

ಇದು ಪಕ್ಕಾ ಫ್ಯಾಮಿಲಿ ಸಿನಿಮಾ. ಅನ್ನಪೂರ್ಣ ಶಶಿಕಿರಣ್ ನಿರ್ಮಾಪಕರು. ಇವರ ಸೋದರ ಸುರೇಶ್ ಭುತೆ ನಿರ್ದೇಶಕ, ಮತ್ತೊಬ್ಬ ಸೋದರ ಸಂಜೀವ್ ನಾಯಕ. ಸ್ನೇಹಿತ ರಮೇಶ್ ಎರಡನೇ ನಾಯಕ. ಕುಟುಂಬದವರೇ ಸೇರಿ ಮಾಡುತ್ತಿರುವ ಚಿತ್ರವಿದು. ಚಿತ್ರದ ಹೆಸರು 'ಈ ಇಬ್ಬನಿ'.
ಇತ್ತೀಚೆಗೆ ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ನಡೆಯಿತು. ಈಗಾಗಲೇ ಚಿತ್ರೀಕರಣ ಮುಗಿಸಲಾಗಿದೆ. 'ಇಬ್ಬರ ಸ್ನೇಹಿತರ ನಡುವೆ ನಡೆಯುವ ಕಥೆ ಇದು. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎಂದರು ಸತ್ಯಜಿತ್. ಅವರು ಚಿತ್ರದಲ್ಲಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡರೆ, ಆಲಿ ಜಾನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕಿ ಅನ್ನಪೂರ್ಣ ಅವರು ತಮ್ಮ ಸೋದರರ ಸಿನಿಮಾ ಪ್ರೀತಿಯನ್ನು ಕಂಡು ಚಿತ್ರ ನಿರ್ಮಾಣಕ್ಕೆ ಬಂದಿದ್ದಾರೆ. 'ಈ ಇಬ್ಬನಿ' ಸಿನಿಮಾ ಗೆಲ್ಲುತ್ತೆಂಬ ಭರವಸೆ ಅವರಿಗಿದೆ.
ಐದು ಹಾಡುಗಳಿವೆ. ಉದಿತ್ ನಾರಾಯಣ್, ವಿನೊದ್ ಗವಾರ್, ವಿಜಯ್ ಅರಸ್, ಮಿಸ್ಟಿ, ಕೃಷ್ಣ ರಾಥೋಡ್ ಮುಂತಾದವರು ಹಾಡಿದ್ದಾರೆ. ನಿರ್ದೇಶಕ ಸುರೇಶ್ ಮುಂಬೈನಲ್ಲಿ ಕೆಲ ಕಾಲ ಕಿರುತೆರೆಯಲ್ಲಿ ಕೆಲಸ ಮಾಡಿದವರು. ಮರಾಠಿ, ಭೋಜ್‌ಪುರಿ, ಬೆಂಗಾಲಿ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಪ್ರೇಮ ಕಥೆಯ ಸಿನಿಮಾ ಇದು. ಮೊದಲಿನಿಂದಲೂ ಒಂದು ಕನ್ನಡ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ. ಅದು ಈಗ ಈಡೇರಿದೆ. ಒಳ್ಳೆಯ ಸಿನಿಮಾ ಮಾಡಿದ್ದೇನೆಂಬ ನಂಬಿಕೆ ನನಗೆ ಇದು. ಹೊಸಬರ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಬೆಂಬಲಿಸುತ್ತಾರೆಂಬ ಆಸೆ ಇಟ್ಟುಕೊಂಡಿದ್ದೇವೆ. ಮುಂದೆ ಮತ್ತಷ್ಟು ಉತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡುವ ಕನಸಿದೆ' ಎಂದರು ಸುರೇಶ್.
ನಾಯಕ ಸಂಜೀವ್ ಅವರಿಗೂ ಇದು ಮೊದಲ ಚಿತ್ರ. 'ಪಾತ್ರ ತುಂಬಾ ಸರಳವಾಗಿದೆ. ಆದರೆ ಕ್ಯಾಮೆರಾ ಮುಂದೆ ನಿಂತು ಅಭಿನಯಿಸಬೇಕಾದರೆ ತುಂಬಾ ಸವಾಲಿನ ಕೆಲಸ ಅನಿಸಿತು. ಆದರೂ ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆಂಬ ನಂಬಿಕೆ ಇದೆ' ಎಂಬುದು ಸಂಜೀವ್‌ರ ಮಾತು. ಅಬುಝರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೃಷ್ಣ ರಾಥೋಡ್ ಎಲ್ಲ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ.