

ಸಿನಿಮಾ ಪತ್ರಿಕಾಗೋಷ್ಠಿ ವೇದಿಕೆ ಮೇಲೆ ಇಬ್ಬರು 'ವಿಶ್ವ'ಗಳಿದ್ದರು. ಒಬ್ಬರು 'ಕನ್ನಡಪ್ರಭ' ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮತ್ತೊಬ್ಬರು ಸಿನಿಮಾ ನಿರ್ದೇಶಕ ವಿಘ್ನೇಶ್ವರ ವಿಶ್ವ. ಒಬ್ಬರು ಚಿರಪರಿಚಿತರು, ಮತ್ತೊಬ್ಬರು ಅಪರಿಚಿತರು. ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ ಅದೊಂದು ರೀತಿಯಲ್ಲಿ 'ವಿಶ್ವ ಪಾರ್ಟ್ ಟು'. ಈ ಇಬ್ಬರು ವಿಶ್ವಗಳು ಒಟ್ಟಿಗೆ ಸೇರಿದ್ದು 'ಲವ್ ದರ್ಬಾರ್' ಎನ್ನುವ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ. ಗಾಂಧಿನಗರದಲ್ಲಿ ತಾನು ನಿರ್ದೇಶಕನಾಗಲು ಹೊರಟಿರುವ ವಿಘ್ನೇಶ್ವರ ವಿಶ್ವನ ಹೆಸರು ಅಪರಿಚಿತವಾದರೂ ಒಂದಷ್ಟು ಚಿತ್ರಗಳಿಗೆ ಹಾಡು ಬರೆದಿದ್ದಾರೆ. ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಬರವಣಿಗೆಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಸಿನಿಮಾ ಮೇಲೆ ಮಮಕಾರ ಬೆಳೆಸಿಕೊಂಡಿದ್ದಾರೆ. ಇದೆಲ್ಲದರ ನೆರವಿನಿಂದಲೇ ಈಗ ಸ್ವತಂತ್ರ ನಿರ್ದೇಶಕನಾಗಲು ಹೊರಟಿದ್ದಾರೆ. ತನ್ನಂತೆಯೇ ಸಿನಿಮಾ ಕನಸು ಕಾಣುತ್ತಿರುವ ಯುವ ತಂಡವನ್ನು ಕಟ್ಟಿಕೊಂಡು 'ಲವ್ ದರ್ಬಾರ್' ಮಾಡಲು ಹೊರಟಿರುವ ವಿಘ್ನೇಶ್ವರ ವಿಶ್ವರ ಸಿನಿಮಾ ಕನಸಿಗೆ ಮತ್ತು ಅವರ ತಂಡಕ್ಕೆ ಶುಭ ಕೋರಲು ವಿಶ್ವೇಶ್ವರ ಭಟ್ ಆಗಮಿಸಿದ್ದರು. 'ಜಗತ್ತಿನ ಅದ್ಭುತ ಬರಹಗಾರರಿಗೆ ಈ ಚಿತ್ರ' ಎನ್ನುವ ಟ್ಯಾಗ್ ಲೈನ್. ಓದು, ಬರವಣಿಗೆ, ತಿರುಗಾಟವೇ ಜೀವನ ಎಂದುಕೊಂಡಿರುವ ವಿಘ್ನೇಶ್ವರ ವಿಶ್ವ ಅವರಿಗೆ ವಿಶ್ವೇಶ್ವರ ಭಟ್ ಅವರೇ ಮಾನಸಿಕ ಗುರುಗಳು. ಗುರುಗಳ ಸಮ್ಮುಖದಲ್ಲಿ ತನ್ನ ಮೊದಲ ಚಿತ್ರ ಶುರುವಾಗಬೇಕೆಂಬುದು ಯುವ ನಿರ್ದೇಶಕನ ಆಸೆ. ಶಿಷ್ಯನ ಆಸೆ ಮತ್ತು ಕನಸನ್ನು ನನಸು ಮಾಡಲು ವಿಶ್ವೇಶ್ವರ ಭಟ್ ಅವರು ಆಗಮಿಸಿದ್ದರು.
