

ಡಬ್ಬಿಂಗ್ ಬೇಡ ಅನ್ನೋದು ಕಾನೂನಿಗೆ ವಿರುದ್ಧ ಎನ್ನುವುದು ಇವರ ಇನ್ನೊಂದು ವಾದ. ಹೌದು. ಡಬ್ಬಿಂಗ್ ಬೇಡ ಎನ್ನುವವರೂ ಹೇಳುತ್ತಿರುವುದು ಅದೇ. ಈ ಕಾನೂನು ಸರಿ ಇಲ್ಲ, ಅದು ಬದಲಾಗಬೇಕು ಎಂದು.
ಡಬ್ಬಿಂಗ್ ಬೇಕಾ ಬೇಡ್ವಾ ಎನ್ನುವ ಬಗ್ಗೆ ಬೇಕಾಬಿಟ್ಟಿ ಮಾತುಗಳು, ಬಿಟ್ಟಿ ಸಲಹೆಗಳಿಗೆ ಚಿತ್ರರಂಗ ಸಾಕ್ಷಿಯಾಗಿದೆ.
ಬೇಕಾದ್ದನ್ನು ಬಿಟ್ಟು ಬೇರೆಲ್ಲ ಮಾತನಾಡುವವರೂ ಇದ್ದಾರೆ.
'ಡಬ್ಬಿಂಗ್ ಸಿನಿಮಾ ನೋಡೋದು ನಮ್ಮ ಹಕ್ಕು. ನಮ್ಮ ಆಯ್ಕೆ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳುವಂತಿಲ್ಲ. ನಾವು ಬೇಕು ಎಂದಿದ್ದನ್ನು ನೀವು ಕೊಡಲೇಬೇಕು' ಎಂದು ಕೆಲವು ಗ್ರಾಹಕರು ಆಗ್ರಹಿಸುತ್ತಿದ್ದಾರೆ. 'ಅಲ್ಲಾ ಸ್ವಾಮಿ, ನೀವು ಹೋಟೆಲ್ಗೆ ಹೋದಾಗ ಮಾಣಿಯನ್ನು 'ಏನಿದೆ?' ಅಂತ ಕೇಳಿ ಅದರಲ್ಲಿ ನಿಮಗಿಷ್ಟವಾದುದನ್ನು ಆರ್ಡರ್ ಮಾಡಬಹುದೇ ಹೊರತು, ಪಕ್ಕದ ಹೊಟೇಲ್ನಲ್ಲಿ ಚಿಕನ್ ಬಿರಿಯಾನಿ ಇದೆ. ಇಲ್ಯಾಕಿಲ್ಲ. ನಂಗೆ ಬೇಕೇ ಬೇಕು, ಮಾಡಿಕೊಡು ಎಂದು ವೆಜ್ ಹೋಟೇಲ್ನವನನ್ನು ಕೇಳಲು ಸಾಧ್ಯವೇ?' ಎಂದು ಇವರನ್ನು ಯಾರೂ ಕೇಳಿದಂತಿಲ್ಲ.
ಡಬ್ಬಿಂಗ್ ಬೇಡ ಅನ್ನೋದು ಕಾನೂನಿಗೆ ವಿರುದ್ಧ ಎನ್ನುವುದು ಇವರ ಇನ್ನೊಂದು ವಾದ. ಹೌದು. ಡಬ್ಬಿಂಗ್ ಬೇಡ ಎನ್ನುವವರೂ ಹೇಳುತ್ತಿರುವುದು ಅದೇ. ಈ ಕಾನೂನು ಸರಿ ಇಲ್ಲ, ಅದು ಬದಲಾಗಬೇಕು ಎಂದು. ಐರ್ಲೆಂಡ್ನಲ್ಲಿದ್ದ ಗರ್ಭಪಾತ ವಿರೋಧಿ ಕಾನೂನಿನಿಂದಾಗಿ ಸವಿತಾ ಹಾಲಪ್ಪನವರ್ ಜೀವ ಕಳೆದುಕೊಂಡರು. ಆನಂತರ ಅಲ್ಲಿ ಕಾನೂನು ಬದಲಾಗಲಿಲ್ಲವೇ? ಇಲ್ಲೂ ಆಗ್ತಿರೋದು ಅದೇ. ಹುಟ್ಟದೇ ಇರೋ ಡಬ್ಬಿಂಗ್ ಅನ್ನೋ ಮಗುನಾ ಬದುಕಿಸೋಕೆ ಹೋಗಿ ಕನ್ನಡ ಸಿನಿಮಾ ತಾಯಿ ಸಾಯುವ ಅಪಾಯ ಇದೆ. ಸತ್ತ ಮೇಲೆ ಆಗೋದಕ್ಕಿಂತ ಬದುಕಿರುವಾಗಲೇ ಕಾನೂನು ಬದಲಾಗಲಿ.
