ಈ ಹೃದಯಾ ಹಾಡಿದೆ

ಈ ಹೃದಯಾ ಹಾಡಿದೆ
Updated on: 

ಅಂದಿನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ 'ಮುಂದಿನ ಸಲ ಹೆಸರನ್ನ ಸ್ವಲ್ಪ ಚಿಕ್ಕದಾಗಿಡಿ' ಅಂತ ಹೇಳಿದ್ದು ಸಾಹಿತಿ ಡಾ.ನಾಗೇಂದ್ರಪ್ರಸಾದ್. ಅದು 'ಈ ದಿಲ್ ಹೇಳಿದೆ ನೀ ಬೇಕಂತ' ಚಿತ್ರದ ಹಾಡುಗಳ ಬಿಡುಗಡೆ. ಚಿತ್ರದ ಹೆಸರೇ ಒಂದು ಹಾಡಿನ ಸಾಲಿನಂತಿರುವುದನ್ನು ಕಂಡು ನಾಗೇಂದ್ರಪ್ರಸಾದ್ ಹೇಳಿದ ಮಾತಿದು.
ಜುಗಾರಿ ಅವಿನಾಶ್, ಶ್ರೀಶ್ರುತಿ ಅಭಿನಯದ ಈ ಚಿತ್ರದ ಆಡಿಯೋ ಬಿಡುಗಡೆ ಅಂದು ಹೌಸ್‌ಫುಲ್ ಆಗಿರಲು ಹಲವು ಗಣ್ಯರು ಕಾರಣರಾಗಿದ್ದರು. ಚಿತ್ರದ ಒಂದು ಕುಡಿಯುವ ಹಾಡಿಗೆ ಕುಣಿದಿರುವ ಖುಷಿಯಲ್ಲಿದ್ದ ಋಷಿಕುಮಾರ ಸ್ವಾಮೀಜಿ ಕೂಡ ಅಲ್ಲಿದ್ದರು. ಅವರ ಜೊತೆ ಶ್ರೀನಗರ ಕಿಟ್ಟಿ ಮತ್ತು ನಾಗೇಂದ್ರ ಪ್ರಸಾದ್ ಅತಿಥಿಗಳು ಮತ್ತು ಅವರೊಂದಿಗೆ ಈ ದಿಲ್ ಹೇಳಿದೆ ನೀ ಬೇಕಂತ ಚಿತ್ರತಂಡ.
ಚಿತ್ರದ ಸಂಗೀತ ನಿರ್ದೇಶಕ ಸತೀಶ್ ಆರ್ಯನ್. ಈ ಮುಂಚೆ ಪದೇ ಪದೇ ಚಿತ್ರಕ್ಕೆ ಸಂಗೀತ ನೀಡಿದ್ದ ಸತೀಶ್ ಈ ಚಿತ್ರದಲ್ಲೂ ಐದು ಬೆಸ್ಟ್ ಹಾಡುಗಳನ್ನು ಮತ್ತು 2 ಬಿಟ್ ಹಾಡುಗಳನ್ನು ಕೊಟ್ಟಿದ್ದಾರಂತೆ.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕರು ಆಕರ್ಷಣೆಯಾಗುವುದು ಸಹಜ. ಆದರೆ ಅಂದು ಚಿತ್ರದ ನಿರ್ಮಾಪಕ ಶ್ರೀಧರ್ ಕೂಡ ಕೂಡ ಹೈಲೈಟ್ ಆಗಿದ್ದುದು ವಿಶೇಷ ಎನ್ನಬಹುದು. ಏಕೆಂದರೆ ಚಿತ್ರದಲ್ಲಿರುವ ಅಷ್ಟೂ ಹಾಡುಗಳನ್ನು ಬರೆದಿರುವವರು ಅವರೇ. ಈ ಬಗ್ಗೆ ಮಾತನಾಡಿದ ನಾಗೇಂದ್ರಪ್ರಸಾದ್, ನಿರ್ಮಾಪಕರು ಬೇಕಾದಷ್ಟು ಜನ ಸಿಗಬಹುದು ಆದರೆ ಕವಿ ಹೃದಯದ ನಿರ್ಮಾಪಕರು ಸಿಗೋದು ಕಷ್ಟ. ಅಂಥ ಅಪರೂಪದ ನಿರ್ಮಾಪಕ ಶ್ರೀಧರ್ ಅವರು. ಹಾಗಂತ ನಿರ್ಮಾಪಕರು ಎಂಬ ಕಾರಣಕ್ಕೆ ಅವರಿಗೆ ಯಾವ ಮಾರ್ಜಿನ್ ಕೊಡುವ ಅಗತ್ಯ ಇಲ್ಲ. ಮೆಚ್ಯೂರ್ಡ್ ಕವಿಗಳ ರೀತಿಯಲ್ಲೇ ಅವರು ಹಾಡುಗಳನ್ನು ಬರೆದಿದ್ದಾರೆ ಎನ್ನುತ್ತಾರೆ.
