

ವೈರಸ್ ಎಂಬ ನಿಕ್ ನೇಮ್ನಿಂದಲೇ ಚಾಲ್ತಿಯಲ್ಲಿರೋ 'ಪ್ರೀತಿ ಗೀತಿ ಇತ್ಯಾದಿ' ನಿರ್ದೇಶಕ ವೀರೇಂದ್ರ, ಚಿತ್ರವನ್ನು ಸೆನ್ಸಾರ್ ಹೊಸ್ತಿಲಲ್ಲಿ ಇಟ್ಟು, ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡುತ್ತಿದ್ದಾರೆ. ಮಾತಿನಲ್ಲಿ ತಮ್ಮ ಗುರು ಭಟ್ಟರ ಹಾಗೆಯೇ ಚಿನಕುರುಳಿ. ವಿಪರೀತ ಜೀವನೋತ್ಸಾಹ ಹಾಗೂ ಸಿನಿಮಾ ಪ್ರೀತಿಯ ವೀರು, ಚಿತ್ರ ದಾಖಲೆ ಬರೆಯೋ ಲೆವೆಲ್ಲಿಗೆ ಹಿಟ್ ಆಗದೆ ಹೋದರೂ ಒಂದು ನೀಟ್ ಸಿನಿಮಾ ಅನಿಸಿಕೊಳ್ಳೋದು ಗ್ಯಾರಂಟಿ ಎನ್ನುತ್ತಾರೆ. ಭಟ್ರು ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಸುಳ್ಳಾಗಿಸುವುದಿಲ್ಲ ಎಂಬ ನಂಬಿಕೆ ಅವರದ್ದು. ಫಸ್ಟ್ ಕಾಪಿ ನೋಡಿ ಹಲವರು ಒಳ್ಳೆಯ ಮಾತುಗಳನ್ನಾಡಿದರೂ ಶುಕ್ರವಾರದ ಪ್ರೇಕ್ಷಕನದೇ ಅಂತಿಮ ತೀರ್ಪು ಎಂದು ನಂಬಿರುವ ವೀರು ಜೊತೆ ಚಿಕ್ಕ ಮಾತುಕತೆ:
ಚಿತ್ರದಲ್ಲಿ ಯಾವ ಯಾವ ವಿಷಯಗಳ ಬಗ್ಗೆ ನಿರೀಕ್ಷೆ ಇಟ್ಕೊಂಡಿದೀರಿ?
ಎಮೋಷನಲ್ ದೃಶ್ಯಗಳು!ರಂಗಾಯಣ ರಘು. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದ ಹಾಡು ಮತ್ತು ಹಿನ್ನೆಲೆ ಸಂಗೀತ! ಫ್ಯಾಮಿಲಿಗೆ ಇಷ್ಟ ಆಗೋ ಹಲವು ಅಂಶಗಳಿವೆ. ಒಂದು ತುಂಬಾ ಸ್ಪೀಡಾಗಿರೋ ಸೀರಿಯಲ್ ನೋಡಿದ ಅನುಭವ ಆಗಬಹುದು. ಗೆಲ್ಲಿಸೋ ಅಂಶಗಳು ಕಡೇಪಕ್ಷ ಅರವತ್ತು ಪರ್ಸೆಂಟ್ ಅಂತೂ ಇದೆ.
ದೊಡ್ಡ ಸಿನಿಮಾಗಳು ಅಕ್ಕಪಕ್ಕ ಇವೆ. ನೀವೂ ಮೇ ಕೊನೇಲಿ ಬರ್ತಿದೀರಿ. ರಿಸ್ಕ್ ಅಲ್ವಾ?
