
ಇದು ಕಿರುಚಿತ್ರದ ಕಿರಿಕ್.ಹೆಸರು 'ನಾನು ಬೇವರ್ಸಿ ಗೊತಾ?್ತ' ಕಿರುಚಿತ್ರ ಆಗಿದ್ದಕ್ಕೆ ಈ ಶೀರ್ಷಿಕೆ ವಿವಾದಕ್ಕೆ ಒಳಗಾಗಿಲ್ಲ. ರೆಗ್ಯುಲರ್ ಸಿನಿಮಾ ಆಗಿದ್ದರೆ ಇಂಥ ಶೀರ್ಷಿಕೆಗೆ ಅನುಮತಿ ಸಿಗೋದೇ ಡೌಟಿತ್ತು. ಬೇವರ್ಸಿ ಅಶ್ಲೀಲ ಪದ ಅಲ್ಲ. ಆದರೆ ಸಿನಿಮಾಗೆ ಹೆಸರಿಡೋ ಮಂದಿಗೆ ಒಂದು ಶಿಷ್ಟಾಚಾರ ಬೇಡವೇ? ಅದರಲ್ಲೂ ಕಿರುಚಿತ್ರ ಎಂಬುದು ಸದ್ಯದ ಮಟ್ಟಿಗೆ ಅತ್ಯಂತ ಕ್ರಿಯಾಶೀಲ ವಿಭಾಗ. ಅದಕ್ಕೆ ಸಿನಿಮಾ, ನಾಟಕ, ಧಾರಾವಾಹಿ ಇವೆಲ್ಲವುಗಳಿಗಿಂತ ಭಿನ್ನವಾದ ನೋಡುಗ ವರ್ಗವಿದೆ. ಅದರ ಛಾಲೆಂಜುಗಳೇ ಡಿಫರೆಂಟು. ಅಷ್ಟೇ ಅಲ್ಲ ಹಿರಿತೆರೆಗೆ ಬರುವ ಕನಸಿರೋ ಪ್ರತಿ ನಿರ್ದೇಶಕನಿಗೂ ಕಿರುಚಿತ್ರ ಎಂಬುದು ಒಂದು ಪ್ರೊಫೈಲ್ ಇದ್ದ ಹಾಗೆ. ಅಲ್ಲಿ ಆತ ತನ್ನ ಪ್ರತಿಭೆ, ಶ್ರದ್ಧೆ, ಶಿಷ್ಟತೆ, ಕ್ರಿಯಾಶೀಲತೆ, ಎಲ್ಲವನ್ನೂ ತೋರ್ಪಡಿಸಿಕೊಂಡರೆ ಆತನಿಗೆ ಸಿನಿಮಾ ನಿರ್ದೇಶಿಸೋ ಅವಕಾಶ ಸಿಗೋ ಸಾಧ್ಯತೆ ಹೆಚ್ಚು. ಈ ಸೂಕ್ಷ್ಮತೆಗಳು ಕಿರುಚಿತ್ರ ಮಾಡುವ ತಂಡದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಾದ ವಿಷಯ.
'ನಾನು ಬೇವರ್ಸಿ ಗೊತಾ'್ತ ಎಂಬ ಹೇಳಲು ಮುಜುಗರವಾಗುವ ಹೆಸರಿನ ಕಿರುಚಿತ್ರ ಅಚ್ಚರಿ ಎಂಬಂತೆ ಚಿತ್ರೋತ್ಸವವೊಂದರಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ರೋಲಿಂಗ್‌ಫ್ರೇಮ್ಸ್ ಸಂಸ್ಥೆ ನಡೆಸಿದ ಚಿತ್ರೋತ್ಸವದಲ್ಲಿ ಹಲವು ಭಾಷೆಗಳ ಚಿತ್ರಗಳೊಂದಿಗೆ ಸ್ಪರ್ಧಿಸಿ ಒಂದು ಅವಾರ್ಡು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಈ ಕನ್ನಡ ಕಿರುಚಿತ್ರ ಎಂಬುದು ಸಂತಸದ ವಿಷಯ. ಆದರೆ ಈ ಪ್ರಶಸ್ತಿಯೇ ಈಗ ವಿವಾದಕ್ಕೆ ಕಾರಣವಾಗಿರೋದು ವಿಷಾದನೀಯ.
