
ಜಗದೀಶ್ ಎನ್ನುವ ನಾಮಪದದ ಜೊತೆಗೆ 'ಜೈ' ಎಂದು, ಹೇಗೆ ಸೇರಿಕೊಂಡಿತೋ ಗೊತ್ತಿಲ್ಲ. ಆದರೆ ಬೆಳ್ಳಿ ತೆರೆಯಲ್ಲಿ ಜೈ ಅಂದ್ರೆ ಜಗದೀಶ್ ಎನ್ನುವಷ್ಟರ ಮಟ್ಟಿಗೆ ಅವರು ಬೆಳೆದು ನಿಂತಿದ್ದು ರೋಚಕ ಸಂಗತಿಯೇ ಸರಿ. ನಟ ಜೈ ಜಗದೀಶ್ ಚಿತ್ರರಂಗಕ್ಕೆ ಬಂದಿದ್ದು ತೀರಾ ಆಕಸ್ಮಿಕ. ನಟನಾಗಲೇಬೇಕೆಂದು ಅಭಿನಯದ ವಿದ್ಯೆಗಳನ್ನು ಕಲಿತು ಬಣ್ಣ ಹಚ್ಚಿಕೊಂಡವರಲ್ಲ. ಹಾಗಂತ ಕಲಾವಿದರ ಕುಟುಂಬದ ಹಿನ್ನೆಲೆಯೂ ಅವರದ್ದಲ್ಲ. ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ರೈತನೊಬ್ಬನ ಮಗ ಸಿನಿಮಾದಲ್ಲಿ ಹೀರೋ ಆಗುವ ಕನಸು ಕೂಡ ಕಂಡವರಲ್ಲ. ಅವರೇ ಹೇಳುವ ಪ್ರಕಾರ ಇದೊಂದು ಆಕಸ್ಮಿಕ ಯಾನ.
ಜೈ ಜಗದೀಶ್ ಅವರನ್ನು ಚಿತ್ರರಂಗಕ್ಕೆ ಬರುವಂತೆ ಮಾಡಿದ್ದು ಅವರ ಬೈಕ್ ರೈಡ್. ಮೈಸೂರಿನಲ್ಲಿ ಅಂತಿಮ ಬಿಎ ಓದುತ್ತಿದ್ದಾಗ ಅವರ ತಂದೆ ಒಂದು ಬೈಕ್ ಕೊಡಿಸಿದ್ದರಂತೆ. ಆ ಬೈಕ್‌ನಲ್ಲಿ ವೀಲಿಂಗ್ ಮಾಡುವುದೆಂದ್ರೆ ಅವರಿಗೆ ತುಂಬಾ ಹುಚ್ಚು. ಬಿಡುವಿದ್ದಾಗೆಲ್ಲ ಮೈಸೂರಿನ ರಸ್ತೆಗಳಲ್ಲಿ ವೀಲಿಂಗ್ ಸಾಹಸ ನಡೆಯುತಿತ್ತು. ಒಂದು ದಿನ ಈ ಚೇಷ್ಟೆಗಳೇ ಸಿನಿಮಾದ ಅವಕಾಶ ಹುಡುಕಿಕೊಂಡು ಬರುವಂತೆ ಮಾಡಿತೆಂದರೆ ನೀವು ನಂಬುತ್ತೀರಾ? ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾರ್‌ರ 'ಫಲಿತಾಂಶ' ಚಿತ್ರದ ನಾಯಕ ಬೈಕ್ ರೈಡರ್. ಹೀಗಾಗಿ ಸ್ನೇಹಿತರೊಬ್ಬರ ಮೂಲಕ ಮಾಹಿತಿ ತಿಳಿದುಕೊಂಡು ಜೈ ಜಗದೀಶ್ ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಒಂದು ದಿನ ಬೆಂಗಳೂರಿನಿಂದ ಕರೆಯೂ ಬಂತು. ಅಲ್ಲಿಗೆ ಹೋಗಿ ಓಕೆ ಅಂದಾಗ ಜೈ ಜಗದೀಶ್ ಅವರ ತಂದೆ ಕ್ಯಾಕರಿಸಿ ಉಗಿದಿದ್ದರು. 'ಓದುವುದು ಬಿಟ್ಟು ಸಿನಿಮಾ ಮಾಡ್ತಾನಂತೆ. ಚಿತ್ರರಂಗದಲ್ಲಿ ಏನಿದೆ ಮಣ್ಣು?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರಂತೆ. ಆದರೂ ಹಠ ಹಿಡಿದು, ಅವರು ಅಭಿನಯಿಸಲು ಒಪ್ಪಿಕೊಂಡಾಗ ಬಾದಾಮಿಯಲ್ಲಿ ಶೂಟಿಂಗ್.
