

'ಪ್ರೀತಿ, ಪ್ರೇಮಕ್ಕೆ ನಮ್ಮಲ್ಲಿ ಹೆಚ್ಚು ಮಹತ್ವ. ಹೀಗಾಗಿ ಪ್ರೀತಿಯನ್ನು ಬೇಕಾಬಿಟ್ಟಿಯಾಗಿ ವರ್ಣಿಸುವುದಿಲ್ಲ' ಹಾಗಂತ ಹೇಳಿಕೊಂಡೇ ಇಲ್ಲೊಂದು ಚಿತ್ರ ಶುರುವಾಗಿದೆ. ಹೆಸರು 'ಕಾಂಜಿಪೀಂಜಿ ಲವ್'. ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದೆ. ಭದ್ರಾವತಿ ಕುಮಾರ್ ಇದರ ನಿರ್ಮಾಪಕರು. ಇಲ್ಲಿ ಕಾಂಜಿ ಅಂದರೆ ಚಿತ್ರದ ನಾಯಕ ವಿಜಯ್, ಪೀಂಜಿ ಎಂದರೆ ನಾಯಕಿ ದೀಪಿಕಾ ದಾಸ್. ಈ ಎರಡೂ ಪಾತ್ರಗಳ ನಡುವೆ ಸಾಗುವ ಕಥೆಯಾಗಿರುವುದರಿಂದ 'ಕಾಂಜಿಪೀಂಜಿ' ಶೀರ್ಷಿಕೆ ಎನ್ನುವುದನ್ನು ನಾವು ಹೇಳಬೇಕಾದ ಅಗತ್ಯವಿಲ್ಲ. ರಕ್ಷಾ ಮತ್ತೊಬ್ಬ ನಾಯಕಿ. ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಹೊಸನಗರ, ಕವಲದುರ್ಗ ಮುಂತಾದ ಕಡೆ ಚಿತ್ರೀಕರಣವಾಗಿರುವ ಈ ಪ್ರೇಮ ಪುರಾಣ ಸದ್ಯ 'ಭದ್ರಾವತಿಯಿಂದ ತೀರ್ಥಹಳ್ಳಿ'ವರೆಗೆ ಸಾಗಿದೆ. ಬೆಂಗಳೂರಿನ ಚಿತ್ರಮಂದಿರಗಳಿಗೆ ಸದ್ಯದಲ್ಲೇ ದರ್ಶನ ಕೊಡಲಿದೆ.
ಕುಮಾರ್ ಜೊತೆಗೆ ಶರೀಫ್ ಎಂಬವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಭದ್ರಾವತಿ ರಾಮಕೃಷ್ಣ ನಿರ್ದೇಶಕರು. ಧ್ರುವರಾಜ್ ಅವರ ಸಂಗೀತ ಚಿತ್ರಕ್ಕಿದೆ. ಇಂತಿಪ್ಪ 'ಕಾಂಜಿಪೀಂಜಿ' ತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಹಾಜರಾಯಿತು.
'ಇಲ್ಲಿವರೆಗೂ ಚಿತ್ರೀಕರಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮಾತಿನ ಭಾಗ ಸೇರಿದಂತೆ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ಎಲ್ಲ ಕಲಾವಿದರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ' ಎಂದು ಶಹಬ್ಬಾಸ್ಗಿರಿ ನೀಡಿದರು ನಿರ್ದೇಶಕ ರಾಮಕೃಷ್ಣ. ಇನ್ನು ವಿಜಯ್ ಅವರಿಗೆ ನೃತ್ಯದಲ್ಲಿ 10 ವರ್ಷಗಳ ಅನುಭವ ಇದೆ. 'ಮೊದಲ ಚಿತ್ರವಾಗಿದ್ದರಿಂದ ಚಿತ್ರೀಕರಣದ ಅನುಭವ ತುಂಬಾ ಚೆನ್ನಾಗಿತ್ತು. ಕಥೆ ಚೆನ್ನಾಗಿದೆ. ಪ್ರತಿ ದೃಶ್ಯವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದಾರೆ' ಎಂದರು ವಿಜಯ್. 'ಅದ್ಭುತವಾದ ಪ್ರೇಮಕಥೆ ಇಲ್ಲಿದೆ. ಒಳ್ಳೆಯ ಲೋಕೇಷನ್ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ನನ್ನದು ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಶೇಡ್ ಇರುವ ಪಾತ್ರ' ಎಂದರು ದೀಪಿಕಾ ದಾಸ್. ಅಲಿಖಾನ್ ಎನ್ನುವ ಹೊಸ ಖಳನಾಯಕ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದಾರೆ.