

ಬೆಳದಿಂಗಳ ಬಾಲೆಯಂತೆ 'ಲಕ ಲಕ ಲಕ' ಅಂತ ಹೊಳೆಯುತ್ತಿದ್ದ ರಿಂಗ್‌ರೋಡ್ ಶುಭಾ ಈಗ 'ಶಾಕ್' ಲಗಾ ಲಗಾ' ಎನ್ನುತ್ತಿದ್ದಾರೆ. ಕಾರಣ ಅವಳ ಕೈಯಲ್ಲಿರುವ ಈ ಶಾಕ್ ಅಬ್ಸಾರ್ಬರ್. ಹಾಗಾಗಿ ಇದೊಂಥರಾ 'ಶಾಕಿಂಗ್ ನ್ಯೂಸ್' ಎನ್ನಬಹುದು. ಆದರೆ ಹುಡುಗಿ ಕೈಯಲ್ಲಿ ರಕ್ತಸಿಕ್ತ ಶಾಕ್ ಅಬ್ಸಾರ್ಬರ್ ಅನ್ನು ನೋಡಿ ಡೈಜೆಸ್ಟ್ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಮೂಡಿದರೆ, ಶುಭಾ-ಗಿರೀಶ್ ಕೇಸ್ ಹಿಸ್ಟರಿಯ ಡೈಜೆಸ್ಟ್ ತೆರೆದುಕೊಳ್ಳುತ್ತದೆ. ರಿಂಗ್‌ರೋಡ್‌ನಲ್ಲಿ ನಡೆದ ಕೊಲೆ ಪ್ರಕರಣ ಕೂಡ.
ಹುಡುಗಿಯರೆಲ್ಲಾ ಸೇರಿ 'ರಿಂಗ್‌ರೋಡ್ ಶುಭಾ' ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಈ ಹುಡುಗಿಯರ ಚಿತ್ರ,
ಸಾಫ್ಟ್‌ವೇರ್ ಹುಡುಗನನ್ನು ಕೊಂದ ಆರೋಪ ಹೊತ್ತಿರುವ ಶುಭಾ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿರುತ್ತದೆ ಎಂದುಕೊಂಡವರೇ ಎಲ್ಲ. ಆದರೆ ಈ ಫೋಟೋ ಮಾತ್ರ ಬೇರೆಯೇ ಕಥೆ ಹೇಳುತ್ತಿದೆ. ಆದರೂ ಇಲ್ಲಿ ಅದಕ್ಕಿಂತ ಇಂಟರೆಸ್ಟಿಂಗ್ ವಿಷಯ ಎಂದರೆ ಜೈಲಿನಲ್ಲಿರುವ ಶುಭಾ ವಿಷಯ.
ಅವತ್ತು, ಶಿಕ್ಷೆ ಕಾಯಂ ಆಗಿ ಕೋರ್ಟ್‌ನಿಂದ ಹೊರಬರುವಾಗ ಪ್ರಕರಣದ ಇನ್ನಿಬ್ಬರು ಪುರುಷ ಆರೋಪಿಗಳು ಮುಖ ಮುಚ್ಚಿಕೊಂಡು ಹೋಗುತ್ತಿದ್ದರೆ, ಶುಭಾ ಮಾತ್ರ ತಲೆ ಎತ್ತಿಕೊಂಡೇ ಹೊರನಡೆಯುತ್ತಾ ನಿರ್ಲಿಪ್ತ ಮುಖಭಾವದೊಂದಿಗೆ ಕಾಣಿಸಿಕೊಂಡಿದ್ದಳು. ಅದನ್ನು ಪ್ರಶ್ನಿಸಿದವರಿಗೆ ಅಂದು ಶುಭಾ ಅದೇ ಧೈರ್ಯದಿಂದ ಹೇಳಿದ್ದು 'ನಾನು ಮಾಡಿರುವ ಅಪರಾಧ ಕೋರ್ಟನಲ್ಲಿ ಪ್ರೂವ್ ಆಗಿದೆ, ನನಗೆ ಶಿಕ್ಷೆ ಆಗಿದೆ. ಇಡೀ ಜಗತ್ತಿಗೇ ಈ ವಿಷಯ ಗೊತ್ತಿದೆ. ಮುಖ ಮುಚ್ಚಿಕೊಂಡು ಏನು ಪ್ರಯೋಜನ?'.
