ಲೇಡಿ ಡೈರೆಕ್ಟರ್

ಲೇಡಿ ಡೈರೆಕ್ಟರ್
Updated on: 

ಸಿನಿಮಾ ಜಗತ್ತಿನಲ್ಲಿ ಹುಡುಗಿಯರ ಕೆಲಸ ಕ್ಯಾಮೆರಾ ಮುಂದೆ ನಿಲ್ಲುವುದಷ್ಟೆ. ಇದರ ನಡುವೆಯೂ 'ನಿರ್ದೇಶನಕ್ಕೂ ನಾವು ರೆಡಿ' ಎನ್ನುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ತಲೆಮಾರಿನಲ್ಲಿ ಸುಮನಾ ಕಿತ್ತೂರು, ಪ್ರಿಯಾ ಹಾಸನ್, ಪ್ರಿಯಾ ಬೆಳ್ಳಿಯಪ್ಪ, ರೂಪಾ ಅಯ್ಯರ್ ಹೀಗೆ ಒಂದಿಷ್ಟು ನಿರ್ದೇಶಕಿಯರು ಬರುತ್ತಿದ್ದಾರೆ. ನಿರ್ದೇಶಕಿಯರ ಸಿನಿಮಾ ಸಂತೆಗೆ ಮತ್ತೊಬ್ಬಳು ಹೊಸ ನಿರ್ದೇಶಕಿ ಆಗಮನವಾಗುತ್ತಿದೆ.
ಈಗಾಗಲೇ ಒಂದು ಚಿತ್ರವನ್ನು ಮುಗಿಸಿ, ಮತ್ತೊಂದು ಚಿತ್ರದ ನಿರ್ದೇಶನದ ತಯಾರಿ ನಡೆಸಿಕೊಳ್ಳುತ್ತಿರುವ ಈ ಹೊಸ ನಿರ್ದೇಶಕಿ ಶ್ವೇತಾ ಶೆಟ್ಟಿ. 'ಬಿಗ್‌ಬಾಸ್‌' ಮನೆಯ ಶ್ವೇತಾ ಪಂಡಿತ್ ಗೊತ್ತು, ಈ ಶೆಟ್ಟಿ ಯಾರು? ಅಂತ ಕೇಳಬೇಡಿ. ಯಾಕೆಂದರೆ ಬೆಂಗಳೂರಿನ ವಿಜಯನಗರದ ಮಾರುತಿ ಮೆಡಿಕಲ್ ಸ್ಟೋರ್‌ನಿಂದ 'ಅಂಬಾ' ಎನ್ನುವ ಸದ್ದು ಕೇಳುತ್ತದೆ. ಹೌದು, ನಿರ್ಮಾಪಕ ಮಹೇಂದ್ರ ಮುನ್ನೋವತ್ ನಿರ್ಮಾಣದಲ್ಲಿ 'ಅಂಬಾ' ಎನ್ನುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ ಹುಡುಗಿಯೇ ಈ ಶ್ವೇತಾ ಶೆಟ್ಟಿ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಕ್ರೇಜಿಸ್ಟಾರ್ ರವಿಚಂದ್ರನ್ 'ಅಂಬಾ' ಚಿತ್ರದ ಆಡಿಯೋ ಬಿಡುಗಡೆ ಮಾಡಿದರು.
ತಮ್ಮ ಈ ಎರಡನೇ ಚಿತ್ರದ ಕಥೆಗೆ ಭಿನ್ನ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಮಕ್ಕಳ ಕತ್ತಲ ಜಗತ್ತಿನೊಳಗೆ ಯಾರೂ ಕಾಣದ ವಿಷಯಗಳ ಮೇಲೆ ಬೆಳಕು ಮೂಡಿಸಲು ಹೊರಟಿರುವ ಶ್ವೇತಾ ಶೆಟ್ಟಿ ತಮ್ಮ ನಿರ್ದೇಶನದ ಕನಸನ್ನು ಹೇಳಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ಮೂಲ ಬೆಂಗಳೂರು. ಮೊದಲಿನಿಂದಲೂ ಕಲಾ ಜಗತ್ತಿನ ಬಗ್ಗೆ ಆಪಾರ ಪ್ರೀತಿ ಮತ್ತು ಆಸಕ್ತಿ. ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ರಂಗಭೂಮಿಗೆ ಕಾಲಿಟ್ಟೆ. ಬೆಂಗಳೂರು ಸೇರಿ ಹತ್ತಾರು ಕಡೆ ನಾಟಕಗಳನ್ನು ಮಾಡಿಸಿದ್ದೇನೆ. ಅಂಥ ಸಂದರ್ಭದಲ್ಲಿ ಕಂಡ ಕಥೆಗಳನ್ನು ಸಿನಿಮಾ ಮೂಲಕ ಹೇಳಬೇಕೆಂಬ ಆಸೆ ಇತ್ತು. ಹೀಗಾಗಿ ನಿರ್ಮಾಪಕರ ಹುಡುಕಾಟದಲ್ಲಿದ್ದಾಗ ಮಹೇಂದ್ರ ಮುನ್ನೋವತ್ ಅವರು ಕಂಡು, ಗೋವಿನ ಮೇಲೆ ಚಿತ್ರ ಮಾಡಲು ಹೇಳಿದರು. ಹಾಗೆ ಚಿತ್ರರಂಗಕ್ಕೆ ಬಂದಿದೆ.
