ಬ್ಯೂಟಿ ಆಫ್ ಲೈಫ್

'ದ್ಯಾವ್ರೇ' ಚಿತ್ರದ ನಿರ್ದೇಶಕ ಗಡ್ಡವಿಜಿ ಈಗ ಮತ್ತೊಂದು ಸಿನಿಮಾಗೆ ತಯಾರಾಗಿದ್ದಾರೆ. ಚಿತ್ರದ ನಾಯಕ ನವರಸನಾಯಕ ಜಗ್ಗೇಶ್‌ರ ಪುತ್ರ...
ಬ್ಯೂಟಿ ಆಫ್ ಲೈಫ್
Updated on: 

'ದ್ಯಾವ್ರೇ' ಚಿತ್ರದ ನಿರ್ದೇಶಕ ಗಡ್ಡವಿಜಿ ಈಗ ಮತ್ತೊಂದು ಸಿನಿಮಾಗೆ ತಯಾರಾಗಿದ್ದಾರೆ. ಚಿತ್ರದ ನಾಯಕ ನವರಸನಾಯಕ ಜಗ್ಗೇಶ್‌ರ ಪುತ್ರ ಗುರುರಾಜ್. ಯೋಗರಾಜ್‌ಭಟ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ವಿಶೇಷ. ಹಿರಿಯ ಕಲಾವಿದ ಅಂತ ನನ್ನ ಮೇಲಿನ ಪ್ರೀತಿಯಿಂದ ನನ್ನ ಮಗನಿಗೋಸ್ಕರ ಸಿನಿಮಾ ಮಾಡ್ತಾ ಇದ್ದಾರೆ ಎನ್ನುವ ಜಗ್ಗೇಶ್ ಈ ಚಿತ್ರದಲ್ಲಿ ಯಾವ ರೀತಿಯಲ್ಲೂ ಭಾಗವಹಿಸುತ್ತಿಲ್ಲ. ಈ ವರ್ಷ ನಂಗೆ ಸಾಕಷ್ಟು ಕೆಲಸ ಇದೆ ಕಣ್ರೀ. ಲಕ್ಕಿ ಶಂಕರ್ ಒಂದು ಕಥೆ ತಂದಿದಾರೆ. ಚೆನ್ನಾಗಿದೆ. ಅದರ ಜೊತೆಗೆ ರಾಕ್‌ಲೈನ್ ಒಂದು ಸ್ಕ್ರಿಪ್ಟ್ ಕೊಟ್ಟಿದ್ದಾರೆ. ನಾನೂ ಒಂದು ಸ್ಕ್ರಿಪ್ಟ್ ಮಾಡ್ತಾ ಇದ್ದೀನಿ ಎನ್ನುವ ಜಗ್ಗೇಶ್ ಮೆಲ್ಲನೆ ಮಗನ ಸಿನಿಮಾ ಬಿಟ್ಟು ಉಳಿದ ವಿಷಯಗಳತ್ತ ಹೊರಳಿದರು. ಅವರ ಮಾತಿನ ಝಲಕ್ ನಿಮಗಾಗಿ.

  •  ನನ್ನ ಮಗ 60 ವರ್ಷ ಆದಮೇಲೆ ತುಂಬಾ ದೈವಿಕವಾಗಿ ಬದುಕ್ತಾನೆ ಅಂತ ನಮ್ಮಮ್ಮ ಹೇಳ್ತಾ ಇದ್ರು. ಬಹುಶಃ ಅದು ನಿಜವಾಗೋ ಕಾಲ ಬಂದಿದೆ ಅನ್ಸುತ್ತೆ. ನಂಗಿಷ್ಟವಾದ ಗುಂಡು, ನಾನ್‌ವೆಜ್ ಎಲ್ಲ ದೇವರು ಕಿತ್ಕೊತಾ ಇದಾನೆ. ವೇಯ್ಟ್ ಮ್ಯಾನೇಜ್ ಮಾಡ್ತಾ ಇದೀನಿ. ಒಂದಷ್ಟು ದಿನ ಇರದಿದ್ದ ಮೈಗ್ರೇನ್ ಕಿರಿಕಿರಿ ಮತ್ತೆ ಶುರುವಾಗಿದೆ. ಹಾಗಾಗಿ ಈಗ ಕೇವಲ ಸಾತ್ವಿಕ ಆಹಾರ ಮಾತ್ರ.