ಡಬ್ಬಿಂಗ್ ಬಂದ್ರೆ ವಿಶ್ವಾದ್ಯಂತ ಕ್ಲಾಸಿಕ್ ಸಿನಿಮಾಗಳು ಕನ್ನಡಕ್ಕೆ ಬರುತ್ತವೆ ಎಂಬ ಆಶಯ ನನ್ನದು ಎಂದಿದ್ದಾರೆ ರಾಜೇಂದ್ರ ಸಿಂಗ್ಬಾಬು. ಇದು ಅನೇಕರ ಭ್ರಮೆಯೂ ಹೌದು. ಆದರೆ, ಡಬ್ಬಿಂಗ್ ಬಂದರೆ ಕನ್ನಡಕ್ಕೆ ಇರಾನಿ, ಇಟಾಲಿಯನ್ ಸಿನಿಮಾಗಳು ಡಬ್ ಆಗುತ್ತವೆಯೇ? ಬರೋದು ಹಿಂದಿ, ತೆಲುಗು ತಮಿಳಿನ ಕಮರ್ಷಿಯಲ್ ಸಿನಿಮಾಗಳು ಮಾತ್ರ ಎಂಬುದು ಅವರಿಗೆ ಗೊತ್ತಿಲ್ಲದ ವಿಚಾರವೇ?
ಇನ್ನು ಡಬ್ಬಿಂಗ್ನಿಂದ ಒಂದು ಚಿತ್ರರಂಗ ಬೀದಿಪಾಲಾಗುವುದಾದರೆ ತೆಲುಗು ತಮಿಳು ಚಿತ್ರರಂಗ ಇಷ್ಟೊತ್ತಿಗೆ ಬೀದಿಪಾಲಾಗಬೇಕಿತ್ತು ಅಂತಾರೆ ರಾಜೇಂದ್ರಸಿಂಗ್ ಬಾಬು. ಆದರೆ ತೆಲುಗು ಆಂಧ್ರ, ತಮಿಳುನಾಡಿನಲ್ಲಿರುವ ಚಿತ ್ರಮಂದಿರಗಳ ಸಂಖ್ಯೆಗೂ ಕರ್ನಾಟಕದಲ್ಲಿರುವ ಚಿತ್ರಮಂದಿರಗಳ ಸಂಖ್ಯೆಗೂ ಎಷ್ಟು ವ್ಯತ್ಯಾಸವಿದೆ, ನಮ್ಮ ಎಷ್ಟು ಸಿನಿಮಾಗಳು ಅಲ್ಲಿ ಬಿಡುಗಡೆಯಾಗುತ್ತಿವೆ. ಎಷ್ಟು ಸಿನಿಮಾಗಳು ಅಲ್ಲಿಗೆ ಡಬ್ ಆಗುತ್ತಿವೆ. ಒಂದು ವೇಳೆ ಆದರೂ, ಅಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತವೆ. ಅಲ್ಲಿನ ಚಿತ್ರಗಳ ಹೊಟ್ಟೆ ಮೇಲೆ ಹೊಡೆಯುವಂತ ಮಟ್ಟದಲ್ಲಿ ನಮ್ಮ ಚಿತ್ರಗಳು ಅವರ ಚಿತ್ರಗಳನ್ನು ತುಳಿಯುತ್ತಿವೆಯೇ ಎಂಬ ಅರಿವೇ ಇಲ್ಲದೆ, ನಮ್ಮ ಸಿನಿಮಾ ಅಲ್ಲಿಗೆ ಡಬ್ ಆಗ್ತವೆ, ಅವ್ರ್ ಸಿನಿಮಾಗಳೂ ಇಲ್ಲಿಗೆ ಆಗ್ಲಿ ಎಂದು ವಾದಿಸುವುದು ಎಷ್ಟು ಸೂಕ್ತ?
