
ಸಿನಿಮಾ ಉದ್ಯಮವಾಗಿದೆ ನಿಜ. ಆದರೆ, ಇಲ್ಲಿ ಚಿತ್ರೋದ್ಯಮಿಗಳ ನಡುವೆ ಸಿನಿಮಾ ಆಸಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಕಥೆಗಳನ್ನೇ ಇಟ್ಟುಕೊಂಡು ಸಿನಿಮಾ ಅಭಿರುಚಿ ಮೂಡಿಸುವಂಥ ಚಿತ್ರಗಳನ್ನು ಮಾಡುತ್ತಿದ್ದಾರೆ. ಇಂಥವರನ್ನು ಸಾಕ್ಷ್ಯ ಚಿತ್ರ, ಕಿರು ಚಿತ್ರಗಳಲ್ಲೇ ಹೆಚ್ಚು ಕಾಣುತ್ತೇವೆ. ಅಂಥವರ ಸಾಲಿನಲ್ಲಿ ಕಿರಣ್ ಸೂರ್ಯ ಕೂಡ ಒಬ್ಬರು. ಇಂದಿಗೂ ಪ್ರಸ್ತುತ ಎನಿಸುವಂಥ ಕಥೆಯೊಂದಿಗೆ ಮೂರೇ ದಿನದಲ್ಲಿ ಒಂದು ಕಿರುಚಿತ್ರ ಮಾಡಿರುವ ಕಿರಣ್, ಮುಂದೆ ನಟ ಶಿವರಾಜ್‌ಕುಮಾರ್‌ಗಾಗಿ ಸಿನಿಮಾ ಮಾಡಲು ಕಾಯುತ್ತಿದ್ದಾರೆ.
ಅಂದಹಾಗೆ ಕಿರಣ್ ತಮ್ಮ ಸ್ನೇಹಿತರ ಜೊತೆ ಸೇರಿ ಮಾಡಿರುವ ಕಿರುಚಿತ್ರದ ಹೆಸರು 'ನಾನ್ ಸಾರ್... ಕಿರಣ್'. ಈಗಾಗಲೇ ಚಿತ್ರೀಕರಣ ಮುಗಿಸಿ ವಿಶೇಷವಾದ ಪೋಸ್ಟರ್‌ಗಳೊಂದಿಗೆ ಬಂದಿರುವ ಕಿರಣ್ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆಯೇ ದೊರಕುತ್ತಿದೆ. ಕಿರುಚಿತ್ರಗಳನ್ನು ಮಾಡುವವರ ಟ್ರೆಂಡ್ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದರಿಂದ ಅಂಥ ಹೊಸ ಅಲೆಗೆ ಇವರದ್ದು ಒಂದು ಹನಿಯಾಗಿ ಸೇರಿಕೊಳ್ಳುತ್ತಿದೆ. ತಮ್ಮದೇ ಸ್ನೇಹಿತರ ತಂಡ ಕಟ್ಟಿಕೊಂಡು ಒಂದು ಮನೆ ಹಾಗೂ ಸ್ಮಶಾನದಲ್ಲಿ ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡಿರುವ 'ನಾನ್ ಸಾರ್ ಕಿರಣ್' ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಪ್ರದರ್ಶನಗೊಳ್ಳಲಿದೆ. 'ದೊಡ್ಡ ಸಿನಿಮಾ ಮಾಡುವ ಮುನ್ನ ತಾಲೀಮು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಳೆದ ಕಥೆ ಇದು. ನನ್ನ ಸ್ನೇಹಿತರ ಜೊತೆ ಕೂಡಿ ಈ ಚಿತ್ರ ಮಾಡಿದೆ. ನಟನೆಯ ಪಾಠ ಕೂಡ ಗೊತ್ತಿರದವರಿಂದ ಈ ಚಿತ್ರ ಮಾಡಿರುವುದು ನನ್ನ ಮಟ್ಟಿಗೆ ಹೊಸ ಅನುಭವ ಅಂತಲೇ ಹೇಳಬೇಕು. ಕಥೆ ಮಾತ್ರ ಈಗಿನ ಸಮಾಜದ ಸ್ಥಿತಿಯನ್ನು ತೋರಿಸುತ್ತದೆ' ಎನ್ನುವ ಕಿರಣ್, ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ.
ಹಾಗೆ ನೋಡಿದರೆ, ನಟ ಶಿವರಾಜ್‌ಕುಮಾರ್ ಹಾಗೂ ನಟಿ ರಮ್ಯಾ ಕಾಂಬಿನೇಷನ್‌ನಲ್ಲಿ ಸೆಟ್ಟೇರಬೇಕಿದ್ದ 'ಬ್ರಹ್ಮಾಸ್ಮಿ' ಚಿತ್ರವನ್ನು ಕಿರಣ್ ನಿರ್ದೇಶನ ಮಾಡಬೇಕಿತ್ತು. ಕತೆ, ಶೀರ್ಷಿಕೆಯನ್ನು ಇಬ್ಬರು ಓಕೆ ಮಾಡಿದ್ದರು. ಇದನ್ನ ಸ್ವತಃ ರಮ್ಯಾ ಅವರೇ ಇತ್ತೀಚೆಗೆ 'ಆರ್ಯನ್' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ಕೂಡ. ಆದರೆ, ನಿರ್ಮಾಣದಲ್ಲಿ ಏರುಪೇರಾಗಿದ್ದರಿಂದ 'ಬ್ರಹ್ಮಾಸ್ಮಿ' ಚಿತ್ರ ಟೇಕಪ್ ಆಗಿಲ್ಲ. 'ಶಿವರಾಜ್‌ಕುಮಾರ್ ಹಾಗೂ ರಮ್ಯಾ ಅವರ ಜೋಡಿಗಾಗಿಯೇ ಕಥೆ ಸಿದ್ಧವಾಗಿದೆ. ಈ ಕಿರುಚಿತ್ರದ ಕೆಲಸ ಮುಗಿದ ಕೂಡಲೇ ಆ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇನೆ' ಎನ್ನುತ್ತಾರೆ ಕಿರಣ್. 'ನಾನ್ ಸಾರ್... ಕಿರಣ್' ಚಿತ್ರದ ಕಥೆಯ ಕೇಂದ್ರಬಿಂದು ಆತ್ಮಹತ್ಯೆ. ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ನಮ್ಮ ಜನ ಏನೇ ಸಮಸ್ಯೆ ಏದುರಾದರೂ ಆತ್ಮಹತ್ಯೆಯೇ ಪರಿಹಾರ ಎನ್ನುವಂತೆ ಯೋಚಿಸುತ್ತಿದ್ದಾರೆ. ಇಂಥ ಯೋಚನೆಗಳ ಹಿಂದಿನ ಸ್ಥಿತಿಯನ್ನು ಈ ಚಿತ್ರ ತೆರೆದಿಡುತ್ತದೆ.
Advertisement