

ಧನಂಜಯ್...
ಹೆಸರು ಕೊಂಚ ಹಳೆಯದು ಅನಿಸಿದರೂ, ಮುಖ ಹೊಸದು. 'ಮಠ' ಗುರುಪ್ರಸಾದ್ ನಿರ್ದೇಶನದ 'ಡೈರೆಕ್ಟರ್ ಸ್ಪೆಷಲ್' ಚಿತ್ರ ಎಷ್ಟರ ಮಟ್ಟಿಗೆ ಸುದ್ದಿ ಮಾಡಿತೋ ಅದರ ಎರಡು ಪಟ್ಟು ಈತ ಪ್ರೇಕ್ಷಕರ ಗಮನ ಸೆಳೆದ. ಗಡ್ಡ ಬಿಟ್ಟು ಬೈರಾಗಿಯಂತೆ ಮೊದಲ ಚಿತ್ರದಲ್ಲಿ ಕಂಡರೂ ನೋಡುಗರ ಮನಸ್ಸಿನಲ್ಲಿ 'ಸ್ಮಾರ್ಟ್ ಹೀರೋ' ಬಿರುದು ದಕ್ಕಿಸಿಕೊಂಡು, 'ರಾಟೆ' ಆಡುವ ಮೊದಲೇ 'ಹುಚ್ಚ'ನಾದ. ನಿರ್ದೇಶಕ ಓಂಪ್ರಕಾಶ್ ರಾವ್ ಕ್ಯಾಂಪಿನಲ್ಲಿ 'ಹುಚ್ಚ' ಅನಿಸಿಕೊಳ್ಳುವ ಮೊದಲೇ 'ಜಯನಗರ 4ನೇ ಬ್ಲಾಕ್'ನಲ್ಲಿ ಅಡ್ಡಾಡಿ ಚಪ್ಪಾಳೆ ಗಿಟ್ಟಿಸಿಕೊಂಡ. ಇದರ ನಡುವೆ ಯಾರಿಗೂ ಗೊತ್ತಿಲ್ಲದೆ ಸೈಲೆಂಟ್ ಆಗಿ ರಾಜನಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಕಲ್ಲು ಬಂಡೆಗಳ ನಾಡಿನಲ್ಲಿ ದರ್ಬಾರ್ ನಡೆಸುತ್ತಿದ್ದಾರೆ.
ಹೌದು, 'ಡೈರೆಕ್ಟರ್ ಸ್ಪೆಷಲ್' ಚಿತ್ರದ ಅನಾಥ, 'ರಾಟೆ' ಚಿತ್ರದ ಕಮರ್ಷಿಯಲ್ ಹೀರೋ, 'ಹುಚ್ಚ' ಚಿತ್ರದ ಮಾಸ್ ನಾಯಕ ಧನಂಜಯ್ ಈಗ ಫಾರ್ಮ್ನಲ್ಲಿ ನಿಂತಿರುವ ಗಾಂಧಿನಗರದ ಗ್ಯಾರಂಟಿ ನಟರಲ್ಲಿ ಒಬ್ಬರು ಎನಿಸಿಕೊಳ್ಳುವ ಹಾದಿಯಲ್ಲೇ ರಾಜನ ಗೆಟಪ್ನಲ್ಲಿ ಮಿಂಚುತ್ತಿದ್ದಾರೆ. 'ವಿಜಯಾದಿತ್ಯ' ಹೆಸರಿನ ಚಿತ್ರ ಸದ್ದಿಲ್ಲದೆ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಚಾರಿತ್ರಿಕ ಕಥೆಯ ಜೊತೆಗೆ ಅಧುನಿಕತೆಯ ಕಥೆಯನ್ನು ಒಳಗೊಂಡ 'ವಿಜಯಾದಿತ್ಯ' ಚಿತ್ರಕ್ಕೆ ನಿರ್ಭಯ್ ಚಕ್ರವರ್ತಿ ನಿರ್ದೇಶಕರು. ಸಿನಿಮಾ ಎನ್ನುವ ಮೂರಕ್ಷರದ ಸಾಂಸ್ಕೃತಿಕ ಪರಂಪರೆಯನ್ನು ಅಕಾಡೆಮಿಕ್ ಆಗಿ ಅಭ್ಯಾಸ ಮಾಡಿಕೊಂಡು, ಫೀಲ್ಡ್ಗಿಳಿದಿರುವ ನಿರ್ಭಯ್ರ ಸಾಹಸಗಳು ಒಂದೆರಡಲ್ಲ. ಸದ್ಯಕ್ಕೆ ಕಲ್ಲು ಬಂಡೆಗಳ ನೆಲದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ನಿರ್ಭಯ್, ನಟ ಧನಂಜಯ್ರ ಔಟ್ ಲುಕ್ ಅನ್ನು ಅಚ್ಚರಿ ಎನಿಸುವಷ್ಟರ ಮಟ್ಟಿಗೆ ಕಂಪೋಸ್ ಮಾಡಿದ್ದಾರೆ. ಸ್ಟಾರ್ ಫೋಟೋಗ್ರಾಫರ್ ಮಹೇಂದ್ರ ಸಿಂಹರ ಕ್ಯಾಮೆರಾದಲ್ಲಿ ಅರಳಿರುವ ಧನಂಜಯ್ನ ಲುಕ್ 'ವಿಜಯಾದಿತ್ಯ' ಚಿತ್ರದ ಬಹು ಮುಖ್ಯ ಆಕರ್ಷಣೆ.