ಯಾವ ಸಿನಿಮಾ ಬಂದರೂ ಬರದಿದ್ರೂ ನಾವಂತೂ ಮೇ ಕೊನೆಯಲ್ಲಿ ಬರ್ತೀವಿ. ದೊಡ್ಡ ಸಿನಿಮಾ ನಮ್ಮ ಜೊತೆಯಲ್ಲೇನೂ ರಿಲೀಸ್ ಆಗ್ತಿಲ್ಲ. ಮಾಣಿಕ್ಯ, ಗಜಕೇಸರಿ ನಮಗಿಂತ ಮೊದಲೇ ಬರುತ್ತೆ. ಜೂನ್ ಕೊನೇಲಿ ಪುನೀತ್ ಸರ್ ಸಿನಿಮಾ ಇದೆ. ಅಲ್ಲಿಗೆ ನಮಗೆ ಮೂರು ವಾರ ಟೈಮ್ ಇರತ್ತೆ. ಅಷ್ಟರಲ್ಲಿ ನಮ್ಮ ಹಣೆಬರಹ ಗೊತ್ತಾಗೇ ಆಗುತ್ತೆ. ಚಿತ್ರಕ್ಕೆ ಪ್ರತಿಕ್ರಿಯೆ ಚೆನ್ನಾಗಿದ್ರೆ ಯಾವ ದೊಡ್ಡ ಸಿನಿಮಾ ಎದುರಿದ್ರೂ ಗೆಲ್ತೀವಿ. ಇಲ್ಲಾಂದ್ರೆ ಮೂರು ವಾರಕ್ಕೆ ಎತ್ತಂಗಡಿ ಆಗ್ತೀವಿ.
ಭಟ್ರ ಸಿನಿಮಾಗೆ ಹರಿಕೃಷ್ಣ ಮ್ಯೂಸಿಕ್. ಶಿಷ್ಯಂದಿರಿಗೆ ಮಾತ್ರ ವೀರ್ಸಮರ್ಥ್. ಯಾಕೆ ಹೀಗೆ?
ಸದ್ಯಕ್ಕೆ ಐರಾವತ ಬೇಡ ರೆಡ್ಬಸ್ಸಲ್ಲಿ ಹೋಗ್ಲಿ ಅಂತ ಇರಬಹುದು. ಇಷ್ಟಕ್ಕೂ ನಾವು ಶಿಷ್ಯಂದಿರೆಲ್ಲ ಸದ್ಯಕ್ಕೆ ಮಾಡ್ತಿರೋದು ಲೋಬಜೆಟ್ ಸಿನ್ಮಾಗಳು. ಸೊ ನಮ್ಮ ಬಜೆಟ್ಗೆ ವೀರ್ಸಮರ್ಥ್ರೇ ಸಮರ್ಥ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಕ್ವಾಲಿಟಿ ತುಂಬಾ ಚೆನ್ನಾಗಿದೆ. ಹಾಡುಗಳು ಸುಪರ್ಹಿಟ್ ಆಗದೆ ಹೋದರೂ ಒಳ್ಳೆ ಪ್ರತಿಕ್ರಿಯೇನೆ ಸಿಕ್ಕಿದೆ.
ಫೇಸ್ಬುಕ್ಕಲ್ಲಿ ನಿಮ್ಮ ವಿಶಿಷ್ಟ ರೀತಿಯ ಪ್ರಚಾರ ನಡೀತಾನೇ ಇದೆ. ಆದರೂ ಕಂಪ್ಯೂಟರಿನಿಂದ ಹೊರಗಡೆ ಸಿನಿಮಾಗೆ ಪ್ರಚಾರ ಕಮ್ಮಿ ಆಗಿಲ್ವಾ?
ಸೆನ್ಸಾರ್ ಆಗೋ ತನಕ ಸುಮಾರಾಗಿ ಯಾರೂ ಹೆಚ್ಚು ಪ್ರಚಾರ ಮಾಡೋಲ್ಲ. ರಿಲೀಸಿನ ಆಸುಪಾಸಲ್ಲಿ ಒಂದಷ್ಟು ಅಬ್ಬರದ ಪ್ರಚಾರದ ಪ್ಲಾನ್ ಇದೆ. ಸದ್ಯಕ್ಕಿನ್ನೂ ಸಿನಿಮಾ ಮಾಡೋದು ಕಲೀತಿದೀನಿ. ಸದ್ದು ಮಾಡೋದ್ ಹೇಗೋ ಏನೋ ಗೊತ್ತಿಲ್ಲ. ಕೊನೆಯ ಹತ್ತು ಹದಿನೈದು ದಿನಗಳು ಅದನ್ನೂ ಕಲಿಸಬಹುದೇನೋ. ನೋಡೋಣ.
ಈ ಚಿತ್ರದಿಂದ ನಿಮ್ಮ ಪ್ರೀತಿ ಗೀತಿ ತಂಡದಲ್ಲಿ ಏನೇನು ಬದಲಾಗಬಹುದು?
ಈ ಸಿನಿಮಾ ಹಿಟ್ ಆದರೂ ಫ್ಲಾಪ್ ಆದರೂ ನನಗಂತೂ ಒಂದು ಪಾಠ ಖಂಡಿತಾ ಕಲಿಸುತ್ತೆ. ಈಗಾಗಲೇ ತುಂಬಾನೇ ಕಲಿಸಿದೆ. ಏನೇ ಆದರೂ ಮತ್ತೊಂದು ಹೋರಾಟಕ್ಕೆ ಸಿದ್ಧ ಆಗಬೇಕಾದ್ದು ಅನಿವಾರ್ಯತೆ.
ನಾನು ರಿಸ್ಕ್ ತಗೊಳೋಕೆ ಹೋಗಿ ನನ್ನನ್ನ ನಂಬಿದವರನ್ನ ರಿಸ್ಕಿಗೆ ತಳ್ಳಬಾರ್ದು ಅಂತ ಒಂದು ಸೇಫ್ ಸಿನಿಮಾ ಮಾಡಿದ್ದೇನೆ. ಮುಂದೆ ಖಂಡಿತ ಕಮರ್ಷಿಯಲ್ಲಾಗಿಯೂ ಗೆಲ್ಲೋ ಅಂತ ಪ್ರಯೋಗ ಮಾಡೇ ಮಾಡ್ತೀನಿ.
ನಿಮ್ಮ ಚಿತ್ರದಲ್ಲಿ ಭಟ್ಟರ ಇನ್ವಾಲ್ವ್ಮೆಂಟ್ ಎಷ್ಟಿದೆ?
ಭಟ್ರದ್ದೇ ಕಥೆ . ಸಂಗೀತದಲ್ಲೂ ಮೂರು ಹಾಡು ಅವರೇ ಖುದ್ದು ಆಸಕ್ತಿ ವಹಿಸಿ ಮಾಡಿಸಿದ್ದಾರೆ. ಫೈನಲ್ ಕಾಪಿ ನೋಡಿದಮೇಲೆ ಒಂದು ಹತ್ತು ನಿಮಿಷ ಕಟ್ ಮಾಡಿಸಿ ಇನ್ನಷ್ಟು ನೋಡಬಲ್ ಆಗಿಸಿದ್ದಾರೆ.
ಹತ್ತು ವರ್ಷದಿಂದ ಭಟ್ರ ಜೊತೆ ಇರೋದ್ರಿಂದ ಭಟ್ರ ಪ್ರಭಾವ ನಿಮ್ಮ ಮೇಲೆ ಎಷ್ಟಿದೆ?
ತುಂಬಾ ಜಾಗ್ರತೆ ವಹಿಸಿದರೂ ಸಂಭಾಷಣೆಯಲ್ಲಿ ಸ್ವಲ್ಪ ಅವರ ಪ್ರಭಾವ ಬಂದಿದೆ. ಮಿಕ್ಕೆಡೆಯಲ್ಲಿ ನನ್ನತನವಿದೆ ಅಂತ ಹೇಳೋಕೆ ಹೊರಟರೂ ಅಲ್ಲೂ ಸ್ವಲ್ಪ ಭಟ್ಟರ ಶೈಲಿ ಕಾಣುತ್ತೆ.
ಬಿಡುಗಡೆ ದಿನ ಹತ್ತಿರ ಬರ್ತಿದೆ. ಒಟ್ಟಾರೆ ಏನು ಅನಿಸ್ತಿದೆ ?
ಪ್ರೇಕ್ಷಕರಿಗೆ ಕುತೂಹಲ ಇದೆಯೋ ಇಲ್ವೋ ನನಗಂತೂ ತುಂಬ ಕುತೂಹಲವಿದೆ! ಜನರಿಗೆ ಬೋರ್ ಆಗಬಾರದು ಅನ್ನೋ ಕಾರಣಕ್ಕೆ ಕೇವಲ ಎರಡು ಗಂಟೆಗೆ ಸೀಮಿತಗೊಳಿಸಿದ್ದೇನೆ. ಮುಂಗಾರುಮಳೆ ರೇಂಜಿಗೆ ಹಿಟ್ಟಾಗಿಬಿಟ್ರೆ ಎಂಬ ಹಗಲುಗನಸೂ ಕಾಣ್ತಿದ್ದೇನೆ. ಕನಸು ಕಾಣೋಕೇನಂತೆ. ಅಲ್ವೇ?
-ನವೀನ್ ಸಾಗರ್