ಸೌಂದರ್ಯ ಸಮರ

ಸೌಂದರ್ಯ ಸಮರ
Updated on: 

ಯರ್ ಸೌಂದರ್ಯ ರಜನಿಕಾಂತ್‌ರವರೇ..
ನಿಮ್ಮ ಮೊದಲ ಹೆಜ್ಜೆ ಕೊಚಾಡಿಯನ್‌ಗೆ ನನ್ನ ಶುಭಾಶಯಗಳು.ನನ್ನ ಮುಖ ನೆನಪಿದೆಯೇ? ಇದ್ದರೆ.. ನಿಮಗೊಂದು ಕಥೆ ನೆನಪಿಸಬೇಕಿದೆ ಕೇಳಿ!
2010ರಲ್ಲಿ ನಾನು ಮತ್ತು ನನ್ನ ಟೀಂ ಸೇರಿ ಇ.ಕೃಷ್ಣಪ್ಪರವರ ಬ್ಯಾನರ್‌ನಲ್ಲಿ ಮತ್ತೆ ಮುಂಗಾರು ಎಂಬ ಚಿತ್ರ ಮಾಡಿದ್ದೆವು. ನಮ್ಮ ಜೀವವನ್ನು ಪಣಕ್ಕಿಟ್ಟು ಮಾಡಿದ್ದೆವು. ಚಿತ್ರಕ್ಕೆ (ಉಐ) ಡಿಜಿಟಲ್ ಇಂಟರ್‌ಮೀಡಿಯೇಟ್ ಮಾಡಿಸಬಾರದು. ಎಂಬುದೊಂದೇ ಒಂದು ಕಂಡಿಷನ್ ನಿರ್ಮಾಪಕರದ್ದಾಗಿತ್ತು. ದೇವರಂಥ ಮನುಷ್ಯ. ನನ್ನ ಬಲವಂತಕ್ಕೇ ಕೊನೆಗೂ ಒಪ್ಪಿದರು. ಅಂಥ ಸಮಯದಲ್ಲೇ, ನಿಮ್ಮ ಆಕರ್ಸ್ ಸಂಸ್ಥೆಯಿಂದ ನೇಮಕವಾಗಿದ್ದ ಗಿರೀಶ್ ಎಂಬ ಎಡಬಿಡಂಗಿ ಮಧ್ಯವರ್ತಿಯಿಂದ ನಿಮ್ಮ ಸ್ಟುಡಿಯೋ ಬಗ್ಗೆ ತಿಳಿದು, ನಿಮ್ಮಲ್ಲಿ ಡಿಐ ಮಾಡಿಸುವ ನಿರ್ಧಾರವಾಯಿತು. ಕಾರಣ ನಿಮ್ಮ ತಂದೆಯ ಮೇಲಿರುವ ಗೌರವ, ಕನ್ನಡಿಗರೆಂಬ ಪ್ರೀತಿ, ನೋಡಬೇಕೆನ್ನುವ ಸ್ವಾರ್ಥ ಮತ್ತು ನಿಮ್ಮ ತಂದೆ ಕಂಡಕ್ಟರ್ ಆಗಿದ್ದ ಕಾಲದಲ್ಲೇ ನಮ್ಮ ತಂದೆ ಮತ್ತು ದೊಡ್ಡಪ್ಪನಿಗೆ ಆತ್ಮೀಯ ಗೆಳೆಯ ಎಂಬ ಅಭಿಮಾನದಿಂದ ನಿಮ್ಮಲ್ಲಿಗೆ ಬಂದೆ. ನೀವೇ ನಿಮ್ಮ ಛೇಂಬರಿನಲ್ಲಿ ಕೂರಿಸಿಕೊಂಡು ನಿಮ್ಮಲ್ಲಿಗೆ ಬಂದದ್ದಕ್ಕೆ ಹೃದಯತುಂಬಿ ಮಾತನಾಡಿ ಥ್ಯಾಂಕ್ಸ್ ಹೇಳಿದ್ದಿರಿ!