ಈ ಸಾಫ್ಟ್ವೇರ್ ಕಂಪನಿ, ಬಿಪಿಓಗಳಲ್ಲಿ ಕೆಲಸ ಮಾಡುವ ಕೆಲವರು ತಮ್ಗೆ ಆಗಬೇಕಾದ್ದೇನಿಲ್ಲ ಎನ್ನುವಂತೆ ಡಬ್ಬಿಂಗ್ ಬೇಕು ಎನ್ನುತ್ತಿದ್ದಾರೆ. ಆದರೆ, ಅದೇ ನೀವು ಅವರ ಹೊಟ್ಟೆಪಾಡಿನ ವಿಷಯಕ್ಕೆ ಕೈ ಹಾಕಿ ನೋಡಿ. ಅಮೆರಿಕಾ ಔಟ್ಸೋರ್ಸಿಂಗ್ ಮಾಡೊಲ್ಲ ಅಂದಾಗಲೆಲ್ಲಾ ಇವರು ಬಾಯಿಬಡ್ಕೊತಾರೆ. ಔಟ್ ಸೋರ್ಸಿಂಗ್ ನಿಂತರೆ ಇವರ ಹೊಟ್ಟೆ ತುಂಬೋದಿಲ್ಲವೇ, ಇವರ ಅನ್ನಕ್ಕೆ ಕತ್ತರಿ ಬೀಳುತ್ತೆಯೇ?. ಇಲ್ಲ. ಕೇವಲ ಇವರ
ದುಬಾರಿ ಸಂಬಳ ಕಡಿಮೆ ಆಗುತ್ತೆ. ಇವರ ಪಬ್ಬು, ಡಿಸ್ಕೋ, ಮಲ್ಟಿಪ್ಲೆಕ್ಸ್ ಖರ್ಚುಗಳಿಗೆ ಖೋತಾ ಆಗುತ್ತದೆ. ಸರ್ಕಾರಿ ನೌಕರರಂತೆ ಸಾಧಾರಣ ಜೀವನ ನಡೆಸಬೇಕಾಗುತ್ತೆ. ಆದರೂ ಇವರು ಅದಕ್ಕೂ ಬೊಂಬಡಾ ಬಜಾಯಿಸುತ್ತಾರೆ. ಆದರೆ ಇಲ್ಲಿ ಕಾರ್ಮಿಕರು ಬೀದಿಗೆ ಬೀಳ್ತಾರೆ ಅಂದ್ರೂ ಇವರು ಮಾತ್ರ, ಬಿದ್ರೆ ಬೀಳಲಿ ಬಿಡಿ ಎಂಬಂತೆ ಮಾತನಾಡುತ್ತಾರೆ. ಹಾಗಾಗಿ ಅಂಥವರ ಮಾತಿಗೆ ಬೆಲೆ ಕೊಡುವ ಅಗತ್ಯ ಚಿತ್ರರಂಗಕ್ಕಿಲ್ಲ.
ಸಾಹಿತ್ಯ ಲೋಕದಲ್ಲಿ ಅನುವಾದ ಸಮಸ್ಯೆಯೇ ಅಲ್ಲ. ಯಾಕಂದ್ರೆ ನಮ್ಮಲ್ಲಿ ಸಾಹಿತ್ಯ ದೊಡ್ಡ ಉದ್ಯಮ ಅಲ್ಲ. ಯಾರು ಎಷ್ಟೇ ಬರೆದ್ರೂ ನಮ್ಮವರೂ ಕೂಡ ಮನೇಲಿ ಕೂತು ಬರೀಬಹುದು. ಪೆನ್ನು ಪೇಪರ್ರು ಇದ್ರೆ ಸಾಕು. ಆದರೆ ಸಮಸ್ಯೆ ಆಗೋದು ಸೇಲ್ಸ್ ವಿಷಯದಲ್ಲಿ. ಒಂದು ಅಂಗಡಿಯಲ್ಲಿ ಕೇವಲ ಹತ್ತು ಪುಸ್ತಕ ಮಾರಾಟಕ್ಕೆ ಇಡಬಹುದು ಎನ್ನುವ ರೂಲ್ ಬಂದ್ರೆ, ಆ ಹತ್ತರಲ್ಲ್ಲಿ ಚೇತನ್ ಭಗತ್ನ ಅನುವಾದಿತ ಕೃತಿನೋ, '30 ದಿನದಲ್ಲಿ ಇಂಗ್ಲಿಷ್ ಕಲಿಯಿರಿ', '200 ಸವಿರುಚಿಗಳು', 'ಹುಡುಗಿಯರನ್ನು ಆಕರ್ಷಿಸುವುದು ಹೇಗೆ?' 'ದುಡ್ಡು ಮಾಡೋದು ಹೇಗೆ?', 'ಬದುಕಲು ಕಲಿಯಿರಿ', ಅನ್ನೋ 'ಜನಪ್ರಿಯ' ಪುಸ್ತಕಗಳೇ ತುಂಬಿರುತ್ತವೇ ಹೊರತು, ನಮ್ಮ ಜ್ಞಾನಪೀಠ ಸಾಹಿತಿಗಳ ಕಾದಂಬರಿಗಳನ್ನು ಇಡೊಲ್ಲ. ಹಾಗಾಗಿ, ಡಬ್ಬಿಂಗ್ ವಿಷಯದಲ್ಲ್ಲಿ ಮುಖ್ಯವಾಗಿ ಆಗ್ತಿರೋದು ಇದೇ ಸೆಲ್ಲಿಂಗ್ ಸಮಸ್ಯೆ. ಚಿತ್ರಮಂದಿರಗಳ ಸಮಸ್ಯೆ.
ಇನ್ನು ನಮ್ಮ ಮಕ್ಕಳು ಡಿಸ್ಕವರಿ, ಕಾರ್ಟೂನ್ ಚಾನೆಲ್ಗಳನ್ನು ಕನ್ನಡದಲ್ಲಿ ನೋಡುವುದರಿಂದ ವಂಚಿತರಾಗುತ್ತಿದ್ದಾರೆ ಎನ್ನುವುದು ಇನ್ನೊಂದು ಮೊಸಳೆ ಕಣ್ಣೀರು. ಸ್ಕೂಲಲ್ಲಿ ಟೀಚರ್ ಹೇಳಿಕೊಡೋ ಪಾಠ ಇಂಗ್ಲಿಷ್ನಲ್ಲಿದ್ರೆ ಇವರ ಮಕ್ಕಳಿಗೆ ಅರ್ಥ ಆಗುತ್ತೆ. ಆದರೆ ಟಿವಿಯಲ್ಲಿ ನೋಡೋ ಕಾರ್ಟೂನ್, ಡಿಸ್ಕವರಿ ಚಾನೆಲ್ನ ಇಂಗ್ಲಿಷ್ ಮಾತ್ರ ಅರ್ಥ ಆಗಲ್ಲ. ಇವರಿಗೆ ಮನರಂಜನೆ ಮಾತ್ರ ಕನ್ನಡದಲ್ಲಿ ಬೇಕು, ಶಿಕ್ಷಣ ಕನ್ನಡದಲ್ಲಿ ಬೇಡ್ವಾ? ಇಂಗ್ಲಿಷ್ ಶಾಲೆ ಬೇಡ, ನಮಗೆ ಕನ್ನಡದಲ್ಲೇ ಶಿಕ್ಷಣ ಕೊಡಿ ಅಂತ ಇವರ್ಯಾಕೆ ಕೇಳೋದಿಲ್ಲ? ಡಬ್ಬಿಂಗ್ ಸಿನಿಮಾಗಳನ್ನು ಕೆಲವರು ಸ್ಪರ್ಧೆ ಅಂತ ಕರೀತಾರೆ.
