

ತಾಯಿ-ಮಗನ ಬಾಂಧವ್ಯದ ಮಹತ್ವ ಹೇಳುವಂಥ ಕಥೆ ಹೊಂದಿದ 'ತಾಯಿಲ್ಲದೆ ನಾನಿಲ್ಲ' ಎಂಬ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕಳೆದ ಭಾನುವಾರ ತಾಯಂದಿರ ದಿನದಂದು ನೆರವೇರಿತು. ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಪಿಲ್ ಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗು ಸೇರಿ 3 ಭಾಷೆಗಳನ್ನು ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ಅಮ್ಮಲೇಖ ನೇನು ಲೇನು ಹಾಗು ತಮಿಳಿನಲ್ಲಿ ತಾಯಿಲ್ಲಾಳ್ ನಾನಿಲ್ಲೈ ಹೆಸರಿನೊಂದಿಗೆ ತಯಾರಾಗುತ್ತಿರುವ ಈ ಚಿತ್ರವನ್ನು ತಂತ್ರಜ್ಞರೆಲ್ಲ ಸೇರಿ ನಿರ್ಮಿಸುತ್ತಿರುವುದು ವಿಶೇಷ. ಜೋ ಜೋ ಲಾಲಿ ಓ ನನ್ನ ಕಂದ ಅಮ್ಮನ ನೋಡು ಈಗ ಅಳಬೇಡ ಎಂಬ ಹಾಡಿನೊಂದಿಗೆ ಒಟ್ಟು 6 ಹಾಡುಗಳನ್ನು ಕಲಾಕಾರ್ ಗೋಪಿ ಸಂಗೀತ ನಿರ್ದೇಶನದಲ್ಲಿ ಧ್ವನಿ ಮುದ್ರಿಸಿಕೊಳ್ಳಲಾಯಿತು. ಚಿತ್ರಕ್ಕೆ ಸಿ.ನಾರಾಯಣ್ ಛಾಯಾಗ್ರಹಣ, ವಿಜಯ್ ಚೆಂಡೂರ್ ಚಿತ್ರಕಥೆ, ಸಂಭಾಷಣೆ ಇದೆ. ತನ್ಮಯಿ, ಪದ್ಮಿನಿ, ವೆಂಕಟೇಶ್ ತಾರಾಬಳಗದಲ್ಲಿದ್ದು ಉಳಿದ ನಟ, ನಟಿಯರ ಆಯ್ಕೆ ನಡೆಯುತ್ತಿದೆ.