುವ ಸರ್ಜಾ ಕುಟುಂಬದ ಚಿರಂಜೀವಿ ಸರ್ಜಾ ಅವರ ಕೈಹಿಡಿಯಲಿದ್ದಾರೆ ಎಂಬುದು ಗಾಂಧಿನಗರದ ಲೇಟೆಸ್ಟ್ ಮದುವೆ ಸುದ್ದಿ. ಈ ಬಗ್ಗೆ ಸದ್ಯಕ್ಕೆ ತಮ್ಮ ಆತ್ಮೀಯರೊಂದಿಗೆ ಖುದ್ದು ಮೇಘನಾ ರಾಜ್ ಹೇಳಿಕೊಂಡಿದ್ದಾರೆ. ಬರೀ ಬ್ರೇಕಿಂಗ್ ನ್ಯೂಸ್ಗಳಿಂದಲೇ ತುಂಬಿರುವ ಗಾಂಧಿನಗರಕ್ಕೆ ಇದು ಮ್ಯಾಚ್ ಮೇಕಿಂಗ್ ನ್ಯೂಸ್. ಮೇಘನಾ ರಾಜ್ ಮಲಯಾಳಂ ಚಿತ್ರರಂಗದಲ್ಲಿ ಈಗಾಗಲೇ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. ಇನ್ನು ತಮ್ಮ ಮಾವ ಅರ್ಜುನ್ ಸರ್ಜಾ ಅವರ ಆಶೀರ್ವಾದದೊಂದಿಗೆ ಕನ್ನಡ ಚಿತ್ರರಂಗದ ಯುವ ನಾಯಕ ನಟರ ಪಟ್ಟಿಯಲ್ಲಿ ಮಿಂಚುತ್ತಿದ್ದಾರೆ ಚಿರಂಜೀವಿ ಸರ್ಜಾ. ಈಗ ಅತಿ ಶೀಘ್ರದಲ್ಲೇ ಈ ಜೋಡಿ ತಮ್ಮ ಗಟ್ಟಿಮೇಳ ಮೊಳಗಿಸಲಿದ್ದಾರೆ.
- ಹ್ಯಾರಿ