ಮೊದಲ ಚಿತ್ರದ ನಿರ್ದೇಶನದ ಅನುಭವ ಹೇಗಿತ್ತು? ಆ ಚಿತ್ರದ ಕಥೆ ಏನು?
ನಾನು ನಿರ್ದೇಶಿಸಬೇಕಾದ ಕಥೆಯನ್ನು ಬದಿಗಿಟ್ಟು ಗೋಸಂರಕ್ಷಣ ಬಗ್ಗೆ ಕಥೆ ಮಾಡಿ ಸಿನಿಮಾ ಮಾಡಿಕೊಟ್ಟೆ. 'ಅಂಬಾ' ನನ್ನ ಮೊದಲ ಚಿತ್ರವಾಗಿ ಶುರುವಾಯಿತು. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ರಂಗಭೂಮಿಯ ಅನುಭವ ಇದ್ದದ್ದರಿಂದ ನಿರ್ದೇಶನ ಕಷ್ಟವಾಗಲಿಲ್ಲ. ನಿರ್ಮಾಪಕ ಮಹೇಂದ್ರ ಅವರು ಬಜೆಟ್‌ಗೆ ತೊಂದರೆಯಾಗದಂತೆ ನೋಡಿಕೊಂಡರು. ಮೊದಲ ಚಿತ್ರ ಯಾವುದೇ ಸಮಸ್ಯೆಗಳಿಲ್ಲದೆ ಮುಗಿದಿದೆ.
ಎರಡನೇ ಚಿತ್ರದ ಸಿದ್ಧತೆ ಎಲ್ಲಿವರೆಗೂ ಬಂದಿವೆ? ಈ ಚಿತ್ರದ ಕಥೆ ಬಗ್ಗೆ ಹೇಳಿ.
ಕಥೆ, ಚಿತ್ರಕಥೆ ಮುಗಿದಿದೆ. ಮೊದಲ ಹಂತದ ಸಂಭಾಷಣೆ ಕೂಡ ಮುಗಿಸಿದ್ದೇನೆ. ಈಗ ದ್ವನಿ ಮುದ್ರಣ ಮಾಡಬೇಕಿದೆ. ಮಕ್ಕಳ ಸಿನಿಮಾ. ಆದರೆ, ಯಾರೂ ಕಾಣದಂತೆ ಅಚ್ಚರಿ ಸಂಗತಿಗಳನ್ನು ಈ ಚಿತ್ರ ಮೂಲಕ ಹೇಳಲು ಹೊರಟಿದ್ದೇನೆ. ನಾನೇ ಕಂಡ ಘಟನೆಗಳು ಈ ಚಿತ್ರದಲ್ಲಿವೆ. ಮಕ್ಕಳು ಕೂಡ ನಮ್ಮ ಸಮಾಜದಲ್ಲಿ ಹೇಗೆ ಮಾರಾಟದ ಸರಕಾಗಿದ್ದಾರೆ ಎನ್ನುವ ವಿಷಯ ಇಲ್ಲಿದೆ.
ಮಕ್ಕಳ ಸಿನಿಮಾ ಮಾಡಬೇಕು ಅನಿಸಿದ್ದು ಯಾಕೆ?
ಈಗಿನ ಸ್ಥಿತಿಯಲ್ಲಿ ಮಕ್ಕಳ ಬದುಕು ತೀರಾ ಅಮಾನುಷವಾಗಿದೆ. ಅವರ ಬದುಕಿನ ಹಕ್ಕುಗಳ ಬಗ್ಗೆ ಮಾತನಾಡುವ ಅಗತ್ಯವಿದೆ. ವಿದೇಶಿ ಚಿತ್ರಗಳಲ್ಲಿ ಮಕ್ಕಳ ಶೋಷಣೆಯ ದೃಶ್ಯಗಳನ್ನು ಕಂಡು ಮರುಗುತ್ತೇವೆ. ನಮ್ಮ ನಡುವೆಯೂ ಅಂಥ ಕ್ರೌರ್ಯ ಇದೆ ಎಂದು ತೋರಿಸಲು ಈ ಚಿತ್ರ ಮಾಡುತ್ತಿದ್ದೇನೆ.
