
ನಾಗರಾಜ್ ಕೋಟೆ ಆಗೊಮ್ಮೆ ಹಕ್ಕಿಯ ಥರ ಮರದ ಮೇಲೆಯೇ ನಾಟಕ ಪ್ರದರ್ಶನ ನೀಡಿ ಲಿಮ್ಕಾ ದಾಖಲೆಗೆ ಸೇರಿಕೊಂಡಿದ್ದರು. ಈಗ ಬಾನಾಡಿ ಎಂಬ ಹೆಸರಿನ ಚಿತ್ರದ ಮೂಲಕ ಮತ್ತೆ ತಮ್ಮ ಪಕ್ಷಿಪ್ರೀತಿ ಮೆರೆದಿದ್ದಾರೆ. ನಾಗರಾಜ್ ಕೋಟೆ ಬಾನಾಡಿ ಎಂಬ ಮಕ್ಕಳ ಚಿತ್ರ ಮಾಡ್ತಾ ಇರೋದು ಈಗಾಗಲೇ ಪ್ರಶಸ್ತಿಗಾಗಿ ಅಥವಾ ಸಬ್ಸಿಡಿಗಾಗಿ ಮಕ್ಕಳ ಚಿತ್ರ ಮಾಡಲು ಹೊರಟವರನ್ನು ಕಂಗಾಲಾಗಿಸಿದೆ. ಕಾರಣ ಈ ಚಿತ್ರದ ಬಗೆಗೆ ಕೇಳಿಬರುತ್ತಿರುವ ಪ್ರಶಂಸೆಯ ಮಾತುಗಳು. ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಹೇಳಿದ್ದು ಕೂಡ ಈ ಮಾತಿಗೆ ಪೂರಕವಾಗಿತ್ತು. ತಮ್ಮ ಶಿಷ್ಯನ ನಿರ್ದೇಶನದ ಬಾನಾಡಿ ಚಿತ್ರದ ಬಗ್ಗೆ ಮಾತನಾಡುತ್ತಾ 'ಡಿಸೆಂಬರ್ ಹತ್ತಿರ ಬರುತ್ತಿದ್ದಂತೆ ಪ್ರಶಸ್ತಿ ಮತ್ತು ಸಬ್ಸಿಡಿ ಆಸೆಗಾಗಿ ಗಡಿಬಿಡಿಯಲ್ಲಿ ಮಾಡುವ ಮಕ್ಕಳ ಚಿತ್ರದಂತೆ ಈ ಚಿತ್ರ ಇಲ್ಲ. ಇದು ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡಿರೋ ಚಿತ್ರ. ನಾನೂ ಕೂಡ ಚಿತ್ರದ ಭಾಗವಾಗಿರೋದ್ರಿಂದ ಆ ಬಗ್ಗೆ ಆತ್ಮವಿಶ್ವಾಸದಿಂದ ಹೇಳಬಲ್ಲೆ' ಎಂದರು ನಾಗಾಭರಣ.
ಅದು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಕೇಸ್ ನಂಬರ್ 18/9 ಮತ್ತು ಎಂದೆಂದೂ ನಿನಗಾಗಿ ಚಿತ್ರದಲ್ಲಿ ತನ್ನ ನಟನೆಯಿಂದ ಸೆಳೆದಿದ್ದ ತರುಣ ಕಾರ್ತಿಕ್ ಶರ್ಮಾ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ಮಾಧ್ಯಮಕ್ಕಾಗಿ ಹಾಡಿನ ದೃಶ್ಯ ತುಣುಕುಗಳನ್ನು ಪ್ರದರ್ಶಿಸಿದಾಗ, ನಾಗರಾಜ್ ಕೋಟೆ ಮತ್ತು ಕಾರ್ತಿಕ್ ಇಬ್ಬರ ಮೇಲೂ ಭರವಸೆ ಮೂಡಿದ್ದು ಹೌದು. ಮಕ್ಕಳ ಚಿತ್ರಕ್ಕೆ ಆಪ್ತವೆನಿಸುವ ಥರದ ಟ್ಯೂನ್ ಹೊಸೆದಿರುವ ಕಾರ್ತಿಕ್, ಐದೂ ಹಾಡುಗಳಲ್ಲೂ ವಿಭಿನ್ನತೆಗೆ ಪ್ರಯತ್ನಿಸಿದ್ದಾರೆ.