  •  ಕನ್ನಡಪ್ರಭದಲ್ಲಿ ಫಣಿ ರಾಮಚಂದ್ರ ಎಷ್ಟು ಚೆನ್ನಾಗಿ ಬರೀತಾರ್ರೀ. ಎಷ್ಟು ಚೆನ್ನಾಗಿ ಬರೀತಿರಿ, ಸಿನಿಮಾ ಸ್ಕ್ರಿಪ್ಟ್ ಬರೀರಿ ಅಂದ್ರೆ 'ಅಯ್ಯೋ ಇವತ್ತು ಯಾರೂ ನಮ್ಮ ಸಿನಿಮಾ ಮಾಡಲ್ಲ' ಅಂದ್ರು. ಅದಕ್ಕೆ ನನಗೋಸ್ಕರನೇ ಒಂದು ಸಿನಿಮಾ ಮಾಡಿ ಅಂತ ಹೇಳಿದೀನಿ.
  •  ರಾಜಕೀಯದ ಬಗ್ಗೆ ಬರೀತಾ ನೋಡುವ ನೋಟ ಬದಲಾಗಿದೆ ಅಂತ ಫಣಿ ಬರೆದಿದಾರೆ. ಅದು ಸಿನಿಮಾಗೂ ಅನ್ವಯಿಸುತ್ತೆ. ಮಾಧ್ಯಮ ಅಂದ್ರೆ ಆಗ ಎಲ್ಲರಿಗೂ ಭಯ, ಭಕ್ತಿ ಇತ್ತು. ಇವತ್ತು ಸೋಶಿಯಲ್ ನೆಟ್ವರ್ಕಿಂಗ್ ಸೈಟ್‌ಗಳಲ್ಲಿ ಎಲ್ಲರೂ ಪತ್ರಕರ್ತರ ಥರಾನೇ ಆಡ್ತಾರೆ. ಬೇಕಾಬಿಟ್ಟಿ ಕಾಮೆಂಟ್ ಮಾಡ್ತಾರೆ. ಏನಾದ್ರೂ ಹೇಳಿದ್ರೆ ಅಟ್ಯಾಕ್ ಮಾಡೋಕೇ ಬರ್ತಾರೆ.
  •  ನಮ್ಮ ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನ ಹಾಲಿವುಡ್ ಸಿನಿಮಾಗಳಿಗೆ ಕಂಪೇರ್ ಮಾಡ್ತಾರೆ. ನಮ್ಮ ಸಿನಿಮಾಗಳಲ್ಲಿ ಎಂಟಾಣೆ ಹುಟ್ಟೋದೂ ಕಷ್ಟ. ಅಲ್ಲಿ ಕೋಟಿಗಟ್ಟಲೆ ಬರುತ್ತೆ. ನಾವು ಕಾಂಪೀಟ್ ಮಾಡೋಕೆ ಹೇಗೆ ಸಾಧ್ಯ?. ಹಂಗಂತ ಎಲ್ಲಾ ಕಡೆ ಹೀಗಿಲ್ಲ. ಬೇರೆ ರಾಜ್ಯದಲ್ಲಿ ಅವರವರ ಭಾಷಾಪ್ರೇಮ, ಸಂಸ್ಕೃತಿ ಉಳಿಕೊಂಡಿದಾರೆ. ನಮ್ಮವರು ಎಲ್ಲಾ ಭಾಷೆ ಸಿನಿಮಾ ನೋಡ್ತಾರೆ. ಅವರಿಗೆ ಆಯ್ಕೆಗಳಿವೆ. ಹಾಗಾಗಿ ನಮ್ಮವರು, ಹಿಂಗಿದ್ರೆ ಮಾತ್ರ ನಮ್ಮಮ್ಮ, ಇಲ್‌ದಿದ್ರೆ ಅಮ್ಮನೇ ಅಲ್ಲ ಅನ್ನೋ ಪರಿಸ್ಥಿತಿಗೆ ತಲುಪಿದಾರೆ. ಹಾಗಾಗಿ ಇಲ್ಲಿ ಹಿಟ್ ಕೊಟ್ಟವನೇ ಸೂಪರ್‌ಸ್ಟಾರ್. ಯಾವ ಸೀನಿಯಾರಿಟಿಗೂ ಬೆಲೆ ಇಲ್ಲ. ಈ ಕಾರಣಕ್ಕೆ ಹಿರಿಯರು ಅನ್ನಿಸಿಕೊಂಡವರು ಹೊರಗೆ ಬರ್ತಾ ಇಲ್ಲ. ಹಾಗಾಗಿ ನಮ್ ಇಂಡಸ್ಟ್ರಿ ಫುಟ್‌ಪಾತ್‌ಗೆ ಬರೋ ಥರಾ ಆಗಿದೆ.
  •  ಇಷ್ಟೆಲ್ಲ ಆಗಿ ಸಿನಿಮಾ ಬಿಡುಗಡೆ ಆದಮೇಲೆ ಥಿಯೇಟರ್ ಓನರ್‌ಗಳಲ್ಲ, ಥಿಯೇಟರ್ ಕಂಟ್ರೋಲರ್‌ಗಳನ್ನ ಜಯಿಸಬೇಕು. ಒಂದು ಶೋನಲ್ಲೇ ಸಿನಿಮಾದ ಹಣೆಬರಹ ಅಳೆದುಬಿಡ್ತಾರೆ. ಎರಡು ವಾರ, ನಾಲ್ಕುವಾರ ಆದಮೇಲೆ ಸಿನಿಮಾ ಪಿಕ್‌ಅಪ್ ಆಗುತ್ತೆ ಅನ್ನೋ ಕಾಲ ಎಲ್ಲ ಹೊರಟು ಹೋಯಿತು. ಒಂದು ಕುರಿನಾ ಕಡಿದು ಮುಗಿಸುವ ಹೊತ್ತಿನಲ್ಲೇ, ಆರಾಮಾಗಿ ಅಲ್ಲೇ ಹುಲ್ಲು ಮೇಯ್ತಾ ಇರೋ ಹೊಸ ಕುರಿಯ ಸರದಿ ಬಂದುಬಿಡುತ್ತೆ. ಅವರಿಗೆ ಪ್ರತಿವಾರ ಹೊಸ ಸಿನಿಮಾ ಹಾಕಬೇಕು ಅನ್ನೋ ಪಾಲಿಸಿ.
