

ಏಳು ಸ್ವರಗಳ ಒಡತಿ, ಗಾನಕೋಗಿಲೆ ಜಾನಕಮ್ಮ ಏಳು ವರ್ಷಗಳ ದೀರ್ಘ ಅವಧಿಯ ನಂತರ ಮತ್ತೊಮ್ಮೆ ಕನ್ನಡ ನಾಡಿಗೆ ವಲಸೆ ಬಂದಿದ್ದಾರೆ. ಈ ಬಾರಿ ಪಲ್ಲಕ್ಕಿಯಲ್ಲೇ ಅವರನ್ನು ಕರೆತರಲಾಗಿದೆ. ಹಾಗಾಗಿ ಇದೊಂದು ಅದ್ದೂರಿ ಹಾಗೂ ಸ್ಮರಣೀಯ ಕಂಬ್ಯಾಕ್ ಅನ್ನಲೇಬೇಕು.
ಪಲ್ಲಕ್ಕಿ ಖ್ಯಾತಿಯ ನರೇಂದ್ರ ಬಾಬು ಈಗ ಪಲ್ಲಕ್ಕಿ2 ಮಾಡುತ್ತಿರುವುದು ಹಳೆಯ ಸುದ್ದಿ. ಮೆಲೋಡಿಗೆ ಖ್ಯಾತರಾಗಿರುವ ಯುವಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಟ್ಯೂನ್ ಕಂಪೋಸ್ ಮಾಡುವ ಸಂದರ್ಭದಲ್ಲಿ ನಿರ್ದೇಶಕರಿಗೆ ಒಂದು ಪ್ಯಾಥೊ ಟ್ಯೂನ್ ಕೇಳಿಸಿದ್ದಾರೆ. ಟ್ಯೂನ್ ಕೇಳ್ತ್ತಾ ಕೇಳ್ತ್ತಾ ನರೇಂದ್ರಬಾಬುಗೆ ಜಾನಕಿ ಅವರು ಹಾಡಿದ ಕನ್ನಡದ ಹಳೆಯ ಹಾಡುಗಳೆಲ್ಲಾ ಕಿವಿಯಲ್ಲಿ ಗುಂಯ್ಗುಡತೊಡಗಿದೆ. ಈ ಗೀತೆಯನ್ನು ಅವರಿಂದಲೇ ಹಾಡಿಸಬೇಕು ಅಂತ ಆ ಕ್ಷಣದಲ್ಲೇ ಡಿಸೈಡ್ ಮಾಡಿ ಚೆನ್ನೈಗೆ ಹಾರಿದ್ದಾರೆ. ಏಳು ವರ್ಷಗಳಿಂದ ಕೋಗಿಲೆ ಕನ್ನಡದಲ್ಲಿ ಉಲಿದಿಲ್ಲ. ನಮಗೆ ಒಲಿದೀತಾ ಎಂಬ ಅಳುಕಿನಿಂದಲೇ ಟ್ಯೂನ್ ಕೇಳಿಸಿದ್ದಾರೆ.
ಗಾನಕೋಗಿಲೆಯ ಹೃದಯದಲ್ಲಿ ಭೇದಕ್ಕೆ ಜಾಗವೆಲ್ಲಿದೆ? ಆಕೆಗೆ ಭಾಷೆಯ ಹಂಗಿಲ್ಲ. ಸಂಗೀತವೆಂದರೆ ಪ್ರಾಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಟ್ಟು ನಲವತ್ತು ಸಾವಿರ ಹಾಡುಗಳನ್ನು ಲಕ್ಷಗಟ್ಟಲೆ ಬಾರಿ ಹಾಡಿದರೂ ಮಧುರದನಿಯ ಧಣಿಗೆ ದಣಿವಾಗಿಲ್ಲ. 'ಇದು ಮೊದಲನೇ ಹಾಡು ಹೇಗೊ ಏನೋ ಅರಿಯೆ' ಎಂಬಂತೆ ಖುಷಿಯಿಂದ ಬಂದು ಹಾಡಿ ಹೋಗಿದ್ದಾರೆ.