ನಿರ್ದೇಶಕ ಪುಟ್ಟಣ್ಣ ಅಂದ್ರೆ ಕಲಾವಿದರಿಗೆ ನಡುಕ. ಅಭಿನಯ ಬಾರದಿದ್ದಕ್ಕೆ ಜೈ ಜಗದೀಶ್ ಕೂಡ ಹೊಡೆತ ತಿಂದಿದ್ದರು. 'ಬಿದ್ದ ಒದೆ ತಾಳಲಾರದೆ, ಸಹವಾಸ ಸಾಕೆಂದು ರಾತ್ರೋರಾತ್ರಿ ಲಾರಿ ಹತ್ತಿ ಮೈಸೂರಿಗೆ ಹೊರಡಲು ಕಾಯುತ್ತಿದ್ದೆ. ಅಚಾನಕ್ ಯಾರೋ ಬಂದು ವಾಪಸ್ ಕರೆದುಕೊಂಡು ಹೋಗಿ ಸಮಾಧಾನ ಹೇಳಿದ್ರು. 'ಫಲಿತಾಂಶ' 'ಚಿತ್ರ ಮುಗಿಯಿತು. ಹಾಗೇನಾದ್ರೂ ಅವತ್ತು ನಾನು ಚಿತ್ರ ಮುಗಿಸದೇ ಲಾರಿ ಹತ್ತಿ ಮೈಸೂರಿಗೆ ಬಂದಿದ್ರೆ ಇವತ್ತು ಇಲ್ಲಿ ಕೂರುತ್ತಿರಲಿಲ್ಲ' ಎನ್ನುವ ಮೂಲಕ ತಮ್ಮ ಸಿನಿಮಾ ಪಯಣದ ಆರಂಭಿಕ ದಿನಗಳ ನೆನಪುಗಳನ್ನು ತೆರೆದಿಟ್ಟರು ಜೈ ಜಗದೀಶ್.
ಅವರ ಈ 'ಬೆಳ್ಳಿ ಹೆಜ್ಜೆ'ಯ ಗುರುತು, ನೆನಪುಗಳು ಭಾವುಕತೆಗೂ ಕಾರಣವಾದವು. ಜೈಗೆ 'ಫಲಿತಾಂಶ' ಮೊದಲ ಚಿತ್ರ. ಅಲ್ಲಿ ನಾಯಕ. ಈ ಚಿತ್ರ ಸೋತ ಕಾರಣಕ್ಕೆ ಮತ್ತೊಂದು ಚಿತ್ರಕ್ಕೆ ಖಳನಾಯಕ. ಇವತ್ತಿನ ನಟರಾಗಿದ್ದರೆ ಒಪ್ಪಿಕೊಳ್ಳುವುದು ಕಷ್ಟ. ಆದರೆ ಅವತ್ತಿನ ಸಂದರ್ಭಕ್ಕೆ ಜೈ ಜಗದೀಶ್‌ಗೆ ಅಭಿನಯ ಅನಿವಾರ್ಯವಾಗಿತ್ತು. ನಾಯಕನಿಂದ ಖಳನಾಯಕನಾಗಿ ಒಂದು ರೀತಿ ಹಿಂಬಡ್ತಿ ಅಂತಾದ್ರೂ ಒಪ್ಪಿಕೊಂಡು ಅಭಿನಯಿಸಿದರು. ಅಲ್ಲಿ ಸಕ್ಸಸ್ ಸಿಕ್ಕಿತು. ಮತ್ತೆ ಪುಟ್ಟಣ್ಣ ಕಣಗಾಲ್ ಚಿತ್ರಕ್ಕೆ ನಾಯಕ. ಹೀಗೆ ಸೋಲು- ಗೆಲವು ಎನ್ನುವ ಹಾಗೆ ನಾಯಕ, ಖಳನಾಯಕನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದರು. ಪೋಷಕ ನಟನಾಗಿಯೂ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಹೊತ್ತಿಗೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದ್ದು.