  •  ಮೊದಲೆಲ್ಲ ಶೂಟಿಂಗ್ ಜಾಗ ಅಂದ್ರೆ ದೇವಸ್ಥಾನ ಅನ್ನೋ ಥರ ಭಯ ಭಕ್ತಿಯಿಂದ ಕೆಲಸ ನಡೀತಿತ್ತು. ಈಗ ಆ ಶ್ರದ್ಧೆನೇ ಇಲ್ಲ. ಬೇಕಾಬಿಟ್ಟಿ ಉಡಾಫೆಯಿಂದ ಆ್ಯಕ್ಷನ್ ಕಟ್ ಹೇಳ್ತಾರೆ. ನಾವು ಒಂದು ಕಾಲದಲ್ಲಿ ಒಂದು ಪಾತ್ರ ಗಿಟ್ಟಿಸಿಕೊಳ್ಳೋಕೆ ಏನೆಲ್ಲಾ ಮಾಡಬೇಕಿತ್ತು. ನಿರ್ದೇಶಕ, ನಿರ್ಮಾಪಕರಿಂದ ಮೇಕಪ್‌ಮ್ಯಾನ್‌ವರೆಗೂ ಕೈ ಕಾಲು ಹಿಡಿದು, ಹೆಂಗೋ ಸಿನಿಮಾ ಮಾಡಿ, ಅದು ಬಿಡುಗಡೆ ಆಗೋವರೆಗೂ ಕಾದು ಅವರ ಮನೆ ಬಾಗಿಲಿಗೆ ಹೋಗಿ ದುಡ್ಡು ಇಸ್ಕೊತಿದ್ವಿ. ಈಗ ಎಲ್ಲ ಬದಲಾಗಿದೆ. ಇದ್ದಕ್ಕಿದ್ದಂಗೆ ಯಾರು ಬೇಕಾದ್ರೂ ಸಿನಿಮಾ ಮಾಡ್ತಾರೆ. ಒಂದೇ ದಿನಕ್ಕೆ ಹೀರೋ ಆಗ್ತಾರೆ. ಮಾರನೇ ದಿನಾನೇ ದೊಡ್ಡ ಗುರುಗಳ ಥರಾ ಉಪದೇಶ ಮಾಡೋ ಲೆವೆಲ್‌ಗೆ ಹೋಗ್ತಾರೆ. ನನ್ನತ್ರ ರೂಂ ಬಾಡಿಗೆಗೆ ದುಡ್ಡಿಲ್ಲ್ಲ ಅಂತ ಬಂದಿದ್ದ ಹುಡುಗನೂ ಇವತ್ತು ಅಧಿಕಪ್ರಸಂಗದ ಮಾತಾಡ್ತಾನೆ.
  • ಮಾಧ್ಯಮಗಳೂ ಕೂಡ ಬದಲಾಗಬೇಕು. 1 ದಿನ ಶೂಟಿಂಗಿಗೆ ಅಂತ ಎಲ್ಲಿಂದಲೋ ಬಂದು ಹೋಗುವ ಹೊಸ ಹುಡುಗಿಗೆ ಕೊಡುವಷ್ಟು ಪ್ರಚಾರ ಒಬ್ಬ ಹಿರಿಯ ನಟನಿಗೆ ಕೊಡೊಲ್ಲ. ಕೇಳಿದರೆ ಗ್ಲಾಮರ್ ಅಂತಾರೆ. ನಾವು ಇಷ್ಟು ವರ್ಷಗಳಾದ್ರೂ ಮಾಧ್ಯಮಗಳ ಬಗ್ಗೆ ಸಣ್ಣ ಕೊಂಕು ಮಾತೂ ಆಡಲ್ಲ.
  • ಯಾರೋ ಒಬ್ಬ ಹೀರೋ 'ನೀವೇನು ಕಿತ್ಕೊಳ್ಳಕಾಯ್ತದೆ? ಅಂತ ಕೇಳುವಷ್ಟರ ಮಟ್ಟಿಗೆ ಬೆಳೆದಿದ್ದರೆ ಅಂಥವರ ಬರ್ತ್‌ಡೇಗೆ ನೀವು ಶುಭಾಷಯನಾದ್ರೂ ಹೇಳೋದು ಯಾಕೆ?
  •  ನನಗೆ ಹೆಂಡ್ತಿ, ಮಕ್ಕಳು, ಮನೆ, ಬುದ್ಧಿ ಎಲ್ಲಾ ಕೊಟ್ಟಿದ್ದು ಸಿನಿಮಾರಂಗ. 12 ರುಪಾಯಿಯಲ್ಲಿ ಹೆಂಡತಿಗೆ ಮಟನ್ ಬಿರಿಯಾನಿ ತಿನ್ನಿಸಿ ನಾನು ಪಡ್ತಿದ್ದ ಖುಷಿ ಎಲ್ಲಕ್ಕಿಂತ ದೊಡ್ಡದು. ಹಂಗಾಗಿ ಸಿನಿಮಾಗಾಗಿ ರಾಜಕೀಯ ಬಿಡಿ ಅಂದ್ರೆ ಹೆಮ್ಮೆಯಿಂದ ಬಿಡ್ತೀನಿ. ಸಿನಿಮಾಗೋಸ್ಕರ ಏನ್ ಬೇಕಾದ್ರೂ ಬಿಡ್ತೀನಿ.
