ಈ ಸಮಯ ಶೃಂಗಾರಮಯ

ಈ ಸಮಯ ಶೃಂಗಾರಮಯ
Updated on: 

ಕನಸುಗಾರನಿಗೆ  ಮತ್ತೆ ರಸಿಕನಾಗುವ ಮುಹೂರ್ತ ಒದಗಿ ಬಂದಿದೆ. ಅದಕ್ಕಾಗಿ ಅವರು ಅವರು ಶೃಂಗಾರ ಸನ್ನದ್ಧರಾಗಿದ್ದಾರೆ. ಅಭಿಮಾನಿಗಳಿಗೆ ತಾವು ಏಕಾಂಗಿಯಾಗಿರೋದು ಇಷ್ಟವಿಲ್ಲ ಎಂಬುದನ್ನು ಮನಗಂಡಿರುವ ರವಿಚಂದ್ರನ್ ಮತ್ತೆ ಗಡಿಬಿಡಿಗಂಡನ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಹೊಸ ನಿರ್ಮಾಪಕ ಶಂಕರ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಹೊಸ ಚಿತ್ರ ಶೃಂಗಾರಕ್ಕೆ ಅಕ್ಷಯ ತೃತೀಯಾದ ಶುಭಘಳಿಗೆಯಲ್ಲಿ ಮುಹೂರ್ತ ನಡೆಯಿತು.
ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ 'ವಿನಾಯಕ ಗೆಳೆಯರ ಬಳಗ' ಚಿತ್ರ ನಿರ್ದೇಶಿಸಿದ ದೀರ್ಘ ಅವಧಿಯ ನಂತರ ಮತ್ತೊಮ್ಮೆ ಭರ್ಜರಿಯಾಗಿಯೇ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರದ ಶೀರ್ಷಿಕೆಯಿಂದಲೇ ರವಿಚಂದ್ರನ್‌ರ ಅಂದಿನ ದಿನಗಳನ್ನು ನೆನಪಿಸುವಂತೆ ಮಾಡಿರುವ ನಾಗೇಂದ್ರಪ್ರಸಾದ್, ತಮ್ಮ ಮಾತಿನಲ್ಲೂ ಅದೇ ಭರವಸೆ ನೀಡಿದರು. ಇಡೀ ಚಿತ್ರ ಕ್ರೇಜಿಸ್ಟಾರ್‌ನ ಆನ್‌ಸ್ಕ್ರೀನ್ ರಸಿಕತೆಯ ಇಮೇಜಿಗೆ ತಕ್ಕಂತೆ ಶೃಂಗಾರಭರಿತವಾಗಿ ಇರುತ್ತದೆಂದು ಹೇಳಿದ ನಿರ್ದೇಶಕರು ಚಿತ್ರಕ್ಕೆ ಕ್ಲಾಪ್ ಮಾಡಲು ಸುದೀಪ್‌ರನ್ನು ಆಹ್ವಾನಿಸಿದ್ದು ಹಲವು ರೀತಿಯಲ್ಲಿ ವಿಶೇಷವೆನಿಸಿತ್ತು. ತಮ್ಮ ಮೊದಲ ನಿರ್ದೇಶನದ 'ನಲ್ಲ' ಚಿತ್ರದ ನಾಯಕ ಸುದೀಪ್. ಅದಕ್ಕೆ  ಅಂದು ಕ್ಲಾಪ್ ಮಾಡಿದ್ದು ರವಿಚಂದ್ರನ್. ದಶಕದ ನಂತರ ಇಲ್ಲಿ ಅದೇ ದೃಶ್ಯ, ಪಾತ್ರಗಳು ಅದಲು ಬದಲು.  ಮಾಣಿಕ್ಯ ಬಿಡುಗಡೆಯ ಮರುದಿನವೇ ನಲ್ಲ, ಮಲ್ಲನ ಚಿತ್ರಕ್ಕೆ  ಕ್ಲಾಪ್ ಮಾಡಿದ್ದು ಮಾಣಿಕ್ಯ ಕಟೌಟ್‌ಗೆ ಸಂಬಂಧಿಸಿದಂತೆ ಅಭಿಮಾನಿಗಳಲ್ಲಿ ಮೂಡಿದ್ದ ಹಲವು ಅಸಮಾಧಾನಗಳಿಗೆ ಪೂರ್ಣವಿರಾಮ ಹಾಕಿತ್ತು.  