

ನಿರ್ದೇಶಕ ಪ್ರಶಾಂತ್ ರಾಜ್ ಬಂದಿದ್ದಾರೆ. 'ಲವ್ಗುರು', 'ಗಾನಬಜಾನ' ಚಿತ್ರಗಳ ಮೂಲಕ ಗಾಂಧಿನಗರಕ್ಕೆ ಪರಿಚಯವಾದವರೇ ಪ್ರಶಾಂತ್ ರಾಜ್. ಈಗ 'ದಳಪತಿ' ಎನ್ನುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಶೀರ್ಷಿಕೆ ಮಾಸ್ ಎನಿಸಿದರೂ, ಕಥೆ ಮಾತ್ರ ಸಾಫ್ಟ್ ಎಂಬುದಕ್ಕೆ ನಟ ಪ್ರೇಮ್ ಈ ಚಿತ್ರದ ನಾಯಕ ಎಂಬುದು ಮೊದಲ ಕಾರಣ. ಪ್ರೀತಿಯನ್ನು ರಕ್ಷಿಸುವವನೇ ದಳಪತಿ ಎನ್ನುವ ಚಿತ್ರದ ಕಥೆ ಎರಡನೇ ಕಾರಣ. ಹೀಗಾಗಿ ಮಾಸ್ ಶೀರ್ಷಿಕೆಯಲ್ಲಿ ಪ್ರೇಮ ಕಥೆಯನ್ನು ಹೇಳಲು ಹೊರಟಿರುವ ಪ್ರಶಾಂತ್ರ ಈ ಚಿತ್ರಕ್ಕೆ ಕೃತಿ ಖರಬಂಧ ನಾಯಕಿ. ನವೀನ್ ಮತ್ತು ಫೈರೋಜ್ ಖಾನ್ ಚಿತ್ರದ ನಿರ್ಮಾಪಕರು.
ಚರಣ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಗಿರೀಶ್ ಛಾಯಾಗ್ರಹಣ ಮಾಡಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು. 'ಎರಡು ವಿಭಿನ್ನ ಮುಖಗಳಿರುವ ಕಥೆ ಇದು. ಶೀರ್ಷಿಕೆ ಮಾಸ್ ಎನಿಸಿದರೂ ಚಿತ್ರದಲ್ಲಿ ಎಲ್ಲ ಅಂಶಗಳೂ ಇವೆ. ಯಾವುದೇ ಚಾರಿತ್ರಿಕ ನೆಲೆ ಇಲ್ಲ. ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದು ಕಡೆ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಲೇ ಮತ್ತೊಂದೆಡೆ ಲವರ್ ಬಾಯ್ ಆಗಲಿದ್ದಾರೆ. ಇದೇ ಚಿತ್ರದ ವಿಶೇಷ' ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ರಾಜ್. ಚಿತ್ರದಲ್ಲಿ 5 ಹಾಡುಗಳಿದ್ದು, ಎಲ್ಲವೂ ಮೆಲೊಡಿಯಾಗಿರುತ್ತವೆ. ನಟ ಗಣೇಶ್ ಮುಹೂರ್ತ ಸಮಾರಂಭಕ್ಕೆ ಬಂದು ಕ್ಯಾಮೆರಾ ಚಾಲನೆ ಮಾಡಿದರು. ಎಂ.ಎಸ್. ರಮೇಶ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ಶರತ್ ಲೋಹಿತಾಶ್ವ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಈ ಚಿತ್ರದಲ್ಲಿ ಎರಡೂ ಫೀಲ್ ಇದೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುವಂಥ ಚಿತ್ರವಿದು. ಒಂದು ರೀತಿಯಲ್ಲಿ ಒಂದೇ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ಅಭಿನಯಿಸುವ ಅನುಭವ ನನ್ನದು' ಎಂದರು ಪ್ರೇಮ್. 'ತುಂಬಾ ಒಳ್ಳೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ' ಎನ್ನುವುದು ಕೃತಿ ಮಾತು.