ನಟ ಶ್ರೀನಿವಾಸ ಪ್ರಸಾದ್ ಸಹವಾಸದೊಂದಿಗೆ ಚಿತ್ರ ನಿರ್ಮಾಣಕ್ಕೆ ಇಳಿದ ಸಾಹಸಗಳನ್ನು ಅವರು ಹೇಳಿಕೊಂಡರು. 'ಒಲ್ಲದ ಮನಸ್ಸಿನಿಂದ ಶುರುವಾದ ಕೆಲಸವದು. 'ಮಾತೃದೇವೋಭವ' ಮೂಲಕ ನಿರ್ಮಾಣ ಕಾರ್ಯ ಆರಂಭಗೊಂಡಿತು. ಮೊದಲ ಚಿತ್ರವೇ ನಷ್ಟ. ಆನಂತರ 'ತಾಯಿಗೊಬ್ಬ ತರ್ಲೆ ಮಗ' ಚಿತ್ರ ಕೊಟ್ಟ ಯಶಸ್ಸಿನಿಂದ 25ಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿದ್ದೇನೆ. ಇಲ್ಲಿ ಜಯ ಅಪಜಯ ಎರಡನ್ನೂ ಕಂಡಿದ್ದೇನೆ' ಎಂದರು. ಅಭಿನಯದಲ್ಲಿ ಸಿಕ್ಕ ಸಂತಸ, ನಿರ್ಮಾಣದಲ್ಲೂ ಇದೆ. ಆದರೆ ಇತ್ತೀಚಿನ ಕೆಲವು ಸಿನಿಮಾಗಳ ಸೋಲು ಅವರಿಗೆ ಬೇಸರ ಮೂಡಿಸಿದ್ದು ಅವರ ಮಾತಲ್ಲಿ ವ್ಯಕ್ತವಾಯಿತು.
ಕಿರುತೆರೆಗೆ ಕಾಲಿಟ್ಟ ಕ್ಷಣಗಳನ್ನು ಅಷ್ಟೇ ಅಭಿಮಾನದಿಂದ ಹೇಳಿಕೊಂಡರು. ವಿಜಯಲಕ್ಷ್ಮಿ ಸಿಂಗ್ ಅವರೊಂದಿಗೆ ಆದ ಪ್ರೇಮ ವಿವಾಹ ನೆನಪಿಸಿಕೊಂಡು ಸಂಭ್ರಮಿಸಿದರು. ಪುತ್ರಿಯರಾದ ವೈದಿನಿ, ವೈಭವಿ, ವೈಸರಿ ಅವರನ್ನು ಪರಿಚಯಿಸಿ, 'ನಮ್ಮದು ಪುಟ್ಟ ಸಂಸಾರ' ಎಂದು ಹಾಸ್ಯ ಮಾಡಿದರು. ಹೀಗೆ ತಮ್ಮ ಸಿನಿಮಾ ಪಯಣ, ವೈಯಕ್ತಿಕ ಜೀವನ, ಸಂಸಾರ, ಸ್ನೇಹಿತರ ಬಳಗದಿಂದ ಹಿಡಿದು, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ ಬಿದ್ದ ಏಟಿನ ನೋವು, ಸಿನಿಮಾ ನಿರ್ಮಾಪಕನಾಗಿ ಕಂಡ ಅನುಭವಗಳು, ಅಲ್ಲಿಂದ ಕಿರುತೆರೆಯತ್ತ ತೋರಿದ ಒಲವು... ಹೀಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಸ್ನೇಹಮಯಿ
500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ. 25ಕ್ಕೂ ಹೆಚ್ಚು ಚಿತ್ರಗಳ ನಿರ್ಮಾಣ. ರಾಜ್ಯ, ರಾಷ್ಟ್ರ ಪ್ರಶಸ್ತಿಗಳ ಸನ್ಮಾನ. ಕಿರುತೆರೆಗೂ ಅದೇ ಅಭಿಮಾನ. ಹಿರಿಯ ನಟ ಜೈ ಜಗದೀಶ್‌ರವರ ಸಿನಿ ಜರ್ನಿಯ ಒನ್‌ಲೈನ್ ಸ್ಟೋರಿಯಿದು. ಯಾರ ತಂಟೆಗೂ ಬಾರದೆ ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವ ಅವರ ಮೃದು ಸ್ವಭಾವ ಎಲ್ಲರಿಗೂ ಅಚ್ಚು ಮೆಚ್ಚು. ಅವರ ಪ್ರಕಾರ ಚಿತ್ರದ್ಯೋಮದಲ್ಲಿ ಅವರಿಗೆ ವಿರೋಧಿಗಳೇ ಇಲ್ಲವಂತೆ. ಆ ಮಟ್ಟಿಗೆ ಜೈ ಜಗದೀಶ್ ಸ್ನೇಹಮಯಿ.
-ದೇಶಾದ್ರಿ ಹೊಸ್ಮನೆ
Advertisement