ಇತ್ತೀಚೆಗೆ ನಿರ್ದೇಶಕ ನಾಗಾಭರಣ ಒಂದು ಮಾತು ಹೇಳಿದರು. ಹೀಗೆ 'ಸ್ಪರ್ಧೆ ಇರಲಿ' ಎಂದುಕೊಂಡೇ ನಮ್ಮಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಬಂದಿದ್ದು. ಈಗ ನೋಡಿ, ಕನ್ನಡ ಮಾಧ್ಯಮದಲ್ಲಿ ಎಷ್ಟು ಜನ ಮಕ್ಕಳು ಓದುತ್ತಿದ್ದಾರೆ? ಕನ್ನಡದಲ್ಲಿ ಶಿಕ್ಷಣ ಅನ್ನೋದು ಈಗ ಮುಗಿದುಹೋದ ಕಥೆ. ಡಬ್ಬಿಂಗ್ ಬಂದರೆ ಕನ್ನಡ ಚಿತ್ರಗಳೂ ಕೂಡ ಕನ್ನಡ ಶಿಕ್ಷಣದಷ್ಟೇ ಹಾಳಾದರೆ, ಇವತ್ತು ಡಬ್ಬಿಂಗ್ ಬೇಕು ಎನ್ನುತ್ತಿರುವರು ಅಂದು ಕನ್ನಡ ಸಿನಿಮಾಗಳನ್ನು ಉಳಿಸಲು ಬರುತ್ತಾರೆಯೇ? ಈ ನಡುವೆ, ಎಂಎನ್ಸಿಗಳ ಸಾಂಸ್ಕೃತಿಕ ಪಿಆರ್ಓಗಳಾಗಿ ಕೆಲವು ಸೋ ಕಾಲ್ಡ್ ಗಣ್ಯರು ಹೇಳಿಕೆ ಕೊಟ್ಟು, ಲಾಭ ಮಾಡಿಕೊಳ್ಳುತ್ತಿರುವ ಅನಾಹುತಕಾರಿ ಬೆಳವಣಿಗೆಗಳು ಎಲ್ಲರ ಕಣ್ಣಿಗೂ ಬಿದ್ದಿಲ್ಲ. ಡಬ್ಬಿಂಗ್ ಪರ ಇರುವ ನ್ಯೂಸ್ ಕೆಲವು ಚಾನೆಲ್ಗಳು ಇಂಥ ಲಾಬಿಯಲ್ಲಿವೆಯೇ ಎಂಬ ಅನುಮಾನ ಮೂಡುತ್ತಿರುವುದೂ ಸುಳ್ಳಲ್ಲ.
ಡಬ್ಬಿಂಗ್ ಬೇಕು ಅಂತ ಒಂದು ಗಂಟೆ ಕಾರ್ಯಕ್ರಮ ಮಾಡಲಿ. ಅದು ಬಿಟ್ಟು ಇವರು, ಈ ಕಡೆಯವರನ್ನ ಚರ್ಚೆಗೆ ಕರೆದು, ಯಾರೋ ಅನಾಮಿಕರಿಗೆ ಸಿನಿಮಾ ವಿಮರ್ಶಕ ಎಂಬ ಬಿರುದು ಕೊಟ್ಟು ಮಾತನಾಡಿಸುತ್ತಾರೆ. ಅದಲ್ಲದೆ, ಚರ್ಚೆಯನ್ನು ತಮಗೆ ಬೇಕಾದ ಕಡೆಗೆ ವಾಲಿಸುತ್ತಾರೆ. ಇವರಿಗೆ ಡಬ್ಬಿಂಗ್ ಬೇಕು ಎಂದರೆ, ಕನ್ನಡದಲ್ಲಿ ನ್ಯೂಸ್ ಚಾನೆಲ್ಗಳು ಬೇಡ. ತಮಿಳಿನ ಚಾನೆಲ್ ಅನ್ನೇ ಡಬ್ ಮಾಡಲಿ. ಆಗುತ್ತದೆಯೇ? ಇಲ್ಲ. ಏಕೆಂದರೆ ಅದರಲ್ಲಿ ತಮಿಳುನಾಡಿನ ಸುದ್ದಿ ಬರುತ್ತೆ, ಬೆಂಗಳೂರಿನದಲ್ಲ. ಹಾಗೆಯೇ ತಮಿಳು ಸಿನಿಮಾಗಳು ಡಬ್ ಆದರೆ ಅದರಲ್ಲಿ ತಮಿಳುನಾಡಿನ ಫ್ಲೇವರ್ ಇರುತ್ತೆ. ಕರ್ನಾಟಕದ್ದಲ್ಲ ಎಂಬುದು ಇವರಿಗೆ ಅರ್ಥವಾಗಬೇಕಿದೆ.
