ಮಿಲನ ಮಾರುತ

ಸಿನಿ ರಸಿಕರು 'ಮಿಲನ' ದರ್ಶನಕ್ಕೆ ರೆಡಿಯಾಗಿ ಯಾವುದೋ ಕಾಲವಾಯಿತು.
ಮಿಲನ ಮಾರುತ
Updated on

ಸಿನಿ ರಸಿಕರು 'ಮಿಲನ' ದರ್ಶನಕ್ಕೆ ರೆಡಿಯಾಗಿ ಯಾವುದೋ ಕಾಲವಾಯಿತು. ಆದರೆ, ಯಾಕೋ ಈ ಮಿಲನ ಸರಿಯಾಗಿ ದರ್ಶನ ಕೊಡುತ್ತಿಲ್ಲ ಎಂಬುದು ಕೆಲವರ ಬೇಸರ. ಇದು ಮಿಲನ ವಿಚಾರವೇ? ಅಂದರೆ ಹೌದು ಎನ್ನಬೇಕಾಗುತ್ತದೆ. ಆದರೆ, ನೀವು ಅಂದುಕೊಂಡಂತೆ ಆ ಮಿಲನ ಬಗ್ಗೆ ಮಾತನಾಡುತ್ತಿಲ್ಲ. ಸದ್ಯಕ್ಕೆ ಇಲ್ಲಿ ಚರ್ಚೆಯಾಗುತ್ತಿರುವುದು ನಟಿ ಮಿಲನ ನಾಗರಾಜ್ ಕುರಿತು. ಸೈಜಿನಲ್ಲಿ ನಟಿಯರಾದ ಇಲಿಯನ ಹಾಗೂ ತಮನ್ನಾಳನ್ನು ಒಂಚೂರು ಕ್ರಾಸ್ ಮಾಡಿಕೊಂಡು ಬಂದಂತಿರುವ ಈಕೆಯನ್ನು ನೋಡಿದವರು ಉತ್ತರ ಭಾರತದ ಹುಡುಗಿನಾ? ಎಂದು ಅನುಮಾನ ವ್ಯಕ್ತಪಡಿಸಬಹುದು. ಆದರೆ, ಈಕೆ ಅಪ್ಪಟ ಕನ್ನಡತಿ. ಅದರಲ್ಲೂ ಹಾಸನದ ಗಟ್ಟಿಗಿತ್ತಿ ಎಂಬುದು ನಿಮ್ಮ ಗಮನಕ್ಕಿರಲಿ. ಸದ್ಯ ಇರುವುದು ಮಾತ್ರ ಬೆಂಗಳೂರಿನಲ್ಲೇ. ನೋಡಲು ಮುದ್ದಾಗಿದ್ದಾಳೆ. ಮೈ ಬಣ್ಣ ಮಲೆನಾಡಿನಷ್ಟೇ ಸಂಪದ್ಭರಿತ. ಕಾವೇರಿ ತೀರದಷ್ಟೇ ಸೊಗಸಾಗಿಯೂ ಇದೆ. ಆದರೆ, ನಟ ದರ್ಶನ್ ಅಭಿನಯದ ಬೃಂದಾವನದಲ್ಲಿ ಚೆಲ್ಲು ಚೆಲ್ಲಾಗಿ ಓಡಾಡಿದ ಈ ಹುಡುಗಿ ಮತ್ತೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಈ ಚಿತ್ರಕ್ಕೂ ಮುನ್ನ ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ಅಭಿನಯಿಸಿದರೂ ಆ ಚಿತ್ರ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಈಗ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವುದು ನಟಿ ಮಿಲನ ನಾಗರಾಜ್‌ರ ನಟನಾ ಪಯಣದ ಹೊಸ ಸುದ್ದಿ. ಅದರಲ್ಲೂ ಮತ್ತೊಬ್ಬ ನಾಯಕಿಯ ಜಾಗವನ್ನು ಈಕೆ ಹೈಜಾಕ್ ಮಾಡಿಕೊಂಡಿದ್ದಾಳೆ.