ಈ ಚಿತ್ರಕ್ಕೆ ಕಥೆ ಮಾಡಿಕೊಳ್ಳಲು ನಿಮ್ಮ ತಯಾರಿ ಹೇಗಿತ್ತು?
ಸತತ ಮೂರು ವರ್ಷ ಈ ಕಥೆಗಾಗಿ ಕೆಲಸ ಮಾಡಿದ್ದೇನೆ. ಹಲವರನ್ನು ಭೇಟಿ ಮಾಡಿದ್ದೇನೆ. ಅಧ್ಯಯನ ಮಾಡಿದ್ದೇನೆ. ಕಾನೂನು, ಪೊಲೀಸ್ ಇಲಾಖೆ ಮಾಹಿತಿಗಳನ್ನು ಸಂಗ್ರಹಿಸಿ ಅಂತಿಮವಾಗಿ ಅದಕ್ಕೊಂದು ರೂಪ ಕೊಟಿದ್ದೇನೆ.
ಎರಡನೇ ಚಿತ್ರವನ್ನೂ ಕಡಿಮೆ ಬಜೆಟ್‌ನಲ್ಲಿ ಪ್ಲಾನ್ ಮಾಡಿದ್ದೀರಲ್ಲ?
ಬಜೆಟ್ ವಿಷಯದಲ್ಲಿ ನಾನು ಹೆಚ್ಚು ನಿರೀಕ್ಷೆ ಮಾಡಲ್ಲ. ಕಡಿಮೆ ವೆಚ್ಚದಲ್ಲಿ ಉತ್ತಮ ಸಿನಿಮಾ ಕೊಡಬೇಕು. ನಿರ್ಮಾಪಕರನ್ನು ಉಳಿಸುವ ಜವಾಬ್ದಾರಿ ನಿರ್ದೇಶಕರ ಮೇಲಿರುತ್ತದೆ. ಅದನ್ನು ಅರ್ಥ ಮಾಡಿಕೊಂಡೇ ಚಿತ್ರದ ಕಥೆ ಮಾಡಿಕೊಂಡೆ.
ಸರಿ, ಈ ಚಿತ್ರದ ಮೂಲಕ ಏನು ಹೇಳುವುದಕ್ಕೆ ಹೊರಟಿದ್ದೀರಿ?
ಮಕ್ಕಳು ನಮ್ಮ ಮೂಗಿನ ನೇರಕ್ಕೆ ಬದುಕಬೇಕು ಎನ್ನುವ ಪೋಷಕರ ತಪ್ಪು ತಿಳಿವಳಿಕೆಯನ್ನು ಹೇಳುತ್ತಿದ್ದೇನೆ. ಆ ಮೂಲಕ ಸಮಾಜದಲ್ಲಿ ಮಕ್ಕಳ ಮೇಲಾಗುತ್ತಿರುವ ವಿವಿಧ ರೀತಿಯ ದೌರ್ಜನ್ಯಗಳ ಅರಿವು ಮೂಡಿಸುವ ಪ್ರಯತ್ನ ಇಲ್ಲಿದೆ.
ನೀವು ಕ್ರೇಜಿಸ್ಟಾರ್ ಅವರ ದೊಡ್ಡ ಅಭಿಮಾನಿಯಂತೆ?
ಕ್ರೇಜಿಸ್ಟಾರ್ ಅವರ ಮೇಲಿನ ಅಭಿಮಾನದ ಬಗ್ಗೆ ಪದಗಳಲ್ಲಿ ಹೇಳಲಾಗದು. ಹೀಗಾಗಿಯೇ ನನ್ನ ಮೊದಲ ಚಿತ್ರಕ್ಕೆ ರವಿ ಸರ್ ಅವರನ್ನೇ ಆಡಿಯೋ ಬಿಡುಗಡೆಗೆ ಕರೆಸಿದ್ದು. ನನ್ನ ಸಿನಿಮಾ ನಿರ್ದೇಶನಕ್ಕೆ ಅವರೇ ಸ್ಫೂರ್ತಿ.

= ಆರ್.ಕೇಶವಮೂರ್ತಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com