ಇನ್ನು ಚಿತ್ರರಂಗದ ಒಳಗಿನವರ ವಿಚಾರಕ್ಕೆ ಬರುವುದಾದರೆ, ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಕೆಲವರು ಡಬ್ಬಿಂಗ್ಗೆ ಮಣೆ ಹಾಕುತ್ತಿದ್ದಾರೆ. ಜಗ್ಗೇಶ್ರ ಮಾತುಗಳಲ್ಲಿ ಹೇಳುವುದಾದರ ಎರಡು ಸಿನಿಮಾ ಮಾಡಿ ಏಳು ವರ್ಷ ಪಬ್ಲಿಸಿಟಿ ತಗೊಂಡ ಗುರುಪ್ರಸಾದ್ ಈ ಪಟ್ಟಿಯಲ್ಲಿದ್ದಾರೆ.
ಕಲಾತ್ಮಕ ಸಿನಿಮಾ ಮಾಡಿದ ನಿರ್ದೇಶಕರೊಬ್ಬರಿಗೆ ಆರ್ಟ್ ಸಿನಿಮಾ ಮಾಡೋದು ದೊಡ್ಡದಲ್ಲ, ಕಮರ್ಷಿಯಲ್ ಸಿನಿಮಾ ಮಾಡಿ ದುಡ್ಡು ಮಾಡಿ ತೋರಿಸಿ ಎಂದು ಸವಾಲು ಹಾಕಿದ್ದ ಗುರು, 'ನಾವು ಕಮರ್ಷಿಯಲ್ಲು' ಎನ್ನುತ್ತಾ ಈಗ ಡಬ್ಬಿಂಗ್ ಸಿನಿಮಾಗಳಿಂದ ದುಡ್ಡು ಮಾಡಿ ಎನ್ನುತ್ತಿದ್ದಾರೆ. 20 ವರ್ಷ ರಿಸರ್ಚ್ ಮಾಡಿ 3 ಸಿನಿಮಾ ಮಾಡಿರುವ ಇಂಥ ರಿಸರ್ಚ್ ಸ್ಟೂಡೆಂಟ್ಗಳ ಮಾತಿನಲ್ಲಿ ಎಷ್ಟು ಹುರುಳಿದೆ. ಯಾರೋ ಸ್ಟಾರ್ ಕಾಲ್ಶೀಟ್ ಕೊಡಲಿಲ್ಲ ಅಂದಾಕ್ಷಣ ಈ ನಿರ್ದೇಶಕ, ನಿರ್ಮಾಪಕರ ಡಬ್ಬಿಂಗ್ ಬಗೆಗಿನ ಅಭಿಪ್ರಾಯಗಳೇ ಬದಲಾಗುತ್ತವೆ. ದಿನಕ್ಕೊಂದು ಮಾತನಾಡುವ ಗುರುಪ್ರಸಾದ್, ರಾಜೇಂದ್ರಸಿಂಗ್ ಬಾಬು ಅವರ ಅಹಂಗಳಿಗೆ ಕನ್ನಡ ಚಿತ್ರರಂಗ ಬಲಿಯಾಗಬೇಕೆ?
ಇತ್ತೀಚೆಗೆ, ರೆಬೆಲ್ಸ್ಟಾರ್ ಎಂಬ ಹೆಸರಿಗೇ ಕಪ್ಪುಚುಕ್ಕಿಯಂತಾಗಿರುವ ಅಂಬರೀಶ್ ಅವರಿಗೆ ಸಿಸಿಎಲ್ ಕ್ರಿಕೆಟ್ ಮೈದಾನದಲ್ಲಿ ಕೂತು, 'ಜಿಂಕಲಕ ಹೂ ಹಾ' ಅಂತ ಕೂಗೋಕೆ ಪುರುಸೊತ್ತಿರುತ್ತೆ. ಆದರೆ, ಡಬ್ಬಿಂಗ್ ವಿರೋಧಿ ಪ್ರತಿಭಟನೆಗೆ ಹೋಗಿ 'ಕನ್ನಡ ಸಿನಿಮಾಗಳಿಗೆ ಜೈ' ಅನ್ನೋಕೆ ಟೈಮಿಲ್ಲ. ಯಾಕೆ ಸಪೋರ್ಟ್ ಮಾಡಲ್ಲ ಎಂದು ಕೇಳಿದರೆ, 'ನಾನು ಚಿತ್ರರಂಗ ಬಿಟ್ಟು 12 ವರ್ಷ ಆಯ್ತು' ಎನ್ನುವ ಅಂಬರೀಶ್ಗೆ 'ಅಂಬಿ ಸಂಭ್ರಮ' ಮಾಡಲು ಚಿತ್ರರಂಗ ಬೇಕಿತ್ತು. ಚಿತ್ರರಂಗದಿಂದ ದೂರ ಇದ್ರೆ, ಸುದೀಪ್, ದರ್ಶನ್ರ ಇತ್ತೀಚಿನ, ವೀರಪರಂಪರೆ, ವರದನಾಯಕ, ಬುಲ್ ಬುಲ್ ಚಿತ್ರದಲ್ಲಿ ಅಭಿನಯಿಸಿದ್ದು ಯಾರು? ನಾನು ಬೇರೆ ಯಾರಿಗೋ ಹತ್ತಿರ ಇದ್ದೇನೆ ಎಂದು ಹೇಳುವ ಧೈರ್ಯವಿಲ್ಲದೆ, ಚಿತ್ರರಂಗದಿಂದ ದೂರ ಇದ್ದೇನೆ ಎನ್ನುವ ಮಾತು ಅಂಬಿ ಇಮೇಜ್ಗೆ ಹೊಂದುವುದಿಲ್ಲ. ದೊಡ್ಡವರು ಅನ್ನೋ ಕಾರಣಕ್ಕೆ ಇಂಥವರನ್ನು ಬಲವಂತವಾಗಿ ಕರೆದುಕೊಂಡು ಬರುವುದರಿಂದ ಉಪಯೋಗವೂ ಇಲ್ಲ.
ಸುದೀಪ್, ದರ್ಶನ್ ಮೊನ್ನೆಯ ಪ್ರತಿಭಟನೆಗೆ ಬಂದರೂ ಅಲ್ಲಿ ಸುದೀಪ್ರ ವರ್ತನೆ ಟೀಕೆಗೀಡಾಗಿದೆ. ಮನಸ್ಸಿಲ್ಲದ ಮನಸ್ಸಿನಿಂದ 'ಬಂದ ಕಿಚ್ಚ, ಹೋದ ಕಿಚ್ಚ' ಎನ್ನುವಂತೆ ಬಂದು, 'ಇಷ್ಟೇ ಜನಾನಾ ಬಂದಿರೋದು?' ಅಂತ ಕಾಲೆಳೆದು, ಡಬ್ಬಿಂಗ್ ವಿರೋಧಿಸುವವರು 'ಕೈ ಎತ್ತಿ' ಎಂದಾಗ ನುಸುಳಿಕೊಂಡು 'ಕೈ ಎತ್ತಿ' ಓಡಿ ಹೋಗಿದ್ದಷ್ಟೇ ಅವರ ಹೆಗ್ಗಳಿಕೆ.
ಸಿಸಿಎಲ್ ಕ್ರಿಕೆಟ್ನಲ್ಲಿ ಸುದೀಪ್ರ ಜೊತೆಯಲ್ಲಿ ದಿಗಂತ್, ತರುಣ್ ಚಂದ್ರ, ಪ್ರಣಿತಾ, ಚಿರಂಜೀವಿ ಸರ್ಜಾ, ಪ್ರದೀಪ್, ಮುಂತಾದ ಗೆಳೆಯರ ಬಳಗ ಇರುತ್ತೆ. ಆದರೆ ಕನ್ನಡ ಸಿನಿಮಾ ಹೋರಾಟಕ್ಕೆ ಮಾತ್ರ ಸುದೀಪ್, ದರ್ಶನ್ ಏಕಾಂಗಿಯಾಗಿ ಬಂದಿದ್ದು ದುರದೃಷ್ಟಕರ. ಬಹುಷಃ ಈ ಹೋರಾಟವೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಂತೆ ಅಶೋಕ್ ಖೇಣಿ ಪ್ರಾಯೋಜಿತ ಆಗಿದ್ದಿದ್ದರೆ ಎಲ್ಲರೂ ಬರ್ತಿದ್ರೇನೋ ಪಾಪ. ಚಿತ್ರರಂಗದ ಪರವಾಗಿ ಹೋರಾಡಲು ಬಾರದ ಇವರನ್ನು ಸೆಲೆಬ್ರಿಟಿಗಳು ಎನ್ನುವುದೂ ತಪ್ಪೇ. ಎಲ್ಲಿಂದಲೋ ಬಂದ ಪೂಜಾಗಾಂಧಿಯಂಥವರಿಗೆ ಇದ್ದಷ್ಟು ಕಾಳಜಿ ನಮ್ಮ ಈ ಅಪ್ಪಟ ಕನ್ನಡಿಗರಿಗಿಲ್ಲದಿರುವುದು ವಿಪರ್ಯಾಸ.
