

ದಾಸ ಸಾಹಿತ್ಯ ಹಾಗೂ ದಾಸರ ಪದಗಳನ್ನು ಕೇಳಿದ ಕನ್ನಡಿಗರಿಗೆ ಕೋಮಲ್ ದಾಸ ಸಿನಿಮಾ ತೋರಿಸಲಿದ್ದಾರೆ. ಒಂದು ಪರಿಪೂರ್ಣ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳನ್ನೂ ತಮ್ಮ ಚಿತ್ರ ಒಳಗೊಂಡಿರಬೇಕು ಎಂಬುದು ಕೋಮಲ್ರ ಆಸೆ. ಆದರೆ ಅವರ ಇತ್ತೀಚಿನ ಕರೋಡ್ಪತಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿರಲಿಲ್ಲ. ಹಾಗಾಗಿ ಈಗ ಪುಂಗಿದಾಸನ ಮೇಲೆ ಕೋಮಲ್ಗೆ ನಿರೀಕ್ಷೆ. ಈ ಹಿಂದೆ 'ರಾಂಬೋ' ಚಿತ್ರವನ್ನು ನಿರ್ದೇಶಿಸಿ, 'ವಿಕ್ಟರಿ' ಚಿತ್ರಕ್ಕೆ ಕಥೆ ಒದಗಿಸಿ ಗೆಲುವಿನ ನಿರ್ದೇಶಕ ಎನಿಸಿಕೊಂಡಿರುವ ಎಂ.ಎಸ್. ಶ್ರೀನಾಥ್ 'ಪುಂಗಿದಾಸ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಡಿ. ಸದಾಶಿವ ದಂಪತಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವುದು 'ಜಿಂಕೆ ಮರಿ' ಹಾಡಿನ ಖ್ಯಾತಿಯ ಫರ್ಹಾನ್ ರೋಶನ್ ಅಲಿಯಾಸ್ ಎಮಿಲ್. ಆಸ್ಮಾ ನಾಯಕಿ. 40ಕ್ಕೂ ಹೆಚ್ಚು ಮುಖ್ಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ರಾಜ್ಯದ 120 ಚಿತ್ರಮಂದಿರಗಳಲ್ಲಿ 'ಪುಂಗಿದಾಸ' ತೆರೆ ಕಾಣುತ್ತಿದೆ. ಮುತ್ತಜ್ಜನ ಸಾವು ಮತ್ತು ಆತನ ಸಾಲ... ಈ ಒಂದು ಸಾಲನ್ನು ಹಿಡಿದು ಕಥೆ ಮಾಡಿಕೊಂಡಿರುವ ಶ್ರೀನಾಥ್, ಅದನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ ಎಂಬುದು ನಿರ್ಮಾಪಕರ ಮಾತು. ಇದೇ ಶುಕ್ರವಾರ ಪ್ರೇಕ್ಷಕರ ಮುಂದೆ 'ಪುಂಗಿ' ಊದಲು ರೆಡಿಯಾಗಿರುವ ಕೋಮಲ್, 'ಪುಂಗಿದಾಸ'ನ ಬಗ್ಗೆ ಮಾತನಾಡಿದ್ದಾರೆ.
ಚಿತ್ರದ ಟೈಟಲ್ ನೋಡಿ ಕೋಮಲ್ ಪುಂಗಿ ಬಿಡ್ತಾವ್ರೆ ಅಂತ ಕಾಳೆಲೆಯುವ ಮಂದಿಗೆ ನಿಮ್ಮ ಕಿವಿ ಮಾತು?
ಈ ಪಿಕ್ಚರ್ನಲ್ಲಿ ಪುಂಗಿ ಬಿಟ್ಟು ಆಗಿದೆ. ಊದಲೇಬೇಕು. ಹೀಗಾಗಿ ಕಿವಿ ಮಾತು ಹೇಳುವ ಬದಲು ಚಿತ್ರ ನೋಡಿ ಎನ್ನುವುದು ನನ್ನ ವಿಶೇಷ ಮನವಿ.