ನಿಮ್ಮನ್ನು ಸಂಧಿಸಿದ್ದು ನನ್ನ ಜೀವನದ ಅತಿ ದೊಡ್ಡ ದುರಂತವಾಗಲಿದೆ ಎಂದು ನನಗನಿಸಲೇ ಇಲ್ಲ. ನನ್ನ ಮತ್ತು ನನ್ನ ಹುಡುಗರ ಕನಸಿನ ಮತ್ತೆ ಮುಂಗಾರು ಸಿನಿಮಾ ಮುಳುಗಿ ಹೋಗಲು ಮೊದಲ ಕಾರಣಿಗರು ನೀವು!   ಥ್ಯಾಂಕ್ಸ್!
ದೂರದ ಬೆಟ್ಟವಾಗಿ ಹೋಯ್ತು ನಿಮ್ಮ ಸ್ಟುಡಿಯೊ. ಒಂದು ತಿಂಗಳಲ್ಲಿ ಮುಗಿಸಿಕೊಡುತ್ತೇನೆಂದು ಒಪ್ಪಿಕೊಂಡು ಏಳು ತಿಂಗಳು ಮಾಡಿಬಿಟ್ರಿ. ಇದರಿಂದ ನನ್ನ ಮತ್ತು ನಿರ್ಮಾಪಕರ ಮಧ್ಯೆ ಬಿರುಕಾಗಿಹೋಯಿತು. ಮದರಾಸಿನ ಉರಿ ಬಿಸಿಲಲ್ಲಿ ನಿತ್ಯವೂ ನಿಮ್ಮ ಸ್ಟುಡಿಯೋಗೆ ಅಲೆದೆ. ನಿಮ್ಮಿಂದ ಕೆಲಸಗಳಾಗಲೇ ಇಲ್ಲ! ನಿಮ್ಮ ಕಛೇರಿಯಲ್ಲಿ ನಿಮ್ಮ ಕೆಳಗೆ ಕೆಲಸ ಮಾಡುವವರು ಸುಳ್ಳು ಹೇಳಿ ಹೇಳಿ ನನ್ನನ್ನು ಗೋಳಾಡಿಸಿ ಬಿಟ್ರು. ನಿಮಗೆ ಗೊತ್ತಿದ್ದು ಸಹ ನನಗೆ ಚಿತ್ರಹಿಂಸೆ ಮಾಡಿಬಿಟ್ರಿ. ದಿನಕಳೆದಂತೆ ನಿರ್ಮಾಪಕರಿಗೆ ನನ್ನ ಮೇಲಿನ ಕೋಪ ತಾರಕಕ್ಕೇರಿತು. ಪರಿಸ್ಥಿತಿ ತಿಳಿದು ನಿಮಗೆ ಮನವರಿಕೆ ಮಾಡಿದೆ ನಿಮಗೆ ನನ್ನ ಕೂಗು, ನೋವು ಕೇಳಿಸಲೇ ಇಲ್ಲ!
ನಂತರ ತಿಳಿದದ್ದೆಂದರೆ, ನೀವು  ನಿಮ್ಮ ಹುಡುಗರಿಗೆ ವರ್ಷಗಳಿಂದ ಸಂಬಳ ನೀಡಿಲ್ಲವೆಂದು! ಆ ಹುಡುಗರ ಗೋಳು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಚೆನ್ನ್ಯೆನ ಯಾವ ಸ್ಟುಡಿಯೋಗೆ ಹೋದರೂ ನಿಮ್ಮ ಹೆಸರು ಹೇಳುತ್ತಿದ್ದಂತೆ ಕೆಲಸಗಳು ನಿಂತು ಹೋಗುತ್ತಿತ್ತು!
ನಮ್ಮ ನಿರ್ಮಾಪಕರು ತಾಳ್ಮೆ ಕಳೆದುಕೊಂಡರು. ಇರುವ ನೆಗೆಟೀವನ್ನೇ ಕಟ್ ಮಾಡಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿ ಬಿಟ್ರು. ನನ್ನ ಕನಸಿಗೆ ಮೊದಲ ಕೊಡಲಿ ಏಟದು! ಥ್ಯಾಂಕ್ಸ್.