  •  ಜಂಭದ ಮಾತಲ್ಲ. ನಾವೆಲ್ಲ ಒಂಥರಾ ಸಿನಿಮಾ ಡಿಕ್ಷನರಿ ಇದ್ದಂತೆ. ನಮ್ಮ ಲೈಫ್‌ಬುಕ್ ತೆಗೆದುನೋಡಿದರೆ ಅಲ್ಲಿ ಎಲ್ಲವೂ ಇದೆ. ನೋವು, ಸಂಕಟ, ಅವಮಾನ, ಶ್ರದ್ಧೆ, ಪರಿಶ್ರಮ, ಯಶಸ್ಸು, ಖುಷಿ ಎಲ್ಲ. ಎಲ್ಲವನ್ನೂ ಕೊಟ್ಟಿದ್ದು ಸಿನಿಮಾ. ಅದರ ಬಗ್ಗೆ ಗೌರವ ಇದೆ. ಅದಕ್ಕೆ ಯಾರಾದ್ರೂ ಉಡಾಫೆಯಿಂದ ಸಿನಿಮಾ ಮಾಡಿದ್ರೆ ಸಿಟ್ಟು ಬರುತ್ತೆ. ನಾನು ಅದೃಷ್ಠವಂತ ಅಂತ ಹೆಮ್ಮೆಯಿಂದ ಹೇಳ್ಕೊತೀನಿ. ನನ್ನ ಸಮಕಾಲೀನರೆಲ್ಲಾ ಮನೆಯಲ್ಲಿ ಕೂತಿದ್ರೂ ನಾನಿನ್ನೂ ಚಾಲ್ತಿಯಲ್ಲಿದ್ದೀನಿ. ನಮ್ಮಂಥ 35 ವರ್ಷ ಅನುಭವ ಇರೋ ನಟರು ಉದ್ಯಮದಲ್ಲಿ ಮುಂದೆಯೂ ಇರಬೇಕು ಅಂದ್ರೆ ಪ್ರೇಕ್ಷಕರು ಕೊಂಚ ವಿಶಾಲ ಹೃದಯಿಗಳಾಗಬೇಕು.
  •   ಇದೆಲ್ಲದಕ್ಕೂ ಕಾರಣ ಯಜಮಾನನಿಲ್ಲದ ಮನೆ. ಮಜ್ಜಿಗೆ ಇಲ್ಲದ ಊಟ ಥರಾ ಆಗಿರೋ ನಮ್ಮ ಉದ್ಯಮ. ಇಂಥ ಪರಿಸ್ಥಿತಿಯಲ್ಲಿ ಡಾ.ರಾಜ್‌ಕುಮಾರ್, ವಿಷ್ಣು ಅಂಥವರು ಇದ್ದಿದ್ರೆ ತುಂಬಾ ನೋವು ಪಡ್ತಾ ಇದ್ರು, ಅವರಿಗೂ ಅವಮಾನ ಆಗ್ತಿತ್ತೋ ಏನೋ. ಇದೆಲ್ಲ ನೋಡಿದಾಗ ತುಂಬಾ ಬೇಜಾರಾಗುತ್ತೆ. ಆದ್ರೂ ಇಲ್ಲೇ ಇರಬೇಕು ಅನ್ಸುತ್ತೆ. ಅದೇ ನೋಡಿ ಬ್ಯೂಟಿ ಆಫ್ ಲೈಫ್!!.
-ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com