ಇನ್ನು, ಸಿಸಿಐ ಅನ್ನೋದು ಕೋರ್ಟ್ ಅಲ್ಲ ಎಂಬುದೂ ಗೊತ್ತಿಲ್ಲದ, ವಾಣಿಜ್ಯ ಮಂಡಳಿಗೆ ಕಂಟೆಪ್ಟ್ ಆಫ್ ಕೋರ್ಟ್ ಅನ್ನೋ ಮಾತು ಬಿಟ್ಟು ಇನ್ನೇನೂ ಹೇಳುವ ತಾಕತ್ತಿಲ್ಲ. ದಿಟ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲದ ಸೀನಿಯರ್ ಸಿಟಿಜನ್ಗಳನ್ನೇ ಅಧ್ಯಕ್ಷರನ್ನಾಗಿಸಿ ಈ ವಾಣಿಜ್ಯ ಮಂಡಳಿ ಇಷ್ಟು ವರ್ಷಗಳಲ್ಲಿ ಚಿತ್ರರಂಗಕ್ಕಾಗಿ ಏನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತು.
ಹಾಗಿದ್ದರೆ ಈ ಡಬ್ಬಿಂಗ್ ಸಮಸ್ಯೆಯಿಂದ ಕನ್ನಡ ಸಿನಿಮಾ ಉಳಿಸೋರು ಯಾರು ಎಂದರೆ ಕೈಗಳು ಮತ್ತೆ ಶಿವಣ್ಣ, ಜಗ್ಗೇಶ್ರಂಥವರ ಕಡೆಗೇ ಹೊರಳುತ್ತವೆ. ಮೊನ್ನೆ ಪ್ರತಿಭಟನೆಗೆ ಬಂದ ಅದೆಷ್ಟು ಜನರಿಗೆ ನಿಜವಾದ ಬದ್ಧತೆ ಇದೆಯೋ ಗೊತ್ತಿಲ್ಲ. ಆದರೆ ಅಂಥ ಬದ್ಧತೆ ಇದ್ದರೆ, ನಟರು ಸುಮ್ಮನೆ ಮಾತಿನಲ್ಲಿ ವಿರೋಧಿಸುವುದಕ್ಕಿಂತ, ಪ್ರಾಕ್ಟಿಕಲ್ ಆಗಿ ಏನು ಮಾಡಬಹುದು ಎಂಬ ಬಗ್ಗೆ ಯೋಚಿಸಲಿ. ಒಂದು ವೇಳೆ ಡಬ್ಬಿಂಗ್ ಬಂದ್ರೆ, ಡಬ್ಬಿಂಗ್ ಮಾಡುವ ನಿರ್ಮಾಪಕರಿಗೆ ಯಾವ ನಟರೂ ಕಾಲ್ಶೀಟ್ ಕೊಡದೇ ಇರಲಿ. ಡಬ್ಬಿಂಗ್ ಪರ ನಿರ್ದೇಶಕನ ಸಿನಿಮಾಗೆ ದುಡ್ಡು ಹಾಕುವ ನಿರ್ಮಾಪಕರಿಗೂ ಕಾಲ್ಶೀಟ್ ಕೊಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲಿ. ಪ್ರದರ್ಶಕರ ವಲಯದಲ್ಲಿ ತಮ್ಮ ನಿಯಂತ್ರಣ ಇಟ್ಟುಕೊಂಡು, ಡಬ್ಬಿಂಗ್ ಚಿತ್ರಗಳಿಗೆ ಯೋಗ್ಯತೆ ಮೀರಿದ ಮನ್ನಣೆ ದೊರೆಯುವುದನ್ನು ತಪ್ಪಿಸಲಿ. ಅದನ್ನಂತೂ ಯಾವ ಕಾನೂನೂ ತಡೆಯಲು ಸಾಧ್ಯವಿಲ್ಲ.
-ಹರಿ