ಸತೀಶ್ ಆರ್ಯನ್ ಚಿತ್ರರಂಗ ಪ್ರವೇಶಿಸಿದ್ದು ಗಾಯಕರಾಗಿ. ನಾನು ಹಾಡಿದ ಮೊದಲು ಹಾಡನ್ನು ಬರೆದಿದ್ದು ನಾಗೇಂದ್ರಪ್ರಸಾದ್ ಎಂದ ಸತೀಶ್ ಇವತ್ತು ಅವರು ನಮ್ಮ ಆಡಿಯೋ ಬಿಡುಗಡೆಗೆ ಬಂದಿರುವುದು ಸಂತೋಷ ಎನ್ನುತ್ತಾ ಚಿತ್ರದ ಹಾಡುಗಳು ಮತ್ತು ಗಾಯಕರ ಬಗ್ಗೆ ವಿವರಗಳನ್ನು ಕೊಟ್ಟರು.
ಚಿತ್ರರಂಗದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇದ್ದೆ. ಯಾಕೋ ಸರಿಬರಲಿಲ್ಲ ಅಂತ ವಾಪಸ್ಸು ಹೋಗಿ ನನ್ನ ಕೆಲಸ ಶುರುಮಾಡಿದೆ ಈಗ ಚಿತ್ರರಂಗಕ್ಕೆ ನಿರ್ಮಾಪಕನಾಗಿ ವಾಪಸ್ಸು ಬಂದಿದ್ದೇನೆ ಎಂಬ ಖುಷಿ ನಿರ್ಮಾಪಕ ಶ್ರೀಧರ್ ಅವರದ್ದು. ಇದಕ್ಕೂ ಮುಂಚೆ ಮಾತನಾಡಿದ ಋಷಿಕುಮಾರ ಸ್ವಾಮೀಜಿ, ಈ ಮನುಷ್ಯ ತನ್ನ ಪ್ರತಿ ತಿಂಗಳ ಸಂಬಳದ ಹಣದಿಂದ ಸಿನಿಮಾ ಮಾಡುತ್ತಿದ್ದಾನೆ ಅವರನ್ನು ಪ್ರೋತ್ಸಾಹಿಸಿ ಎಂದರು. ಅದಲ್ಲದೆ ಕುಡಿಯುವ ಹಾಡಿನಲ್ಲಿ ಕುಣಿದಿದ್ದೇನೆ ಎಂದು ಲಘುವಾಗಿ ನೋಡಬೇಡಿ. ಇದೊಂದು ಕಲೆ ಎಂದಷ್ಟೇ ನೋಡಿ. ಯಾಕೆಂದರೆ ನಾನು ಅವನತಿಯಲ್ಲಿದ್ದಾಗ ನನ್ನನ್ನು ಕೈ ಹಿಡಿದಿದ್ದು ಇದೇ ಕಲೆ. ಅದರ ಬಗ್ಗೆ ನನಗೆ ಗೌರವವಿದೆ ಎಂಬುದು ಸ್ವಾಮೀಜಿ ಅವರ ಸ್ಪಷ್ಟನೆ.
ನಿರ್ದೇಶಕ ಕೆ.ಟಿ.ಎಂ. ಶ್ರೀನಿವಾಸ್ 'ನಮ್ಮ ಮನೆಯವರೇ ನನಗೆ ಒಂದೂವರೆ ಲಕ್ಷ ಕೊಡೋದು ಕಷ್ಟ. ಅಂಥದ್ರಲ್ಲಿ ಈ ನಿರ್ಮಾಪಕರು ನನ್ನನ್ನು ನಂಬಿ ಒಂದೂವರೆ ಕೋಟಿ ಹಾಕಿದ್ದಾರೆ' ಎನ್ನುತ್ತಾ ನಿರ್ಮಾಪಕರನ್ನೊಳಗೊಂಡಂತೆ ಇಡೀ ಚಿತ್ರ ತಂಡಕ್ಕೆ ಧನ್ಯವಾದ ಅರ್ಪಿಸಿದರು.
ಜುಗಾರಿ, ಮದುವೆ ಮನೆ ಚಿತ್ರಗಳ ಮೂವಲಕ ಈಗಾಗಲೇ ತಾನೊಬ್ಬ ನಟ ಎಂಬುದನ್ನು ಪ್ರೂವ್ ಮಾಡಿರುವ ಅವಿನಾಶ್ ಈಗ 'ಈ ದಿಲ್ ಹೇಳಿದೆ ನೀ ಬೇಕಂತ' ಚಿತ್ರ ತಮಗೆ ಗಾಂಧಿನಗರದಲ್ಲೊಂದು ಗಟ್ಟಿ ನೆಲೆ ಕೊಡುತ್ತದೆ ಎಂದು ಭಾವಿಸಿದ್ದಾರೆ. ಅವರೊಂದಿಗೆ ನವನಟಿ ಶ್ರೀಶ್ರುತಿ ಮತ್ತು ಚಿತ್ರತಂಡ ಸೇರಿ ಹಾಡುಗಳ ಪ್ರದರ್ಶನದ ನಂತರ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ನಿರ್ಮಾಪಕರ ಹರಕೆಯಂತೆ ಅದಕ್ಕೂ ಮುಂಚೆ
ಧರ್ಮಸ್ಥಳ ಮಂಜುನಾಥನ ಹಾಡುಗಳ ಸೀಡಿ ಬಿಡುಗಡೆಯೂ ನಡೆದಿದ್ದು ಅಂದಿನ ಮತ್ತೊಂದು ವಿಶೇಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com