ವಿಶ್ವೇಶ್ವರ ಭಟ್ ಮಾತಿಗೆ ನಿಂತರು. 'ನನಗೆ ಈ ವಿಘ್ನೇಶ್ವರ ಏಳೆಂಟು ತಿಂಗಳುಗಳ ಹಿಂದೆಯಷ್ಟೇ ಪರಿಚಯವಾದವರು. ಪ್ರತಿ ದಿನ ನನ್ನ ಭೇಟಿ ಮಾಡಲು ಬಂದು ವಾಪಸ್ಸು ಹೋಗುತ್ತಿದ್ದರು ಎನ್ನುವುದನ್ನು ತಿಳಿದು ಒಂದು ದಿನ ಈ ಹುಡುಗನ ಜೊತೆ ಮಾತನಾಡಿದೆ. ಎದುರಿಗೆ ಕೂತು ಏನೂ ಮಾತನಾಡದೆ ಅಳಕ್ಕೆ ಶುರು ಮಾಡಿದ. ಇದು ಎಕ್ಸ್ಟ್ರಾ ಕೇಸು ಅಂದುಕೊಂಡೆ. 'ಸಾರ್ ನಾನು ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ' ಅಂದ. ಇದು ಮಾಮೂಲಿ ಕೇಸು ಅಂದುಕೊಂಡೆ. ಆಯಿತಪ್ಪ ಅಂದೆ. ಯಾಕೆಂದರೆ ಮದುವೆಯಾಗಬೇಕು, ಪತ್ರಿಕೆ ಮಾಡಬೇಕು, ಸಿನಿಮಾ ಮಾಡಬೇಕು ಎನ್ನುವವರು ಒಂದು ಕ್ಯಾಟಗಿರಿಗೆ ಸೇರಿದವರು. ಮದುವೆ, ಸಿನಿಮಾ, ಪತ್ರಿಕೆ ಮಾಡಬೇಕು ಅನ್ನುವವರು ಬೇಗ ಮಾಡುವಂತೆ ಹೇಳಬೇಕು. ಇಲ್ಲ ಅಂದ್ರೆ ಸರಿ ಹೋಗಲ್ಲ. ಆದರೆ, ಈ ವಿಘ್ನೇಶ್ವರ ಹುಚ್ಚನಂತೆ ಸಿನಿಮಾ ಗುಂಗನ್ನು ಹತ್ತಿಸಿಕೊಂಡವರು. ಯಾವುದಾದರೂ ಒಂದು ವಿಷಯದ ಬಗ್ಗೆ ಹುಚ್ಚು ಹತ್ತಿಸಿಕೊಳ್ಳದಿದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಈತ ಕೂಡ ಸಿನಿಮಾ ಹುಚ್ಚಿನ ಹುಡುಗ. ಕನ್ನಡ ಚಿತ್ರರಂಗ ಬದಲಾಗುತ್ತಿದೆ. ಉದ್ಯಮ ಎಲ್ಲವನ್ನು ದಾಟಿ ಕ್ರಾಸ್ ರೋಡ್ನಲ್ಲಿದೆ. ಯಂಗ್ ಬ್ರೈಟ್ ಮೈಂಡ್ಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂಥ ಯಂಗ್ ಮೈಂಡ್ಗಳ ನಡುವೆ ವಿಘ್ನೇಶ್ವರ ಹೊಸದಾಗಿ ಕಾಲಿಡುತ್ತಿದ್ದಾರೆ. ಅವರ ಚಿತ್ರಕ್ಕೆ ಒಳ್ಳೆಯದಾಗಲಿ. ಅದ್ಭುತವಾದ ಗೆಲುವು ಸಿಗಲಿ' ಎಂದು ಹಾರೈಸಿದರು ಭಟ್ಟರು.