ಒಂದು ದಿನ ನಿಮ್ಮನ್ನು ಬಾಗಿಲಲ್ಲೇ ನಿಲ್ಲಿಸಿ ಅಂಗಲಾಚಿದೆ. 'ನನ್ನ ಕೆಲಸ ಮುಗಿಸಿಕೊಡಿ. ನಿಮ್ಮನ್ನು ನಂಬಿ ಬಂದದ್ದಕ್ಕೆ ನನಗಿಂಥ ಶಿಕ್ಷೆಯೇ?' ಎಂದು ಎಷ್ಟೆಲ್ಲಾ ಕೇಳಿಕೊಂಡರೂ ನೀವು ನನಗೆ ಸಹಕರಿಸಲೇ ಇಲ್ಲ!
ನಾನಿಲ್ಲದೆಯೇ ನನ್ನ ಚಿತ್ರ ಬಿಡುಗಡೆಗೆ ಸಿದ್ಧವಾಗಿ ಹೋಯ್ತು. ಮೊದಲ ಪ್ರತಿಯನ್ನು ನೋಡಿ ಕರೆಕ್ಷನ್ ಮಾಡಲೂ ಆಗದಂತಾಯ್ತು! ಪ್ರಚಾರದ ಕೆಲಸವೂ ಮಾಡಿಸಲಾಗಲಿಲ್ಲ. ನಿಮ್ಮ ಬಿಸಿಲೂರಿನಲ್ಲಿ ತಬ್ಬಲಿಯಾಗಿ ಹೋದೆ.
ನನ್ನ ಕಂದಮ್ಮನಿಗೇ ಇನ್ನಾರೋ ಸ್ವೆಟರ್ ಹೊಲೆದುಬಿಟ್ಟರು. ನಾನಿಲ್ಲದೇ, ನನ್ನ ಆರೈಕೆಯಿಲ್ಲದೆ ಹೊರಗೆ ಬಂದ ನನ್ನ ಕನಸಿನ ಮತ್ತೆ ಮುಂಗಾರು ಎಂಬ ಕಂದ ತನ್ನ ಬಗ್ಗೆ ಹೇಳಿಕೊಳ್ಳಲಾಗದೇ ಸೋತು ಜರ್ಜರಿತನಾಗಿ ಅನಾಥವಾಗಿ ಹೋದ. ಆಗಸ್ಟ್ 6, 2010 ಸಿನಿಮಾ ಬಿಡುಗಡೆ. ಅಂದು ಮುಂಜಾನೆ ನಾಲ್ಕಕ್ಕೆ ನಿಮ್ಮಿಂದ ಮೊದಲ ಪ್ರತಿ ಬಿಡುಗಡೆ. ಸೋಲಿಸಿ ಬಿಟ್ರಿ ಸೌಂದರ್ಯ. ನನ್ನನ್ನು ಸೋಲಿಸಿ ಬಿಟ್ರಿ! ಏಳು ಕೆರೆ ನೀರು ಕುಡಿಸಿದ ಕ್ರೆಡಿಟ್ ನಿಮಗೇ ಹೋಗಬೇಕು. ಥ್ಯಾಂಕ್ಸ್ ನನ್ನ ಕನಸನ್ನು ಸಿಝೆರಿನ್ ಮಾಡಿ ಕೊಂದದ್ದಕ್ಕೆ!
ಸಾವಿರಾರು ಜನ ಸೇರಿ ಮಾಡಿದ ಸಿನಿಮಾ ನಿಮ್ಮೊಬ್ಬರಿಂದ ನೀರಿನಲ್ಲಿ ಹೋಮ ಮಾಡಿದಂತಾಯ್ತು. ಸಿನಿಮಾ ಬಗ್ಗೆ ಆಸಕ್ತಿಯೇ ಕಳೆದು ಹೋಯ್ತು! ಥ್ಯಾಂಕ್ಸ್!