ಕೋಮಲ್ ಸಿನಿಮಾ ಅಂದ್ರೆ ಕಾಮಿಡಿ, ಒಂಚೂರು ಎಮೋಷನ್, ಪಂಚಿಂಗ್ ಡೈಲಾಗ್ಗಳು. ಆದರೆ, 'ಪುಂಗಿದಾಸ' ಚಿತ್ರದಲ್ಲಿ ಇವುಗಳ ಹೊರತಾಗಿ ಬೇರೆ ಏನು ವಿಶೇಷತೆಗಳಿವೆ?
ನೀವು ಹೇಳಿದ ಎಲ್ಲ ಅಂಶಗಳ ಜೊತೆಗೆ ಮಾನವೀಯತೆ ಇದೆ. ಇಬ್ಬರಿಗೆ ಜಗಳ ತಂದಿಟ್ಟು ಮೂರನೇ ವ್ಯಕ್ತಿ ಹೇಗೆ ಲಾಭ ಮಾಡಿಕೊಳ್ಳುತ್ತಾನೆಂಬ ಸ್ವಾರಸ್ಯಕರ ವಿಚಾರಗಳು ಇವೆ. ವಿಶೇಷ ಅಂದ್ರೆ ಇಲ್ಲಿ ಆ ಮೂರನೇ ವ್ಯಕ್ತಿ ಪ್ರೇಕ್ಷಕನೇ!
ಹಿಂದಿನ ಚಿತ್ರಗಳಿಗಿಂತ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು. ಕಾರಣ, ಎಂ.ಎಸ್. ಶ್ರೀನಾಥ್ರ ಹಿಂದಿನ 2 ಚಿತ್ರಗಳಾದ ರಾಂಬೋ ಹಾಗೂ ವಿಕ್ಟರಿ (ಕಥೆ) ಗೆಲುವು. ಈ ನಿರೀಕ್ಷೆಗೆ ಪುಂಗಿದಾಸ ಮೋಸ ಮಾಡಲ್ಲ ತಾನೆ?
ಖಂಡಿತ ಪ್ರೇಕ್ಷಕನ ನಿರೀಕ್ಷೆಗಳು ಹುಸಿಯಾಗಲ್ಲ. ಈಗಾಗಲೇ ಹಾಡುಗಳು ಹಿಟ್ ಆಗಿವೆ. ದೊಡ್ಡ ದೊಡ್ಡ ಕಲಾವಿದರ ದಂಡೇ ಇಲ್ಲಿದೆ. ಪ್ರತಿ ಕಲಾವಿದರಿಗೂ ಒಂದೊಂದು ಆಯಾಮವಿದೆ. ಯಾರೇ ಒಬ್ಬರು ವೀಕು ಅನಿಸಿದರೂ ಮತ್ತೊಬ್ಬ ಕಲಾವಿದ ಪ್ರೇಕ್ಷಕನಿಗೆ ಖುಷಿ ಕೊಡುತ್ತಾನೆ. ನಿಜಕ್ಕೂ ಫ್ಯಾಮಿಲಿ ಸಿನಿಮಾ. ಈ ಕಾರಣಕ್ಕೆ ನಮ್ಮ ಚಿತ್ರ ಪ್ರೇಕ್ಷಕರಿಗೆ ಮೋಸ ಮಾಡಲ್ಲ.
ಆರ್.ಎನ್. ಸುದರ್ಶನ್ ಹಾಗೂ ಸಾಹುಕಾರ್ ಜಾನಕಿ ಅವರ ಆ ದಿನಗಳ ಹಾಡು ಯಾವ ರೀತಿ ಚಿತ್ರಕ್ಕೆ ಸೂಕ್ತ?
ಸನ್ನಿವೇಶಕ್ಕೆ ತಕ್ಕಂತೆ ಮಾಡಿರುವ ಮಾಡರ್ನ್ ರೆಟ್ರೋ ಸಾಂಗು ಅದು. 60ನೇ ವರ್ಷದ ವಿವಾಹ ವಾರ್ಷಿಕೊತ್ಸವ ಮಾಡುವ ದೃಶ್ಯವನ್ನು ವಿಶೇಷವಾಗಿ ಚಿತ್ರಿಸೋಣ ಎನ್ನುವ ಯೋಚನೆಯಲ್ಲಿ ಹೊಳೆದ ಹಾಡು. ನನಗೇ ಅಂತ ಇದ್ದ ಹಾಡನ್ನು ಹಿರಿಯ ಕಲಾವಿದರಿಗೆ ಕೊಟ್ಟು ಮಾಡಿದ್ದೇವೆ. ಕಥೆಗೆ ಅಗತ್ಯವಾಗಿ ಬೇಕಿರುವ ಹಾಡು ಇದು.