ಗುರುಗಳ ಮಾತಿನಿಂದ ತುಂಬಾ ಖುಷಿಯಾಗಿದ್ದ ನಿರ್ದೇಶಕ ವಿಘ್ನೇಶ್ವರ ವಿಶ್ವ ತಮ್ಮ ಚಿತ್ರತಂಡವನ್ನು ಪರಿಚಯಿಸಿದರು. ಭುವನ್ ಚಿತ್ರದ ನಾಯಕ. ಹರ್ಷಿಕಾ ಪೂಣಚ್ಚ ನಾಯಕಿ. ಚಂದನ್ ಶೆಟ್ಟಿ ಸಂಗೀತ. 'ಲವ್ ದರ್ಬಾರ್' ಚಿತ್ರ, ಕನ್ನಡ, ಹಿಂದಿ ಹಾಗೂ ತೆಲುಗು ಮೂರು ಭಾಷೆಯಲ್ಲಿ ಶುರುವಾಗುತ್ತಿದೆ. ವಿಶೇಷ ಅಂದರೆ ಚಿತ್ರೀಕರಣಕ್ಕೂ ಮುನ್ನ ಸ್ಕಂದಗಿರಿ ಬೆಟ್ಟದ ಮೇಲೆ ಚಿತ್ರದ ಫೋಟೋ ಶೂಟ್ ಮಾಡಿದ್ದಾರೆ. ಅದನ್ನೇ ಪ್ರೋಮೋ ಥರಾ ಮಾಡಿರುವುದು ನಿರ್ದೇಶಕನ ಕ್ರಿಯಾಶೀಲತೆಗೊಂದು ಸಾಕ್ಷಿ.
'ನಾನು ಬರವಣಿಗೆಯನ್ನು ನಂಬಿಕೊಂಡಿರುವ ವ್ಯಕ್ತಿ. ಇಡೀ ನನ್ನ ಚಿತ್ರತಂಡ ಕೂಡ ಬರವಣಿಗೆಗಾರರನ್ನು ಒಳಗೊಂಡಿರುವ ಸಿನಿಮಾ. ವಿಶ್ವೇಶ್ವರ ಭಟ್ ಸರ್ ಬಂದು ನನಗೆ ಆಶೀರ್ವಾದ ಮಾಡಿದ್ದು ನನ್ನ ಭಾಗ್ಯ. ನಾನು ಅವರ ಬರವಣಿಗೆಯ ಅಭಿಮಾನಿ. ನನ್ನ ಮೊದಲ ಚಿತ್ರವಿದು. ಚಿತ್ರದ ನಾಯಕ ವೈಲ್ಡ್ ಲೈಫ್ ಫೋಟೋ ಗ್ರಾಪರ್. ನಾಯಕಿ ಸಮಾಜ ಸೇವಕಿ. ಇವರಿಬ್ಬರ ನಡುವೆ ನಡೆಯುವ ಕಥೆಯೇ ಲವ್ ದರ್ಬಾರ್' ಎಂದು ವಿವರಣೆ ನೀಡಿದರು ವಿಘ್ನೇಶ್ವರ.
ಇನ್ನು ಭುವನ್ 'ಕೂಲ್' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡವರು. ಈಗಾಗಲೇ ಹಿಂದಿಯಲ್ಲಿ ಎರಡು ಚಿತ್ರ ಮಾಡಿದ್ದಾರೆ. ಮೂಲತಃ ರಂಗಭೂಮಿ ಕಲಾವಿದ. ತಂಡದಲ್ಲಿ ನಟಿ ಹರ್ಷಿಕಾ ಪೂಣಚ್ಛ ಪರಿಚಿತ ಮುಖ. '90 ಡಿಗ್ರಿ ಬೆಟ್ಟವನ್ನು ಹತ್ತಿ ಫೋಟೋ ಶೂಟ್ ಮಾಡಿದ್ದು ನಮ್ಮ ತಂಡದ ಸಾಹಸ' ಎಂದು ಹೇಳಿಕೊಂಡರು ಹರ್ಷಿಕಾ. ಲಲಿತಾ ಎಂಬುವವರು ಹಿಂದಿ ಭಾಷೆಗೆ ಸಂಭಾಷಣೆಯನ್ನು ಅನುವಾದ ಮಾಡಲಿದ್ದಾರೆ. ಜನವರಿಯಿಂದಲೇ 'ಲವ್ ದರ್ಬಾರ್'ಗೆ ಚಿತ್ರೀಕರಣ ಆರಂಭಗೊಳ್ಳಲಿದೆ. ನಿರ್ದೇಶಕ ಸುನಿ ಚಿತ್ರತಂಡಕ್ಕೆ ಶುಭ ಕೋರಿದರು.
- ಕೇಶವ