ಪ್ರಶಸ್ತಿ ಬಂದಿರೋದು ಶ್ರೇಷ್ಟ ನಟಿ ವಿಭಾಗದಲ್ಲಿ ಚಂದನ ಎಂಬ ನಟಿಗೆ. ಆಕೆ ಈ ಕಿರುಚಿತ್ರದ ನಾಯಕಿ. ಪ್ರಶಸ್ತಿ ಸ್ವೀಕರಿಸಿರೋದು ನಿರ್ದೇಶಕ ಅಶೋಕ್ ಸಾಮ್ರಾಟ್. ನಟಿಯ ಅನುಪಸ್ಥಿತಿಯಲ್ಲಿ ಆಕೆಯ ಪರವಾಗಿ ಸ್ವೀಕರಿಸೋದು ವಾಡಿಕೆ. ಒಪ್ಪೋಣ. ಆದರೆ ಆ ಪ್ರಶಸ್ತಿ ಬಂದಿರೋ ಸುದ್ದಿಯೇ ನಟಿಗೆ ತಿಳಿಸಿಲ್ಲದಿರೋದು ಹಾಗೂ ಆ ಪ್ರಶಸ್ತಿಯನ್ನು ನಟಿ ಚಂದನಾಗೆ ಕೊಡೋದಿಲ್ಲ ಅಂತ ಅಶೋಕ್ ಹಠ ಹಿಡಿದಿರೋದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಚಂದನಾ ಹೇಳಿಕೆ ಹೀಗಿದೆ
ಬರೀ ಹುಡುಗರೇ ಇದ್ದ ತಂಡದಲ್ಲಿ ನಾನೊಬ್ಬಳೆ ಹುಡುಗಿ. ನನ್ನನ್ನು ನಿರ್ದೇಶಕ ಮತ್ತು ನಿರ್ಮಾಪಕರು ಅತ್ಯಂತ ಅಸಭ್ಯವಾಗಿ ನಡೆಸಿಕೊಂಡಿದ್ದಾರೆ. ಒಪ್ಪಿಕೊಂಡಿದ್ದ ಸಂಭಾವನೆ ಕೂಡ ಕೊಟ್ಟಿಲ್ಲ. ಶೂಟಿಂಗ್‌ನಲ್ಲಿ ವೃತ್ತಿಪರತೆ ಇರಲಿಲ್ಲ. ಹೇಳಿದಕ್ಕಿಂತ ಹೆಚ್ಚು ದಿನ ಶೂಟ್ ಮಾಡಿ ನನಗೆ ನನ್ನ ತೆಲುಗು ಧಾರಾವಾಹಿಯ ಡೇಟ್‌ಗೆ ಬೇಕಂತಲೇ ತೊಂದರೆ ಮಾಡಿದ್ದಲ್ಲದೆ, ಕಾರ್ ಪಂಚರ್ ಮಾಡಿದ್ದು, ಫ್ಲೈಟ್ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿಸಿ ನಮಗೆ ನಷ್ಟ ಮಾಡಿದ್ದು ಹಾಗೂ ಅರ್ಧರಾತ್ರಿಯಲ್ಲಿ ಏರ್ ಪೋರ್ಟಲ್ಲಿ ಇರೋ ಥರ ಮಾಡಿದ್ದು, ಶೂಟಿಂಗ್ ಸ್ಪಾಟಲ್ಲಿ ಅವಾಚ್ಯವಾಗಿ ನಿಂದಿಸಿದ್ದು ಇವೆಲ್ಲ ತುಂಬಾ ನೋಯಿಸಿದೆ. ಈಗ ನನ್ನ ನಟನೆಗೆ ಪ್ರಶಸ್ತಿ ಬಂದರೆ ಅದನ್ನು ನನಗೆ ತಿಳಿಸಿಯೂ ಇಲ್ಲ. ಫೇಸ್‌ಬುಕ್ಕಲ್ಲಿ ಕೂಡ ನನಗೆ ತಿಳಿದರೆ ಕಷ್ಟ ಅಂತ ಸಿನಿಮಾಗೆ ಪ್ರಶಸ್ತಿ ಬಂದಿದೆ ಅಂತ ಹಾಕಿಕೊಂಡು ನನ್ನಿಂದ ಮುಖತಪ್ಪಿಸಿಕೊಳ್ಳುತ್ತಿದ್ದಾರೆ. ಸಂಭಾವನೆ ಕಥೆ ಮರೆಯೋಣ. ನನಗೆ ಸಲ್ಲಬೇಕಾದ ಪ್ರಶಸ್ತಿ ನನಗೆ ತಲುಪಲಿ ಸಾಕು.