ಆಡಿಯೋಬಿಡುಗಡೆ ಸಮಾರಂಭ ಹೃದಯಸ್ಪರ್ಶಿ ಅನಿಸಲು ಕಾರಣ ಇನ್ನೊಂದಿತ್ತು. ಅಂದು ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ಮೀಸೆ ರಂಗನಾಥ್‌ರಿಗೆ ಸಂತಾಪ ಸೂಚಿಸಿ ಮೌನಗೌರವ ನೀಡಿದ ನಂತರ ಕಾರ್ಯಕ್ರಮ ಶುರುಮಾಡಿತು ಬಾನಾಡಿ ತಂಡ.
ಪವರ್‌ಸ್ಟಾರ್ ಮತ್ತು ಆರ್ಯನ್ ಚಿತ್ರಗಳ ಆಡಿಯೋ ಮೂಲಕ ಮತ್ತೆ ಯಶಸ್ಸಿನ ಹಾದಿ ಹಿಡಿದಿರುವ ಲಹರಿ ಸಂಸ್ಥೆಯ ಮಾಲೀಕ ವೇಲು ಈ ಚಿತ್ರದ ಹಾಡಿನ ಹಕ್ಕನ್ನೂ ಪಡೆದಿದ್ದಾರೆ. ಚಿತ್ರದ ಬಗ್ಗೆ ಭರವಸೆಯ ಮಾತನಾಡಿದ ವೇಲು, ಬಾನಾಡಿ ರಾಷ್ಟ್ರಪ್ರಶಸ್ತಿ ಗಳಿಸಲಿ ಎಂದು ಹಾರೈಸಿದರು. ಚಿತ್ರದಲ್ಲಿ ಹಾಡಿಗೆ ಅಗೌರವ ಆಗಬಾರದು ಎಂಬ ಕಂಡಿಷನ್ ಮೇರೆಗೆ ರತ್ನನ್ ಪದಗಳ ಹಕ್ಕನ್ನು ವೇಲು ಕೊಟ್ಟಿದ್ದರಂತೆ. ಆ ಭರವಸೆ ನಾಗರಾಜ್ ಕೋಟೆ ಉಳಿಸಿಕೊಂಡಿದ್ದಾರೆ ಎಂದು ವೇಲು ನುಡಿದರು.
ಮಿಕ್ಕಂತೆ ಹಿರಿಯ ನೃತ್ಯ ನಿರ್ದೇಶಕಿ ದೇವಿ, ನಿರ್ಮಾಪಕ ನಾಗರಾಜ್, ಹಿರಿಯ ನಟ ಬ್ಯಾಂಕ್ ಜನಾರ್ಧನ್, ರಾಜೇಶ್ ನಟರಂಗ ಮುಂತಾದವರು ವೇದಿಕೆಯಲ್ಲಿದ್ದರು. ನಾಗರಾಜ್ ಕೋಟೆ ಬಾನಾಡಿ ಟ್ರೋಫಿಗಳನ್ನು ಎಲ್ಲರಿಗೂ ವಿತರಿಸಿದರು. ನಂತರ ಮಾತನಾಡಿ, ತಾವು ಈ ಮಟ್ಟಕ್ಕೆ ಬರಲು ಕಾರಣರಾದ ಗುರು ನಾಗಾಭರಣರನ್ನು ಮುಕ್ತವಾಗಿ ವಂದಿಸಿದರು. ಮಕ್ಕಳ ಚಿತ್ರದ ಅಥವಾ ಪ್ರಶಸ್ತಿಗೆ ಅರ್ಹ ಚಿತ್ರಗಳ ಪರ್ಮನೆಂಟ್ ಸದಸ್ಯ ಆಗಿಹೋಗಿರುವ ದತ್ತಣ್ಣ ಈ ಚಿತ್ರದಲ್ಲೂ ಮುಖ್ಯಪಾತ್ರದಲ್ಲಿ ನಟಿಸಿರುವುದು ವಿಶೇಷ ಹಾಗೂ ಈ ಚಿತ್ರಕ್ಕೂ ಪ್ರಶಸ್ತಿ ಬರಬಹುದಾ ಎಂಬ ಕುತೂಹಲ ಕೂಡ! ಅದಕ್ಕಾಗಿ ಚಿತ್ರದ ಬಿಡುಗಡೆಗೆ ಕಾಯಬೇಕಿದೆ.
Advertisement