ಹೌದು, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯಿಸುತ್ತಿರುವ ಫ್ಲೈ ಚಿತ್ರಕ್ಕೆ ನಾಯಕಿಯಾಗಿ ಮಿಲನ ನಾಗರಾಜ್ ಆಯ್ಕೆಯಾಗಿದ್ದಾರೆ. ಆದರೆ, ಮಿಲನ ಈ ಚಿತ್ರದೊಳಗೆ ಕಾಲಿಡುವ ಮುನ್ನ ನಾಯಕಿಯಾಗಿ ಹರಿಪ್ರಿಯಾ ಇದ್ದರು. ಈ ನಡುವೆ ಏನಾಯಿತೋ ಗೊತ್ತಿಲ್ಲ. ಹರಿಪ್ರಿಯಾ ಜಾಗಕ್ಕೆ ಮಿಲನ ನಾಗರಾಜ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನೂ ಚಿತ್ರೀಕರಣದ ಸೆಟ್‌ನಲ್ಲಿರುವ ಸವಾರಿ 2 ಚಿತ್ರದಲ್ಲಿ ನಟಿಸುತ್ತಿರುವ ಮಿಲನ ಹಾಸನದಲ್ಲಿ ಪಿಯುಸಿ ಮುಗಿಸಿದ ಮೇಲೆ ಬೆಂಗಳೂರಿಗೆ ಇಂಜಿನಿಯರ್ ಓದಲು ಬಂದವಳು. ಆದರೆ, ಕ್ಯಾಮೆರಾ ಮುಂದೆ ನಿಲ್ಲಬೇಕೆಂಬ ಆಸೆ ಇಟ್ಟುಕೊಂಡಿದ್ದ ಮಿಲನ, ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟು ಕೂಡ. ಈಜುಪಟುವಾಗಿ ಕಾಲೇಜಿಗೆ ಹತ್ತಾರು ಪದಕಗಳನ್ನು ತಂದುಕೊಟ್ಟಿರುವ ಈ ಹುಡುಗಿ, ಭರತನಾಟ್ಯವನ್ನೂ ಕಲಿತಿರುವ ಜಾಣೆ. ಈ ನಡುವೆ ಇಂಜಿನಿಯರಿಂಗ್ ಮುಗಿಸಿದ ಮಿಲನಗೆ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದೆ. ಉದ್ಯೋಗದ ಜತೆ ಬಣ್ಣ ಕೂಡ ಈಕೆಯನ್ನು ಹುಡುಕಿಕೊಂಡು ಬಂತು. ಹಾಗೆ ಸವಾರಿ 2 ಚಿತ್ರಕ್ಕೆ ನಾಯಕಿಯಾದಳು.

ಆದರೆ, ಸವಾರಿ 2 ಚಿತ್ರ ಅರ್ಧಕ್ಕೆ ನಿಂತಾಗ ನಟಿ ಮಿಲನಳನ್ನು ಕೈ ಹಿಡಿದಿದ್ದು ಪ್ರೀತಂ ಗುಬ್ಬಿ ನಿರ್ದೇಶನದ ನಮ್ ದುನಿಯಾ ನಮ್ ಸ್ಟೈಲ್ ಚಿತ್ರ. ಈ ಸಿನಿಮಾ ನಿರೀಕ್ಷಿಸಿದಂತೆ ಗೆಲವು ಕಾಣಲಿಲ್ಲ. ಆಗ ಬಂದ ಚಿತ್ರ ಬೃಂದಾವನ ದರ್ಶನ್ ಜೊತೆ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡ ಮೇಲೆ ಮಿಲನ ಗಾಂಧಿನಗರದ ಗಮನ ಸೆಳೆದಳು ಎಂಬುದುರಲ್ಲಿ ಎರಡು ಮಾತಿಲ್ಲ. ದರ್ಶನ್ ಜೊತೆ ಹೆಜ್ಜೆ ಹಾಕಿದ ಮೇಲೂ ದೊಡ್ಡ ಮಟ್ಟದಲ್ಲಿ ಮಿಲನ ಮಿಂಚಲಿಲ್ಲ. ಈಗ ಫ್ಲೈ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಭಿನಯಕ್ಕೆ ಮಹತ್ವ ಸಿಗುವಂಥ ಪಾತ್ರಗಳಲ್ಲಿ ನಟಿಸಬೇಕು. ಒಳ್ಳೆಯ ಕಥೆ ಬೇಕು ಎನ್ನುವ ಮಿಲನ ಅವಕಾಶಗಳಿಗಾಗಿ ಕಾಯುತ್ತಿರುವ ನಟಿ.


- ಆರ್‌ಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com