ಅಶೋಕ್ ಸಾಮ್ರಾಟ್ ವರ್ಷನ್
80ಸಾವಿರ ಖರ್ಚು ಮಾಡಿರೋ ಈ ಕಿರುಚಿತ್ರ ವಿಳಂಬ ಆಗೋಕೆ ಆಕೆಯೇ ಕಾರಣ. ಆಕೆ ಶೂಟಿಂಗ್‌ಗೆ ಸಹಕರಿಸಿದ ದಿನವೇ ಇಲ್ಲ. ಊಟ,ಬಟ್ಟೆ, ಸಮಯ ಎಲ್ಲದಕ್ಕೂ ಕಿರಿಕ್. ನಿರ್ದೇಶನ, ಕ್ಯಾಮರಾವರ್ಕ್ ಈ ವಿಷಯದಲ್ಲೂ ತಲೆಹಾಕಿ ಸ್ಟಾರ್ ಥರ ದರ್ಪ ತೋರಿಸಿದರು. ಶೂಟಿಂಗ್ ಮುಗಿಯೋತನಕ ಇದ್ದ ತಾಳ್ಮೆ , ಕೊನೆ ದಿನ ಕಳೆದುಕೊಂಡು ನನ್ನ ಅಸಹನೆ ಹೊರಹಾಕಿದೆ. ಆಕೆ ಅಷ್ಟು ದಿನ ಮಾಡಿರೋ ತೊಂದರೆಗೆ ನಾನು ಕೊನೆದಿನ ತಿರುಗೇಟು ನೀಡಿದೆ. ಅವಾರ್ಡ್ ಬಂದಿರೋದು ಆಕೆಯ ನಟನೆಗೆ ನಿಜ. ನಾನಿಲ್ದೆ ಹೋದ್ರೆ ಅವರಿಗೆಲ್ಲಿ ಅವಾರ್ಡ್ ಬರ್ತಿತ್ತು? ನಾನು ಚಿತ್ರೋತ್ಸವಕ್ಕೆ ಕಳಿಸದೆ ಹೋಗಿದ್ದರೆ ಪ್ರಶಸ್ತಿ ಸಿಗ್ತಾ ಇತ್ತಾ? ನಾನು ಈ ಅವಾರ್ಡ್ ಆಕೆಗೆ ಕೊಡೋಕೆ ರೆಡಿ ಇಲ್ಲ. ನನ್ನನ್ನು ಕ್ಷಮೆ ಕೇಳಲಿ. ಆಗ ಈ ಬಗ್ಗೆ ಯೋಚಿಸ್ತೀನಿ. ನಾನು ಸುಳ್ಳು ಹೇಳ್ತಿದೀನಿ ಅಂತ ಅನಿಸಿದರೆ ಇಡೀ ಚಿತ್ರತಂಡವನ್ನು ಒಮ್ಮೆ ನೀವೇ ಮಾತಾಡಿಸಿ. ಆಕೆಯ ಅಸಲಿಯತ್ತು ಗೊತ್ತಾಗುತ್ತದೆ.
ಸದ್ಯಕ್ಕೆ ಅವಾರ್ಡು ಬೇವರ್ಸಿಯಾಗಿದೆ. ಅದು ನಟಿಯ ಮಡಿಲಿಗೆ ಸೇರಬೇಕಿದೆ. ಈ ವಿವಾದದಿಂದ ನಿರ್ದೇಶಕನಾಗಿ ಬೆಳೆಯೋ ಕನಸು ಹೊತ್ತಿರೋ, ಅದರಲ್ಲೂ ಹೆಣ್ಣಿನ ಶೋಷಣೆ ವಿರುದ್ಧದ ಕಿರುಚಿತ್ರ ಮಾಡಿರೋ ಅಶೋಕ್‌ಗೆ ಈ ವಿವಾದ ಖಂಡಿತಾ ಸಹಾಯ ಮಾಡುವುದಿಲ್ಲ. ಅವರು ಪ್ರಬುದ್ಧವಾಗಿ ವರ್ತಿಸೋ ಅಗತ್ಯವಿದೆ. ನಟಿ ಚಂದನ ಕೂಡ ತೆಲುಗಿನಲ್ಲಿ ಈಗಾಗಲೇ ಹೆಸರು ಮಾಡಿದ್ದರೂ ಕನ್ನಡ ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಸೋ ಆಸೆ ಇಟ್ಟುಕೊಂಡಿರೋ ಪ್ರತಿಭೆ. ಕಹಿಘಟನೆ ಮರೆತು ಚಿತ್ರತಂಡದೊಂದಿಗೆ ಮಾತಾಡಿ ಇತ್ಯರ್ಥಮಾಡಿಕೊಳ್ಳಬೇಕಿದೆ. ರೋಲಿಂಗ್‌ಫ್ರೇಮ್ಸ್‌ಗೆಕೂಡಾ ತಾನು ನೀಡಿರೋ ಪ್ರಶಸ್ತಿ ತಲುಪಬೇಕಿರೋವ್ರಿಗೆ ತಲುಪಿದೆಯಾ ಎಂದು ಖಾತ್ರಿ ಪಡಿಸಿಕೊಳ್ಳುವ ಜವಾಬ್ದಾರಿಯಿದೆ.
- ನವೀನ್ ಸಾಗರ್
Advertisement