
ನಟನೆ, ನಿರ್ದೇಶನ, ನಿರ್ಮಾಣ, ಕಿರುತೆರೆ, ರಂಗಭೂಮಿ, ಬರವಣಿಗೆ... ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಿ. ಸುರೇಶ್ ಅವರನ್ನು ಒಂದು ಕಡೆ ನಿಲ್ಲಿಸಿ ಗುರುತಿಸಲಾಗದು. ಹೀಗಾಗಿ ಅವರನ್ನು ಜಂಗಮ ಎಂದರೆ ಅದು ತಮಾಷೆ ಅಲ್ಲ. 'ಪುಟ್ಟಕ್ಕನ ಹೈವೆ' ಚಿತ್ರದ ನಂತರ 'ಸಕ್ಕರೆ' ಚಿತ್ರವನ್ನು ನಿರ್ಮಾಣ ಮಾಡಿದ್ದ ಬಿ. ಸುರೇಶ್ ಈಗ ನಿರ್ಮಾಣದ ಜೊತೆಗೆ ನಿರ್ದೇಶನಕ್ಕೂ ತಯಾರಿ ನಡೆಸಿಕೊಂಡಿದ್ದಾರೆ.
ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದ ಕರಾವಳಿ ಭಾಗದಲ್ಲಿ ಸುತ್ತಾಡಿ ಚಿತ್ರೀಕರಣಕ್ಕೆ ಸ್ಥಳಗಳನ್ನು ಗುರುತಿಸಿ ಬಂದಿರುವ ಸುರೇಶ್ ಅವರ ಹೊಸ ಚಿತ್ರದ ಸುದ್ದಿಯೇನು? ಚಿತ್ರದ ಹೆಸರು 'ದೇವರ ನಾಡಲ್ಲಿ'. ಚಿತ್ರದ ಶೀರ್ಷಿಕೆ ನೋಡಿ ಇದು ದೇವರು, ಧರ್ಮದ ಕುರಿತ ಸಿನಿಮಾ ಎಂದುಕೊಳ್ಳಬೇಡಿ. ಪಕ್ಕಾ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ. ಸುರೇಶ್ ಅವರೇ ಹೇಳುವಂತೆ, 'ಇದು ನನ್ನ ರೀತಿಯ ಸಿನಿಮಾ. ಗಾಂಧಿನಗರಕ್ಕೆ ಬರುವ ರೆಗ್ಯೂಲರ್ ಸಿನಿಮಾಗಳ ಆಚೆಗೆ ನಿಲ್ಲುವಂತ ಚಿತ್ರವಿದು. ಇನ್ನು ಸ್ಪಷ್ಟವಾಗಿ ಹೇಳಬೇಕು ಅಂದರೆ, 1993ರಲ್ಲಿ ನಡೆದ ಒಂದು ಘಟನೆಯೇ ಚಿತ್ರದ ಕೇಂದ್ರಬಿಂದು. ಆ ಘಟನೆಯನ್ನು ಇಂದಿನ ಬೆಳವಣಿಗೆಗಳ ಜೊತೆ ಹೇಳುವ ಪ್ರಯತ್ನ ಮಾಡಿದ್ದೇನೆ. ಪೊಲಿಟಿಕಲ್ ಥ್ರಿಲ್ಲರ್ ಕಥೆಯಾಗಿರುವುದರಿಂದ ಇಲ್ಲಿ ರಾಜಕೀಯ ತುಸು ಹೆಚ್ಚಾಗಿರಬಹುದು. ಈಗಾಗಲೇ ಕಥೆ, ಚಿತ್ರಕಥೆ ಸಿದ್ಧವಾಗಿದೆ. ಇದು ನನ್ನ 'ಪುಟ್ಟಕ್ಕನ ಹೈವೆ'ಗಿಂತಲೂ ಭಿನ್ನ ರೂಪದ ಕಥೆ' ಎನ್ನುತ್ತಾರೆ ಬಿ. ಸುರೇಶ್.
ವಿಶೇಷ ಅಂದರೆ ಈ ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆ ಅಚ್ಯುತ್ ಕುಮಾರ್ ಸಹ ಅಭಿನಯಿಸಲಿದ್ದು, ನೀನಾಸಂನಿಂದ ಬಂದ ಹೊಸ ಪ್ರತಿಭೆ ಮನು ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. ಈ ತಿಂಗಳ 25ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರದ ಬಹುತೇಕ ಭಾಗಗಳ ಚಿತ್ರೀಕರಣ ಕರಾವಳಿ ತೀರದ ಪ್ರದೇಶದಲ್ಲಿ ನಡೆಯಲಿದೆ. 'ಜಟ್ಟ' ಚಿತ್ರದ ಗಿರಿರಾಜ್, ಕಿರಣ್ ನಾಯ್ಕ್, ರಾಜಶೇಖರ್ ನಾಯ್ಡು, ವಿಷ್ಣು ನಾಯ್ಕ್ ಈ ನಾಲ್ಕು ಮಂದಿ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಚಿತ್ರದಲ್ಲಿ ಕೊಂಕಣಿ, ತುಳು, ತೆಲುಗು, ಕನ್ನಡ ಹಾಗೂ ಮರಾಠಿ ನಾಲ್ಕು ಭಾಷೆಗಳು ಇರಲಿದ್ದು, ಒಬ್ಬೊಬ್ಬರು ಒಂದೊಂದು ಭಾಷೆಯಲ್ಲಿ ಸಂಭಾಷಣೆ ಬರೆಯಲಿದ್ದಾರೆ.
ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯಲಿದ್ದು, ನಾದಬ್ರಹ್ಮ ಹಂಸಲೇಖ ಸಂಗೀತ, 'ಸ್ನೇಕ್ ನಾಗ' ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಅದ್ವೈತ್ ಗುರುದತ್ ಕ್ಯಾಮೆರಾ ಈ ಚಿತ್ರಕ್ಕಿದೆ. ಶಶಿಧರ ಅಡಪ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. 'ಎಂದಿನಂತೆ ಮತ್ತೊಂದು ವಿಭಿನ್ನ ಸಿನಿಮಾ ಅಂದುಕೊಂಡು ಹೊರಟಿದ್ದೇನೆ. ಚಿತ್ರಕ್ಕೆ ಸಂಬಂಧಿಸಿದಂತೆ ತಂತ್ರಜ್ಞರು, ಕಥೆ ಎಲ್ಲವೂ ಅಂತಿಮಗೊಂಡಿದೆ. ನಾಯಕಿಯ ಪಾತ್ರಕ್ಕೆ ಮೂರು ಜನ ಇದ್ದಾರೆ. ಇವರಲ್ಲಿ ಯಾರು ಅಂತಿಮಗೊಳ್ಳಲಿದ್ದಾರೆಂಬುದು ಸದ್ಯಕ್ಕೆ ಹೇಳುವುದು ಕಷ್ಟ. ಹೊಸ ರೀತಿಯ ಢಿಚಿತ್ರಕ್ಕೆ ಪ್ರೇಕ್ಷಕನ ಬೆಂಬಲ ಸಿಗುತ್ತದೆ ಎನ್ನುವ ನಂಬಿಕೆ ಇದೆ' ಎಂಬುದು ಬಿ. ಸುರೇಶ್ ಅವರ ಮಾತು.
-ಆರ್. ಕೇಶವಮೂರ್ತಿ
Advertisement