ಅದು ಅಂದು. ಆದರೆ ಇಂದು? ದಿನಗಳು ಉರುಳಿ ಹೋಗಿವೆ. ಜೈಲಿನಲ್ಲಿ ಹಲವಾರು ವರುಷಗಳನ್ನು ಕಳೆದಿರುವ ಶುಭಾ ಈಗ ಬದಲಾಗಿದ್ದಾಳೆ. ಅದೇ ಕಾರಣಕ್ಕೆ, ಅಂದು 'ಹೌದು, ಏನೀಗ, ಹೋಗಲಿ ಬಿಡಿ' ಎಂಬ ಮನೋಭಾವ ಹೊಂದಿದ್ದ ಶುಭಾ ಈಗ ತನ್ನ ಕಥೆ ಹೊಂದಿದ ಸಿನಿಮಾ ಒಂದು ತಯಾರಾಗುತ್ತಿದೆ ಎಂದು ತಿಳಿದಾಗ ಗಲಿಬಿಲಿಗೊಂಡಿದ್ದಾಳೆ. ಸಿನಿಮಾ ಶುರುವಾದ ಶಾಕಿಂಗ್‌ನ್ಯೂಸ್ ಕೇಳಿದ ಮೇಲೆ ಎರಡು ದಿನ ಊಟ ಬಿಡುವ ಮಟ್ಟಿಗೆ. ಅಷ್ಟೇ ಅಲ್ಲ ಆಕೆ ಈಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರಂತೆ. ಅಲ್ಲದೆ ಆಕೆಯ ಮನಸ್ಸಿಗೆ ಘಾಸಿಯಾಗುವಂಥ ವಿಷಯಗಳನ್ನು ತೋರಿಸಬೇಡಿ ಎಂದು ಚಿತ್ರತಂಡಕ್ಕೆ ವೈದ್ಯರು ಮನವಿ ಕೂಡ ಮಾಡಿಕೊಂಡಿದ್ದಾರೆ. ಅಂದು ಇದ್ದ ಮಾನಸಿಕ ಸ್ಥೈರ್ಯ ಈಗ ಶುಭಾಳಲ್ಲಿ ಇಲ್ಲ ಎಂಬುದಕ್ಕೆ ಆಕೆಯ ಬದಲಾದ ಈ ನಡವಳಿಕೆಯೇ ಉದಾಹರಣೆ.
ಆದರೆ, ಈ ಕಾರಣಕ್ಕೆ ಚಿತ್ರತಂಡ ತಮ್ಮ ಕಥೆಯಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದೆಯೇ ಎಂಬ ಬಗ್ಗೆ ಸುಳಿವು ಬಿಟ್ಟುಕೊಡುತ್ತಿಲ್ಲ. ಸದ್ಯಕ್ಕೆ ಸಿಕ್ಕಿರುವುದು ಶಾಕ್ ಅಬ್ಸಾರ್ಬರ್ ಹಿಡಿದ ಶುಭಾ ಪಾತ್ರಧಾರಿಯ ಈ ಫೋಟೋ ಅಷ್ಟೆ. ಇದರ ಬಗೆಗಿನ ಸಂಪೂರ್ಣ ಚಿತ್ರಣ ಮತ್ತು ಗಾಂಧಿನಗರದ ಗಾಳಿ ಕುಡಿದ ಹುಡುಗಿಯರ ತಂಡ ಶುಭಾ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿ, ಗಾಂಧಿಗಿರಿ ಅನುಸರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರ ಬೇಕು ಎಂದರೆ, ಹುಡುಗಿಯರ ಈ ಸಿನಿಮಾ ಬಿಡುಗಡೆ ಆಗುವವರೆಗೂ ಒಂದಿಷ್ಟು ತಾಳ್ಮೆ ಅಗತ್ಯ.
- ಹರಿ