ಚಿತ್ರದ ಇನ್ನೊಂದು ವಿಶೇಷ ಅನೂಪ್ ಸೀಳಿನ್ ರವಿಚಂದ್ರನ್ ಚಿತ್ರಕ್ಕೆ ಮೊದಲ ಬಾರಿಗೆ ಸಂಗೀತ ನೀಡುತ್ತಿರುವುದು. ಕನ್ನಡ ಚಿತ್ರ ಸಂಗೀತ ಪ್ರೇಮಿಗಳು ಅನೂಪ್ ಸಂಗೀತದಲ್ಲಿ ಅವರ ಗುರು ಹಂಸಲೇಖ ಅವರ ಛಾಯೆ ಕಾಣುತ್ತಿರುವ ಹೊತ್ತಿನಲ್ಲಿ, ರವಿಚಂದ್ರನ್ ಜೊತೆಗಿನ ಈ ಕಾಂಬಿನೇಶನ್ ಕೌತುಕ ಮೂಡಿಸಿದೆ.
'ಪ್ರೇಮಲೋಕ ಚಿತ್ರದಿಂದ ಕನಸುಗಾರನ ಅಭಿಮಾನಿಯಾಗಿರುವ ತಮಗೆ ಈ ಚಿತ್ರದಿಂದ ಕನಸು ಸಾಕಾರಗೊಂಡಿರುವ ಸಂತಸ' ಎಂದರು ಅನೂಪ್.
ಚಿತ್ರದ ಶೀರ್ಷಿಕೆ ಕೂಡ ರವಿಚಂದ್ರನ್ ಅವರೇ ಸೂಚಿಸಿದ್ದು ಎಂದು ಹರ್ಷ ವ್ಯಕ್ತಪಡಿಸಿದ ನಾಗೇಂದ್ರ ಪ್ರಸಾದ್, ಚಿತ್ರದ ಕಥೆ ರಚಿಸೋದಕ್ಕೆ ಎಳೆಯೊಂದನ್ನು ನೀಡಿದ ಗೆಳೆಯ ಸ್ವಾಮಿಗೆ ಕೃತಜ್ಞತೆ ಸಲ್ಲಿಸಿದರು.
ಮಲ್ಲನಿಗೆ ಮಲ್ಲಕಂಬದಂತ ಇಬ್ಬರು ನಾಯಕಿಯರಿದ್ದು, ಲಕ್ಷ್ಮಿ ರೈ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಸದ್ಯದ ಅತ್ಯಂತ ಬ್ಯುಸಿ ನಾಯಕಿ ರಾಗಿಣಿ ಈ ತ್ರಿಕೋನವನ್ನು ಪೂರ್ಣಗೊಳಿಸಲಿದ್ದಾರೆ. ಕಳ್ಳಮಳ್ಳಸುಳ್ಳ ಚಿತ್ರದಲ್ಲಿ ತುಪ್ಪ ಬೇಕಾ ತುಪ್ಪ ಹಾಡಿನಲ್ಲಿ ರವಿಚಂದ್ರನ್‌ಗೆ ಜೊತೆಯಾಗಿದ್ದ ರಾಗಿಣಿಗೆ  ಇದು ಪೂರ್ಣಪ್ರಮಾಣದಲ್ಲಿ ನಾಯಕಿಯಾಗುವ ಅವಕಾಶ. ರವಿಚಂದ್ರನ್ ಸೂಚನೆಯಂತೆ ಮೆಲೋಡಿ ಹಾಗೂ ಗುಂಗು ಹಿಡಿಸುವಂಥ ಟ್ಯೂನ್ ಸಿದ್ಧಪಡಿಸುತ್ತಿರುವುದಾಗಿ ಸಾಹಿತ್ಯ ಬರೆಯುತ್ತಿರುವ ನಿರ್ದೇಶಕ ನಾಗೇಂದ್ರ ಪ್ರಸಾದ್ ಹಾಗೂ ಅನೂಪ್ ಛಾಲೆಂಜನ್ನು ಸ್ವೀಕರಿಸಿದಂತೆ ಹೇಳಿದರು. ಈ ಚಿತ್ರಕ್ಕಾಗಿ ತಾವು  ಹತ್ತು  ವರ್ಷಗಳ ನಂತರ ಕ್ಲೀನ್ ಶೇವ್ ಮಾಡಿರುವುದಾಗಿ ರವಿಚಂದ್ರನ್ ಹೇಳಿಕೊಂಡರು. 'ಈ ಚಿತ್ರದಲ್ಲಿ ನಾನು ಕೇವಲ ನಟ. ಚಿತ್ರ ಚೆನ್ನಾಗಿ ಬರುವ ವಿಷಯದಲ್ಲಿ  ತಾಂತ್ರಿಕ ವರ್ಗ ತಾವಾಗಿ ಏನಾದರೂ ಸಲಹೆ ಕೇಳಿದಲ್ಲಿ ಖಂಡಿತ ಸಹಕಾರ ನೀಡಲು ಸಿದ್ಧ' ಎಂದು ರವಿಚಂದ್ರನ್ ಸ್ಪಷ್ಟಪಡಿಸಿದರು.

= ಎನ್ನೆಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com