ತೆಲುಗಿನ 'ಬಾಹುಬಲಿ' ಚಿತ್ರಕ್ಕೆ ಕಾಸ್ಟ್ಯೂಮ್ಗಳನ್ನು ವಿನ್ಯಾಸ ಮಾಡಿದವರೇ ಧನಂಜಯ್ ಅವರಿಗೂ ವಿನ್ಯಾಸ ಮಾಡಿರುವುದು ವಿಶೇಷ.
ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡು ಬೆಡ್ರೆಸ್ಟ್ನಲ್ಲಿದ್ದ ಧನಂಜಯ್ ಈಗ ರಿಕವರಿ ಆಗಿದ್ದಾರೆ. ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿರುವ ನಿರ್ಭಯ್ ಮಾತಿಗೆ ಸಿಕ್ಕಾಗ... 'ಈಗಿನ ಕಾಲಘಟ್ಟದಲ್ಲಿ ಒಂದು ಚಾರಿತ್ರಿಕ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಎಷ್ಟೇ ಗ್ರಾಫಿಕ್ಸ್ ಮಾಡಿದರೂ ಚಿತ್ರಕ್ಕೆ ನೈಜತೆ ಬೇಕು. ಹೀಗಾಗಿ ಬಿಸಿಲು, ಗಾಳಿ, ಮಳೆ, ಬೆಟ್ಟ, ಗುಡ್ಡ ಎನ್ನದೆ ಮೈದಾನಕ್ಕೆ ಇಳಿಯಬೇಕಿದೆ. ನನಗೆ ಮೊದಲಿನಿಂದಲೂ ಇಂಥ ಚಿತ್ರ ಮಾಡುವ ಆಸೆ. ಹೀಗಾಗಿ ನಿರ್ದೇಶನದ ತರಬೇತಿ ಪಡೆಯುವಾಗಲೇ ಈ ಚಿತ್ರದ ಕಥೆ ಸಿದ್ಧ ಮಾಡಿಕೊಂಡಿದ್ದೆ. ಆದರೆ, ಹೊಸಬರಿಗೆ ಇಲ್ಲಿ ಅವಕಾಶ ಸಿಗುವುದು ಸುಲಭವಲ್ಲ. ಆದರೂ, ಎದೆಗುಂದದೆ ಚಿತ್ರಕಥೆಯನ್ನು ಕೈಯಲ್ಲಿಡಿದು ಸುತ್ತಾಡಿದೆ. ನನ್ನ ಸ್ನೇಹಿತ ಪ್ರಕಾಶ್ ಕಥೆ ಕೇಳಿ ನಿರ್ಮಾಣದ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ. ಈ ಒಂದು ಚಿತ್ರದ ಮೂಲಕ ನಾನು ಏನು ಅನ್ನುವುದನ್ನು ಪ್ರೂವ್ ಮಾಡುತ್ತೇನೆ. ಕನ್ನಡ ಮಾತ್ರವಲ್ಲ, ದಕ್ಷಿಣ ಭಾರತದ ಮೂರು ಭಾಷೆಯ ಚಿತ್ರರಂಗದವರು ತಿರುಗಿ ನೋಡುವಂಥ ಮೇಕಿಂಗ್ ಸಿನಿಮಾ ಇದು' ಎನ್ನುತ್ತಾರೆ ನಿರ್ಭಯ್ ಚಕ್ರವರ್ತಿ.
ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ. ಮಾಸ್ ಮಾದನ ಡಿಫರೆಂಟ್ ಸಾಹಸಗಳು 'ವಿಜಯಾದಿತ್ಯ' ಚಿತ್ರಕ್ಕೆ ಮತ್ತಷ್ಟು ರೋಚಕತೆ ತಂದಿದೆ. ಈಗ ಸ್ಟಿಲ್ಗಳಿಂದಲೇ ಗಮನ ಸೆಳೆದಿರುವ ಈ ಚಿತ್ರಕ್ಕೆ 'ಹುಚ್ಚ' ಹುಡುಗನನ್ನು ರಾಜನನ್ನಾಗಿಸಿದ ಕೀರ್ತಿ ಸಲ್ಲುತ್ತದೆ. ತೆಲುಗಿನ 'ಮಗಧೀರ' ಹಾಗೂ ಇನ್ನು ಬಿಡುಗಡೆಯಾಗದ 'ಬಾಹುಬಲಿ' ಚಿತ್ರಗಳನ್ನು ಅಚ್ಚರಿಯಾಗಿ ನೋಡುತ್ತಿರುವ ಕನ್ನಡ ಪ್ರೇಕ್ಷಕರ ಮುಂದೆ ಆ ಚಿತ್ರಗಳನ್ನು ಮೀರಿಸುವ ಚಿತ್ರ ಎನ್ನುವ ಹೆಗ್ಗಳಿಕೆಗೆ 'ವಿಜಯಾದಿತ್ಯ' ಪಾತ್ರವಾಗಲಿದೆಯೇ?
- ಆರ್. ಕೇಶವಮೂರ್ತಿ