ಗಿರಿಧರ್ ದಿವಾನ್ಗೆ ಇನ್ನಾದರೂ ಇದು ಕನಸೋ ನನಸೋ ಎಂಬ ಗೊಂದಲ. ಎಪ್ಪತ್ತೈದರ ಹರೆಯದಲ್ಲಿ ಇಷ್ಟು ಸ್ಪಷ್ಟವಾಗಿ, ಇಷ್ಟು ಸುಲಲಿತವಾಗಿ ಹಾಡಲು ಸಾಧ್ಯವೇ ಎಂಬ ಅಚ್ಚರಿ. ಕನ್ನಡದಲ್ಲಿ ಹಾಡದೆಯೇ ಏಳು ವರ್ಷಗಳಾಗಿವೆ, ವಯಸ್ಸೂ ಆಗಿದೆ, ತಾನೂ ಬೇರೆ ಆ ಗಾನಶಾರದೆಯ ಮುಂದೆ ತೀರಾ ಚಿಕ್ಕಮಗುವಿನಂತೆ..' ಎಂದೆಲ್ಲ ನರ್ವಸ್ ಆಗಿದ್ದ ಗಿರಿಧರ್ ಆಕೆಯ ಸರಳತೆ, ವಿನಯಶೀಲತೆ ನೋಡಿ ಮೂಕರಾಗಿ ಹೋದರಂತೆ.
'ಪಲ್ಲವಿ, ಚರಣಗಳನ್ನು ಬ್ರೇಕ್ ಕೊಡದಂತೆ ಇಡಿ ಇಡಿಯಾಗಿ ಒಂದೇ ಒಂದು ರಿಪೀಟ್ ಟೇಕ್ ಕೂಡಾ ಇಲ್ಲದಂತೆ ಫಟಾಫಟ್ ಹಾಡಿ ಮುಗಿಸಿದ್ದನ್ನು ಇನ್ನೂ ನಂಬಲಾಗ್ತಾ ಇಲ್ಲ. ಇದನ್ನು ನೋಡಿ ಪ್ರತಿ ಯುವ ಗಾಯಕರೂ ಕಲಿಯಬೇಕಿದೆ. ಈಗಿನ ತಂತ್ರಜ್ಞಾನದಲ್ಲಿ ಒಂದೊಂದು ಪದ ಹಾಡಿದರೂ ಅದನ್ನ ಕಟ್ ಪೇಸ್ಟ್ ಮಾಡಿಕೊಳ್ಳೋ ವ್ಯವಸ್ಥೆ ಬಂದಿದೆ. ಆದರೆ ಜಾನಕಮ್ಮ ಮಾತ್ರ ತಮ್ಮ ಹಳೆಯ ಕಾಲದ ಶೈಲಿಯಲ್ಲೇ ಎಲ್ಲೂ ತಪ್ಪದೆ, ಕಟ್ ಪೇಸ್ಟ್ಗೆ ಆಸ್ಪದ ನೀಡದಂತೆ ಹಾಡಿ ಸ್ಟುಡಿಯೋದಲ್ಲಿ ಇದ್ದವರನ್ನೆಲ್ಲ ವಿಸ್ಮಿತರನ್ನಾಗಿ ಮಾಡಿದರು' ಎಂದು ಗಿರಿಧರ್ದಿವಾನ್ಥ್ರಿಲ್ ಆಗುತ್ತಾರೆ.
ಈಗಾಗಲೇ ಯೂಟ್ಯೂಬಲ್ಲಿ ಜಾನಕಿ ಅವರು ಹಾಡಿರುವ ಹಾಡಿನ ಮೇಕಿಂಗ್ ವೀಡಿಯೊ ಲಭ್ಯವಿದ್ದು, ಪಲ್ಲಕ್ಕಿ2 ಎಂದು ಟೈಪಿಸಿದರೆ ಕೋಗಿಲೆಗಾನದ ಝಲಕ್ಕನ್ನು ಸವಿಯಬಹುದಾಗಿದೆ.
ನವೀನ್ ಸಾಗರ್