ಪ್ರೇಕ್ಷಕರು ನಿಮ್ಮ ಮೇಲೆ ನಂಬಿಕೆ ಇಟ್ಟು ಬರಬೇಕೋ, ಅಥವಾ ನಿಮ್ಮ ಚಿತ್ರದ ಮೇಲಿನ ನಂಬಿಕೆಯಿಂದ ಬರಬೇಕೋ?
ಇಲ್ಲಿವರೆಗೂ ನನ್ನನ್ನೇ ನಂಬಿ ಪ್ರೇಕ್ಷಕರು ನನ್ನ ಅಭಿನಯದ ಚಿತ್ರಗಳನ್ನು ನೋಡಿದ್ದಾರೆ. ಈಗಲೂ ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಬನ್ನಿ, ಖಂಡಿತ ನಿಮಗೆ ಬೇಸರ ಆಗದಂತೆ ನನ್ನ ಚಿತ್ರ ನೋಡಿಸಿಕೊಳ್ಳುತ್ತದೆ.
ಚಿತ್ರದಲ್ಲಿ ನಿಮ್ಮ ಪಾತ್ರ, ನಟನೆ ಹಾಗೂ ನಿಮ್ಮ ಜೊತೆ ಅಭಿನಯಿಸಿರುವ ಕಲಾವಿದರ ಬಗ್ಗೆ ಹೇಳಿ?
ಪಾತ್ರಕ್ಕಾಗಿ ಪ್ರಮಾಣಿಕವಾಗಿ ಶ್ರಮ ಹಾಕಿದ್ದಾರೆ. ತುಂಬಾ ದಪ್ಪ ಇದ್ದವನು ತೆಳ್ಳಗಾದೆ. ದೇಹ ಇಳಿಸಿಕೊಳ್ಳುವುದು ಸುಲಭವಲ್ಲ. ಆದರೂ ಕಷ್ಟಪಟ್ಟೆ. ನನ್ನ ಶ್ರಮ ತೆರೆ ಮೇಲೆ ಕಾಣುತ್ತದೆ. 5 ವರ್ಷಗಳ ನಂತರ ಬಿ.ಸಿ.ಪಾಟೀಲ್, 'ಶಬ್ಧವೇದಿ' ಚಿತ್ರದ ನಂತರ ಸಾಹುಕಾರ್ ಜಾನಕಿಯಮ್ಮ, ರಂಗಭೂಮಿಯ ಕಲಿ ರಾಜೇಂದ್ರ ಕಾರಂತ್ ಇವರೆಲ್ಲ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೆಂಟಿಮೆಂಟ್ ಪಾತ್ರಧಾರಿ ಪದ್ಮಜಾ ರಾವ್ ಕಾಮಿಡಿ ಮಾಡಿದ್ದಾರೆ.
ನಿರ್ದೇಶಕ ಶ್ರೀನಾಥ್ ಹಾಗೂ ಚಿತ್ರದ ವಿಶೇಷತೆಗಳ ಕುರಿತು ಹೇಳಿ.
ಪ್ರತಿ ದೃಶ್ಯಕ್ಕೂ ನಿರ್ದೇಶಕರು ಮಹತ್ವ ಕೊಟ್ಟು ತೆರೆ ಮೇಲೆ ತಂದಿದ್ದಾರೆ. ಸಣ್ಣ ಪುಟ್ಟ ಅಂಶಗಳಿಗೂ ವಿಶೇಷವಾದ ಗಮನ ಕೊಟ್ಟಿದ್ದಾರೆ. ನಿರೂಪಣೆ ರೀತಿ ಚೆನ್ನಾಗಿದೆ. ಎಲ್ಲ ವರ್ಗದವರಿಗೂ ಮೆಚ್ಚಿಗೆಯಾಗುವಂತ, ಅನಗತ್ಯವಾದ ದೃಶ್ಯಗಳಿಲ್ಲದಿರುವುದು ಈ ಚಿತ್ರ ವಿಶೇಷ.
-ಆರ್. ಕೇಶವಮೂರ್ತಿ