ಇಂದು ನಿಮ್ಮ ನಿರ್ದೇಶನದ ಕೊಚಾಡಿಯನ್ ಚಿತ್ರದ ಗಜ ಪ್ರಸವವಾಗಿದೆ. ಬಿಡುಗಡೆಯ ವಿಳಂಬ, ಸಾಲ, ಹಣ ಕಾಸಿನ ಮುಗ್ಗಟ್ಟು, ಕೆಲಸ ಮಾಡಿದವರಿಗೆ ಹಣ ಕೊಟ್ಟಿಲ್ಲವೆಂದು, ಬ್ಯುಸಿನೆಸ್ ಆಗುತ್ತಿಲ್ಲವೆಂದು, ನೂರಾ ಎಂಟು ಕಾರಣಗಳಿಗೆ ಸಿಕ್ಕಿ ಉಸಿರುಗಟ್ಟಿ ಬಿಡುಗಡೆಯಾಗಿದೆ. ನಿಮಗೆ ಒಳ್ಳೆಯದಾಗಲಿ. ಸಿನಿಮಾ ದೊಡ್ಡ ಯಶಸ್ಸು ಕಾಣಲೆಂದು ಹಾರೈಸುತ್ತೇನೆ. ನನಗೆ ನಿಮ್ಮ ತಂದೆಯ ಮೇಲೆ ಒಂದಿಷ್ಟು ಕೋಪವಿಲ್ಲ. ಮಹಾನುಭಾವರು ಚೆನ್ನಾಗಿರಲಿ. ಎಲ್ಲಿದ್ದರೂ ನಮ್ಮವರು. ಬಟ್ ಅಂದು ನನ್ನ ನೋವು, ಹತಾಶೆ, ಶಾಪದ ಆಳ ಎಷ್ಟಿತ್ತೆಂಬುದರ ಅರಿವು ನಿಮಗಾದರೆ ಸಾಕು. ನೀವು ಗೋಲ್ಡ್ ಸ್ಪೂನ್ ಸೌಂದರ್ಯ. ನಾವು ಓಲ್ಡ್ ಹ್ಯಾಂಡ್. ಶೇಕ್ ಹ್ಯಾಂಡ್ ಮಾಡಲು ಮಾತ್ರ ಗೊತ್ತು! ಒಳ್ಳೆಯದಾಗಲಿ. ಕಾಲಾಯ ತಸ್ಮೈ ನಮಃ!
ಈ ಬರಹದಲ್ಲಿ ನಾನೂ ಸಂಪಾದಿಸಬೇಕಾದ್ದೇನು ಇಲ್ಲ. ನನ್ನ ಅಂದಿನ ನೋವನ್ನು ಹೇಳಿಕೊಳ್ಳಲು ಸಿಕ್ಕ ಕಾಲ. ನನ್ನ ಪ್ರೀತಿಯ ಗೆಳೆಯರಿಗೆ ಹೇಳಬೇಕೆನಿಸಿತು ಹೇಳಿದ್ದೇನೆ. ಒಳಗಿದ್ದ ವಿಷ ಹೊರಗೆ ಹಾಕಿದ್ದೇನೆ.
ದೇವರು ನಿಮ್ಮನ್ನು ಚೆನ್ನಾಗಿಡಲಿ! ನನಗೆ ನಡೆದಂಥ ತೊಂದರೆ ನನ್ನ ಶತ್ರುವಿಗೂ ಆಗದಿರಲಿ!
ನನ್ನ ಮತ್ತೆ ಮುಂಗಾರು ಚಿತ್ರದ ಶೀರ್ಷಿಕೆಯ ಮೊದಲಿನಲ್ಲೇ ನಿಮಗೆ ಕೃತಜ್ಞತೆಯಿದೆ. ಒಪ್ಪಿಸಿಕೊಳ್ಳಿ!

-ದ್ವಾರ್ಕಿ ರಾಘವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com